ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೂ ಗೋಡೆಗೂ ಎಲ್ಲಿಲ್ಲದ ನಂಟಿದೆ. ನಿಮಗಿದು ತಮಾಷೆ ಏನಿಸಿದರೂ ನಿಜ! 2015ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದ ಟ್ರಂಪ್ ವೀರಾವೇಶದ ಭಾಷಣ ಮಾಡಿದ್ದರು. ಅಮೆರಿಕ ಅಮೆರಿಕನ್ನರಿಗೆ ಮಾತ್ರ. ಹೀಗಾಗಿ ಅಕ್ರಮ ವಲಸಿಗರನ್ನು ದೇಶದಿಂದ ಹೊರ ಹಾಕಲಾಗುವುದು. ಮೆಕ್ಸಿಕೋ ದೇಶದಿಂದ ಅಮೆರಿಕದ ಒಳಗೆ ನುಸುಳುವವರನ್ನು ತಡೆಯಲು ಅಮೆರಿಕ-ಮೆಕ್ಸಿಕೋ ಗಡಿಯುದ್ದಕ್ಕೂ ಬೃಹತ್ ಗೋಡೆಯನ್ನು ಕಟ್ಟಲಾಗುವುದು ಎಂದಿದ್ದರು.
ರಾಜಕೀಯ ಅನನುಭವಿಯ ಈ ವೀರಾವೇಶದ ಭಾಷಣಕ್ಕೆ ಇಡೀ ಜಗತ್ತು ಮುಸಿಮುಸಿ ನಕ್ಕಿತ್ತು. ಆದರೆ, ಬಲಪಂಥೀಯ ವಿಚಾರ ಧೋರಣೆಗಳು ಇಡೀ ವಿಶ್ವದಾದ್ಯಂತ ಗಟ್ಟಿಯಾಗಿ ಬೇರು ಬಿಡುತ್ತಿದ್ದ ಪರಿಣಾಮವೋ ಏನೋ? ಟ್ರಂಪ್ ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ, 6 ಸಾವಿರ ಮೈಲಿಯುದ್ದಕ್ಕೂ ಗೋಡೆ ಕಟ್ಟುವುದು ಭಾಷಣ ಮಾಡಿದಷ್ಟು ಸುಲಭವಲ್ಲ ಎಂಬುದು ನಂತರ ಟ್ರಂಪ್‌ಗೆ ಅರಿವಾಯಿತೇನೋ? ನಂತರ ಗೋಡೆ ಕುರಿತ ಚಿಂತೆಯನ್ನೇ ಬಿಟ್ಟುಬಿಟ್ಟಿದ್ದಾರೆ.
ಆದರೆ, ಟ್ರಂಪ್ ಮಾತನ್ನು ಶಿರಸಾವಹಿಸಿ ಪಾಲಿಸುವ ಅವರ ಆಪ್ತ ಗೆಳೆಯ ನರೇಂದ್ರ ಮೋದಿ ಇದೀಗ ಭಾರತ ದೇಶದಲ್ಲಿ ಸಣ್ಣ ಪ್ರಮಾಣದ ಗೋಡೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆ ಮೂಲಕ ಭಾರತದಲ್ಲಿ ಸ್ಲಂ ಇಲ್ಲ, ಬಡತನ, ಹಸಿವು, ನಿರುದ್ಯೋಗ ಸಮಸ್ಯೆ ಇಲ್ಲ, ಮಹಿಳೆಯರ ಮಕ್ಕಳ ಅಪೌಷ್ಠಿಕತೆ, ಶಿಶು ಮರಣವಂತೂ ಇಲ್ಲವೇ ಇಲ್ಲ ಎಂದು ಹೇಳಲು ಹೊರಟಿದ್ದಾರೆ. ಯಕಶ್ಚಿತ್ 7-8 ಅಡಿ ಎತ್ತರ ಗೋಡೆಯ ಆ ಬದಿಯಲ್ಲಿರುವ ಮತ್ತೊಂದು ನೈಜ ಭಾರತವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ.
ಅಸಲಿಗೆ ಭಾರತದಲ್ಲಿನ ಬಡತನ, ಹಸಿವು, ನಿರುದ್ಯೋಗಗಳಂತಹ ಗಂಭೀರ ಸಮಸ್ಯೆಗಳನ್ನುಮರೆಮಾಚುವ ಯತ್ನ ಇದೇ ಮೊದಲೇನಲ್ಲ. ಈ ಹಿಂದೆಯೂ ಭಾರತ ಇಂತಹದ್ದೇ ಒಂದು ಘಟನೆ ನಡೆದಿತ್ತು. ಭಾಗಶಃ ಸ್ವಾತಂತ್ರ್ಯ ಭಾರತದ ಮೊದಲ ಕಪ್ಪು ಇತಿಹಾಸಕ್ಕೆ ಅಂಕಿತ ಹಾಕಿದ ಘಟನೆ ಎಂದೇ ಇದನ್ನು ಬಿಂಬಿಸಲಾಗುತ್ತದೆ.
ಸಂಜಯ್ ಗಾಂಧಿ ಮತ್ತು 150 ಸ್ಲಂ ಜನರ ಸಾವು:
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಹಿಂದೆಂದೂ ಕಾಣದ ರಾಜಕೀಯ ಸಂದಿಗ್ಧತೆಗೆ ಒಳಗಾಗಿದ್ದ ಕಾಲ ಅದು. ಇಂದಿರಾ ಗಾಂಧಿ ಈ ದೇಶದ ಪ್ರಧಾನಿಯಾಗಿದ್ದರು, ಅವರ ಮಗ ಸಂಜಯ್ ಗಾಂಧಿ ಅವರ ನೆರಳಿನಂತೆ ವಾಸ್ತವದಲ್ಲಿ ಸೂಪರ್ ಪಿಎಂ ಎಂಬಂತೆ ಕೆಲಸ ನಿರ್ವಹಿಸುತ್ತಿದ್ದರು. ಅವರ ಪ್ರೇರಣೆಯಿಂದಲೇ ಪ್ರಜಾಪ್ರಭುತ್ವದ ಕತ್ತು ಹಿಸುಕುವಂತಹ ತುರ್ತು ಪರಿಸ್ಥಿತಿಯನ್ನು 1975ರಲ್ಲಿ ಭಾರತದ ಮೇಲೆ ಹೇರಲಾಗಿತ್ತು ಎನ್ನುತ್ತದೆ ಈ ದೇಶದ ಇತಿಹಾಸ.
ದೇಶದಲ್ಲಿ ಹಸಿವನ್ನು ನೀಗಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದ ಇಂದಿರಾ ಗಾಂಧಿ ಹಸಿರು ಕ್ರಾಂತಿಯ ಘೋಷಣೆ ಕೂಗಿದ್ದರು, ಗರೀಬಿ ಹಠಾವೋ ನಂತಹ ಯೋಜನೆಗಳ ಮೂಲಕ ಈ ದೇಶದಿಂದ ಹಸಿವನ್ನು ಶಾಶ್ವತವಾಗಿ ನೀಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರು ಎಂಬುದು ಎಷ್ಟು ಸತ್ಯವೋ? ಅವರ ಮಗ ಸಂಜಯ್ ಗಾಂಧಿ ಇಂದಿರಾ ಗುಣಕ್ಕೆ ತದ್ವಿರುದ್ದ ಧೃವದಂತಿದ್ದರು ಎಂಬುದು ಅಷ್ಟೇ ಸತ್ಯ.
ದೆಹಲಿಯಲ್ಲಿರುವ ಸ್ಲಂಗಳನ್ನು ಅಕ್ಷರಶಃ ಈ ದೇಶದ ಶಾಪವೇನೋ ಎಂಬಂತೆ ಪರಿಗಣಿಸಿದ್ದ ಸಂಜಯ್ ಗಾಂಧಿ, ದೆಹಲಿಯನ್ನು ಸ್ಲಂ ಮುಕ್ತ ಹಾಗೂ ವಿದೇಶಿ ಗುಣಮಟ್ಟದ ನಗರವನ್ನಾಗಿ ಮಾಡಬೇಕು ಎಂಬ ಕನಸನ್ನು ಕಟ್ಟಿದ್ದರು. ಅಕ್ಷರಶಃ ಬಡವರ ಭಾವನೆಗೆ ಸ್ಪಂದಿಸುವ ಯಾವ ಔದಾರ್ಯವೂ ಅವರಲ್ಲಿ ಉಳಿದಿರಲಿಲ್ಲ.
ಅದು 1976 ಏಪ್ರಿಲ್ 13ರ ಬೆಳಗ್ಗಿನ ಜಾವ. ರಾಷ್ಟ್ರ ರಾಜಧಾನಿಯ ಗರ್ಭದಲ್ಲಿದ್ದ ತುರ್ಕ್ಮನ್ ಗೇಟ್ ಸ್ಲಂ ಪ್ರದೇಶವನ್ನು ಖಾಲಿ ಮಾಡುವ ಸಲುವಾಗಿ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಜಗಮೋಹನ್ ಹಾಗೂ ಬ್ರಿಜ್ ವರ್ಧನ್ ಅವರೊಂದಿಗೆ ಈ ಸ್ಲಂ ಪ್ರದೇಶಕ್ಕೆ ಭೇಟಿ ನೀಡಿದ್ದರು ಸಂಜಯ್ ಗಾಂಧಿ.
ಸ್ಲಂನಲ್ಲಿನ ಗುಡಿಸಲುಗಳ ಮೇಲೆ ಏಕಾಏಕಿ ಬುಲ್ಡೋಜರ್‌ಗಳನ್ನು ಹರಿಸಲಾಗಿತ್ತು. ತೀರಾ ಅಮಾನೀಯವಾಗಿ ಇಡೀ ಸ್ಲಂ ಅನ್ನು ನೆಲಸಮಗೊಳಿಸಲಾಗಿತ್ತು. ಇದನ್ನು ತಡೆಯಲು ಬಂದಂತಹ ಜನರ ಮೇಲೆ ದೆಹಲಿ ಪೊಲೀಸರು ನಿರ್ದಾಕ್ಷೀಣ್ಯವಾಗಿ ಗುಂಡಿನ ಮಳೆಗೆರೆದಿದ್ದರು. ಈ ಘಟನೆಯಲ್ಲಿ ಕನಿಷ್ಟ 150 ಜನ ಬಡವರು-ನಿರ್ಗತಿಕರು ಸಾವನ್ನಪ್ಪಿದ್ದರು. ಕೊನೆಗೆ ಇಲ್ಲಿ ವಾಸವಾಗಿದ್ದ ಸುಮಾರು 70,000 ಜನರನ್ನು ಯಮುನಾ ನದಿ ತೀರದಲ್ಲಿ ಇನ್ನೂ ಅಭಿವೃದ್ಧಿಯಾಗದ ವಸತಿ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.
ಭಾಗಶಃ ಬ್ರಿಟೀಷ್ ಭಾರತದಲ್ಲೂ ಸಹ ಜಲಿಯನ್ ವಾಲಾಬಾಗ್ ಹೊರತಾಗಿ ಭಾರತೀಯರ ಮೇಲೆ ಹೀಗೊಂದು ಅಮಾನವೀಯ ಸಾಮೂಹಿಕ ಶೂಟ್ಔಟ್ ನಡೆಸಿರುವ ಉದಾಹರಣೆಗಳಿಲ್ಲ. ಆದರೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಕೇವಲ 29 ವರ್ಷದಲ್ಲಿ ಪ್ರಭುತ್ವವೇ ತನ್ನ ಜನರನ್ನು ಅನಾಮತ್ತಾಗಿ ಬೀದಿ ಹೆಣದಂತೆ ಕೇವಲ ಸ್ಲಂ ತೆರವುಗೊಳಿಸುವ ಸಲುವಾಗಿ ಹೊಡೆದು ಹಾಕಿತ್ತು. ಪ್ರಜಾಪ್ರಭುತ್ವದಲ್ಲಿ ಹೀಗೊಂದು ಕರಾಳ ಇತಿಹಾಸಕ್ಕೆ ಅಂಕಿತ ಹಾಕಲಾಗಿತ್ತು.
ಆದರೆ, ಅಂದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭಾರತದ ಕರಾಳ ಇತಿಹಾಸಕ್ಕೆ ಸಂಜಯ್ ಗಾಂಧಿ ಹಾಕಿಹೋಗಿದ್ದ ಅಂಕಿತವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನುಸರಿಸುತ್ತಿದೆಯೇ ಎಂಬ ಅನುಮಾನ ಇದೀಗ ಎಲ್ಲೆಡೆ ಮೂಡುತ್ತಿದೆ.
ಅಸಲಿಗೆ ವ್ಯಾಪಾರ ವಹಿವಾಟು ಸೇರಿದಂತೆ ಅನೇಕ ವಿಚಾರಗಳಲ್ಲಿ ಅಮೆರಿಕ-ಭಾರತ ಎರಡು ದೇಶಗಳ ನಡುವಿನ ಸಂಬಂಧದ ಕುರಿತು ಮಾತುಕತೆ ನಡೆಸುವ ಸಲುವಾಗಿ ಡೊನಾಲ್ಡ್ ಟ್ರಂಪ್ ಫೆಬ್ರವರಿ 24ಕ್ಕೆ ಭಾರತಕ್ಕೆ ಎರಡು ದಿನದ ಪ್ರವಾಸದ ಮೇಲೆ ಆಗಮಿಸುತ್ತಿದ್ದಾರೆ.
ಮೊದಲ ದಿನವೇ ಅಹಮದಾಬಾದ್ ಮೊಟೆರಾ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಅದ್ದೂರಿಯಾಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕನಿಷ್ಟ 1 ಲಕ್ಷ ಜನ ಭಾಗವಹಿಸಲಿದ್ದು, ಮೋದಿ ಹಾಗೂ ಟ್ರಂಪ್ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಅಮೆರಿಕಾದಿಂದ ನೇರವಾಗಿ ಗುಜರಾತ್ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುವ ಟ್ರಂಪ್ ಅಲ್ಲಿಂದ ಇಂದಿರಾ ಬ್ರಿಡ್ಜ್ ತನಕ ರಸ್ತೆ ಮಾರ್ಗದಲ್ಲಿ ಚಲಿಸಲಿದ್ದಾರೆ. ಹೀಗಾಗಿ ಈ ಮಾರ್ಗದಲ್ಲಿರುವ ಸ್ಲಂಗಳು ಕಾಣದಂತೆ ಅಲ್ಲಿನ ನಗರಾಡಳಿತ ಮೊದಲು ಸ್ಲಂ ಸುತ್ತಾ 6 ರಿಂದ 7 ಅಡಿ ಎತ್ತರದ ಗೋಡೆ ಕಟ್ಟಿ ಸ್ಲಂಗಳು ಕಾಣದಂತೆ ಮಾಡಲು ಮುಂದಾಗಿವೆ.
ಅಲ್ಲದೆ, ಈಗ ಮೊಟೆರಾ ಕ್ರೀಡಾಂಗಣದ ಪಕ್ಕದಲ್ಲೇ ಇರುವ ಸ್ಲಂ ಜನರನ್ನು ಜಾಗ ಖಾಲಿ ಮಾಡುವಂತೆ ನೋಟೀಸ್ ನೀಡಲಾಗಿದೆ. 45 ಕುಟುಂಬಗಳಲ್ಲಿ ಒಟ್ಟು 200ಕ್ಕೂ ಹೆಚ್ಚು ಜನರು ವಾಸವಿರುವ ಜನರನ್ನು 7 ದಿನಗಳ ಒಳಗಾಗಿ ಜಾಗ ಖಾಲಿ ಮಾಡುವಂತೆ ತಾಕೀತು ಮಾಡಲಾಗಿದೆ.
ಅಸಲಿಗೆ 44 ವರ್ಷಗಳ ಹಿಂದೆ ಸಂಜಯ್ ಗಾಂಧಿ ಮಾಡಿದ ಕೆಲಸಕ್ಕೂ ಇಂದೂ ನರೇಂದ್ರ ಮೋದಿ ಮಾಡುತ್ತಿರುವ ಕೆಲಸಕ್ಕೂ ಹೆಚ್ಚೇನು ವ್ಯತ್ಯಾಸವಿಲ್ಲ. ಸಂಜಯ್ ಗಾಂಧಿ ಕಾಲದಲ್ಲಿ ಸ್ಲಂ ತೆರವಿಗೆ ಒತ್ತಾಯಪೂರ್ವಕವಾಗಿ ರಕ್ತಪಾತ ನಡೆಸಲಾಗಿದ್ದರೆ, ಮೋದಿ ಕಾಲದಲ್ಲಿ ನಗರ ನಾಗರೀಕತೆ ಮತ್ತು ಸ್ಲಂಗಳ ನಡುವೆ ಗೋಡೆ ಎಬ್ಬಿಸಲಾಗುತ್ತಿದೆ ಅಷ್ಟೇ. ಆದರೆ, ಈ ಇಬ್ಬರೂ ನಾಯಕರ ಉದ್ದೇಶ ಒಂದೇ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಎಂಬುದು ಇನ್ನೂ ಅಭಿವೃದ್ಧಿ ಹೊಂದುತ್ತಿರುವ ತೃತೀಯ ಜಗತ್ತಿನ ರಾಷ್ಟ್ರ. ಪ್ರಧಾನಿ ಮೋದಿ ಪ್ರತಿನಿಧಿಸುತ್ತಿರುವುದು ಈ ದೇಶವನ್ನೇ. ಸ್ಲಂ ಜನರು, ಬಡವರು ಹಾಗೂ ನಿರುದ್ಯೋಗಿಗಳು ಇರುವ ಈ ಭಾರತವನ್ನೇ ಪ್ರಧಾನಿ ಮೋದಿ ಪ್ರತಿನಿಧಿಸುತ್ತಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮಿಸುತ್ತಿರುವುದು ಸಹ ಈ ಎಲ್ಲಾ ರೀತಿಯ ಜನರನ್ನೂ ತನ್ನ ಒಡಲಲ್ಲಿಟ್ಟುಕೊಂಡಿರುವ ಭಾರತಕ್ಕೆ.
ಹೀಗಾಗಿ ಇವರು ಗೋಡೆಗಳನ್ನು ಕಟ್ಟಿ ಏನನ್ನು ಮೆರೆಮಾಚಲು ಹೊರಟಿದ್ದಾರೆ. ಇಡೀ ವಿಶ್ವದ ಗುರು ಭಾರತ ಎಂದು ಹೆಮ್ಮೆ ಪಡುವ ಇದೇ ಜನರಿಗೆ ನೈಜ ಭಾರತವನ್ನು ಇಡೀ ವಿಶ್ವಕ್ಕೆ ಪರಿಚಯಿಸಲು ಮುಜುಗುರವೇಕೆ? ಇಲ್ಲಿ ಗೋಡೆ ಕಟ್ಟಲು ಬಳಸಿದ ಅದೇ ಇಟ್ಟಿಗೆ, ಸಿಮೆಂಟು ಬಳಸಿ ಈ ಸ್ಲಂ ಜನರಿಗೆ ಒಂದು ಸೂರನ್ನು ಉತ್ತಮ ಬದುಕನ್ನು ಕಟ್ಟಿಕೊಡಬಹುದಲ್ಲವೇ? ಈ ಕುರಿತು ಭಾರತೀಯ ಪ್ರಭುತ್ವ ಎಂದಿಗೂ ಯೋಚಿಸಿಯೇ ಇಲ್ಲವೇಕೆ?
ಇವು ಭಾರತದ ಮಟ್ಟಿಗೆ ಗೋಡೆಗಳ ನೆಪದಲ್ಲಿ ಹುಟ್ಟಿದ ಉತ್ತರವಿಲ್ಲದ ಪ್ರಶ್ನೆ.