ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವೇಗವಾಗಿ ಕರೋನಾ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಇದೇ ವೇಗದಲ್ಲಿ ಸೋಂಕು ಹಬ್ಬುತ್ತಿದ್ದರೆ ಜುಲೈ 31 ರ ವೇಳೆಗೆ ಒಟ್ಟು ಪ್ರಕರಣಗಳ ಸಂಖ್ಯೆ 5.5 ಲಕ್ಷ ತಲುಪಲಿದೆ ಎಂದು ದೆಹಲಿ ಸರ್ಕಾರ ಅಂದಾಜಿಸಿದೆ. ಹೀಗಾಗಿ ಏರಿಕೆಯಾಗಲಿರುವ ಪ್ರಕರಣವನ್ನು ನಿಭಾಯಿಸಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ 60 ಸಾವಿರ ಹಾಸಿಗೆಗಳನ್ನು ಸಿದ್ಧ ಪಡಿಸಬೇಕಿದೆ.
ಹೆಚ್ಚಾಗಲಿರುವ ಕರೋನಾ ಪ್ರಕರಣ ಎದುರಿಸಲು ದೆಹಲಿ ಸರ್ಕಾರಕ್ಕೆ 80 ಸಾವಿರ ಹಾಸಿಗೆಗಳು ಬೇಕಾಗುತ್ತವೆ. ಈಗಾಗಲೇ ದೆಹಲಿಯಲ್ಲಿಯಲ್ಲಿ 20 ಸಾವಿರ ಹಾಸಿಗೆಗಳ ವ್ಯವಸ್ಥೆಯಿದೆ. ದೆಹಲಿ ಸರ್ಕಾರದ ಅಡಿಯಲ್ಲಿ ಕಾರ್ಯಾಚರಿಸುವ ಆಸ್ಪತ್ರೆಗಳಲ್ಲಿ 10 ಸಾವಿರ ಹಾಸಿಗೆಗಳಿದ್ದು, ಕೇಂದ್ರ ಸರ್ಕಾರದ ಅಡಿಯಲ್ಲಿ ನಿರ್ವಹಿಸುವ ಆಸ್ಪತ್ರೆಗಳಲ್ಲೂ ಅಷ್ಟೇ ಪ್ರಮಾಣದ ಹಾಸಿಗೆಗಳಿದೆ. ಕರೋನಾ ರೋಗವನ್ನು ನಿಭಾಯಿಸಲು ಇನ್ನು ಕೇವಲ ಒಂದುವರೆ ತಿಂಗಳಲ್ಲಿ ದೆಹಲಿ ಸರ್ಕಾರ 60 ಸಾವಿರ ಹಾಸಿಗೆಗಳನ್ನು ಸಜ್ಜುಗೊಳಿಸಲೇಬೇಕಾದ ಒತ್ತಡದಲ್ಲಿದೆ.

ಜೂನ್ 09 ರಂದು ದೆಹಲಿ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಒಟ್ಟು ಪ್ರಕರಣ 29,943 ತಲುಪಿದೆ. ಜೂನ್ 1 ರಿಂದ ಜೂನ್ 09 ರವೆರೆಗೆ 10 ಸಾವಿರ ಹೊಸ ಪ್ರಕರಣಗಳು ದಾಖಲಾಗಿವೆ, ಆ ನಿಟ್ಟಿನಲ್ಲಿ ಜೂನ್ 15 ರ ವೇಳೆಗೆ ದೆಹಲಿಯಲ್ಲಿ ಸೋಂಕಿಗೆ ತುತ್ತಾದವರ 44 ಸಾವಿರದ ಗಡಿ ದಾಟಲಿದೆ. ಆ ವೇಳೆಗೆ 6,600 ಹಾಸಿಗೆಗಳ ಅವಶ್ಯಕತೆ ಎದುರಾಗುತ್ತದೆ. ಜೂನ್ 30 ರ ವೇಳೆಗೆ ಅವಶ್ಯವಿರುವ ಹಾಸಿಗೆಗಳ ಸಂಖ್ಯೆ 15 ಸಾವಿರ ತಲುಪಲಿದೆ. ಜುಲೈ 15 ರ ವೇಳೆಗೆ ಇದರ ಸಂಖ್ಯೆ 33 ಸಾವಿರ ತಲುಪಲಿದೆ.
ಹಾಸಿಗೆಗಳ ತಯಾರಿಯಷ್ಟೇ ಸಾಕಾಗುವುದಿಲ್ಲ. ಈಗಾಗಲೇ ಕಳೆದ ಎರಡು-ಮೂರು ತಿಂಗಳಿನಿಂದ ನಿರಂತರ ಸೇವೆ ಸಲ್ಲಿಸಿ ಆರೋಗ್ಯ ಕಾರ್ಯಕರ್ತರು, ವೈದ್ಯರು ದಣಿದಿದ್ದಾರೆ. ಕರೋನಾ ವಾರಿಯರ್ಸ್‌ಗಳಲ್ಲಿ ಆರೋಗ್ಯ ವೈಪರೀತ್ಯ ಕಂಡುಬರುತ್ತಿದ್ದು ಇದೂ ಸರ್ಕಾರಗಳ ಪಾಲಿಗೆ ಸವಾಲಾಗಿದೆ. ಅಲ್ಲದೆ ಹೆಚ್ಚಾಗಲಿರುವ ಪ್ರಕರಣಗಳನ್ನು ನಿಭಾಯಿಸಲು ಆಮ್ಲಜನಕ, ವೆಂಟಿಲೇಟರ್ ಹಾಗೂ ಐಸಿಯು ಕೊಠಡಿಗಳನ್ನೂ ಸಜ್ಜುಗೊಳಿಸಬೇಕಾಗಿದೆ.