ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯ ಇಂದು ರಣಾಂಗಣವಾಗಿದೆ. 2014 ರವರೆಗೂ ತನ್ನ ಪಾಡಿಗೆ ತಾನಿದ್ದ ವಿಶ್ವವಿದ್ಯಾಲಯದೊಳಗೂ ದ್ವೇಷದ ವಿಷಬೀಜ ಬಿತ್ತಿದವರು ಯಾರು? ಇಲ್ಲಿ ದಿನ ಬೆಳಗಾದರೆ ಗುಂಡಾಗಿರಿ ನಡೆಯುತ್ತಿರುವುದು ಯಾರಿಂದ? ಇದಕ್ಕೆ ಉತ್ತರ ಸ್ಪಷ್ಟವಾಗಿದೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಬಿಜೆಪಿ ಸರ್ಕಾರ ಜೆಎನ್ ಯು ವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಲೇ ಬಂದಿದೆ. ಇಲ್ಲಿ ತಮ್ಮ ಪಾಡಿಗೆ ತಾವು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಾ ಪ್ರಗತಿಪರ ಚಿಂತನೆಗಳನ್ನು ಪಸರಿಸುತ್ತಾ ಬಂದಿದ್ದ ಬೋಧಕ ಸಿಬ್ಬಂದಿ ಮೇಲೆ ಒತ್ತಡಗಳನ್ನು ಏರುತ್ತಾ ಬಂದಿತು. ತಾನು ಹೊರಡಿಸಿದ ಆದೇಶಗಳನ್ನು ಪಾಲಿಸಬೇಕೆಂಬ ಅಲಿಖಿತ ನಿಯಮವನ್ನು ಜಾರಿಗೆ ತರಲು ಹೊರಟಿತು. ಕೇಂದ್ರ ಸರ್ಕಾರದ ಈ ಒತ್ತಡ ತಂತ್ರಗಳಿಗೆ ರೋಸಿ ಹೋದ ಕೆಲವು ಶಿಕ್ಷಕರು ಅಲ್ಲಿಂದ ಕಾಲ್ಕಿತ್ತರು.
ಆದರೆ, ಗಟ್ಟಿಯಾಗಿ ನಿಂತ ಉಪನ್ಯಾಸಕರ ಮೇಲೆ ಒಂದಿಲ್ಲೊಂದು ಅಪವಾದಗಳನ್ನು ಹೊರಿಸುತ್ತಾ, ಅವರಿಗೆ ಕಿರುಕುಳ ನೀಡಲಾರಂಭಿಸಿತು. ಇನ್ನು ಹೇಳಿ ಕೇಳಿ ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿರುವ ಇಲ್ಲಿ ವಿದ್ಯಾರ್ಥಿ ಸಂಘವನ್ನು ತನ್ನ ಕೃಪಾಪೋಷಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿಗೆ ತಂದುಕೊಡಲು ಭಾರೀ ಕಸರತ್ತನ್ನೇ ನಡೆಸಿತು. ಆದರೆ, ಅದು ಕೈಗೂಡದಿದ್ದಾಗ ದಬ್ಬಾಳಿಕೆಯನ್ನು ಆರಂಭಿಸಿತು.
ಇದರ ಪ್ರತಿಫಲವೇ ಈಗ ವಿಶ್ವವಿದ್ಯಾಲಯ ಶಿಕ್ಷಣಕ್ಕಿಂತ ಹೆಚ್ಚಾಗಿ ದ್ವೇಷದ ಕೆನ್ನಾಲಿಗೆಗೆ ಸಿಕ್ಕಿ ಬೇಯುತ್ತಿದೆ. ಕೆಲವರು ವಿದ್ಯಾರ್ಥಿಗಳ ಸೋಗಿನಲ್ಲಿ ವಿವಿ ಆವರಣದೊಳಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದಾರೆ. ಗೂಂಡಾಗಿರಿ ನಡೆಸಿ ತಮಗಾಗದವರ ಮೇಲೆ ಮಾರಣಾಂತಿಕ ಹಲ್ಲೆಗಳಿಗೆ ಮುಂದಾಗಿದ್ದಾರೆ.
ಇಲ್ಲಿನ ಉಪಕುಲಪತಿ ಹುದ್ದೆಯಲ್ಲಿ ಫೆವಿಕಾಲ್ ಹಾಕಿ ಕುಳಿತಿರುವ ಮಾಮಿಡೊಲಾ ಜಗದೀಶ್ ಕುಮಾರ್ ಎಂಬ ಮಹಾಶಯ ತನಗೂ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳಿಗೂ ಯಾವುದೇ ಸಂಬಂಧವಿಲ್ಲ. ಯಾರು ಏನೇ ಕೂಗಾಡಿದರೂ ನಾನು ಅದರ ಗೋಜಿಗೇ ಹೋಗುವುದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಏಕೆಂದರೆ, ಏನೇ ಘಟನಾವಳಿಗಳು ನಡೆದರೂ ನಿಮ್ಮ ಪಾಡಿಗೆ ನೀವಿರಿ. ಎಲ್ಲವನ್ನೂ ನಾವು ನಿಭಾಯಿಸುತ್ತೇವೆ ಎಂಬರ್ಥದಲ್ಲಿ ವಿವಿಗೆ ಸನಿಹದಲ್ಲಿಯೇ ಇರುವ ಕೇಂದ್ರ ಸರ್ಕಾರದ ಮಂತ್ರಿಮಹೋದಯರ ಆದೇಶ ಬಂದಿರುತ್ತದೆ. ಅದಕ್ಕೆಂದೇ ಈ ಜಗದೀಶ್ ಕುಮಾರ್ ಮಾತು ಬಾರದವರಂತೆ ಕುಳಿತಿರುವಂತೆ ಕಾಣುತ್ತಿದೆ.
ಕಳೆದ ಕೆಲವು ತಿಂಗಳ ಹಿಂದೆ ಹಾಸ್ಟೆಲ್ ಶುಲ್ಕವನ್ನು ಹೆಚ್ಚಳ ಮಾಡಿ ಬಡ ಮಕ್ಕಳ ಮೇಲೆ ಹೊರೆಯಾಗುವಂತಹ ನಿರ್ಧಾರವನ್ನು ವಿವಿ ಆಡಳಿತ ಮಂಡಳಿ ತೆಗೆದುಕೊಂಡಿತು. ಇದನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ ವಿರೋಧಿಸಿದ್ದು ಗುಂಡಾಗಳಿಗೆ ನೆಪವಾಗಿ ಪರಿಣಮಿಸಿತು. ವಿದ್ಯಾರ್ಥಿ ಸಂಘ ಅದು ಎಡಪಕ್ಷಗಳ ಬೆಂಬಲಿತವಾಗಲೀ ಅಥವಾ ಬಲಪಂಥೀಯ ಪಕ್ಷಗಳ ಬೆಂಬಲಿತವಾಗಿರಲಿ. ವಿದ್ಯಾರ್ಥಿಗಳಿಗೆ ವಿರುದ್ಧವಾದ ನೀತಿಯನ್ನು ಪ್ರಕಟಿಸಿದಾಗ ಸ್ವಾಭಾವಿಕವಾಗಿ ವಿದ್ಯಾರ್ಥಿ ಸಮೂಹದ ಪರವಾಗಿ ಧ್ವನಿ ಎತ್ತಿದೆ. ಈ ಧ್ವನಿಯಲ್ಲಿ ಬಿಜೆಪಿ ಕೃಪಾಪೋಷಿತ ಎಬಿವಿಪಿಯೂ ಧ್ವನಿಗೂಡಿಸಬೇಕಿತ್ತು. ಆದರೆ, ಅದನ್ನು ಬಿಟ್ಟು ವಿದ್ಯಾರ್ಥಿ ಸಂಘದ ವಿರುದ್ಧವೇ ಸಮರ ಸಾರಿ ವಿದ್ಯಾರ್ಥಿ ಸಮೂಹಕ್ಕೆ ನ್ಯಾಯ ಸಿಗದಂತೆ ಮಾಡಿದರು.
ಗೂಂಡಾಗಳ ಪ್ರವೇಶ
ಒಂದಲ್ಲಾ ಒಂದು ಗದ್ದಲವೆಬ್ಬಿಸುತ್ತಿರುವ ಕೆಲವು ವಿದ್ಯಾರ್ಥಿಗಳು ಗೂಂಡಾಗಿರಿ ಮಾಡಲೂ ಹೇಸುತ್ತಿಲ್ಲ. ಇದಕ್ಕೆ ಕುಮ್ಮಕ್ಕು ಕೊಡುತ್ತಿರುವವರು ಯಾರು? ಕಳೆದ ಹಲವು ತಿಂಗಳಿಂದಲೂ ವಿವಿಯಲ್ಲಿ ತ್ವೇಷಮಯ ವಾತಾವರಣ ಇರುವುದನ್ನು ಗಮನಿಸಿಯೂ ಉಪಕುಲಪತಿ ಹೆಚ್ಚುವರಿಯಾಗಿ ಭದ್ರತಾ ವ್ಯವಸ್ಥೆಯನ್ನೇಕೆ ಮಾಡಿಕೊಂಡಿಲ್ಲ. ಈ ಕೆಲಸವನ್ನು ಮೊದಲು ಮಾಡುವುದನ್ನು ಬಿಟ್ಟು ಉದ್ದೇಶಪೂರ್ವಕವಾಗಿ ಘರ್ಷಣೆ ಉಂಟಾದ ತಕ್ಷಣ ಪೊಲೀಸರನ್ನು ಕರೆಸುತ್ತಿರುವುದೇಕೆ? ಪೊಲೀಸರಿಂದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಿಸುತ್ತಿರುವ ಉದ್ದೇಶವಾದರೂ ಏನು? ಇದಕ್ಕೆ ಉಪಕುಲಪತಿ ಉತ್ತರ ನೀಡಲು ಸಮರ್ಥರಿದ್ದಾರೆಯೇ?
ಭಾನುವಾರ ವಿವಿ ಆವರಣದೊಳಗೆ ನುಗ್ಗಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮತ್ತು ಇತರೆ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣದ ನಂತರವೂ ಎಚ್ಚರಗೊಳ್ಳದ ಉಪಕುಲಪತಿ ಆ ಸ್ಥಾನದಲ್ಲಿ ಮುಂದುವರಿಯಲು ಅರ್ಹರೇ ಅಲ್ಲ. ಏಕೆಂದರೆ, ಸೋಮವಾರ ಬೆಳಗ್ಗೆ ಉಪನ್ಯಾಸಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ವಿವಿಯೊಳಗೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಏಕೆಂದರೆ, ರಾಜಾರೋಷವಾಗಿ ವಿದ್ಯಾರ್ಥಿಗಳ ಸೋಗಿನಲ್ಲಿ `ರೌಡಿ’ ಪಡೆ ಕೈಯಲ್ಲಿ ದೊಣ್ಣೆ ಹಿಡಿದು ನಿಂತಿತ್ತು. ಅಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಇದನ್ನು ಕಂಡೂ ಕಾಣದಿರುವಂತೆ ನಿಂತಿದ್ದಾದರೂ ಏಕೆ? ಇಂತಹ ರೌಡಿ ಪಡೆಯನ್ನು ಹಿಮ್ಮೆಟ್ಟಿಸಲು ವಿವಿ ಉಪಕುಲಪತಿ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೆ ಸ್ವತಃ ವಿವಿಯೇ ರೌಡಿ ಪಡೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂಬ ಗುಮಾನಿ ದಟ್ಟವಾಗಿದೆ ಮತ್ತು ಅದು ದಿಟವೂ ಆಗಿದೆ.
ಈ ಮೂಲಕ ವಿಫಲ ಪ್ರಭುತ್ವವು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹಿಂಸಾತ್ಮಕ ಕ್ರಮವನ್ನು ಅವಲಂಬಿಸಿದಂತಾಗಿದೆ.
ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ
ಇನ್ನು ಜೆಎನ್ ಯುನಲ್ಲಿ ನಡೆದ ಹಲ್ಲೆಯನ್ನು ಖಂಡಿಸಿ ದೇಶಾದ್ಯಂತ ಅಸಂಖ್ಯಾತ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು, ಮುಂಬೈ, ಪುಣೆ, ಕೊಲ್ಕತ್ತಾ ಸೇರಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದು, ಹಲ್ಲೆ ನಡೆಸಿದ್ದಾರೆನ್ನಲಾದ ಎಬಿವಿಪಿ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೊಂದು ಪೂರ್ವನಿಯೋಜಿತ ಕೃತ್ಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿರುವ ವಿದ್ಯಾರ್ಥಿಗಳು, ಗೂಂಡಾಗಿರಿ ಮಾಡಿರುವ ವಿದ್ಯಾರ್ಥಿ ಸಂಘಟನೆಯನ್ನು ನಿಷೇಧಿಸಬೇಕೆಂದೂ ಒತ್ತಾಯಿಸಿದ್ದಾರೆ.
ಇದೊಂದು ಉಗ್ರರ ದಾಳಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬೈನಲ್ಲಿ ಉಗ್ರರು ದಾಳಿ ನಡೆಸಿದ್ದರು. ಅದೇ ರೀತಿ ಜೆಎನ್ ಯು ನಲ್ಲಿ ಗೂಂಡಾಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಉಗ್ರರ ದಾಳಿಗೂ ವಿದ್ಯಾರ್ಥಿಗಳ ಮೇಲಿನ ಹಲ್ಲೆಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಜೆಎನ್ ಯುನಲ್ಲಿ ದುಷ್ಕರ್ಮಿಗಳು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ. ಉಗ್ರರೂ ಸಹ ಮುಂಬೈನಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ದಾಳಿ ನಡೆಸಿದ್ದರು ಎಂದು ಠಾಕ್ರೆ ಹೇಳಿದ್ದಾರೆ.
ವಾರ್ಡನ್ ರಾಜೀನಾಮೆ
ಈ ಮಧ್ಯೆ, ಜೆಎನ್ ಯುನಲ್ಲಿ ಹಿಂಸಾಚಾರವನ್ನು ತಡೆಯಲು ಸಾಕಷ್ಟು ಪ್ರಯತ್ನಪಟ್ಟೆವು. ಆದರೆ, ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ವಾರ್ಡನ್ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಸಾಬರಮತಿ ಹಾಸ್ಟೆಲ್ ನ ವಾರ್ಡನ್ ಮೀನಾ ಹೇಳಿದ್ದಾರೆ. ಈ ಸಂಬಂಧ ಲಿಖಿತ ಪತ್ರ ಬರೆದಿದ್ದಾರೆ.
ಉಪಕುಲಪತಿ ರಾಜೀನಾಮೆಗೆ ಹೆಚ್ಚಿದ ಒತ್ತಡ
ಈ ಎಲ್ಲಾ ಬೆಳವಣಿಗೆಗಳಿಗೆ ಪ್ರಮುಖ ಕಾರಣರಾಗಿದ್ದಾರೆಂದು ಆರೋಪಿಸಿ ವಿವಿ ಉಪಕುಲಪತಿ ರಾಜೀನಾಮೆ ನೀಡಲೇಬೇಕೆಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ. ಅಹಿತಕರ ಘಟನೆಗಳು ನಡೆಯುತ್ತಿದ್ದರೂ ನೋಡಿಯೂ ನೋಡದಂತೆ ಕುಳಿತುಕೊಳ್ಳುವ ಮೂಲಕ ಮತ್ತು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ಉಪಕುಲಪತಿ ಮಾಮಿಡೊಲಾ ಜಗದೀಶ್ ಕುಮಾರ್ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.