ಕರೋನಾ ಭೀತಿಯ ನಡುವೆಯೂ ಕೇಂದ್ರ ಸರಕಾರ ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಕೆಲಸದಲ್ಲಿ ನಿರತವಾಗಿದೆ. ಹೆಣ್ಣುಮಗಳು, ಗರ್ಭಿಣಿ ಎಂದೂ ನೋಡದೆ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಸಫೂರಾ ಝರ್ಗಾರ್ ರನ್ನ ಭಯೋತ್ಪಾದನಾ ವಿರೋಧಿ ಚಟುವಟಿಕೆ ಯುಎಪಿಎ ಕಾಯ್ದೆಯಡಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಿವಾಹಿತೆ ಹೆಣ್ಣುಮಗಳು ಸಫೂರಾ ಸದ್ಯ ನಾಲ್ಕು ತಿಂಗಳ ಗರ್ಭಿಣಿ ಆಗಿದ್ದಾರೆ.
ಝರ್ಗಾರ್ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಕಳೆದ ಡಿಸೆಂಬರ್ ನಲ್ಲಿ ವಾರಗಳ ಕಾಲ ದೆಹಲಿಯಲ್ಲಿ ನಡೆದ ಶಾಂತಿಯುತ ಪ್ರತಿಭಟನೆಯ ನೇತೃತ್ವವನ್ನ ವಹಿಸಿದ್ದರು. ಇದರಿಂದ ದೆಹಲಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದ 27 ರ ಹರೆಯದ ಸಫೂರಾ ಅವರನ್ನು ಬಂಧಿಸಿ ತಿಹಾರ್ ಜೈಲಿನಲ್ಲಿಡಲಾಗಿದೆ.
ಸದ್ಯ ಅವರ ಮೇಲೆ ದೆಹಲಿ ಪೊಲೀಸರು ಹೊರಿಸಿರುವ ಆರೋಪವೇನೆಂದರೆ, ಈಶಾನ್ಯ ರಾಜ್ಯಗಳಲ್ಲಿ ನಡೆದ ಹಿಂಸಾಚಾರದಲ್ಲಿ ಝರ್ಗಾರ್ ಅವರೇ ಪ್ರಮುಖ ಸಂಚುಕೋರರಾಗಿದ್ದರು ಎಂದಿದ್ದಾರೆ. ಆದರೆ ಝರ್ಗಾರ್ ಸಹಪಾಠಿಗಳು ಮಾತ್ರ ಇದನ್ನ ಅಲ್ಲಗಳೆದಿದ್ದಾರೆ. “ಆಕೆ ಎಲ್ಲರಂತೆ ಓರ್ವ ಗಟ್ಟಿಗಿತ್ತಿ ಹೆಣ್ಣುಮಗಳಾಗಿದ್ದಳು. ಆದರೆ ಈಶಾನ್ಯ ರಾಜ್ಯದಲ್ಲಾದ ಗಲಭೆಗೂ, ಆಕೆಗೂ ಯಾವುದೇ ಸಂಬಂಧವಿರದು. ಅದಕ್ಕೂ ಜಾಸ್ತಿ ಆಕೆ ಈಶಾನ್ಯ ರಾಜ್ಯಗಳ ಪ್ರತಿಭಟನಾಕಾರರ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ಗುರುತಿಸಿಕೊಂಡಿದ್ದೇ ಇಲ್ಲ” ಎಂದು ಆಕೆಯ ಜೊತೆಗೆ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿದ್ದ ಕಲಾ ವಿದ್ಯಾರ್ಥಿನಿ ಕೌಸರ್ ಜಾನ್ ತಿಳಿಸಿದ್ದಾರೆ.
ಎಪ್ರಿಲ್ 10ರಂದು ಬಂಧಿಸಲ್ಪಟ್ಟ ಝರ್ಗಾರ್ ಮೇಲೆ ನಂತರದ ದಿನಗಳಲ್ಲಿ ಭಯೋತ್ಪಾದನಾ ವಿರೋಧಿ ಚಟುವಟಿಕೆ ಕಾಯ್ದೆಯಡಿ ಬಂಧಿಸಿ ಕುಖ್ಯಾತ ಕ್ರಿಮಿನಲ್‌ಗಳು, ಉಗ್ರರನ್ನ ಕೂಡಿಡುವ ಜೈಲಿಗೆ ಕಳುಹಿಸಲಾಯಿತು. ಬಿಗಿ ಭದ್ರತೆಯಲ್ಲಿ ಜೈಲಿಗೆ ತಳ್ಳಲ್ಪಟ್ಟ ಗರ್ಭಿಣಿ ಝರ್ಗಾರ್ ತನ್ನ ಮೊದಲ ರಂಝಾನ್ ದಿನವನ್ನು ಜೈಲಿನಿಂದ ಆರಂಭಿಸುವಂತೆ ಆಗಿದೆ.
ಸದ್ಯ ಈಕೆಯ ಬಂಧನದಿಂದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ವಿದ್ಯಾರ್ಥಿಗಳು ಮಾತ್ರವಲ್ಲದೇ, ಉಪನ್ಯಾಸಕರೂ ಅಸಮಾಧಾನಗೊಂಡಿದ್ದಾರೆ. “ದೇಶದ ಕಾನೂನು ಮೇಲೆ ನಾವು ಭರವಸೆ ಇಟ್ಟವರಾಗಿದ್ದೇವೆ. ಗಟ್ಟಿಗಿತ್ತಿ ಹಾಗೂ ಕಠಿಣ ಪರಿಶ್ರಮಿ ಝರ್ಗಾರ್ ಶೀಘ್ರ ಬಿಡುಗಡೆಯಾಗುತ್ತಾರೆ ಅನ್ನೋ ನಂಬಿಕೆ ಇದೆ” ಎಂದು ಝರ್ಗಾರ್ ಉಪನ್ಯಾಸಕಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಫೆಬ್ರವರಿ 10 ರಂದು ದೆಹಲಿಯಲ್ಲಿ ನಡೆದ ಪೊಲೀಸ್ ಹಾಗೂ ಪ್ರತಿಭಟನಾಕಾರರ ನಡುವಿನ ಗಲಭೆ ಸಂದರ್ಭ ಝರ್ಗಾರ್ ತೀವ್ರ ತರಹದ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದರು. ಮಾತ್ರವಲ್ಲದೇ, ಆ ನಂತರ ಗರ್ಭಿಣಿ ಆದ ಕಾರಣದಿಂದ ಆಕೆ ತನ್ನ ಓಡಾಟವನ್ನ ಕಡಿಮೆ ಮಾಡಿದ್ದರು. ಲಾಕ್‌ಡೌನ್ ಬೀಳುತ್ತಲೇ ʼವರ್ಕ್ ಫ್ರಂ ಹೋಂʼ ಮೊರೆ ಹೋಗಿದ್ದ ಝರ್ಗಾರ್ ನನ್ನು ಲಾಕ್‌ಡೌನ್ ಸಡಿಲಗೊಳ್ಳುತ್ತಲೇ ಎಪ್ರಿಲ್ 10ರಂದು ದೆಹಲಿ ಪೊಲೀಸರು ಬಂಧಿಸಿದ್ದಾರೆ” ಎಂದು ಝರ್ಗಾರ್ ಪತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗ ಭೀತಿಯಿಂದ ಪ್ರಕರಣಗಳ ಆರೋಪಿಗಳಿಗೆ ಜಾಮೀನು ನೀಡುವಂತೆ ನ್ಯಾಯಾಲಯಗಳು ಈಗಾಗಲೇ ಅಭಿಪ್ರಾಯಪಟ್ಟಿದೆ. ಆದರೆ ಝರ್ಗಾರ್ ಮೇಲೆ ಗಲಭೆ, ಕೊಲೆಯತ್ನ, ಶಸ್ತ್ರಾಸ್ತ್ರಗಳ ಅಕ್ರಮ ದಾಸ್ತಾನು, ಗಲಭೆಗೆ ಪ್ರಚೋದನೆ, ದೇಶದ್ರೋಹ, ಕೊಲೆ ಹಾಗೂ ಧರ್ಮಗಳ ನಡುವೆ ದ್ವೇಷ ಈ ರೀತಿಯ ಒಟ್ಟು ಹದಿನೆಂಟು ಕೇಸುಗಳನ್ನ ದೆಹಲಿ ಪೊಲೀಸರು ದಾಖಲಿಸಿರುವುದರಿಂದ ಝರ್ಗಾರ್ ಪ್ರಾಥಮಿಕ ಜಾಮೀನಿಗೆ ನ್ಯಾಯಾಲಯ ಅವಕಾಶ ಕಲ್ಪಿಸಿಲ್ಲ.
ಆದರೆ ಝಪ್ರಾಬಾದ್ ನಲ್ಲಿ ನಡೆದ ಪ್ರತಿಭಟನೆ ಸಂದರ್ಭ ಸಂಚಾರಕ್ಕೆ ತಡೆಯೊಡ್ಡಿದ ಪ್ರಕರಣದಲ್ಲಿ ಝರ್ಗಾರ್ ಜಾಮೀನು ಪಡೆದಿದ್ದಾರೆ. ಆದರೆ ಆ ನಂತರ ಪೊಲೀಸರು ಇನ್ನೊಂದು ಕೇಸಿನಲ್ಲಿ ಅವರನ್ನ ಬಂಧಿಸಿ ಜೈಲಿನಲ್ಲಿಡುವ ಕೆಲಸ ಮಾಡಿದ್ದಾರೆ. ಮಾತ್ರವಲ್ಲದೇ ಆಕೆಯ ಮೇಲೆ ಹೊರಿಸಲಾದ ಆರೋಪಗಳ ಬಗ್ಗೆಯೂ ಪ್ರಾಥಮಿಕ ಮಾಹಿತಿಯನ್ನ ಕುಟುಂಬಿಕರಿಗೆ ನೀಡಲು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. ಆ ಬಳಿಕ ಝರ್ಗಾರ್ ಮೇಲೆ ಏಕಾಏಕಿ ನ್ಯಾಯಾಲಯದ ಅನುಮತಿ ಪಡೆದು ʼಯುಎಪಿಎʼ ಕಾಯ್ದೆ ಅನ್ವಯ ಆರೋಪಗಳನ್ನ ಹೊರಿಸಲಾಗಿದೆ.
ಎಪ್ರಿಲ್ 20 ರಂದು ಟ್ವೀಟ್ ಮಾಡಿದ್ದ ದೆಹಲಿ ಪೊಲೀಸ್ ಪಿಆರ್‌ಓ ಎಂಎಸ್ ರಾಂಧವ, “ದೆಹಲಿ ಗಲಭೆ ಸಂಬಂಧ ನಡೆಸಲಾದ ಕಾನೂನು ಪ್ರಕ್ರಿಯೆಗಳೆಲ್ಲವೂ ವೈಜ್ಞಾನಿಕ ಆಧಾರಗಳ ಮೇಲೆಯೇ ನಡೆದಿರುತ್ತದೆ, ಯಾವುದೇ ಸುಳ್ಳು ಪ್ರಚಾರದಿಂದ ಇದನ್ನ ತಡೆಯಲಾಗದು” ಎಂದು ಎಚ್ಚರಿಸಿದ್ದರು.
ಆದರೆ ಝರ್ಗಾರ್ ವಕೀಲರ ಹೇಳಿಕೆ ಪ್ರಕಾರ, “ಝರ್ಗಾರ್ ಬಂಧನವು ನ್ಯಾಯಾಂಗದ ದುರ್ಬಳಕೆಯಾಗಿದೆ. ಏಕೆಂದರೆ ಗರ್ಭಿಣಿ ಹೆಣ್ಣು ಮಗಳ ಮೇಲೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲದ ಮೇಲೂ ಬಂಧಿಸಲಾಗಿದೆ” ಅಂತಾ ಆರೋಪಿಸಿದ್ದಾರೆ.
ಇನ್ನು ಬಿಗಿ ಭದ್ರತೆಯ ತಿಹಾರ್ ಜೈಲಿಗೆ ಸಾಂಕ್ರಾಮಿಕ ಕೋವಿಡ್-19 ರೋಗ ಹರಡುವ ಭೀತಿ ಹಿನ್ನೆಲೆ ಝರ್ಗಾರ್ ಭೇಟಿಗೆ ಆಕೆಯ ಕುಟುಂಬಿಕರನ್ನ ಮಾತ್ರವಲ್ಲದೇ ವಕೀಲರಿಗೂ ಅವಕಾಶ ನೀಡಿರಲಿಲ್ಲ. ಆದರೆ ನಂತರ ನ್ಯಾಯಾಲಯ ವಕೀಲರಿಗೆ ಫೋನ್ ಮೂಲಕ ಮಾತಾಡಲು ಅವಕಾಶ ಕಲ್ಪಿಸಿದೆ.
ಆದರೆ ದೂರವಾಣಿಯಲ್ಲಿ ಮಾತನಾಡಿದ ಪತಿ ಹಾಗೂ ವಕೀಲರಿಗೆ ಇನ್ನಷ್ಟು ಆಘಾತವೂ ಕಾದಿತ್ತು. ಗರ್ಭಿಣಿ ಝರ್ಗಾರ್ ಸಮರ್ಪಕವಾದ ಆಹಾರ, ಔಷಧವಿಲ್ಲದೇ ಬಳಲುವಂತಾಗಿದೆ. ಏಕಾಂತದಲ್ಲಿ ಕೂಡಿಟ್ಟ ಪರಿಣಾಮ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಗಿ ತಿಳಿದುಬಂದಿದೆ. ಅಲ್ಲದೇ ಐದು ಬಾರಿ ದೂರವಾಣಿ ಸಂಭಾಷಣೆಗೆ ಅವಕಾಶ ಕೇಳಿದ್ದರೂ ಕೋವಿಡ್-19 ಶಿಷ್ಟಾಚಾರವನ್ನ ಮುಂದಿಟ್ಟುಕೊಂಡು ಅವಕಾಶ ನಿರಾಕರಿಸಲಾಗಿತ್ತು ಅಂತಾ ತನ್ನ ವಕೀಲರಿಗೆ ಝರ್ಗಾರ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ಯುಎಪಿಎ ಕಾಯ್ದೆ ಅಂತಹ ಗಂಭೀರ ದೇಶದ್ರೋಹದ ಚಟುವಟಿಕೆಗಳಿಗೆ ಹೇರಲಾಗುತ್ತದೆ. ಆದರೆ ಸಫೂರಾ ಝರ್ಗಾರ್ ಮೇಲೆ ಇಂತಹದ್ದೊಂದು ಕಾಯ್ದೆ ಹೇರಿರುವುದಕ್ಕೆ ಸುಪ್ರೀಂ ಕೋರ್ಟ್ ವಕೀಲೆ ವೃಂದಾ ಗ್ರೋವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಕಾಯ್ದೆಗಳಲ್ಲಿ ಬಂಧಿಸಲ್ಪಟ್ಟ ಆರೋಪಿಗಳ ಮೇಲೆ ಮೂರು ತಿಂಗಳಲ್ಲಿ (90 ದಿನಗಳು) ಚಾರ್ಜ್ ಶೀಟ್ ಸಲ್ಲಿಕೆಯಾದರೆ, ಈ ಕಾಯ್ದೆಯಡಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರಿಗೆ ಆರು ತಿಂಗಳ ಅವಕಾಶ ಇದೆ. ಹಾಗೇನಾದರೂ ಆದಲ್ಲಿ ಝರ್ಗಾರ್ ತನ್ನ ಬಾಣಂತಿತನವನ್ನೂ ಜೈಲಿನಲ್ಲೇ ನಡೆಸಬೇಕಾದ ಆತಂಕವೂ ಎದುರು ನೋಡುವಂತಾಗಿದೆ.
“ ಓರ್ವ ಸಾಮಾನ್ಯ ವಿದ್ಯಾರ್ಥಿನಿ ಮೇಲೆ ಇಂತಹ ಕಾಯ್ದೆ ಹೇರಿರುವುದು ದೆಹಲಿ ಪೊಲೀಸರ ಪಕ್ಷಪಾತದ ನಡೆ. ಅಲ್ಲದೇ ಶಾಂತಿಯುತ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿನಿಯನ್ನ ಕರೋನಾ ಸಾಂಕ್ರಾಮಿಕ ರೋಗ ಹಾಗೂ ಲಾಕ್ ಡೌನ್ ಸಮಯದಲ್ಲಿ ಬಂಧಿಸಿರುವುದು ಪ್ರಕರಣದಲ್ಲಿ ನ್ಯಾಯ ಪಾಲಿಸಲಾಗಿಲ್ಲ ಅನ್ನೋದು ಎದ್ದು ಕಾಣುತ್ತಿದೆ” ಅಂತಾ ವೃಂದಾ ಗ್ರೋವರ್ ತಿಳಿಸಿದ್ದಾರೆ.
ಇನ್ನು ನ್ಯಾಯಾಲಯ ಗರ್ಭಿಣಿ ಹೆಣ್ಣುಮಗಳನ್ನ ನಡೆಸಿಕೊಂಡಿರುವ ರೀತಿಗೂ ವೃಂದಾ ಗ್ರೋವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಮೊದಲ ಗರ್ಭಿಣಿ ಆಗಿರುವ ಝರ್ಗಾರ್ ಅತ್ಯಂತ ಸೂಕ್ಷ್ಮ ಹಾಗೂ ಅಪಾಯ ಸ್ಥಿತಿಯಲ್ಲಿದ್ದಾರೆ. ಆಕೆಯನ್ನ ಜೈಲಿಗೆ ಕಳುಹಿಸಿರುವ ನ್ಯಾಯಾಲಯ ಆಕೆಯ ಆರೋಗ್ಯದ ಬಗ್ಗೆ ತಿಳಿದಂತಿಲ್ಲ. ಆದ್ದರಿಂದ ಏನೇ ಆದರೂ ಅದಕ್ಕೆ ನ್ಯಾಯಾಲಯವೇ ನೇರ ಹೊಣೆಯಾಗುತ್ತದೆ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ಕೋವಿಡ್-19 ತುರ್ತು ಪರಿಸ್ಥಿತಿಯಲ್ಲೂ ಮನೆಗೆ ಮೊದಲ ಮಗು ಬರುವ ನಿರೀಕ್ಷೆಯಲ್ಲಿದ್ದ ಝರ್ಗಾರ್ ಕುಟುಂಬಕ್ಕೆ ಈ ಘಟನೆ ಆಘಾತವನ್ನೇ ತಂದಿಟ್ಟಿದೆ. ಅಲ್ಲದೇ ರಂಝಾನ್‌ನ ಮೊದಲ ದಿನವನ್ನ ಕಣ್ಣೀರಿನಿಂದಲೇ ಆರಂಭಿಸುವಂತಾಗಿದೆ. ಇಫ್ತಾರ್ ಸಮಯದಲ್ಲಂತೂ ಝರ್ಗಾರ್ ಬಂಧನ ಕುಟುಂಬವನ್ನ ಇನ್ನಷ್ಟು ದುಃಖಿತರನ್ನಾಗಿಸಿದೆ. “ಸದ್ಯ ಆಕೆಗೆ ಬೇಕಿರುವುದು ಆರೈಕೆಯೇ ಹೊರತು, ಜೈಲಲ್ಲ. ಆದ್ದರಿಂದ ಆಕೆಯ ಬಿಡುಗಡೆಗಾಗಿ ಪ್ರಾರ್ಥಿಸುತ್ತಿರುವುದಾಗಿ” ಆಕೆಯ ಪತಿ ಕಣ್ಣೀರಾಗುತ್ತಾರೆ.
ಒಟ್ಟಿನಲ್ಲಿ ಒಂದು ಕಡೆಯಲ್ಲಿ ʼಮನ್ ಕೀ ಬಾತ್ʼನಲ್ಲಿ ರಂಝಾನ್ ಸಂದೇಶ ನೀಡುವ ಪ್ರಧಾನಿ ನರೇಂದ್ರ ಮೋದಿ ಕರೋನಾ ಭೀತಿಯ ನಡುವೆಯೂ ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಬಂಧಿಸಲು, ದೇಶದ್ರೋಹಿ ಪ್ರಕರಣ ದಾಖಲಿಸುವಂತೆ ನೋಡಿಕೊಳ್ಳಲು ದೆಹಲಿ ಪೊಲೀಸರನ್ನ ಬಳಕೆ ಮಾಡುತ್ತಿರುವುದು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಅಸಮಾಧಾನಕ್ಕೆ ಕಾರಣವಾಗುತ್ತಿದೆ.