ಮಂಗಳೂರಿನ ಐಜಿಪಿ ಕಚೇರಿಯಲ್ಲಿ ಡಿವೈಎಸ್‌ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ ಕೆ ಗಣಪತಿಯವರು 2016 ಜುಲೈ 17ರಂದು ಕೊಡಗಿನ ಖಾಸಗಿ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಾಕಷ್ಟು ರಾಜಕೀಯ ತಿರುವುಗಳನ್ನು ಪಡೆದಿತ್ತು. ಅಂದಿನ ಗೃಹ ಮಂತ್ರಿ ಕೆ ಜೆ ಜಾರ್ಜ್ ಅವರ ರಾಜಿನಾಮೆಗೂ ಈ ಪ್ರಕರಣ ಕಾರಣವಾಗಿತ್ತು. ಇವರೊಂದಿಗೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ ಎಂ ಪ್ರಸಾದ್ ಅವರ ವಿರುದ್ದವೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ದಾಖಲಾಗಿತ್ತು.
ಈಗ ಈ ಪ್ರಕರಣಕ್ಕೆ ಹೊಸ ತಿರುವೊಂದು ಲಭಿಸಿದ್ದು, ಸಿಬಿಐ ಸಲ್ಲಿಸಿದ್ದ ʼಬಿʼ ರಿಪೋರ್ಟ್ ಕುರಿತಾಗಿ ಮತ್ತೆ ವಿಚಾರಣೆ ನಡೆಸಬೇಕೆಂದು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ. ಈ ಹಿಂದೆ ಸಿಬಿಐ ವಿಸ್ತೃತವಾಗಿ ವಿಚಾರಣೆ ನಡೆಸಿ ನೀಡಿದ್ದ ಬಿ ರಿಪೋರ್ಟ್‌ಅನ್ನು ತಿರಸ್ಕರಿಸಿರುವ ಕೋರ್ಟ್ ಆದೇಶ, ಜಾರ್ಜ್, ಪ್ರಣವ್ ಮೊಹಾಂತಿ ಮತ್ತು ಎ ಎಂ ಪ್ರಸಾದ್ ಅವರಿಗೆ ತಲೆ ನೋವಾಗಿ ಪರಿಣಮಿಸಿದೆ.
ಪ್ರಕರಣವನ್ನು ಮತ್ತೆ ವಿಚಾರಣೆ ಮಾಡುವ ಕುರಿತು ಮೂವರಿಗೂ ನೋಟಿಸ್ ನೀಡಿರುವ ನ್ಯಾಯಾಲಯ ಸೆಪ್ಟೆಂಬರ್ 28ಕ್ಕೆ ವಿಚಾರಣೆಗೆ ನ್ಯಾಯಾಲಯದಲ್ಲಿ ಹಾಜರಾಗುವಂತೆ ತಿಳಿಸಿದೆ. ಈ ಕುರಿತು ಮಾತನಾಡಿರುವ ಜಾರ್ಜ್ ಅವರ ಆಪ್ತ ಮೂಲಗಳು, ನೋಟಿಸ್ ಇನ್ನೂ ನಮಗೆ ತಲುಪಿಲ್ಲ ಎಂದು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಡೆದ ಘಟನೆ ಏನು?
2016 ಜುಲೈ 7ರಂದು ಡಿವೈಎಸ್‌ಪಿ ಗಣಪತಿ ಅವರು ಕೊಡಗಿನ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ, ತಮ್ಮ ಹಿರಿಯ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಮತ್ತು ಎ ಎಂ ಪ್ರಸಾದ್ ಅವರು ಹಾಗೂ ಅಂದಿನ ಗೃಹ ಸಚಿವರಾದ ಕೆ ಜೆ ಜಾರ್ಜ್ ಅವರು ತಮಗೆ ಕಿರುಕುಳ ನೀಡಿದ್ದಾಗಿ ಹೇಳಿಕೊಂಡಿದ್ದರು. ಸಂದರ್ಶನದ ನಂತರ ವಿನಾಯಕ ಲಾಡ್ಜ್‌ನ ತಮ್ಮ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಗಣಪತಿಯವರ ಸಾವು, ರಾಜ್ಯಾದ್ಯಂತ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಯನ್ನು ಹೊತ್ತಿಸಿತ್ತು. ಇದರ ರಾಜಕೀಯ ಲಾಭ ಪಡೆಯಲು ಬಿಜೆಪಿಯು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿತ್ತು. ಹೆಚ್ಚಿದ ವಿರೋಧ ಪಕ್ಷದ ಒತ್ತಡದಿಂದ ಜಾರ್ಜ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ತನಿಖೆಗೆ ಸಹಕರಿಸಿದ್ದರು. ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು. ಸಿಐಡಿ ಜಾರ್ಜ್ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.
2017ರಲ್ಲಿ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದ ಗಣಪತಿ ಅವರ ತಂದೆಯ ಅರ್ಜಿಯನ್ನು ಪುರಸ್ಕರಿಸಿ, ಈ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ನೀಡಲು ಆದೇಶ ಹೊರಡಿಸಿತ್ತು. ಸಿಬಿಐ ಕೂಡಾ ವಿಸ್ತೃತವಾದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿತ್ತು. ಈಗ ಈ ಬಿ ರಿಪೋರ್ಟ್‌ನ್ನು ಪ್ರಶ್ನಿಸಿ ಗಣಪತಿ ಅವರ ಮಗ ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಸಿಬಿಐ ನೀಡಿದ ರಿಪೋರ್ಟ್‌ನಲ್ಲಿ ಏನಿದೆ?
ತನಿಖೆ ನಡೆಸಿದ್ದ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ, ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಅವರ ಪಾತ್ರವಿಲ್ಲ. ಅವರು ಮಾಡಿರುವ ಆರೋಪಗಳಿಗೂ ಜಾರ್ಜ್ ಅವರಿಗೂ ಸಂಬಂಧವಿಲ್ಲ. ನಾಲ್ಕೈದು ವರ್ಷಗಳ ಹಿಂದೆ ನಡೆದಿದ್ದ ಘಟನೆಗಳನ್ನು ಪ್ರಸ್ತಾಪಿಸಿ ಗಣಪತಿಯವರು ಆರೋಪ ಮಾಡಿದ್ದಾರೆ. ಆದರೆ, ತನಿಖೆ ವೇಳೆ ಈ ಆರೋಪಗಳನ್ನು ಪುಷ್ಠೀಕರಿಸುವಂತಹ ಯಾವುದೇ ಸಾಕ್ಷ್ಯಾಧಾರಗಳು ದೊರೆತ್ತಿಲ್ಲ ಎಂದು ಸಿಬಿಐ ತನ್ನ ಅಂತಿಮ ವರದಿಯಲ್ಲಿ ತಿಳಿಸಿತ್ತು.
ಅಲ್ಲದೇ, ಗಣಪತಿಯವರು ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ಒತ್ತಡ ಅಥವಾ ಕಿರುಕುಳವನ್ನು ಅನುಭವಿಸಿಲ್ಲ. ಆದರೆ, ಕೌಟುಂಬಿಕ ವಿಚಾರಗಳಲ್ಲಿ ಅವರು ಮಾನಸಿಕವಾಗಿ ಖಿನ್ನರಾಗಿದ್ದರು. ಈ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕೇ ಹೊರತು ಇನ್ನಾವುದೇ ಕಾರಣಗಳಿಂದ ಅಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು.
ಇಷ್ಟಾದ ನಂತರವೂ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ವಿಚಾರಣೆ ನಡೆಸಲಿರುವ ನ್ಯಾಯಾಲಯವು ಏನು ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.