ಜಗತ್ತು ಮುಂದುವರೆತ್ತಿದ್ದರೂ ಜಾತಿ ಎಂಬ ಪೆಡಂಭೂತ ಇನ್ನೂ ಕೊನೆಯಾಗಿಲ್ಲ. ಸಮಾನತೆ ಬರಿ ಮಾತಿನಲ್ಲಿದೆ ಕೃತಿಯಲ್ಲಿಲ್ಲ ಎಂದು ತೋರಿಸಿಕೊಟ್ಟಿರುವ ಭೀಕರ ಘಟನೆ ಮೊನ್ನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ದೇವಸ್ಥಾನದ ಕಟ್ಟೆಯ ಮೇಲೆ ಜೊತೆಗೆ ಕುಳಿತಿದ್ದ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಯುವಕನನ್ನು ಅಮಾನವೀಯವಾಗಿ ಚಾಕುವಿನಿಂದ ಚುಚ್ಚಿ ಕೊಲೆಗೈಯಲಾಗಿದೆ. ಇಂತಹ ಘಟನೆಗಳಿಗೆ ಕೊನೆ ಎಂದು?
ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಜಾತಿ, ಮತ, ಧರ್ಮ, ಮೇಲು ಕೆಳ ಎಂಬ ಮನೋಭಾವ ಹಲವು ಹಳ್ಳಿ ಹಾಗೂ ನಗರಗಳಲ್ಲಿ ಇನ್ನೂ ಜೀವಂತವಾಗಿದೆ. ಕೆಲವು ಕಡೆಯಂತೂ ಕೆಳ ಜಾತಿಯವರು ಎಂದು ಅವರಿಗೆ ಬಾವಿ ನೀರು ತೆಗೆದುಕೊಳ್ಳಲು ಬಿಡುವುದಿಲ್ಲ, ಕೆಳ ಜಾತಿಯವರ ಮದುವೆ ಎಂದು ಇಡೀ ಹಳ್ಳಿಯೇ ಲಾಕ್ ಡೌನ್ ಆಗಿದ್ದು ಕಳೆದ ವರ್ಷ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದ್ದು ಇನ್ನು ಎಲ್ಲರ ಮನದಲ್ಲಿ ಹಾಗೆಯೇ ಇದೆ. ಇಂತಹ ಸಮಯದಲ್ಲಿ ಮತ್ತೊಂದು ಭೀಕರ ಘಟನೆ ನಡೆದಿದ್ದು ದುರದೃಷ್ಟಕರ ಎಂದೇ ಹೇಳಬಹುದು. ಇಂತಹ ಸಮಾಜ ತಲೆ ತಗ್ಗಿಸುವ ಘಟನೆ ನಡೆದ ನಂತರವೂ ಜನಪ್ರತಿನಿಧಿಗಳು ಏನೂ ಮಾತಾನಾಡದೇ ಮೌನಕ್ಕೆ ಶರಣಾಗಿರುವುದು ನಾಚಿಕೆಗೇಡಿನ ಸಂಗತಿ.
ಬೂದಿಹಾಳ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಕಟ್ಟೆ ಮೇಲೆ ಸಿದ್ದು ಸುಭಾಸ ಬಿರಾದಾರ ಎಂಬುವವರ ಸರಿಸಮನಾಗಿ ಅನೀಲ ಶರಣಪ್ಪ ಇಂಗಳಗಿ ಎಂಬ ಯುವಕ ಕುಳಿತಿದ್ದೇ ತಪ್ಪಾಯಿತು ಎಂಬಂತೆ ಆಕ್ಷೇಪ ಕೂಡ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ಅನೀಲ್ ಅವರಿಗೆ ಪರಿಶಿಷ್ಟ ಜಾತಿಯವರು ಇಲ್ಲಿ ಕುಳಿತಕೊಳ್ಳಬಾರದು ಎಂದು ಹೀಯಾಳಿಸಿದ್ದರೂ ಕೂಡ.
ನಂತರ ಹಾಡ ಹಗಲಲ್ಲೇ ಮೇಲ್ಜಾತಿಯ ಇಬ್ಬರು ಯುವಕರು ಇದೇ ಸಿಟ್ಟನ್ನು ಇಟ್ಟುಕೊಂಡು ವಿಜಯಪುರದ ಸಿಂದಗಿ ತಾಲೂಕಿನಲ್ಲಿ ಭರ್ಬರವಾಗಿ ಹರಿತ ಆಯುಧದಿಂದ ಚುಚ್ಚಿದ್ದ ಘಟನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟೀಕಿಸಿದ್ದಾರೆ ಹಾಗೂ ಜಸ್ಟಿಸ್ ಫಾರ್ ಎಸ್ ಸಿ ಎಂಬ ಆಂದೋಲನವನ್ನು ಆರಂಭಿಸಿದ್ದಾರೆ.
ಈ ಘಟನೆ ಬಗ್ಗೆ ಬರಹಗಾರ ಹಾಗೂ ಶಿಕ್ಷಕರಾದ ಚಂದ್ರು ರಾಠೋಡ ಅವರು ಹೇಳಿದ್ದು, “ಇದು ಆಧುನಿಕ ಯುಗ. ಇಲ್ಲಿ ಜನರ ಜ್ಞಾನ ಹಾಗೂ ಕಾರ್ಯಕ್ಷಮತೆ ಮೇಲೆ ಮೇಲು ಕೀಳು ಎಂದು ನಿರ್ಧರಿಸಲಾಗುತ್ತದೆ. ಆದರೆ ಇನ್ನೂ ಕೆಳ ಜಾತಿ ಎಂಬ ಭಾವನೆ ಬಹಳ ಜನರಲ್ಲಿದೆ. ಅದು ತೊಲಗಬೇಕು. ಕೆಳ ಜಾತಿ ಎಂದರೇನು ಅದರ ವ್ಯಾಖ್ಯಾನ ಏನು ಎಂಬುದು ಇನ್ನೂ ಬಹತೇಕರಿಗೆ ಗೊತ್ತೇ ಇಲ್ಲ. ಹಳೆಯ ಕಾಲದಲ್ಲಿ ಜಾರಿಗೆ ಇದ್ದ ಇಂತಹ ಅನಿಷ್ಟ ಪದ್ದತಿಗಳನ್ನು ತೊಲಗಿಸಬೇಕು. ಜನರಲ್ಲಿ ಅರಿವು ಮೂಡಿಸಬೇಕು. ದೇವಸ್ಥಾನದ ಕಟ್ಟೆಯಲ್ಲಲ್ಲ, ಮನದಲ್ಲಿಯೂ ಎಲ್ಲರನ್ನು ಸಮಾನವಾಗಿ ಇರಿಸಿಕೊಳ್ಳುವ ಮನೋಭಾವ ಬೆಳೆಸಬೇಕು. ಇದೇ ನಾವು ನಮ್ಮ ಮುಂದಿನ ತಲೆಮಾರಿನ ಜನರಿಗೆ ಕೊಡುವ ಆಸ್ತಿ ಅಲ್ಲವೇ!” ಎಂದು ಹೇಳಿದ್ದಾರೆ.
ಮಂಜುನಾಥ ಭಜಂತ್ರಿ ಎಂಬ ಬಾಗಲಕೋಟೆಯ ಯುವಕ ಹೇಳುವ ಪ್ರಕಾರ, “ನಾವು ನಗರ ಪ್ರದೇಶಗಳಲ್ಲಿ ಇಂತಹ ದೃಶ್ಯ ನೋಡಿಲ್ಲ. ಆದರೆ ಹಳ್ಳಿಗಳಲ್ಲಿ ಧಣಿಗಳು, ಮೇಲ್ಜಾತಿಯವರು ಹೀಗೆ ಅನೇಕ ಕಾರಣಗಳಿಂದ ಕೆಲವರನ್ನು ತುಚ್ಛವಾಗಿ ಕಾಣುತ್ತಾರೆ. ಇದು ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚಾಗಿದೆ. ನಗರ ಪ್ರದೇಶದ ಜನರಿಗೆ ಇದರ ತೀವ್ರತೆ ಗೊತ್ತಾಗುವುದಿಲ್ಲ. ಹಳ್ಳಿಗಳಲ್ಲಿ ಕೆಲವು ಜನರಿಗೆ ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಗ್ಲಾಸುಗಳಲ್ಲಿ ನೀರು ಹಾಗೂ ಚಹಾವನ್ನು ಕೊಡುತ್ತಾರೆ. ಅದೇ ಹೋಟೆಲ್ ನಲ್ಲಿ ಮೇಲ್ಜಾತಿಯವರಿಗೆ ಕಪ್ ನಲ್ಲಿ ಚಹಾ ನೀಡುತ್ತಾರೆ. ತಿಂಡಿಯನ್ನು ಪೇಪರ್ ಪ್ಲೇಟ್ ನಲ್ಲಿ ಕೊಡುತ್ತಾರೆ. ಎಲ್ಲರ ಹಾಗೆ ನೀರಿನ ತಂಬಿಗೆಯನ್ನು ಮುಟ್ಟುವಂತಿಲ್ಲ. ಇವೆಲ್ಲ ಮಾಧ್ಯಮಗಳಿಗೂ ಗೊತ್ತಾಗದಂತೆ ಕಾಪಾಡಿಕೊಳ್ಳುತ್ತಾರೆ. ಇದು ಹೆಚ್ಚು ಇರುವುದು ಬಾಗಲಕೋಟೆ, ವಿಜಯಪುರ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಎಂಬುದು ನನ್ನ ಅನಿಸಿಕೆ ಹಾಗೂ ನಾನು ಅನುಭವಿಸಿದ್ದು ಕೂಡ” ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಇದು ಇದೇ ಮೊದಲೇನಲ್ಲ!
ಕಳೆದ ವರ್ಷ ನವೆಂಬರ್ ನಲ್ಲಿ ಗದಗ್ ನ ಗಜೇಂದ್ರಘಡ ಹತ್ತಿರದ ಲಕ್ಕಲಕಟ್ಟಿ ಗ್ರಾಮದ ರಮೇಶ ಮತ್ತು ಗಂಗಮ್ಮ ಎಂಬ ದಂಪತಿಗಳನ್ನು ಕೆಳ ಜಾತಿಯ ಹೆಸರಿನಲ್ಲಿ ಹಾಗೂ ಮರ್ಯಾದಾ ಹತ್ಯೆಯ ಹೆಸರಿನಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದರು. ಒಟ್ಟು 2011 ರಿಂದ ಇಲ್ಲಿಯವರೆಗೆ ಸುಮಾರು 15 ಮರ್ಯಾದಾ ಹತ್ಯೆಯ ಪ್ರಕರಣಗಳು ದಾಖಲಾಗಿವೆ, ಮುಚ್ಚಿಟ್ಟಿದ್ದು ಎಷ್ಟೋ?
ಈ ರೀತಿ ಜಾತಿಯ ಹೆಸರಿನಲ್ಲಿ ಸಮಾಜದಲ್ಲಿರುವ ಭೇದ ಭಾವ ನಿಜಕ್ಕೂ ಅಸಹನೀಯ. ಬದುಕುವ ಹಕ್ಕು, ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಇದೆ. ಒಂದು ಜೀವವನ್ನು ಕಸಿಯುವ ಹಕ್ಕು ಯಾವ ಜಾತಿಯೂ ನೀಡುವುದಿಲ್ಲ. ಸುಮಾರು 11 ಶತಮಾನಗಳ ಹಿಂದೆ ಆದಿಕವಿ ಪಂಪ ತನ್ನ ವಿಕ್ರಮಾರ್ಜುನ ವಿಜಯ ಮಹಾಕಾವ್ಯದಲ್ಲಿ ಪ್ರಕಟಿಸಿದ್ದ ʼಮಾನವ ಜಾತ ತಾನೊಂದೇ ವಲಂʼ ಎಂಬ ಜಾತ್ಯಾತೀತ ಚಿಂತನೆಯ ಪ್ರಚುರತೆ ಇಂದು ಅಗತ್ಯವಿದೆ.