ಭಾರತದ ಕ್ರಿಕೆಟ್ ಜಗತ್ತು ಈ ದಿನ ಎರಡು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಕಪಿಲ್ ದೇವ್ ನಾಯಕತ್ವದಲ್ಲಿ 1983 ರಲ್ಲಿ ಭಾರತ ವಿಶ್ವಕಪ್ ಪಡೆದದ್ದು ಇದೇ ದಿನ. ಅಷ್ಟೇ ಅಲ್ಲದೇ ಭಾರತ ಅಂತರಾಷ್ಟ್ರೀಯ ಮಟ್ಟದ ಟೆಸ್ಟ್ ಪಂದ್ಯಾಟ ಚೊಚ್ಚಲ ಬಾರಿಗೆ ಆಡಿದ್ದು ಇದೇ ದಿನ. ಹಾಗಾಗಿಯೇ ಜೂನ್ 25 ಎಂದರೆ ಭಾರತದ ಕ್ರಿಕೆಟ್ ಜಗತ್ತಿಗೆ ಐತಿಹಾಸಿಕ ದಿನ.
ವಿಶ್ವಕಪ್ ಗೆಲ್ಲುವ ಯಾವುದೇ ನಿರೀಕ್ಷೆ ಇಲ್ಲದೆ ಪ್ರವೇಶ ಪಡೆದ ಭಾರತ ತಂಡವನ್ನು ಯಾರೂ ಪಂದ್ಯಾಟದ ಮುಂಚೂಣಿಗೆ ಬರುವ ತಂಡವೆಂದೂ ಪರಿಗಣಿಸಿರಲಿಲ್ಲ. ಈ ಪಂದ್ಯಾವಳಿಗೂ ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇವಲ 40 ಏಕದಿನ ಪಂದ್ಯ ಆಡಿದ್ದ ಭಾರತದ ಮೇಲೆ ಯಾರೂ ನಿರೀಕ್ಷೆ ಇಡದಿದ್ದದೂ, ಅಗ್ರ ತಂಡವೆಂದು ಪರಿಗಣಿಸದೆ ಇದ್ದದ್ದೂ ಸಕಾರಣವೇ..
ಕಳೆದು ಕೊಳ್ಳು ಏನೂ ಇಲ್ಲದ ಕಪಿಲ್ ದೇವ್ ನೇತೃತ್ವದ ತಂಡ ತಮ್ಮೆಲ್ಲಾ ಹೋರಾಟವನ್ನು ದಾಖಲಿಸಲೆಂದೇ ತೀರ್ಮಾನಿಸಿತ್ತು. ಜೂನ್ 09 ರಂದು ಓಲ್ಡ್ ಟ್ರಫಾರ್ಡ್ ನಲ್ಲಿ ನಡೆದ ಪಂದ್ಯಾಟದಲ್ಲಿ ಎರಡು ಬಾರಿ ಚಾಂಪಿಯನ್ನಾಗಿದ್ದ ವೆಸ್ಟ್ ಇಂಡೀಸ್ ನ್ನು ಸೋಲಿಸುವುದರೊಂದಿಗೆ ಭಾರತ ತನ್ನ ಗೆಲುವಿನ ಓಟಕ್ಕೆ ಚಾಲನೆ ನೀಡಿತು. ಮುಂದೆ ಅದೇ ಮೈದಾನದಲ್ಲಿ ಭಾರತ ನಿರೀಕ್ಷೆಗಳನ್ನೆಲ್ಲಾ ಮೀರಿ ಪ್ರದರ್ಶನ ನೀಡಿತ್ತು.
ಆ ಗೆಲುವಿನ ಆತ್ಮಸ್ಥೈರ್ಯದೊಂದಿಗೆ ಮುಂದೆ ಝಿಂಬಾಬ್ವೆಯನ್ನೂ ಜೂನ್ 11 ರಂದು ಸೋಲಿಸಿತು. ಆದರೆ ತನ್ನ ಗೆಲುವಿನ ಸರಣಿಗೆ ಆಸ್ಟ್ರೇಲಿಯ ಹಾಗೂ ವೆಸ್ಟ್ ಇಂಡೀಸ್‌ನೊಂದಿಗೆ ಕ್ರಮವಾಗಿ ಜೂನ್ 13 ಹಾಗೂ ಜೂನ್ 15 ರಂದು ನಡೆದ ಪಂದ್ಯಾಟ ತಡೆಯಾಯಿತು. ಈ ಎರಡು ಪಂದ್ಯದಲ್ಲಿ ಸೋತ ಭಾರತ ಜೂನ್ 18 ರಂದು ಝಿಂಬಾಬ್ವೆಯ ವಿರುದ್ಧ ಹಾಗೂ ಜೂನ್ 18 ರಂದು ಆಸ್ಟ್ರೇಲಿಯಾದ ವಿರುದ್ಧದ ಪಂದ್ಯದಲ್ಲಿ ವೀರೋಚಿತ ಗೆಲುವಿನೊಂದಿಗೆ ವಿಸ್ವಕಪ್‌ನ ಸೆಮಿ ಫೈನಲ್ ಗೆ ಪ್ರವೇಶ ಪಡೆಯಿತು.
ಅಂತರಾಷ್ಟ್ರೀಯ ಕ್ರಿಕೆಟ್ ಲೋಕದಲ್ಲಿ ಅಚ್ಚರಿಯ ಘಟನೆ ಜೂನ್ 22 ರಂದು ಜರುಗಿತು. ಯಾವ ದೇಶ ಕ್ರಿಕೆಟನ್ನು ಪರಿಚಯಿಸಿತ್ತೋ, ಯಾವ ದೇಶ ಭಾರತವನ್ನು 200 ವರ್ಷಗಳ ಕಾಲ ಆಳಿದ್ದರೋ ಅದೇ ದೇಶವನ್ನು ಭಾರತ ಸೆಮಿ ಫೈನಲ್‌ನಲ್ಲಿ ಸೋಲಿಸಿತು. ಈ ಗೆಲುವಿನೊಂದಿಗೆ ಭಾರತದ ಕ್ರಿಕೆಟ್ ತಂಡಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭರವಸೆಯ ತಂಡವಾಗಿ ರೂಪುಗೊಂಡಿತು.
ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ದ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದ ಭಾರತ ತಂಡ ಫೈನಲ್‌ನಲ್ಲಿ ಬಲಿಷ್ಟ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಬೇಕಾಗಿತ್ತು. ತಂಡದ ಉಪ ಕಪ್ತಾನರಾದಂತಹ ಮೊಹಿಂದರ್ ಅಮರ್‌ನಾಥ್ ಹೇಳಿದ ಪ್ರಕಾರ, ತಂಡದ ಮೇಲೆ ಯಾವುದೇ ಒತ್ತಡ ಇರಲಿಲ್ಲ. ಫೈನಲ್ ತಲುಪಿದ್ದೇ ವರ್ಲ್ಡ್‌ಕಪ್ ಗೆದ್ದಷ್ಟು ಖುಷಿ ತಂದುಕೊಟ್ಟಿತ್ತು.
ಲೀಗ್ ಹಂತದಲ್ಲಿ ವೆಸ್ಟ್‌ಇಂಡೀಸ್ ಅನ್ನು ಬಗ್ಗುಬಡೆದಿದ್ದ ಭಾರತಕ್ಕೆ ಫೈನಲ್ ಗೆಲ್ಲುವುದು ಸುಲಭವಾಗಿರಲಿಲ್ಲ. ಕ್ಲೈವ್ ಲಾಯ್ಡ್ ನಾಯಕತ್ವದ ವೆಸ್ಟ್‌ಇಂಡೀಸ್ ಸತತ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲಲಿದೆ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ, ಫೈನಲ್‌ನಲ್ಲಿ ನಡೆದಿದ್ದು ನಿಜಕ್ಕೂ ಚಮತ್ಕಾರವೇ ಸರಿ. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಕಲೆಹಾಕಿದ್ದು ಕೇವಲ 183 ರನ್. ಸರ್ ವಿವಿಯನ್ ರಿಚರ್ಡ್ಸ್ ಮತ್ತು ಕ್ಲೈವ್ ಲಾಯ್ಡ್‌ರಂತಹ ದಿಗ್ಗಜರನ್ನು ಹೊಂದಿದ್ದ ವಿಂಡೀಸ್‌ಗೆ ಈ ಗುರಿ ದೊಡ್ಡದೇನು ಆಗಿರಲಿಲ್ಲ.
ಆದರೆ ಭಾರತದ ತೀಕ್ಷ್ಣ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ತತ್ತರಿಸಿ ಹೋದ ವೆಸ್ಟ್‌ಇಂಡೀಸ್ ಸಂಪೂರ್ಣವಾಗಿ ಬಾರತದೆದುರು ಶರಣಾಯಿತು. ಕಪಿಲ್ ದೇವ್ ನೇತೃತ್ವದ ಭಾರತ ತಂಡವು ಕ್ರಕೆಟ್‌ನ ಇತಿಹಾಸದಲ್ಲಿ ಅತ್ಯದ್ಬುತವಾದ ಇತಿಹಾಸವನ್ನು ರಚಿಸಿತು. ಯಾವುದೇ ಭರವಸೆಯಿಲ್ಲದೇ ಪಂದ್ಯಾವಳಿಯನ್ನು ಆರಂಭಿಸಿದ ಭಾರತ ಸಂಪೂರ್ಣ ಪಂದ್ಯಾವಳಿಯನ್ನೇ ತನ್ನ ಹೆಸರಲ್ಲಿ ಬರೆದುಕೊಂಡಿದ್ದು ಇತಿಹಾಸ.
ಇಂದು ಆ ಐತಿಹಾಸಿಕ ದಿನ ಜರುಗಿ 37 ವರ್ಷಗಳು ಸಂದಿವೆ.18 ನೇ ಶತಮಾನದಲ್ಲೇ ಭಾರತಕ್ಕೆ ಕ್ರಿಕೆಟ್ ಪರಿಚಯಿಸಲಾಗಿದ್ದರೂ, 20 ನೇ ಶತಮಾನದ ಮೊದಲ ಮೂರು ದಶಕಗಳವರೆಗೆ ಅಂತರಾಷ್ಟ್ರೀಯ ಮಟ್ಟದ ಒಂದು ಪಂದ್ಯಾಟಕ್ಕೂ ಭಾರತದ ತಂಡ ಭಾಗವಹಿಸಿರಲಿಲ್ಲ. 1792 ರಲ್ಲೇ ಭಾರತದ ಕ್ರಿಕೆಟ್ ಕ್ಲಬ್ ಸ್ಥಾಪನೆಯಾಗಿದ್ದರೂ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯಾಟಕ್ಕೆ ಭಾರತದ ತಂಡ ಕಾಲಿಟ್ಟದ್ದು 1932 ರ ಜೂನ್ 25 ರಂದು.
ಇದಾಗಿ 51 ವರ್ಷಗಳ ಬಳಿಕ ಭಾರತ ತಂಡ ಅದೇ ದಿನ ವಿಶ್ವಕಪ್ ಗೆಲ್ಲುವ ಮೂಲಕ ಭಾರತದ ಐತಿಹಾಸಿಕ ದಿನಕ್ಕೆ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿತು. ಸದ್ಯ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಅಗ್ರ ಕ್ರಿಕೆಟ್ ತಂಡವಾಗಿ ಹೊರಹೊಮ್ಮಿದೆ. ಭಾರತದಲ್ಲಿ ಕ್ರಿಕೆಟ್ ಹುಟ್ಟಿಸಿದಷ್ಟು ಹುಚ್ಚು, ಉನ್ಮಾದ, ಉತ್ಸಾಹವನ್ನು ಬೇರೆ ಯಾವ ಆಟವೂ ಹುಟ್ಟಿಸಿಲ್ಲ. ಪ್ರೋ ಕಬಡ್ಡಿ ಆರಂಭವಾದ ಬಳಿಕ ಭಾರತದ ಅಸಲಿ ಮಣ್ಣಿನ ಆಟ ಕಬಡ್ಡಿಯ ಕಡೆಗೆ ಜನರು ವಾಲಿದರೂ ಭಾರತದ ಹೊರಾಂಗಣ ಪಂದ್ಯಗಳ ಲೋಕದಲ್ಲಿ ಕ್ರಿಕೆಟ್ ಚಕ್ರವರ್ತಿಯಾಗಿಯೇ ಉಳಿದಿದೆ.






