
ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಸತತ ಪ್ರತಭಟನೆ ನಡೆಸುತ್ತಿರುವ ರೈತರು ದೆಹಲಿಯ ಪ್ರಮುಖ ನಾಲ್ಕು ಗಡಿ ಭಾಗಗಳಲ್ಲಿ ಟ್ರಾಕ್ಟರ್ ಮೆರವಣಿಗೆ ನಡೆಸಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಸೋಮವಾರ ನಡೆದ ಏಳನೇ ಸುತ್ತಿನ ಮಾತುಕತೆಯೂ ವಿಫಲಲವಾದ ಬೆನ್ನಲ್ಲಿ ಟ್ರಾಕ್ಟರ್ ಮೆರವಣಿಗೆ ಆಯೋಜಿಸಲಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಜನವರಿ 26 ರಂದು ಟ್ರಾಕ್ಟರ್ ಪರೇಡ್ ನಡೆಸಲು ಉದ್ದೇಶಿಸಲಾಗಿದ್ದು, ಗುರುವಾರದ ಮೆರವಣಿಗೆ ಅದರ ಪೂರ್ವಭಾವಿ ತಾಲೀಮು ಎಂದು ಪ್ರತಿಭಟನಾನಿರತ ರೈತ ಸಂಘಗಳು ಹೇಳಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸುಮಾರು 3500 ಟ್ರಾಕ್ಟರ್ ಗಳು ಮತ್ತು ಟ್ರಾಲಿಗಳೊಂದಿಗೆ ರೈತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದಾಗಿ ಭಾರತಿ ಕಿಸಾನ್ ಯೂನಿಯನ್ (ಏಕ್ತಾ ಉಗ್ರಹಾನ್) ಮುಖ್ಯಸ್ಥ ಜೋಗಿಂದರ್ ಸಿಂಗ್ ಉಗ್ರಹಾನ್ ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ 11 ಗಂಟೆಯಿಂದ ಟ್ರಾಕ್ಟರ್ ಮೆರವಣಿಗೆ ಆರಂಭವಾಗಿದ್ದು, ಕುಂಡ್ಲಿ, ಮನೇಸರ್, ಪಲ್ವಾಲಾ ಎಕ್ಸ್ ಪ್ರೆಸ್ ಕಡೆಯಿಂದ ಮೆರವಣಿಗೆ ಸಾಗಿದೆ. ದೆಹಲಿ ಮತ್ತು ಹರಿಯಾಣ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ.










ಹರಿಯಾಣದಿಂದ ಸುಮಾರು 2500 ಟ್ರಾಕ್ಟರ್ ಗಳು ಇಂದಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಮುಂದಿನ ದಿನಗಳಲ್ಲಿ ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು, ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಪ್ರತಿಭಟನೆಯನ್ನು ಮುಂದುವರೆಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹಿರಿಯ ಸದಸ್ಯ ಅಭಿಮನ್ಯು ಕೊಹಾರ್ ತಿಳಿಸಿದ್ದಾರೆ.
ನೂತನ ಕೃಷಿ ಕಾನೂನುಗಳ ರದ್ದತಿಗಾಗಿ ದೆಹಲಿಯ ಅನೇಕ ಗಡಿ ಪ್ರದೇಶಗಳಲ್ಲಿ ಪಂಜಾಬ್, ಹರಿಯಾಣ ಸೇರಿದಂತೆ ದೇಶದ ವಿವಿಧೆಡೆಗಳಿಂದ ಬಂದಿರುವ ಸಹಸ್ರಾರು ರೈತರು ಚಳಿ, ಮಳೆ ಎನ್ನದೇ ಟೆಂಟ್ ಗಳಲ್ಲಿ ವಾಸಿಸುತ್ತಾ ಕಳೆದ 40 ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.
