ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕುರಿತಂತೆ ಹೆಚ್ ಡಿ ಕುಮಾರಸ್ವಾಮಿ ಆಡಳಿತ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. ಗಲಭೆಯ ಕುರಿತಂತೆ ಎರಡೂ ಪಕ್ಷಗಳು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದಿರುವ ಕುಮಾರಸ್ವಾಮಿ ಬಹಿರಂಗ ಪ್ರಶ್ನೆಗಳ ಮೂಲಕ ಎರಡೂ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಡಿ.ಜೆ ಹಳ್ಳಿ ಗಲಭೆಯು ರಾಜ್ಯದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ. ಈ ಘಟನೆಯನ್ನು ಪರಾಮರ್ಶಿಸಿ, ದುಷ್ಟರನ್ನು ಶಿಕ್ಷಿಸುವ ಕಾರ್ಯವಾಗಬೇಕಾಗಿತ್ತು. ಈ ಘಟನೆಯ ಅಧ್ಯಯನದ ಮೂಲಕ ಮುಂದಿನ ದಿನಗಳಲ್ಲಿ ಗಲಭೆಗಳು ಸಂಭವಿಸದಂತೆ ಎಚ್ಚರಿಕೆ, ಜವಾಬ್ದಾರಿಯುತ ನಡವಳಿಕೆಯನ್ನು ಸರ್ಕಾರ ಮತ್ತು ಅದರ ಚುಕ್ಕಾಣಿ ಹಿಡಿದಿರುವ ಪಕ್ಷ, ವಿಪಕ್ಷ ಪ್ರದರ್ಶಿಸಬೇಕಾಗಿತ್ತು. ಆದರೆ, ಈ ಘಟನೆಯನ್ನೇ ನೆಪ ಮಾಡಿಕೊಂಡು ರಾಷ್ಟ್ರೀಯ ಪಕ್ಷಗಳೆರಡು ಕೆಸರೆರಚಾಟದಲ್ಲಿ ತೊಡಗಿವೆ. ಈ ಮೂಲಕ ಜನರ ಮನಸ್ಸಿನಲ್ಲಿರಬಹುದಾದ ತಮ್ಮ ವಿಶ್ವಾಸಾರ್ಹತೆ, ಉತ್ತರದಾಯಿತ್ವವನ್ನು ಬಿಜೆಪಿ ಕಾಂಗ್ರೆಸ್ ಪಕ್ಷಗಳೆರಡೂ ಕಳೆದುಕೊಂಡು ನಿರ್ವಾಣಗೊಂಡಿವೆ. ಪ್ರತಿ ಘಟನೆಯಲ್ಲೂ ರಾಜಕೀಯ ಧ್ರುವೀಕರಣಕ್ಕೆ ಬೇಕಾಗುವ ಅಂಶ ಹುಡುಕುವ ಈ ಎರಡೂ ಪಕ್ಷಗಳು ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಬಲ್ಲವೇ? ಎಂದು ಕುಮಾರಸ್ವಾಮಿ ಕೇಳಿದ್ದಾರೆ.
ಕಾಂಗ್ರೆಸ್‌ಗೆ ಪ್ರಶ್ನೆ: ಅಲ್ಪ ಸಂಖ್ಯಾತರನ್ನು ರಕ್ಷಿಸಬೇಕಾದ್ದು ಯಾವಾಗ?
ಡಿಜೆ ಹಳ್ಳಿ ಗಲಭೆ ಪ್ರಕರಣ ಮತ್ತು ಪಾದರಾಯನಪುರ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ರಕ್ಷಕನಂತೆ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದೆ. ಅನ್ಯ ಕೋಮಿನ ಜನರ ಅಪರಾಧ ಪ್ರಕರಣಗಳ ಸಂದರ್ಭದಲ್ಲಿ ಎದ್ದು ನಿಲ್ಲುವ ಕಾಂಗ್ರೆಸ್, ಪೌರತ್ವ ತಿದ್ದುಪಡಿ ಕಾಯ್ದೆಯಂಥ ದುರಿತ ಕಾಲದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಏಕೆ ನಿಲ್ಲಲಿಲ್ಲ? ಮಂಗಳೂರಿನಲ್ಲಿ ಗೋಲಿಬಾರ್ ಆಗಿ ಅಲ್ಪಸಂಖ್ಯಾತ ಯುವಕರು ಮೃತಪಟ್ಟಾಗ ಎಲ್ಲಿ ಹೋಗಿತ್ತು ಈ ಕಾಳಜಿ? ಕ್ರೈಂ ಸಂಭವಿಸಿದಾಗ ಮಾತ್ರವೇ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ರಕ್ಷಣೆ ಕಾಣಿಸುತ್ತದೆಯೇ?
ಗಲಭೆಯಲ್ಲಿ ನಷ್ಟವನ್ನು ಗಲಭೆಕೋರರಿಂದ ಸಂಗ್ರಹಿಸಲು ಹೊರಟ ಸರ್ಕಾರಕ್ಕೆ ಕಾಂಗ್ರೆಸ್ ಸಲಹೆಯೊಂದನ್ನು ನೀಡಿದೆ. ‘ಇನ್ನೊಂದು ಕಡೆಯವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಹೇಳಿದೆ. ಹಾಗಾದರೆ, ಆ ‘ಇನ್ನೊಂದು ಕಡೆಯವರು’ ಯಾರು ಎಂದು ಕಾಂಗ್ರೆಸ್ ಧೈರ್ಯದಿಂದ ಹೇಳಬಹುದೇ?
ಎಸ್‌ಡಿಪಿಐ ಅನ್ನು ನಿಷೇಧಿಸುವ ವಿಚಾರ ಬಂದಾಗ ಕಾಂಗ್ರೆಸ್ ಸಿಡಿದೆದ್ದು ನಿಲ್ಲುತ್ತದೆ. ತಾಕತ್ತಿದ್ದರೆ ಅದನ್ನು ನಿಷೇಧಿಸಿ ಎಂದು ಆಡಳಿತದಲ್ಲಿರುವವರಿಗೆ ಸವಾಲೆಸೆಯುತ್ತದೆ. ಅದರ ನಿಷೇಧವಾಗುವುದು, ಆಗದೇ ಇರುವುದರಲ್ಲಿ ಕಾಂಗ್ರೆಸ್‌ಗೆ ಏನು ಲಾಭವಿದೆ? ಇದರ ವಿವರಣೆ ನೀಡಬಹುದೇ?
ಗಲಭೆಯಲ್ಲಿ ಏನೋ ರಾಜಕೀಯ ಷಡ್ಯಂತ್ರವಿದೆ ಎಂಬುದು ಕಾಂಗ್ರೆಸ್ ಆರೋಪ. ಆ ಷಡ್ಯಂತ್ರ ಕಾಂಗ್ರೆಸ್ ಒಳಗಿನದ್ದೋ, ಹೊರಗಿನದ್ದೋ? ಟಿಕೆಟ್ ಆಕಾಂಕ್ಷಿಗಳದ್ದೋ? ಗುಟ್ಟಾಗಿರುವ ಈ ವಿಷಯ ಬಹಿರಂಗಗೊಳಿಸಲು ಕಾಂಗ್ರೆಸ್‌ಗೆ ತಾಕತ್ತು ಇದೆಯೇ? ಬೇರೆ ಪಕ್ಷಗಳಿಂದ ಕರೆದುಕೊಂಡು ಹೋದ ಮುಖಂಡರು ಕಾಂಗ್ರೆಸ್‌ಗೆ ಕೆಲ ಬಾರಿ ಅಪಥ್ಯವಾಗುತ್ತಾರೆಯೇ?
ಆಂತರಿಕ ಸಮಸ್ಯೆಯನ್ನು ಗಲಭೆಯಾಗಿ ಪರಿವರ್ತಿಸಿ, ಎರಡು ಕೋಮುಗಳ ನಡುವೆ ಮನಸ್ಥಾಪ ತಂದಿಟ್ಟು, ಸಾಮಾಜಿಕ ಸಾಮರಸ್ಯ ಹಾಳು ಮಾಡಿದ ಬಗ್ಗೆ ಕಾಂಗ್ರೆಸ್‌ಗೆ ಸ್ವಲ್ಪವಾದರೂ ಅಳುಕಿದೆಯೇ?
ಬಿಜೆಪಿಗೆ ಪ್ರಶ್ನೆ: ಬೆಂಕಿ ಬಿದ್ದ ಮನೆಯಲ್ಲೂ ರಾಜಕಾರಣ ಮಾಡುವಿರೇ?
ಡಿಜೆ ಹಳ್ಳಿ ಪ್ರಕರಣ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗೃಹ ಇಲಾಖೆ, ಗುಪ್ತಚರ ಇಲಾಖೆ ಮತ್ತು ಸರ್ಕಾರದ ಅತಿ ದೊಡ್ಡ ವೈಫಲ್ಯ. ಇದರ ಹೊಣೆ ಹೊರಬೇಕಾದ ಬಿಜೆಪಿ ಸರ್ಕಾರ ಅಕ್ಷರಶಃ ಹೊಣೆಗೇಡಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಗೃಹ ಇಲಾಖೆಯ ಯಾವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ? ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ಇದರಲ್ಲಿ ರಾಜಕೀಯ ಧ್ರುವೀಕರಣದ ಸಂಚು ನಡೆಸುತ್ತಿದೆ. ನಾಚಿಕೆಯಾಗದೇ ಬಿಜೆಪಿಗೆ?
ಡಿಜೆ ಹಳ್ಳಿ ಘಟನೆಯಲ್ಲಿ ಕಾಂಗ್ರೆಸ್ಸಿಗರೇ ದುಷ್ಕೃತ್ಯ ನಡೆಸಿದ್ದಾರೆ, ಕಾಂಗ್ರೆಸ್‌ನ ಕೈವಾಡವಿದೆ ಎಂದು ಬೀದಿಯಲ್ಲಿ ಹೇಳುತ್ತಿರುವ ಬಿಜೆಪಿಯ ವಾಚಾಳಿ, ಬಾಯಿಬಡುಕ ಮಂತ್ರಿ, ಶಾಸಕರು ತಮ್ಮ ಬಳಿ ಇರುವ ಕಾಂಗ್ರೆಸ್ ವಿರುದ್ಧದ ಸಾಕ್ಷಿಯನ್ನು ತನಿಖಾಧಿಕಾರಿಗಳಿಗೆ ಕೊಡಬಾರದು ಏಕೆ? ಹೇಗಿದ್ದರು ಸರ್ಕಾರವೇ ಬಿಜೆಪಿಯದ್ದಾಗಿದೆ. ಸೂಕ್ತ ತನಿಖೆ ನಡೆಸಿ ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳಬಾರದೇಕೆ? ಸಾಕ್ಷ್ಯವಿಲ್ಲವಾದರೆ ಬಿಜೆಪಿಯದ್ದೂ ಕೇವಲ ರಾಜಕೀಯ ಧ್ರುವೀಕರಣ ಉದ್ದೇಶದ ಬಡಾಯಿತನವೇ?
ಗಲಭೆ ಸೃಷ್ಟಿಸಲೆಂದೇ ಅನ್ಯ ರಾಜ್ಯಗಳಿಂದ ಗೂಂಡಾಗಳನ್ನು ಕರೆತರಲಾಗಿತ್ತು ಎಂದು ಬಿಜೆಪಿ ಆರಂಭದಲ್ಲಿ ಹುಯಿಲೆಬ್ಬಿಸಿತು. ಹಾಗಾದರೆ, ಘಟನೆಗೆ ಸಂಬಂಧಿಸಿದಂತೆ ಈ ವರೆಗೆ ಬಂಧನಕ್ಕೊಳಗಾಗಿರುವ ಅನ್ಯರಾಜ್ಯದ ಗೂಂಡಾಗಳು ಎಷ್ಟು ಜನ? ಕೋವಿಡ್ ಸಂದರ್ಭದಲ್ಲಿ ಗಡಿಯಲ್ಲಿ ಸಂಚಾರ ಕಷ್ಟವಿರುವಾಗ ಗೂಂಡಾಗಳು ಗುಂಪು ಗುಂಪಾಗಿ ನಮ್ಮ ಚೆಕ್ ಪೋಸ್ಟ್‌ಗಳನ್ನು ದಾಟಿ ಬಂದದ್ದು ಹೇಗೆ? ಬಂದಿದ್ದೇ ಆದರೆ, ವೈಫಲ್ಯ ಯಾರದ್ದು?
ದೊಡ್ಡ ಅಂತರದ ಮತಗಳಿಂದ ಗೆದ್ದ ಶಾಸಕನೊಬ್ಬನ ಮನೆಗೇ ರಕ್ಷಣೆ ಹಾಗೂ ಪೊಲೀಸ್ ಠಾಣೆಗೆ ರಕ್ಷಣೆ ನೀಡಲಾರದಷ್ಟು ದುರ್ಬಲವಾಗಿರುವ, ಶಕ್ತಿಹೀನ ಸರ್ಕಾರ ಸಾಮಾನ್ಯರಲ್ಲಿ ಸಾಮಾನ್ಯರ ಹಿತ ಕಾಯಲು ಶಕ್ತವಾಗಿದೆಯೇ? ಹಾಗಿಲ್ಲ ಎಂದಮೇಲೆ ಸರ್ಕಾರ ಇದ್ದು ಪ್ರಯೋಜನವೇನು? ಇಲ್ಲವೇ, ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಇಂಥದ್ದೊಂದು ಗಲಭೆ ಬೇಕಾಗಿತ್ತೇ?
ಕೋಮು ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ನೂಕು ನುಗ್ಗಲಿನಲ್ಲೂ ಮುಂದೆ ಬರುವ ಬಿಜೆಪಿಗೆ ನೈತಿಕ ರಾಜಕಾರಣದ ಅರ್ಥವೇನಾದರೂ ಗೊತ್ತಿದೆಯೇ?
ಅಧಿಕಾರ ಪಡೆಯುವುದು ಎಲ್ಲ ರಾಜಕೀಯ ಪಕ್ಷಗಳ ಪರಮ ಗುರಿ ಹೌದು. ಆದರೆ, ಅದರಲ್ಲಿ ಸಾಮಾಜಿಕ ಜವಾಬ್ದಾರಿಗಳಿರಬೇಕು, ಉತ್ತರದಾಯಿತ್ವವಿರಬೇಕು, ಪ್ರಾಮಾಣಿಕತೆ ಇರಬೇಕು. ಸಾಮಾಜಿಕ ಸಾಮರಸ್ಯಕ್ಕೆ ಸಂಬಂಧಿಸಿದ ವಿಚಾರವೊಂದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡೆದುಕೊಳ್ಳುತ್ತಿರುವ ರೀತಿಯಲ್ಲಿ ಇದ್ಯಾವುದೂ ಇಲ್ಲ. ಇನ್ನಾದರೂ ಸಣ್ಣತನದ ರಾಜಕೀಯ ಬಿಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.