ರಾಜ್ಯಾದ್ಯಂತ ಕೊರೊನಾ ಸೋಂಕಿನ ಭೀತಿ ಆವರಿಸಿಕೊಂಡಿದ್ದರೂ ಸೋಂಕು ಕಾಣಿಸಿಕೊಂಡಿರುವ ಒಂಬತ್ತು ಜಿಲ್ಲೆಗಳಲ್ಲಿ ಮಾತ್ರ ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಲಾಕ್ ಡೌನ್ ಆದೇಶ ಘೋಷಿಸಿ ತೀವ್ರ ಟೀಕೆಗೆ ಗುರಿಯಾದ ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡಿದೆ. ಕರ್ಫ್ಯೂ ಮಾದರಿ ಲಾಕ್ ಡೌನ್ ಆದೇಶವನ್ನು ರಾಜ್ಯವ್ಯಾಪಿ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಿದೆ. ರಾಜ್ಯದೆಲ್ಲೆಡೆ ಇಂದು ಮಧ್ಯರಾತ್ರಿಯಿಂದ ಮಾ. 31ರ ಮಧ್ಯರಾತ್ರಿವರೆಗೆ ಸಂಪೂರ್ಣ ಲಾಕ್ ಡೌನ್ ಆದೇಶ ಜಾರಿಯಲ್ಲಿರುತ್ತದೆ. ಅಷ್ಟೇ ಅಲ್ಲ, ಲಾಕ್ ಡೌನ್ ನಿಯಮಾವಳಿ ಉಲ್ಲಂಘಿಸಿದರೆ ಜೈಲು ಶಿಕ್ಷೆಯಂತಹ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ. ರಾಜ್ಯದ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸರ್ಕಾರದ ಈ ನಿರ್ಧಾರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯಕ್ಕೆ ಕಾಲಿಟ್ಟಿರುವ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಪ್ರಸ್ತುತ 33 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕು ಪೀಡಿತರಲ್ಲಿ 29 ಮಂದಿ ವಿದೇಶದಿಂದ ಬಂದವರು. ಆದರೆ, ಬೆಳಕಿಗೆ ಬರುತ್ತಿರುವ ಸೋಂಕು ಪೀಡಿತರು ಸಾಕಷ್ಟು ಮಂದಿಯ ಜತೆ ಸಂಪರ್ಕ ಹೊಂದಿದ್ದರಿಂದ ಅದು ವ್ಯಾಪಕವಾಗಿ ಹಬ್ಬುವ ಆತಂಕ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರು ಇರುವ ಒಂಬತ್ತು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಸರ್ಕಾರ ಸೋಮವಾರ ಸಂಜೆ ಆದೇಶ ಹೊರಡಿಸಿತ್ತು. ಆದದರೆ, ಇದಕ್ಕೆ ಸಾಕಷ್ಟು ಟೀಕೆ, ಆಕ್ಷೇಪಗಳು ವ್ಯಕ್ತವಾಗಿದ್ದವು. ಪ್ರತಿಪಕ್ಷಗಳು ಮಾತ್ರವಲ್ಲದೆ, ಸಾರ್ವಜನಿಕರು ಕೂಡ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಕೊರೊನಾ ಸೋಂಕು ಕಾಣಿಸಿಕೊಂಡಿರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಕೊಡಗು, ಚಿಕ್ಕಬಳ್ಳಾಪುರ, ಕಲಬುರ್ಗಿ, ಧಾರವಾಡ, ಮಂಗಳೂರು, ಬೆಳಗಾವಿ ಜಿಲ್ಲೆಗಳಲ್ಲಿ ಮಾತ್ರ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದು, ಉಳಿದ ಜಿಲ್ಲೆಗಳಲ್ಲಿ ಸೋಂಕು ಹರಡುವ ಭೀತಿ ಇದ್ದರೂ ಸಂಪೂರ್ಣ ಲಾಕ್ ಡೌನ್ ಘೋಷಿಸಿಲ್ಲವೇಕೆ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಸಂಪೂರ್ಣ ಲಾಕ್ ಡೌನ್ ಘೋಷಿಸಲು ಸೋಂಕು ಇತರೆ ಜಿಲ್ಲೆಗಳಿಗೂ ಹಬ್ಬಬೇಕೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು.
ಇದರಿಂದ ಎಚ್ಚತ್ತಿರುವ ಸರ್ಕಾರ ಸಂಪೂರ್ಣ ಲಾಕ್ ಡೌನ್ ಘೋಷಣೆ ಆದೇಶವನ್ನು ರಾಜ್ಯಾದ್ಯಂತ ವಿಸ್ತರಿಸಿ ಮತ್ತೊಂದು ಆದೇಶ ಹೊರಡಿಸಿದೆ. ಅಷ್ಟೇ ಅಲ್ಲ, ನಿಯಮಾವಳಿಗಳನ್ನೂ ಕಠಿಣಗೊಳಿಸಿದೆ. ಸಂಪೂರ್ಣ ಲಾಕ್ ಡೌನ್ ಘೋಷಿಸಿರುವುದರಿಂದ ಅನಗತ್ಯವಾಗಿ ಓಡಾಡಿದರೆ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು. ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ಸಾವಿರ ರೂ. ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಅಲ್ಲದೆ, ಅಗತ್ಯ ವಸ್ತುಗಳ ಸಾಗಣೆ ಹೊರತುಪಡಿಸಿ ಯಾವುದೇ ರೀತಿಯ ಸಾರಿಗೆ ವ್ಯವಸ್ಥೆಗೆ ಅವಕಾಶವಿಲ್ಲ ಎಂದು ಹೇಳಿದೆ.
ಒಂಬತ್ತು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಆದೇಶವನ್ನು ಈ ಹಿಂದೆ ಹೊರಡಿಸಿದ್ದರೂ ನಿಷೇದಾಜ್ಞೆ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿತ್ತು. ಐದಕ್ಕಿಂತ ಹೆಚ್ಚುಮಂದಿ ಗುಂಪುಗೂಡಬಾರದು ಎಂದು ಹೇಳಲಾಗಿತ್ತು. ಉಳಿದಂತೆ ಕಠಿಣ ಕ್ರಮಗಳ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಆದರೆ, ದಡಂ ದಶಗುಣಂ ಅಸ್ತ್ರ ಬಳಸದೇ ಇದ್ದರೆ ಜನ ಎಚ್ಚೆತ್ತುಕೊಳ್ಳುವುದಿಲ್ಲ ಎಂಬುದನ್ನು ಅರಿತ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸ್ಪಷ್ಟ ಎಚ್ಚರಿಕೆ ನೀಡಿದೆ. ಈ ಆದೇಶದನ್ವಯ ಸಾರ್ವಜನಿಕರು ಮನೆಯಿಂದ ಹೊರಗೆ ಬರಬೇಕಿದ್ದರೆ ಅದಕ್ಕೆ ಸೂಕ್ತ ಕಾರಣ ಬೇಕು. ತುರ್ತು ಕೆಲಸದ ನಿಮಿತ್ತ ಹೋಗುವುದಿದ್ದರೆ ಅದಕ್ಕೆ ಸಂಬಂಧಿಸಿದಂತೆ ಐಡಿ ಕಾರ್ಡ್ ಅಥವಾ ದಾಖಲೆಗಳನ್ನು ಹೊಂದಿರಬೇಕು. ಇಲ್ಲದೇ ಇದ್ದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಪಡಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ವಿಚಾರದಲ್ಲಿ ಹೊರಡಿಸಿರುವ ಆದೇಶದಲ್ಲಿರುವ ನಿಯಮಗಳನ್ನು ಅಳವಡಿಸಿಕೊಳ್ಳುತ್ತಿದೆ.
ಗ್ರಾಮೀಣ ಪ್ರದೇಶಗಳ ಬಗ್ಗೆಯೂ ಕಟ್ಟೆಚ್ಚರ
ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಇದುವರೆಗೆ ನಗರ ಪ್ರದೇಶ ಮತ್ತು ರಾಜ್ಯದ ಗಡಿ ಭಾಗಗಳತ್ತ ಮಾತ್ರ ಗಮನ ಕೇಂದ್ರೀಕರಿಸಿದ್ದ ಸರ್ಕಾರ ಇದೀಗ ಗ್ರಾಮೀಣ ಭಾಗಗಳ ಬಗ್ಗೆಯೂ ಕಣ್ಣು ಹಾಯಿಸಿದೆ. ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮೀಣ ಕಾರ್ಯಪಡೆಗಳನ್ನು ರಚಿಸುವಂತೆ ಆದೇಶ ಹೊರಡಿಸಿದೆ. ನಗರ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಲ್ಲೂ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. 5ಕ್ಕಿಂತ ಹೆಚ್ಚು ಜನ ಸೇರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಕಾರ್ಯಪಡೆ ವಹಿಸಿಕೊಳ್ಳಬೇಕಿದೆ. ಇದರ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ, ಆರೋಗ್ಯ ರಕ್ಷಣೆ, 65 ವರ್ಷ ಮೇಲ್ಪಟ್ಟವರ ಆರೋಗ್ಯದ ಬಗ್ಗೆ ನಿಗಾ ಮುಂತಾದ ಹಲವು ಜವಾಬ್ದಾರಿಗಳನ್ನು ಈ ಕಾರ್ಯಪಡೆಗೆ ವಹಿಸಲಾಗಿದೆ.
ಲಾಕ್ ಡೌನ್ ಘೋಷಿಸಲು ಇತರೆ ಜಿಲ್ಲೆಗಳಲ್ಲೂ ಸೋಂಕು ಕಾಣಿಸಿಕೊಳ್ಳಬೇಕೇ?
ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ವಿಧಾನಸಭೆ ಅಧಿವೇಶನವನ್ನು ಸೋಮವಾರವೇ ಅಂತ್ಯಗೊಳಿಸಿ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದರೂ ಸರ್ಕಾರ ಮಾತ್ರ ಕೇಳುತ್ತಿಲ್ಲ. ಚೀನಾ, ಇಟಲಿ, ಸ್ಪೇನ್, ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೊರೊನಾ ಯಾವ ರೀತಿ ಹಾವಳಿ ಮಾಡಿದೆ ಎಂದು ಗೊತ್ತಿದ್ದರೂ ಸರ್ಕಾರ ಲಾಕ್ ಡೌನ್ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮನಸ್ಸು ಮಾಡುತ್ತಿಲ್ಲ. ಹಾಗಿದ್ದರೆ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಬೇಕಾದರೆ ಆ ಜಿಲ್ಲೆಗಳಿಗೂ ಕೊರೊನಾ ಹಬ್ಬಿ ರಾಜ್ಯದಲ್ಲೂ ಮರಣ ಮೃದಂಗ ಬಾರಿಸಬೇಕೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಅಷ್ಟೇ ಅಲ್ಲ, ಕೊರೊನಾ ಸೋಂಕು ಕಾಣಿಸಿಕೊಂಡಿರುವ ಜಿಲ್ಲೆಗಳಲ್ಲಿ ಘೋಷಿಸಿರುವ ಲಾಕ್ ಡೌನ್ ಆದೇಶವೂ ಅಷ್ಟೊಂದು ಕಠಿಣವಾಗಿಲ್ಲ. ಕರ್ಫ್ಯೂ ಮಾದರಿ ಲಾಕ್ ಡೌನ್ ಎಂದು ಹೇಳಲಾಗುತ್ತಿದೆಯಾದರೂ ನಿಷೇದಾಜ್ಞೆ ಹೊರತುಪಡಿಸಿ ಜನರ ಓಡಾಟಕ್ಕೆ ಕಠಿಣ ನಿರ್ಬಂಧ ಹೇರಿಲ್ಲ. ಹೀಗಾಗಿ ಈ ಆದೇಶಕ್ಕೆ ಯಾವ ರೀತಿ ಜನ ಸ್ಪಂದಿಸುತ್ತಾರೆ ಎಂದು ಕಾದು ನೋಡಬೇಕು. ಏಕೆಂದರೆ, ಕೊರೊನಾ ಸೋಂಕು ಗಾಳಿಯಲ್ಲಿದ್ದರೆ ಅದರ ಆಯಸ್ಸು ಆರರಿಂದ ಎಂಟು ಗಂಟೆ ಮಾತ್ರ ಎಂಬ ಕಾರಣಕ್ಕೆ ಸೋಂಕು ಹರಡದಂತೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂಗೆ ಮನವಿ ಮಾಡಿದರೆ ಅದರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಜನರ ಆರೋಗ್ಯಕ್ಕಿಂತ ಅವರ ಮಾತು ತಾವೇಕೆ ಕೇಳಬೇಕು ಎಂಬ ರೀತಿಯಲ್ಲಿ ಕೆಲವರು ವರ್ತಿಸಿದರು. ಇನ್ನು ಕೆಲವರು ಪ್ರಧಾನಿಯವರು ಚಪ್ಪಾಳೆ, ಗಂಟೆ ಬಾರಿಸುವ ಮೂಲಕ ಕೊರೊನಾ ಭೀತಿಯ ನಡುವೆಯೂ ಜನರ ಸೇವೆಗೆ ನಿಂತವರನ್ನು ಪ್ರೋತ್ಸಾಹಿಸಿ ಎಂದು ಕರೆ ನೀಡಿದರೆ ಗುಪು ಗುಂಪಾಗಿ ಸಂಭ್ರಮಾಚರಣೆ ರೀತಿಯಲ್ಲಿ ಆ ಕೆಲಸ ಮಾಡಿ ಪ್ರಧಾನಿ ಆದೇಶ ಉಲ್ಲಂಘಿಸಿದರು. ಹೀಗಾಗಿ ಕಾನೂನು ಇರುವುದೇ ಉಲ್ಲಂಘಿಸಲು ಎಂಬಂತಿರುವ ಈ ಜನರ ಮಧ್ಯೆ ಕಠಿಣ ನಿಯಮಗಳು ಮತ್ತು ಅವುಗಳನ್ನು ಅಷ್ಟೇ ಕಠಿಣವಾಗಿ ಜಾರಿಗೊಳಿಸದಿದ್ದರೆ ಪ್ರಯೋಜನವಾದರೂ ಏನು?
ಸಂಪೂರ್ಣ ಲಾಕ್ ಡೌನ್ ಇದ್ದಾಗ ಜನ ಹೇಗಿರಬೇಕು?
ಸಂಪೂರ್ಣ ಲಾಕ್ ಡೌನ್ ಘೋಷಿಸಿರುವ ಜಿಲ್ಲೆಗಳಲ್ಲಿ ನಿಷೇದಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಕೊರೊನಾ ಜಾಗೃತಿ ಮತ್ತಿತರೆ ಆರೋಗ್ಯ ಸಂಬಂಧಿ ಕಾರ್ಯಕ್ರಮ ಹೊರತುಪಡಿಸಿ ಬೇರೆ ಎಲ್ಲೂ 5ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಆಹಾರ, ಪಡಿತರ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣುಗಳ ಅಂಗಡಿ ಹೊರತುಪಡಿಸಿ ಬೇರೆ ಯಾವುದೇ ಅಂಗಡಿಗಳು, ವಾಣಿಜ್ಯ ಮಳಿಗೆಗಳು, ಕಚೇರಿಗಳು, ವರ್ಕ್ ಶಾಪ್ ಗಳು, ಗೋದಾಮುಗಳು ಇರುವುದಿಲ್ಲ. ಔಷಧ, ವೈದ್ಯಕೀಯ ಸಲಕರಣೆಗಳು, ಇಂಧನ, ಕೃಷಿ ಪರಿಕರಗಳ ಕೈಗಾರಿಕೆಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಕೈಗಾರಿಕೆ, ಕಾರ್ಖಾನೆಗಳು ಬಂದ್ ಆಗಲಿವೆ. ದೇವಸ್ಥಾನ, ಮಸೀದಿ, ಚರ್ಚ್ ಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ, ಪೂಜೆ, ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಹಬ್ಬಗಳು ಸೇರಿದಂತೆ ಯಾವುದೇ ರೀತಿಯ ಧಾರ್ಮಿಕ ಚಟುವಟಿಕೆಗಳಿಗೆ ಜನ ಗುಂಪಾಗಿ ಸೇರುವಂತಿಲ್ಲ. ಐಟಿ, ಬಿಟಿ ಕ್ಷೇತ್ರಗಳಲ್ಲಿ ತುರ್ತು ಮತ್ತು ಅಗತ್ಯ ಸೇವೆಗಳ ವಿಭಾಗ ಹೊರತುಪಡಿಸಿ ಇತರೆ ಎಲ್ಲಾ ವಿಭಾಗಗಳಲ್ಲೂ ವರ್ಕ್ ಫ್ರಂ ಹೋಮ್ ಕಡ್ಡಾಯ. ಅಂತಾರಾಜ್ಯ, ಅಂತರ್ ಜಿಲ್ಲಾ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತ. ಅಗತ್ಯ ವಸ್ತುಗಳ ಸಾಗಣೆ ಹೊರತುಪಡಿಸಿ ಬೇರೆ ಯಾವುದಕ್ಕೂ ಖಾಸಗಿ ಸಾರಿಗೆ ವ್ಯವಸ್ಥೆಯನ್ನೂ ಬಳಸುವಂತಿಲ್ಲ. ಓಲಾ, ಉಬರ್, ಟ್ಯಾಕ್ಸಿಗಳು, ಆಟೋರಿಕ್ಷಾಗಳು ಸೇರಿದಂತೆ ಯಾವುದೇ ಬಾಡಿಗೆ ವಾಹನಗಳ ಸೇವೆ ಇರುವುದಿಲ್ಲ. ಸರ್ಕಾರ ಅಧಿಸೂಚಿತ ಆಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸರ್ಕಾರಿ ಸೇವೆಗಳಲ್ಲಿ ತೊಡಗಿರುವ ಕಚೇರಿಗಳು ಬಂದ್ ಆಗಿರುತ್ತವೆ.
ಹಾಗೆಂದು ಜನರ ಓಡಾಟಕ್ಕೆ ಅವಕಾಶವಿದೆ ಎಂದು ದ್ವಿಚಕ್ರ ವಾಹನವನ್ನೋ, ಕಾರು ಮತ್ತಿತರೆ ಎಲ್ಎಂವಿಗಳನ್ನು ತೆಗೆದುಕೊಂಡು ಒಂದು ಸುತ್ತು ಓಡಾಡಿಕೊಂಡು ಬರೋಣ ಎಂದರೆ ಪೊಲೀಸರು ನಿಮ್ಮ ವಿರುದ್ಧ ಕ್ರಮ ಜರುಗಿಸುವುದು ಖಂಡಿತ. ಇನ್ನು ಕೊರೊನಾ ಸೋಂಕು ಕಾಣಿಸಿಕೊಂಡ ಮೇಲೆ ವಿದೇಶದಿಂದ ಬಂದಿರುವ ಎಲ್ಲರೂ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕು. ಈ ಆದೇಶ ಉಲ್ಲಂಘಿಸಿ ಯಾರಾದರೂ ಹೊರಬಂದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಸರ್ಕಾರಿ ಕ್ವಾರಂಟೈನ್ ನಲ್ಲಿ ಇಡಲಾಗುತ್ತದೆ.
ಲಾಕ್ ಡೌನ್ ಆದರೆ ಏನೇನು ಸಿಗುತ್ತದೆ?
ಆಹಾರ, ಪಡಿತರ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣುಗಳ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳು, ಪೆಟ್ರೋಲ್ ಬಂಕ್, ಗ್ಯಾಸ್, ಅಡುಗೆ ಅನಿಲ, ತೈಲ ಏಜನ್ಸಿಗಳು ಸೇರಿದಂತೆ ಪೂರಕ ಗೋದಾಮುಗಳು, ಎಲ್ಲಾ ರೀತಿಯ ಸರಕು ಸಾಗಣೆ ವಾಹನಗಳು, ಆಸ್ಪತ್ರೆ, ಕ್ಲಿನಿಕ್, ಔಷಧ ಅಂಗಡಿ, ಕನ್ನಡಕದ ಅಂಗಡಿ, ಡಯಾಗ್ನಾಸ್ಟಿಕ್ ಸೆಂಟರ್ ಮತ್ತಿತರ ಆರೋಗ್ಯ ಮತ್ತು ವೈದ್ಯಕೀಯ ಸಂಬಂಧಿ ಮಳಿಗೆ, ಗೋದಾಮು, ಕಾರ್ಖಾನೆಗಳು, ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗಳು, ನಗರ ಸ್ಥಳೀಯ ಸಂಸ್ಥೆಗಳು, ಪಂಚಾಯತ್ ರಾಜ್ ಸಂಸ್ಥೆಗಳು, ಅಂಚೆ ಸೇವೆಗಳು, ಅಗತ್ಯ ಸರ್ಕಾರಿ ಸೇವೆಗಳು, ವಿದ್ಯುತ್, ನೀರು, ಪೌರಾಡಳಿತ ಸೇವೆಗಳು, ಬ್ಯಾಂಕ್ ಟೆಲ್ಲರ್ ಸರ್ವೀಸಸ್, ಎಟಿಎಂ, ಟೆಲಿಕಾಂ, ಇಂಟರ್ ನೆಟ್ ಮತ್ತು ಕೇಬಲ್ ಸೇವೆಗಳು, ಇ-ವಾಣಿಜ್ಯ ಸರಕು ಮತ್ತು ಸೇವೆಗಳ ಹೋಮ್ ಡೆಲಿವರ್ ವ್ಯವಸ್ಥೆ, ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಸೇವೆ, ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯುತ್ತಿರುವ ಕ್ಯಾಂಟೀನ್ ಗಳು, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು, ಖಾಸಗಿ ಸೆಕ್ಯೂರಿಟಿ ಸೇವೆ ಸೇರಿದಂತೆ ಎಲ್ಲಾ ರೀತಿಯ ಸೆಕ್ಯೂರಿಟಿ ವ್ಯವಸ್ಥೆ, ಕಂಟೈನರ್ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಮತ್ತಿತರ ಪೂರಕ ವ್ಯವಸ್ಥೆಗಳು, ಆಸ್ಪತ್ರೆಯಿಂದ ಮನೆಗೆ ಮತ್ತು ಮನೆಯಿಂದ ಆಸ್ಪತ್ರೆಗೆ ಜನರ ಓಡಾಟ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಿಂದ ಮನೆಗೆ ತೆರಳಲು ವಾಹನ ವ್ಯವಸ್ಥೆ, ಔಷಧ, ಮಾಸ್ಕ್ ಮತ್ತಿತರೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದ ಪರಿಕರಗಳನ್ನು ಉತ್ಪಾದಿಸುವ ಖಾಸಗಿ ಕ್ಷೇತ್ರಗಳು, ನಿರಂತರವಾಗಿ ನಡೆಯುವ ಉತ್ಪಾದನಾ ಘಟಕಗಳು ಇರುತ್ತವೆ.