ತಿರುಪತಿ ದೇವಸ್ಥಾನ ಜಗತ್ತಿನಲ್ಲೇ ಇರುವ ಶ್ರೀಮಂತ ದೇವಸ್ಥಾನಗಳಲ್ಲೊಂದು. ಕರೋನಾ ಮತ್ತು ಲಾಕ್ ಡೌನ್ ಕಾರಣದಿಂದಾಗಿ ಇತಿಹಾಸದಲ್ಲೇ ಚೊಚ್ಚಲ ಬಾರಿಗೆ ತಿಮ್ಮಪ್ಪನ ಸನ್ನಿಧಿಯ ಬಾಗಿಲು ಮುಚ್ಚಲ್ಪಟ್ಟಿದೆ. ಕೇಂದ್ರ ಗೃಹ ಇಲಾಖೆಯ ಅಧಿಸೂಚನೆಯ ಪ್ರಕಾರ ಮೇ 31ರ ವರೆಗೆ ದೇಶದ ಎಲ್ಲಾ ಧಾರ್ಮಿಕ ಕೇಂದ್ರಗಳನ್ನೂ ಮುಚ್ಚಲು ಸೂಚಿಸಿದೆ. ಆದರೀಗ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ತಿಮ್ಮಪ್ಪ ಸನ್ನಧಿಯನ್ನು ಮತ್ತೆ ತೆರೆಯಲು ಆಂಧ್ರಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದೆ. ಅಲ್ಲದೇ ಕೋವಿಡ್ 19 ಶಿಷ್ಟಾಚಾರವನ್ನು ಕಟ್ಟು ನಿಟ್ಟಾಗಿ ಪಾಲಿಸುವುದಾಗಿ ಹೇಳಿದೆ.
“ದೇಶಕ್ಕೆ ಕೋವಿಡ್ ವೈರಾಣು ಅಪ್ಪಳಿಸಿದ ದಿನದಿಂದಲೂ ಕೂಡ ತಿರುಮಲ ಪಟ್ಟಣ ಗ್ರೀನ್ ಝೋನ್‌ನಲ್ಲೇ ಇದೆ. ಆದರೂ ಮುನ್ನೆಚ್ಚರಿಕಾ ದೃಷ್ಟಿಯಿಂದ ನಾವು ದೇವಸ್ಥಾನದ ಬಾಗಿಲು ಮುಚ್ಚಿದೆವು. ತಿರುಪತಿ ತಿಮ್ಮಪ್ಪ ನಮ್ಮನ್ನು ಕಾಪಾಡಿದ್ದಾನೆ. ಅವನು ಸದಾ ನಮ್ಮ ಜೊತೆಗಿದ್ದಾನೆ. ಮುಂದಕ್ಕೂ ಅವನೇ ನಮ್ಮನ್ನು ಕಾಪಾಡುತ್ತಾನೆ” ಎಂದು ಮಂಡಳಿಯ ಅಧ್ಯಕ್ಷ ವೈ ವಿ ಸುಬ್ಬಾರೆಡ್ಡಿ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಿಗೆ ಹೇಳಿಕೆ ನೀಡಿದ್ದಾರೆ. ಅಂದಹಾಗೆ ಮಾರ್ಚ್ 20ಕ್ಕೆ ಲಾಕ್ ಡೌನ್ ಹಿನ್ನೆಲೆ ದೇವಸ್ಥಾನ ಮುಚ್ಚಲಾಗಿತ್ತು.
ದೇವಸ್ಥಾನವನ್ನು ಮತ್ತೆ ತೆರೆಯಲು ಅನುಮತಿ ಕೊಟ್ಟರೆ ಕೆಳಗಿನ ಮುನ್ನೆಚ್ಚರಿಕಾ ಕ್ರಮಗಳನ್ನು ಆಡಳಿತ ಮಂಡಳಿ ಅನುಸರಿಸಲಿದೆ:
• ತಿಮ್ಮಪ್ಪನ್ನ ದರ್ಶನಕ್ಕೆ ಬರುವ ಭಕ್ತಾಧಿಗಳು ನಿಲ್ಲುವ ಜಾಗವನ್ನು ಸಂಪೂರ್ಣವಾಗಿ ಗುರಿತಿಸಲಾಗಿದೆ. ಒಬ್ಬೊಬ್ಬರಿಗೂ ಚೌಕ ಮಾದರಿಯಲ್ಲಿ ಗೆರೆ ಎಳೆಯಲಾಗಿದೆ. ಆ ಚೌಕಟ್ಟಿನ ಒಳಗೆ ನಿಂತುಕೊಂಡೇ ಭಕ್ತಾಧಿಗಳು ದರ್ಶನ ಪಡೆಯ ಬೇಕಿದೆ.
• ಎಲ್ಲಾ ಭಕ್ತಾಧಿಗಳು ಕೂಡ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಲಿದ್ದಾರೆ. ಅಲ್ಲದೇ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ.
• ಪ್ರತಿ ದಿನ ನಿಗದಿ ಭಕ್ತಾಧಿಗಳಿಗಷ್ಟೇ ದರ್ಶನಕ್ಕೆ ಅವಕಾಶ. ದಿನಂಪ್ರತಿ ಸುಮಾರು 1 ಲಕ್ಷಕ್ಕೂ ಅಧಿಕ ಜನರು ತಿಮ್ಮಪ್ಪನ ಸನ್ನಿಧಿಗೆ ಆಗಮಿಸುತ್ತಾರೆ. ಆದರೆ ಕೋವಿಡ್ 19 ಅನ್ನು ಗಮನದಲ್ಲಿಟ್ಟುಕೊಂಡು ಅದರ ಪ್ರಮಾಣವನ್ನು 25 ರಿಂದ 30 ಸಾವಿರಕ್ಕೆ ಇಳಿಸಲಾಗಿದೆ.
• ದಿನಕ್ಕೆ ನಿಗದಿತ ಸಮಯದ ದರ್ಶನ ಇರಲಿದೆ. ಪ್ರತಿ ದರ್ಶನ ಮುಗಿದ ಬಳಿಕ ಸ್ಯಾನಿಟೈಸರ್ ಬಳಸಿ ದೇವಸ್ಥಾನದ ಅಂಗಳದ ಶುದ್ಧೀಕರಣ ನಡೆಯಲಿದೆ.
• ದರ್ಶನಕ್ಕೆ ಒಬ್ಬೊಬ್ಬರಾಗಿ ತೆರಳುವ ವ್ಯವಸ್ಥೆ ಮಾಡಲಾಗಿದೆ. ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸುವುದಲ್ಲದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿದೆ.
ಇನ್ನು ತಿಮ್ಮಪ್ಪನ ಸನ್ನಿಧಿಯ ವೈಶಿಷ್ಟ್ಯಗಳಲ್ಲೊಂದಾದ ತಿಮ್ಮಪ್ಪನ್ನ ಪ್ರಸಾದ ಮೊದಲಿನಂತೆಯೇ ಲಭ್ಯವಾಗಲಿದೆ. ಆದರೆ, ಪ್ರಸಾದವನ್ನು ನೇರವಾಗಿ ಕೈಗೆ ನೀಡುವ ಬದಲು ಶಿಸ್ತುಬದ್ಧವಾಗಿ ಪ್ಯಾಕ್ ಮಾಡಿ ಭಕ್ತರಿಗೆ ನೀಡಲಾಗುತ್ತದೆ. ಇದರ ಜೊತೆಗೆ ಪವಿತ್ರವಾದ ತೀರ್ಥವನ್ನೂ ಎಂದಿನಂತೆ ಭಕ್ತರು ಪಡೆಯಬಹುದು. ಹೀಗೆ ಕೋವಿಡ್ 19 ಶಿಷ್ಟಾಚಾರಕ್ಕೆ ಬದ್ಧವಾಗಿದ್ದುಕೊಂಡೇ ದೇವಸ್ಥಾನವನ್ನು ಮತ್ತೆ ತೆರೆಯಲು ಆಡಳಿತ ಮಂಡಳಿ ಆಂಧ್ರಪ್ರದೇಶದ ಸರಕಾರಕ್ಕೆ ಮನವಿ ಮಾಡಿಕೊಂಡಿದೆ. ಆದರೆ ಈವರೆಗೆ ಈ ಬಗ್ಗೆ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ತಿರುಪತಿ ದೇವಸ್ಥಾನದ ಆದಾಯಕ್ಕೆ ಬರೆ ಎಳೆದ ಲಾಕ್ ಡೌನ್:
ತಿರುಪತಿ ದೇವಸ್ಥಾನಕ್ಕೆ ದಿನಂಪ್ರತಿ ಸರಿಸುಮಾರು 3 ರಿಂದ 4 ಕೋಟಿಯಷ್ಟು ಆದಾಯ ಬರುತ್ತಿತ್ತು. ಆದರೆ ಈ ಕೋವಿಡ್ 19 ಹಾಗೂ ಲಾಕ್ ಡೌನ್ ಕಾರಣದಿಂದಾಗಿ ಆದಾಯಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಈ ಹಿನ್ನೆಲೆ ಈ ಲಾಕ್ಡೌನ್ ಅವಧಿಯಲ್ಲಿ ಸುಮಾರು 200 ಕೋಟಿ ರೂಪಾಯಿಯಷ್ಟು ಮೊತ್ತ ದೇವಸ್ಥಾನದ ಆದಾಯದಲ್ಲಿ ಕಡಿತಗೊಂಡಿದೆ. ಹೀಗೆಂದ ಮಾತ್ರಕ್ಕೆ ಇದು ದೇವಸ್ಥಾನದ ಸಿಬ್ಬಂದಿ ವರ್ಗಕ್ಕೆ ಸಂಬಳ ಕೊಡುವಷ್ಟೇನು ತೊಂದರೆಯಾಗಿಲ್ಲ. ತಿಮ್ಮಪ್ಪನ ಕೃಪೆಯಿಂದ ಈವರೆಗೆ ಎಲ್ಲವೂ ಸುಸೂತ್ರವಾಗಿ ನೆರವೇರಿದೆ ಎಂದಿದ್ದಾರೆ ದೇವಸ್ಥಾನ್ದ ಆಡಳಿತ ಮಂಡಳಿಯ ಅಧ್ಯಕ್ಷ ಸುಬ್ಬಾರೆಡ್ಡಿ. ದರ್ಶನಕ್ಕೆ ಬರುವ ಭಕ್ತಾದಿಗಳಿಂದ, ಪ್ರಸಾದಿಂದ ಹಾಗೂ ದಾನಿಗಳಿಂದ ಬರುವ ಹಣವಷ್ಟೇ ಈ ದೇವಸ್ಥಾನದ ಆದಾಯವಾಗಿದೆ.
ಹೀಗಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಿಯನ್ನು ಶೀಘ್ರವೇ ತೆರೆಯಲು ಆಂಡಳಿತ ಮಂಡಳಿ ಮುಂದಾಗಿದ್ದಾರೆ. ಆದರೆ ಮೇ 31ರ ವರೆಗೆ ಯಾವುದೇ ಧಾರ್ಮಿಕ ಕೇಂದ್ರಗಳು ತೆರೆಯ ಕೂಡದು ಎಂಬ ಗೃಹ ಇಲಾಖೆಯ ಆದೇಶದ ನಡುವೆ ಆಂಧ್ರಪ್ರದೇಶ ಸರ್ಕಾರದ ನಡೆ ಏನಾಗಿರಲಿದೆ ಎಂಬುದಾಗಿದೆ ಸದ್ಯಕ್ಕೆ ತಿಮ್ಮಪ್ಪನ ಭಕ್ತರಲ್ಲಿರುವ ಕುತೂಹಲ.