ಮುಂಬೈಯಲ್ಲಿ ಕಳೆದ ವಾರದಿಂದ ನಾಲ್ಕು ದಶಕಗಳಲ್ಲೇ ಅತೀ ಹೆಚ್ಚು ಮಳೆಯಾಗುತ್ತಿದೆ. ಇಡೀ ಮುಂಬೈ ನಗರ ಭಾರೀ ಮಳೆಗೆ ತತ್ತರಿಸಿವೆ. ನಗರದ ರಸ್ತೆಗಳಲ್ಲಿ ಅಡಿಗಳಷ್ಟು ಎತ್ತರದಲ್ಲಿ ನೀರು ತುಂಬಿವೆ. ಈ ನಡುವೆ 50 ವರ್ಷದ ಕಾಂತ ಮೂರ್ತಿ ಕಾಲನ್ ಎಂಬ ಮಹಿಳೆ ಜನರಿಂದ ವ್ಯಾಪಕ ಪ್ರಶಂಸೆಗೆ ಒಳಪಡುತ್ತಿದ್ದಾರೆ.
ಭಾರೀ ಮಳೆಯಿಂದಾಗಿ ರಸ್ತೆಗೆ ಬಂದ ನೀರು ಹೊಳೆಯಂತೆ ಹರಿಯತೊಡಗಿವೆ. ರಸ್ತೆಯಲ್ಲಿದ್ದ ಮ್ಯಾನ್ಹೋಲ್ ಒಂದು ತೆರೆದಿದ್ದು, ತುಂಬಿ ಹರಿಯುವ ಮಳೆ ನೀರಿಗೆ ತೆರೆದಿರುವ ಮ್ಯಾನ್ ಹೋಲ್ ಸಂಪೂರ್ಣ ಜಲಾವೃತಗೊಂಡಿತ್ತು. ಅಲ್ಲೊಂದು ಮ್ಯಾನ್ ಹೋಲ್ ಇದೆ ಎನ್ನುವುದು ಅರಿವಿಗೆ ಬಾರದಷ್ಟು ಕೆಸರು ನೀರು ತುಂಬಿತ್ತು.
ನಡು ರಸ್ತೆಯಲ್ಲಿ ಇರುವ ತೆರದ ಗುಂಡಿಗೆ ಯಾರಾದರೂ ಬಿದ್ದಾರೆಂಬ ಆತಂಕದಲ್ಲಿ ಕಾಂತ ಮೂರ್ತಿ ಕಾಲನ್ ಎಂಬ ಮಹಿಳೆ ಮ್ಯಾನ್ ಹೋಲ್ ಪಕ್ಕದಲ್ಲಿ ಕಾವಲು ನಿಂತಿದ್ದಾರೆ. ಅಲ್ಲಿಗೆ ಬರುವವರನ್ನು ಎಚ್ಚರಿಸಿ ಬೇರೆ ಕಡೆಯಿಂದ ಸಾಗುವಂತೆ ಸೂಚನೆ ನೀಡುತ್ತಾ ಬರೋಬ್ಬರಿ ಏಳು ಗಂಟೆ ಅಲ್ಲೇ ನಿಂತಿದ್ದಾರೆ.
ಕಾರ್ಪೊರೇಶನ್ ಕಾರ್ಮಿಕರು ಸ್ಥಳಕ್ಕೆ ಆಗಮಿಸಿದ ಬಳಿಕವೇ ಕಾಂತ ಮೂರ್ತಿ ಕಾಲನ್, ಸ್ಥಳದಿಂದ ಸರಿದಿದ್ದಾರೆ. ಅಲ್ಲಿಯವರೆಗೂ ಆ ರಸ್ತೆಯಲ್ಲಿ ಬರುವ ವಾಹನಗಳಿಗೆ ಅವರು ಎಚ್ಚರಿಕೆ ನೀಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಎಂಟು ಮಕ್ಕಳ ತಾಯಿಯಾಗಿರುವ ಕಾಂತ ಮೂರ್ತಿ ಕಾಲನ್ ಪತಿಗೆ ಅಪಘಾತವಾದ ಬಳಿಕ ಕುಟುಂಬದ ಸಂಪೂರ್ಣ ಹೊರೆಯನ್ನು ಅವರೇ ಹೊತ್ತುಕೊಂಡಿದ್ದಾರೆ. ಐವರು ಮಕ್ಕಳಿಗೆ ಮದುವೆಯಾಗಿದ್ದು, ಉಳಿದ ಮೂರು ಮಕ್ಕಳ ವಿಧ್ಯಭ್ಯಾಸ ಹಾಗೂ ಕುಟುಂಬದ ಖರ್ಚಿಗೆ, ಮಹಿಳೆ ರಸ್ತೆ ಬದಿಯಲ್ಲಿ ಹೂ ಮಾರಾಟ ಮಾಡಿ ಬಂದ ಆದಾಯವೇ ಮೂಲ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅದಾಗ್ಯೂ, ತನ್ನ ಕಾರ್ಯವನ್ನು ಜನರು ಮೆಚ್ಚಿಕೊಳ್ಳುವುದನ್ನು, ಹೊಗಳುವಿಕೆಯನ್ನು ಆಕೆ ತಳ್ಳಿಹಾಕಿದ್ದಾರೆ. ಇಂತಹ ಸಂಧರ್ಭದಲ್ಲಿ ಜನರು ಅಪಘಾತಕ್ಕೊಳಗಾಗದಂತೆ ಎಚ್ಚರಿಸುವುದು ಸಾಮಾನ್ಯ ಕರ್ತವ್ಯವೆಂದು ಹೇಳಿದ್ದಾರೆ ಎಂದು NDTV ವರದಿ ಮಾಡಿದೆ.