ಭಾರತ ದೇಶದಲ್ಲಿ ಕರೋನಾ ಸಂಕಷ್ಟದಿಂದ ಅದೆಷ್ಟೋ ಲಕ್ಷ ವಲಸೆ ಕಾರ್ಮಿಕರ ಭವಿಷ್ಯವೇ ಮಂಕಾಗಿ ಹೋಯ್ತು. ಹಸಿನಿವಿಂದ ಕಂಗಾಲಾಗಿದ್ದು ಅದೆಷ್ಟು ಮಂದಿಯೋ..? ಕಾಲ್ನಡಿಗೆಯಲ್ಲಿ ತಮ್ಮ ಹುಟ್ಟೂರುಗಳಿಗೆ ತೆರಳಲು ಹರಸಾಹಸ ಮಾಡಿದ್ದು ಸಾವಿರಾರು ಜನ. ಅದೇ ರೀತಿ ಸಾಕಷ್ಟು ಹಿಂಸೆಯಿಂದ ತನ್ನ ಹುಟ್ಟೂರು ಸೇರಿದ 15 ವರ್ಷದ ಪುಟ್ಟ ಬಾಲೆ ಜ್ಯೋತಿ ಕುಮಾರಿ ಬಾಳು ಬೆಳಗುವ ದಿನಗಳು ಗೋಚರಿಸುತ್ತಿದೆ. ಜ್ಯೋತಿ ಅನುಭವಿಸಿದ ಸಂಕಷ್ಟದ ವಿಚಾರದಲ್ಲಿ ಭಾರತದ ದೇಶದ ಮಾನ ಮೂರು ಕಾಸಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಆದರೂ ಜ್ಯೋತಿ ಕುಮಾರಿ ಜೀವನ ಬದುಕು ಹಸನಾಗುವ ಸಾಧ್ಯತೆಗಳು ಶುರುವಾಗಿದೆ.
ಕರೋನಾ ಲಾಕ್‌ಡೌನ್ ಸಡಿಲಿಕೆ ಆದ ಬಳಿಕ ದೇಶದ ಎಲ್ಲಾ ಕಡೆಗಳಲ್ಲೂ ಚದುರಿಕೊಂಡಿರುವ ವಲಸೆ ಕಾರ್ಮಿಕರು ತಮ್ಮ ಹುಟ್ಟೂರುಗಳಿಗೆ ತೆರಳಲು ಮುಂದಾದರು. ಇದೇ ವೇಳೆ ದೆಹಲಿ ಬಳಿಯ ಗುರುಗ್ರಾಮದಲ್ಲಿದ್ದ ಜ್ಯೋತಿ ಕುಮಾರಿ ಹಾಗೂ ಆಕೆಯ ತಂದೆ ಹುಟ್ಟೂರು ಬಿಹಾರಕ್ಕೆ ತೆರಳು ಮನಸ್ಸು ಮಾಡಿದ್ದರು. ಆದರೆ ಹೋಗುವುದು ಹೇಗೆ..? ಲಾಕ್‌ಡೌನ್ ಆಗಿದ್ದರಿಂದ ಓಡಿಸುತ್ತಿದ್ದ ಆಟೋವನ್ನು ಮಾಲೀಕನಿಗೆ ಒಪ್ಪಿಸಿ ಆಗಿತ್ತು. ಮನೆಯಲ್ಲಿ ಯಾವುದೇ ವಾಹನವೂ ಇರಲಿಲ್ಲ. ಅಪ್ಪನಿಗೆ ಜನವರಿಯಲ್ಲಿ ಅಪಘಾತವಾಗಿ ಎಡ ಕಾಲು ಮುರಿದಿತ್ತು, ನಡೆಯಲೂ ಆಗುತ್ತಿರಲಿಲ್ಲ. ಅಪಘಾತವಾದ ಬಳಿಕ ಅಪ್ಪನನ್ನು ಉಪಚರಿಸಲು ಎಂದೇ ಹರಿಯಾಣದ ಗುರುಗ್ರಾಮಕ್ಕೆ ತೆರಳಿದ್ದ ಜ್ಯೋತಿ ಕುಮಾರಿ, ಊರಿಗೆ ಹೋಗಲು ಉಪಾಯವೊಂದನ್ನು ಮಾಡಿದಳು. 2 ಸಾವಿರ ರೂಪಾಯಿ ಕೊಟ್ಟು ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ ಜ್ಯೋತಿ ಕುಮಾರಿ, ಅಪ್ಪನನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಹುಟ್ಟೂರಿನತ್ತ ಹೊರಟೇ ಬಿಟ್ಟಳು.
ಲಾಕ್ಡೌನ್ನಲ್ಲಿ ಹುಟ್ಟೂರುಗಳಿಗೆ ತೆರಳಲು ಸರ್ಕಾರ ಅನುಮತಿ ಕೊಡ್ತಿದ್ದಂತೆ ನನ್ನ ಮಗಳು ಜ್ಯೋತಿ ಕುಮಾರಿ ಹೇಳಿದಳು ‘ನಾವು ಈಗ ಊರಿಗೆ ಹೊರಟು ಬಿಡೋಣ ಎಂದು. ಆದರೆ ಅಷ್ಟರಲ್ಲಿ ನಮ್ಮ ಬಳಿ ಹಣ ಇರಲಿಲ್ಲ. ಪಕ್ಕದ ಮನೆಯವರ ಬಳಿ ಸಹಾಯ ಪಡೆದು ಒಂದು ಸೆಕೆಂಡ್ ಹ್ಯಾಂಡ್ ಸೈಕಲ್ ತೆಗೆದುಕೊಂಡು ಬಂದಳು. ಅವತ್ತು ಮೇ 10, ನನ್ನನ್ನು ಕೂರಿಸಿಕೊಂಡು ಸೈಕಲ್ ತುಳಿಯುತ್ತಾ 7 ದಿನಗಳ ಕಾಲ ಪ್ರಯಾಣ ಮಾಡಿದೆವು. ಉತ್ತರ ಪ್ರದೇಶ ಮಾರ್ಗವಾಗಿ ನಾವು ಬಿಹಾರದ ದರ್ಬಾಂಗ ಜಿಲ್ಲೆಯ ಶಿರ್ಹುಲಿ ಗ್ರಾಮಕ್ಕೆ ಬಂದು ತಲುಪಿದೆವು’ ಎಂದು ನೆನಪು ಮಾಡಿಕೊಳ್ತಾರೆ ಜ್ಯೋತಿ ಕುಮಾರಿ ತಂದೆ ಮೋಹನ್ ಪಾಸ್ವಾನ್.

ಜ್ಯೋತಿ ಕುಮಾರಿ ಬೈಸಿಕಲ್ನಲ್ಲಿ ತನ್ನ ತಂದೆಯನ್ನು ಕೂರಿಸಿಕೊಂಡು 1200ಕ್ಕೂ ಹೆಚ್ಚು ದೂರವನ್ನು ಕ್ರಮಿಸಿದ್ದು, ದೊಡ್ಡ ಸುದ್ದಿಯಾಯ್ತು. ಆಕೆ 1200 ಕಿಲೋ ಮೀಟರ್ ಬೈಸಿಕಲ್ನಲ್ಲಿ ಪ್ರಯಾಣ ಮಾಡಿದ್ದಾಳೆ ಎನ್ನುವ ಜೊತೆಗೆ ಆಕೆಯ ಆತ್ಮವಿಶ್ವಾಸ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಇವಾಂಕ ಟ್ರಂಪ್ ಕೂಡ ಈಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಭಾರತೀಯರ ಪ್ರೀತಿ ಸಹಿಷ್ಣುತೆಗೆ ಸಾಕ್ಷಿ ಎಂದಿದ್ದರು. ಆದರೆ ಇವಾಂಕ ಟ್ವೀಟ್ಗೆ ಸಾಕಷ್ಟು ಆಕ್ಷೇಪಗಳು ಕೇಳಿಬಂದಿದ್ದವು. ಭಾರತದಲ್ಲಿ ವಲಸೆ ಕಾರ್ಮಿಕರ ದುಸ್ಥಿತಿ ಇದು. ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕೇ ಹೊರತು ಸಂಕಷ್ಟದಲ್ಲಿ ತಂದೆಯನ್ನು ಕೂರಿಸಿಕೊಂಡು ಆಕೆ ಅನುಭವಿಸಿದ ಹಿಂಸೆಯನ್ನು ಸಂಭ್ರಮಿಸಬಾರದು. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನಸ್ಥಿತಿ ಎರಡೂ ಒಂದೇ ರೀತಿ ಇದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು. ವಲಸೆ ಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳದ ಭಾರತದ ಬಗ್ಗೆ ಟ್ರಂಪ್ ಮಗಳು ಮಾಡಿರುವ ಕುಹಕ ಎಂದೂ ಕೂಡ ಕೆಲವರು ವ್ಯಂಗ್ಯವಾಡಿದ್ದರು.
ಭಾರತೀಯ ಸೈಕ್ಲಿಂಗ್ ಫೆಡರೇಷನ್ ಕೂಡಾ ಬಾಲಕಿ ಜ್ಯೋತಿ ಸಾಹಸಕ್ಕೆ ಮಣೆ ಹಾಕಿದೆ. ಲಾಕ್‌ಡೌನ್ ವಾಪಸ್ ತೆಗೆದುಕೊಳ್ಳುತ್ತಿದ್ದ ಹಾಗೆ ದೆಹಲಿ ರಾಷ್ಟ್ರೀಯ ಸೈಕ್ಲಿಂಗ್ ಫೆಡರೇಷನ್ನಲ್ಲಿ ಪರೀಕ್ಷೆಗೆ ಒಳಪಡುವಂತೆ ಮನವಿ ಮಾಡಿದೆ.ಸೈಕ್ಲಿಂಗ್ ಫೇಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ಓಂಕಾರ್ ಸಿಂಗ್ ಮಾತನಾಡಿ, ಸರಿ ಸುಮಾರು 1300 ಕಿಲೋ ಮೀಟರ್ ದೂರವನ್ನು ಸೈಕಲ್ನಲ್ಲಿಯೇ ಕ್ರಮಿಸುವ ಈ ಬಾಲಕಿಯ ಸಾಧನೆಯಿಂದ ನಾವು ಪ್ರಭಾವಿತವಾಗಿದ್ದೇವೆ. ಕಂಪ್ಯೂಟರೈಸ್ ಸೈಕಲ್ನಲ್ಲಿ ಆಕೆಯ ಸಾಮರ್ಥ್ಯವನ್ನು ಪರೀಕ್ಷೆ ಮಾಡಿದ ಬಳಿಕ ತರಬೇತಿ ಕೊಡುತ್ತೇವೆ ಎಂದಿದ್ದಾರೆ. ಎಲ್ಲಾ ಖರ್ಚು ವೆಚ್ಚಗಳನ್ನು ಫೆಡರೇಷನ್ ವತಿಯಿಂದಲೇ ಭರಿಸುವುದಾಗಿಯೂ ಭರವಸೆ ನೀಡಿದೆ.
Also Read: ಈಕೆ ಕಲಿಯುಗದ ಶ್ರವಣ ʻಕುಮಾರಿʼ : ಸೈಕಲ್ ತುಳಿದು ತಂದೆಯನ್ನು ಊರು ಸೇರಿಸಿದ 15 ವರ್ಷದ ಬಾಲಕಿ.!
ಆದರೆ, ಸಾಂಸಾರಿಕ ಸಮಸ್ಯೆಯಿಂದ ಓದುವುದನ್ನು ಅರ್ಧಕ್ಕೆ ಬಿಟ್ಟಿದ್ದ ಜ್ಯೋತಿ ಓದುವ ಹಂಬಲ ವ್ಯಕ್ತಪಡಿಸಿದ್ದಾಳೆ. ಓದನ್ನು ಬಿಟ್ಟು ತಂದೆ ಯೋಗಕ್ಷೇಮಕ್ಕಾಗಿ ಗುರುಗ್ರಾಮ ಸೇರಿಕೊಂಡಿದ್ದ ಜ್ಯೋತಿ ಕುಮಾರಿಗೆ ವಿದ್ಯಾಭ್ಯಾಸ ಕೊಡಿಸಲು ಸಾಕಷ್ಟು ಜನರು ಮುಂದೆ ಬಂದಿದ್ದಾರೆ. ದರ್ಬಾಂಗ ಜಿಲ್ಲಾಧಿಕಾರಿ ಈಗಾಗಲೇ ಪಿಂಡರುಚ್ ಹೈಸ್ಕೂಲ್ನಲ್ಲಿ 9ನೇ ತರಗತಿಗೆ ಅಡ್ಮಿಷನ್ ಮಾಡಿಸಿದ್ದಾರೆ. ಹೊಸದಾಗಿ ಬೈಸಿಕಲ್, ಯೂನಿಫಾರ್ಮ್, ಶೂಗಳನ್ನು ಕೊಟ್ಟಿದ್ದು, ತಂದೆ ಮೋಹನ್ ಪಾಸ್ವಾನ್ ಓದಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸೈಕ್ಲಿಂಗ್ ಫೆಡರೇಷನ್ ಆಹ್ವಾನವನ್ನೂ ಮುಕ್ತವಾಗಿ ಸ್ವಾಗತಿಸಿದ್ದು, ತರಬೇತಿಗೂ ಕಳಿಸುವ ಮಾತನಾಡಿದ್ದಾರೆ.

ಈ ನಡುವೆ ಬಿಹಾರದ LJP ನಾಯಕ ಹಾಗೂ ಜಮೈ ಸಂಸದ ಚಿರಾಗ್ ಪಾಸ್ವಾನ್ ರಾಷ್ಟ್ರಪತಿಗೆ ಈಕೆಯ ಸಾಧನೆ ಬಗ್ಗೆ ಪತ್ರ ಬರೆದಿದ್ದು, ಮುಂದಿನ ಗಣರಾಜ್ಯೋತ್ಸದವದಲ್ಲಿ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೂ ಪತ್ರ ರವಾನಿಸಿದ್ದಾರೆ. ಜ್ಯೋತಿ ಕುಮಾರಿ ಮಾಡಿರುವ ಸಾಧನೆಯ ಧೈರ್ಯಕ್ಕೆ ಬೆಲೆ ಸಿಕ್ಕೇ ಸಿಗುತ್ತದೆ. ಮುಂದಿನ ಗಣರಾಜ್ಯೋತ್ಸವ ಸಮಾರಂಭದಲ್ಲಿ ಗೌರವಕ್ಕೆ ಪಾತ್ರಳಾಗ್ತಾಳೆ ಎನ್ನು ವಿಶ್ವಾಸದ ಮಾತನಾಡಿದ್ದಾರೆ. ಬಿಹಾರ ಮಾಜಿ ಸಿಎಂ ರಾಬ್ಡಿ ದೇವಿ, ಹಾಲಿ ವಿರೋಧ ಪಕ್ಷದ ನಾಯಕ ರೇಜಸ್ವಿ ಯಾದವ್ ಕೂಡ ಜ್ಯೋತಿ ಕುಮಾರಿಗೆ ಸಹಾಯದ ಹಸ್ತ ನೀಡಲು ನೀಡಲು ಮುಂದೆ ಬಂದಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜೀಜು ಮಾತನಾಡಿ ಜ್ಯೋತಿ ಕುಮಾರಿಯ ಕೆಲಸ ಮೆಚ್ಚುವಂತಹದ್ದು. ಸೈಕ್ಲಿಂಗ್ ಫೆಡರೇಷನ್ ಆಕೆಯನ್ನು ಆಹ್ವಾನ ಮಾಡಿದೆ. ದೈಹಿಕ ಪರೀಕ್ಷೆ ಬಳಿಕ ಸೈಕ್ಲಿಸ್ಟ್ ಆಗಿ ತರಬೇತಿ ಕೊಡಬಹುದಾ ಎನ್ನುವ ಬಗ್ಗೆ ತಜ್ಞರು ನಿರ್ಧಾರ ಮಾಡಲಿದ್ದಾರೆ. ಆದರೆ ಇದಕ್ಕೂ ಮೊದಲು ಮಧ್ಯಪ್ರದೇಶದ ಓರ್ವ ಯುವಕ ಓಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಹುಸೇನ್ ಬೋಲ್ಟ್ಗಿಂತಲೂ ವೇಗವಾಗಿ ಓಡಬಲ್ಲ ಎಂದು ಖ್ಯಾತಿ ಪಡೆದಿತ್ತು. ಇದೇ ರೀತಿ ಕರ್ನಾಟಕದಲ್ಲೂ ನಡೆದಿತ್ತು. ಕಂಬಳ ಓಡಿಸುವ ಯುವಕ 100 ಮೀಟರ್ ದೂರವನ್ನು ಕಡಿಮೆ ಸೆಕೆಂಡ್ಗಳಲ್ಲಿ ಮುಟ್ಟಿದ್ದಾನೆ. ಈತ ದೇಶಕ್ಕೆ ಉತ್ತಮ ಅಥ್ಲೆಟ್ ಎಂದೆಲ್ಲಾ ಸುದ್ದಿಯಾಗಿತ್ತು. ಆದರೆ ನಾವು ಎಲ್ಲದಕ್ಕೂ ಸ್ಪಂದಿಸಬೇಕು. ಇಲ್ಲದಿದ್ದರೆ ಕ್ರೀಡಾ ಸಚಿವರು ಮೌನ ಎಂದು ವರದಿಯಾಗುತ್ತದೆ. ಭಾರತದಲ್ಲಿ ಯಾರೇ ಸಾಮರ್ಥ್ಯ ಪ್ರದರ್ಶನ ಮಾಡಲು ನಾವು ಅವಕಾಶ ಕೊಡುತ್ತೇವೆ ಎಂದಿದ್ದಾರೆ.
ಅಂದರೆ ಅರ್ಥ ಇಷ್ಟೆ, ಬಡತನದಲ್ಲಿ ಸಾವಿರಾರು ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿದವರು ಉತ್ತಮ ಕ್ರೀಡಾಪಟು ಎನ್ನಲು ಸಾಧ್ಯವಿಲ್ಲ. ಆದರೆ ಸಾಮರ್ಥ್ಯ ಪರೀಕ್ಷೆ ಮಾಡುವುದು ಅನಿವಾರ್ಯ ಎಂದಿದ್ದಾರೆ. ಸಚಿವ ಕಿರಣ್ ರಿಜಿಜು ಹೇಳಿರುವ ಮಾತಿನಲ್ಲಿ ಸತ್ಯವಿದೆ. ನ್ಯೂಯಾರ್ಕ್ ಟೈಮ್ಸ್ ಕೂಡ ಇದೇ ರೀತಿ ವರದಿ ಮಾಡಿದ್ದು, ಭಾರತದಲ್ಲಿ ವಲಸೆ ಕಾರ್ಮಿಕರು ಅನುಭವಿಸಿದ ಹಿಂಸೆಯ ನಡುವೆ ಉತ್ತಮ ಬೆಳವಣಿಗೆ ಒಂದು ನಡೆದಿದೆ. 15 ವರ್ಷದ ಬಾಲಕಿ ಬೈಸಿಕಲ್ನಲ್ಲಿ ತನ್ನ ತಂದೆಯನ್ನು ಹುಟ್ಟೂರಿಗೆ ಮುಟ್ಟಿಸಿದ ಸುದ್ಧಿ ಸಿಂಹದ ಶಕ್ತಿಯ ಹುಡುಗಿ ಎನ್ನುವಂತೆ ವರದಿಯಾಗಿದೆ.
ಅಂತಿಮವಾಗಿ ಜ್ಯೋತಿ ಕುಮಾರಿ ಸೈಕ್ಲಿಸ್ಟ್ ಆಗುತ್ತಾಳೋ..? ಇಲ್ಲವೋ..? ಎನ್ನುವುದು ಬೇರೆ ಮಾತು. ಆದರೆ ಕರೋನಾ ಸಂಕಷ್ಟದಲ್ಲೂ ಒಂದು ಬಾಲಕಿಗೆ ಓದುವ ಅವಕಾಶ ಸಿಕ್ಕಿದ್ದು ಮಾತ್ರ ನೆಮ್ಮದಿ ತರುವ ವಿಚಾರ ಎನ್ನುವುದು ಮಾತ್ರ ಸತ್ಯ.