ಕಳೆದ ನವೆಂಬರ್‌ನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಎದುರಾಳಿ ಜೊ ಬಿಡೆನ್ ಗೆಲುವು ಸಾಧಿಸಿರುವುದನ್ನು ಟ್ರಂಪ್ ಹಾಗೂ ಅವರ ಬೆಂಬಲಿಗರು ಒಪ್ಪುತ್ತಿಲ್ಲ. ಮತ ಎಣಿಕೆ ಪ್ರಕ್ರಿಯೆ ವೇಳೆ ತನ್ನ ಸೋಲು ಖಚಿತವಾಗುತ್ತಿದ್ದಂತೆಯೇ, ಚುನಾವಣೆ ಹಾಗೂ ಮತ ಎಣಿಕೆ ಪ್ರಕ್ರಿಯೆ ಮೇಲೆ ಮೋಸದ ಆರೋಪ ಹೊರಿಸುತ್ತಾ ಬಂದ ಟ್ರಂಪ್ ಕಳೆದೆರಡು ತಿಂಗಳುಗಳಿಂದಲೂ ಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ಜನರನ್ನು ದಿಕ್ಕು ತಪ್ಪಿಸುತ್ತಾ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ಸಾಗುತ್ತಿರುವ ಮಧ್ಯೆ ಭದ್ರತೆಯನ್ನು ಉಲ್ಲಂಘಿಸಿ ಕ್ಯಾಪಿಟಲ್ (ಅಮೆರಿಕ ಸಂಸತ್ತು) ಕಟ್ಟಡಕ್ಕೆ ನುಗ್ಗಿದ ಟ್ರಂಪ್ ಬೆಂಬಲಿಗರು ಧಾಂದಲೆ ನಡೆಸಿದ್ದಾರೆ. ಅಧಿಕಾರವನ್ನು ಜೊ ಬಿಡೆನ್ ಅವರಿಗೆ ವಹಿಸಿಕೊಡಲು ಕೆಲವೇ ದಿನಗಳು ಬಾಕಿ ಇರುವಾಗ ಈ ಗಲಭೆ ನಡೆದಿದೆ.
ಭದ್ರತಾ ಸಿಬ್ಬಂದಿಗಳನ್ನು ಹಿಮ್ಮೆಟ್ಟಿಸಿ ಟ್ರಂಪ್ ಬೆಂಬಲಿಗರು ಸಂಸತ್ತಿಗೆ ನುಗ್ಗಿದ್ದು, ಸಂಸತ್ತಿನೊಳಗಿನ ಕಛೇರಿಗಳನ್ನೆಲ್ಲಾ ಧ್ವಂಸಗೊಳಿಸಿದ್ದಾರೆ. ಸೆನೆಟರ್ ಛೇಂಬರನ್ನು ವಶಪಡಿಸಿಕೊಂಡ ಗಲಭೆಕೋರರು, ಸ್ಪೀಕರ್ ಕಛೇರಿಗೆ ನುಗ್ಗಿ ಹಾನಿಗೆಡವಿದ್ದಾರೆ. ಟ್ರಂಪ್ ಬೆಂಬಲಿಗನೊಬ್ಬ ಸ್ಪೀಕರ್ ಕುರ್ಚಿಯಲ್ಲಿ ಕೂತಿರುವ ಚಿತ್ರವೊಂದು ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಗಲಭೆಯ ತೀವ್ರತೆಗೆ ಭದ್ರತಾ ಸಿಬ್ಬಂದಿಗಳು ಸೇರಿದಂತೆ ಹಲವರು ಗಾಯಗೊಂಡಿದ್ದು, ಕನಿಷ್ಟ ನಾಲ್ಕು ಸಾವು ವರದಿಯಾಗಿದೆ. ಗಲಭೆ ನಿಯಂತ್ರಿಸಲು ಭದ್ರತಾ ಸಿಬ್ಬಂದಿಗಳು ನಡೆಸಿದ ಗುಂಡಿನ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆಕೆಯನ್ನು ಮಾಜಿ ಏರ್‌ಫೊರ್ಸ್ ಅಧಿಕಾರಿ ಎಂದು ಗುರುತಿಸಲಾಗಿದೆ.
ಘಟನೆ ಸಂಬಂಧಸಿದಂತೆ FBI ಸಾರ್ವಜನಿಕರಲ್ಲಿ ಲಭ್ಯವಿರುವ ಮಾಹಿತಿ ಕೋರಿದ್ದು, ಚಿತ್ರಗಳು, ವಿಡಿಯೋಗಳನ್ನು ಹಂಚಿಕೊಳ್ಳುವಂತೆ ಕೇಳಿದೆ. ಸಂಸತ್ತಿನ ಆಸುಪಾಸಿನ ವಠಾರದಲ್ಲಿ ಇನ್ನೂ ಗೊಂದಲಕಾರಿ ಪರಿಸ್ಥಿತಿ ತಲೆದೋರಿದ್ದು, ವಾಷಿಂಗ್‌ಟನ್ ನಗರದಾದ್ಯಂತ 15 ದಿನಗಳ ನಿಷೇಧಾಜ್ಞೆ ಹೇರಲಾಗಿದೆ.
ರಿಪಬ್ಲಿಕನ್ ನ್ಯಾಷನಲ್ ಕಮಿಟಿ ಹಾಗೂ ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿಯ ಪ್ರಧಾನ ಕಛೇರಿಯ ಸಮೀಪದಲ್ಲಿ ಕಚ್ಛಾಬಾಂಬ್ ಪತ್ತೆಯಾಗಿದ್ದು FBI ಏಜೆಂಟರು ಅದನ್ನು ಪತ್ತೆಹಚ್ಚಿ, ನಿಷ್ಕ್ರಿಯಗೊಳಿಸಿದ್ದಾರೆ. ವಿಚಾರಣೆ ನಡೆಯುತ್ತಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಂಪ್ ಬೆಂಬಲಿಗರ ಗಲಭೆಯನ್ನು ಟ್ರಂಪ್ ಪಕ್ಷದವರೇ ಖಂಡಿಸಿದ್ದಾರೆ.
ಹಲವು ನಾಯಕರ ಖಂಡನೆ
ಟ್ರಂಪ್ ಬೆಂಬಲಿಗರ ಗಲಭೆ ವಿಶ್ವದಾದ್ಯಂತ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಅಂತರಾಷ್ಟ್ರೀಯ ನಾಯಕರು ಗಲಭೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ರಾಜಕೀಯ ನಾಯಕರೂ ಖಟನೆಯನ್ನು ವಿರೋಧಿಸಿ ಪ್ರತಿಕ್ರಿಯಿಸಿದ್ದಾರೆ.
ʼಪ್ರಜಾಪ್ರಭುತ್ವ ತುಂಬಾ ಸೂಕ್ಷ್ಮವಾಗಿದೆ ಎಂಬ ನೋವು ಭರಿತ ನೆನಪಾಗಿ ಇಂದಿನ ದಿನ ಉಳಿಯಲಿದೆ. ಅದನ್ನು ಉಳಿಸಲು ಧೈರ್ಯವಂತ ಮತ್ತು ದೃಢ ಇಚ್ಚಾಶಕ್ತಿ ಹೊಂದಿರುವ ನಾಯಕರ ಅಗತ್ಯವಿದೆ. ಅವರು, ತಮ್ಮ ಸ್ವಾರ್ಥ ಹಾಗೂ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು, ಸಾಮಾನ್ಯರ ಒಳಿತಿಗಾಗಿ ಕೆಲಸ ಮಾಡಬೇಕಾಗಿದೆʼ ಎಂದು ಟ್ರಂಪ್ ಅನ್ನು ಚುನಾವಣೆಯಲ್ಲಿ ಸೋಲಿಸಿದ ಜೊ ಬಿಡೆನ್ ಪ್ರತಿಕ್ರಿಯಿಸಿದ್ದಾರೆ.
Today is a reminder, a painful one, that democracy is fragile. To preserve it requires people of good will, leaders with the courage to stand up, who are devoted not to pursuit of power and personal interest at any cost, but to the common good.
— Joe Biden (@JoeBiden) January 7, 2021
ಈ ಕುರಿತು ಪ್ರತಿಕ್ರಿಯಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ವಾಷಿಂಗ್ಟನ್ ಡಿಸಿಯಲ್ಲಿ ಗಲಭೆ ಮತ್ತು ಹಿಂಸಾಚಾರದ ಸುದ್ದಿ ನೋಡಿ ಬೇಸರವಾಗಿದೆ. ಅಧಿಕಾರದ ಕ್ರಮಬದ್ಧ ಮತ್ತು ಶಾಂತಿಯುತ ವರ್ಗಾವಣೆ ಮುಂದುವರಿಯಬೇಕು. ಕಾನೂನುಬಾಹಿರ ಪ್ರತಿಭಟನೆಗಳ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಮಟ್ಟಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Distressed to see news about rioting and violence in Washington DC. Orderly and peaceful transfer of power must continue. The democratic process cannot be allowed to be subverted through unlawful protests.
— Narendra Modi (@narendramodi) January 7, 2021
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ದೃಶ್ಯಗಳು ತೀವ್ರವಾಗಿ ಗೊಂದಲವನ್ನುಂಟುಮಾಡುತ್ತವೆ. ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವು ಅಮೆರಿಕದ ಶ್ರೇಷ್ಠತೆಯ ಮೂಲತತ್ವವಾಗಿದೆ. ಇಡೀ ಜಗತ್ತು ನೋಡುತ್ತಿದೆ. ಅಮೆರಿಕದ ಜನರು ತಮ್ಮ ರಾಷ್ಟ್ರದ ಘನತೆಯನ್ನು ಕಾಪಾಡಿಕೊಳ್ಳಲಿ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯು ಶಾಂತಿಯುತವಾಗಿ ಮೇಲುಗೈ ಸಾಧಿಸಲಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದಾರೆ.
Scenes from the United States of America are deeply disturbing. Democracy and freedom are the essence of America’s greatness. The entire world is watching. May the people of America preserve the dignity of their nation and let the democratic process prevail peacefully. #USCapitol pic.twitter.com/wurHmkbTgd
— Priyanka Gandhi Vadra (@priyankagandhi) January 7, 2021
ಟ್ರಂಪ್ ಸೋಶಿಯಲ್ ಮೀಡಿಯಾಗೆ ತಡೆ!
ಇನ್ನು ಹಿಂಸಾಚಾರ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಅವರ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಂ ಆಯಾ ಸಂಸ್ಥೆಗಳು ನಿರ್ಬಂಧ ಹೇರಿದೆ. ಟ್ರಂಪ್ ಹಿಂಸಾಚಾರದ ಬಳಿಕ ಮಾಡಿದ ಅಸೂಕ್ಷ್ಮ ಟ್ವೀಟ್, ವಿಡಿಯೋಗಳನ್ನು ಇವುಗಳು ಡಿಲೀಟ್ ಮಾಡಿದ್ದು, ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಎಲ್ಲಾ ಪೋಸ್ಟ್ಗಳನ್ನು ತೆಗೆದು ಹಾಕಿದೆ. ತಾತ್ಕಾಲಿಕವಾಗಿ ಸಾಮಾಜಿಕ ಜಾಲತಾಣ ಬಳಕೆಗೆ ಟ್ರಂಪ್ ಗೆ ತಡೆ ನೀಡಿದ್ದು, ಪ್ರಚೋದನಾಕಾರಿ ಪೋಸ್ಟ್ ಹಾಕಿದರೆ ಖಾಯಮ್ಮಾಗಿ ಅಕೌಂಟನ್ನು ನಿಷೇಧಿಸುವುದಾಗಿ ಟ್ವಿಟರ್ ಎಚ್ಚರಿಸಿದೆ.






ಟ್ರಂಪ್ ಪದಚ್ಯುತಿಗೆ ಆಗ್ರಹ
ಇಲ್ಲಿನ ಕ್ಯಾಪಿಟಲ್ ಕಟ್ಟಡಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಮುತ್ತಿಗೆ ಹಾಕಿದ ಬೆನ್ನಲ್ಲೇ, ಅಧಿಕಾರವಧಿ ಮುಗಿಯುವ ಮುನ್ನವೇ ಡೊನಾಲ್ಡ್ ಟ್ರಂಪ್ ಅವರನ್ನು ಪದಚ್ಯುತಿಗೊಳಿಸಬೇಕೆಂಬ ಒತ್ತಡ ಕೇಳಿಬರುತ್ತಿದೆ. ಡೊನಾಲ್ಡ್ ಟ್ರಂಪ್ ಅವರ ಅಧಿಕಾರವಧಿ ಜನವರಿ 30ಕ್ಕೆ ಅಂತ್ಯಗೊಳ್ಳಲಿದೆ.
ಚುನಾವಣೆಯಲ್ಲಿ ಮೋಸದಿಂದ ತಮ್ಮನ್ನು ಸೋಲಿಸಲಾಗಿದೆ ಎಂದು ಪದೇ ಪದೇ ಹೇಳಿಕೆ ನೀಡುವ ಮೂಲಕ ಅಧಿಕಾರವನ್ನು ಶಾಂತಿಯುತವಾಗಿ ವರ್ಗಾವಣೆ ಮಾಡಲು ಡೊನಾಲ್ಡ್ ಟ್ರಂಪ್ ನಿರಾಕರಿಸಿದ ಕಾರಣ ಅಮೆರಿಕಾ ಹಿಂಸಾಚಾರದಲ್ಲಿ ನಲುಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪದಚ್ಯುತಗೊಳಿಸಲು ಒತ್ತಡ ಬಂದಿವೆ.

ಎರಡು ಮಾರ್ಗಗಳ ಮೂಲಕ ಅಧ್ಯಕ್ಷರನ್ನು ಕಚೇರಿಯಿಂದ ಪದಚ್ಯುತಿಗೊಳಿಸಬಹುದಾಗಿದೆ. ದೋಷರೋಪಣೆ ಮತ್ತು ಅಮೆರಿಕದ ಸಂವಿಧಾನಕ್ಕೆ 25ನೇ ತಿದ್ದುಪಡಿ ಮೂಲಕ ಡೊನಾಲ್ಡ್ ಟ್ರಂಪ್ ಅವರ ಅಧಿಕಾರವಧಿ ಮುಗಿಯುವೇ ಮೊದಲೇ ಪದಚ್ಯುತಿಗೊಳಿಸಬಹುದಾಗಿದೆ. ಹಾಗೆ ಪದಚ್ಯುತಿಗೊಂಡರೆ ಬಿಡೆನ್ ಅಧಿಕಾರ ವಹಿಸಿಕೊಳ್ಳುವವರೆಗೂ ಉಪಾಧ್ಯಕ್ಷ ಮೈಕ್ ಪೆನ್ಸ್ ಆಡಳಿತದ ಜವಾಬ್ದಾರಿ ತೆಗೆದುಕೊಳ್ಳಬಹುದಾಗಿದೆ.
ಕ್ರಿಮಿನಲ್ ಕೇಸ್ ನಲ್ಲಿ ಅಧಿಕಾರ ದುರ್ಬಳಕೆ ಆರೋಪದ ಮೇರೆಗೆ ಹೌಸ್ ಆಫ್ ರೆಪ್ರೆಸೆಂಟೆಟಿವ್ ಅಮೆರಿಕಾದ ಅಧ್ಯಕ್ಷರ ವಿರುದ್ಧ ದೋಷರೋಪ ಪ್ರಸ್ತಾಪ ಮಂಡಿಸಬಹುದಾಗಿದೆ. 435 ಸದಸ್ಯ ಬಲದ ಸದನದಲ್ಲಿ ಸರಳ ಬಹುಮತದೊಂದಿಗೆ ದೋಷರೋಪ ಪ್ರಕ್ರಿಯೆಗೆ ಅನುಮೋದನೆಗೊಂಡ ಬಳಿಕ ಮೇಲ್ಮನೆ ಸೆನೆಟ್ ನಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ತಪಿತಸ್ಥ ಎಂದು ತೀರ್ಮಾನವಾದಲ್ಲಿ ಅಧ್ಯಕ್ಷರನ್ನು ಪದಚ್ಯುತಿಗೊಳಿಸಬಹುದು.
ಈ ಹಿಂದೆ 2019 ಡಿಸೆಂಬರ್ ನಲ್ಲಿ ಕೂಡಾ ಟ್ರಂಪ್ ವಿರುದ್ಧ ದೋಷರೋಪವನ್ನು ಮಂಡಿಸಲಾಗಿತ್ತು.ಆದರೆ, 2020 ಫೆಬ್ರವರಿಯಲ್ಲಿ ರಿಪಬ್ಲಿಕ್ ನೇತೃತ್ವದ ಸೆನೆಟ್ ನಲ್ಲಿ ಟ್ರಂಪ್ ಅವರನ್ನು ನಿರ್ದೋಷಿ ಎಂದು ಘೋಷಿಸಲಾಗಿತ್ತು.
ಉಪಾಧ್ಯಕ್ಷರು ಮತ್ತು ಟ್ರಂಪ್ ಕ್ಯಾಬಿನೆಟ್ ನ ಬಹುತೇಕ ಸಚಿವರು ಟ್ರಂಪ್ ಆಡಳಿತ ನಡೆಸಲು ಅಸಮರ್ಥರು ಮತ್ತು ಅವರನ್ನು ಪದಚ್ಯುತಿಗೊಳಿಸಬೇಕೆಂದು ನಿರ್ಧರಿಸಿದ್ದಲ್ಲಿ ಸಂವಿಧಾನದ 25ನೇ ತಿದ್ದುಪಡಿ ಮೂಲಕ ಟ್ರಂಪ್ ಅವರನ್ನು ಅಧಿಕಾರವಧಿ ಮುಗಿಯುವ ಮುನ್ನವೇ ಪದಚ್ಯುತಿಗೊಳಿಸಬಹುದಾಗಿದೆ.
















