ನಮ್ಮ ಆಲೋಚನೆಗೂ ಮೀರಿ, ಊಹೆಗೂ ನಿಲುಕದಂತೆ ನಮ್ಮನ್ನು, ನಮ್ಮನ್ನು ಆಳುವ ಸರ್ಕಾರವನ್ನು ನಿಯಂತ್ರಿಸುತ್ತಿರುವುದು ಕಾರ್ಪೋರೇಟ್ ವಲಯ. ಕಾರ್ಪೋರೇಟ್ ಕುಳಗಳು ಸಾಮಾನ್ಯ ಬಡಜನರ ಮೇಲೆ ಆಳ್ವಿಕೆ ನಡೆಸಿದಷ್ಟೇ ಪ್ರಮಾಣದಲ್ಲಿ ತನಗೆದುರಾಗುವ ಪೈಪೋಟಿಯನ್ನು ನಿಭಾಯಿಸುತ್ತಿರುತ್ತದೆ.
ತನ್ನ ಉತ್ಪನ್ನಗಳಿಗೆ ಪರ್ಯಾಯವಾಗಿ ಬೆಳೆಯಬಲ್ಲದು, ಅಥವಾ ಪೈಪೋಟಿ ನೀಡಬಲ್ಲದು ಎನ್ನುವಂತಹ ಪ್ರಾಡಕ್ಟ್‌ಗಳನ್ನ ಅಥವಾ ಉತ್ಪನ್ನಗಳನ್ನ ಉತ್ಪಾದಿಸುವ ಸಣ್ಣ ಕಂಪೆನಿಗಳನ್ನೇ ತನ್ನ ಕಂಪೆನಿಯೊಂದಿಗೆ ವಿಲೀನಗೊಳಿಸುವುದು ಅಥವಾ ಈ ಪ್ರಕ್ರಿಯೆಗೆ ಒಗ್ಗದವರನ್ನ ಮಾರುಕಟ್ಟೆಯಿಂದಲೇ ನಿರ್ಮೂಲನೆ ಮಾಡುವುದು ಆಧುನಿಕ ಕಾರ್ಪೊರೇಟ್ ವಲಯದಲ್ಲಿ ಬೆಳೆಯುವುದರ ಅಥವಾ so called ಯಶಸ್ವಿಯಾಗುವ ವಿಧಾನಗಳಲ್ಲೊಂದು.
ಈ ಗೆಲುವಿಗೆ ಅಧಿಕಾರ ಇರುವ ಸರ್ಕಾರಗಳು, ಪ್ರಭುತ್ವಗಳು ಹೇರಳವಾದ ಸಹಾಯವನ್ನೊದಗಿಸುತ್ತದೆ. ಇದರೊಳಗೊಂದು ಕೊಡುಕೊಳ್ಳುವಿಕೆ ಇರುತ್ತದೆ. ಈ ಕೊಡುಕೊಳ್ಳುವಿಕೆ ವ್ಯಾಪ್ತಿ ಸಾಮಾನ್ಯ ಊಹೆಗೆ ನಿಲುಕದಷ್ಟು ಆಳದಲ್ಲಿ ಇರುತ್ತದೆ. ಮೇಲ್ನೋಟಕ್ಕೆ ಅಂತಹಾ ಒಂದು ಕೊಡುಕೊಳ್ಳುವಿಕೆಯ ಸುಳಿವು ಸಿಕ್ಕಿರುವುದು ಕೇಂದ್ರ ಸರ್ಕಾರದ “ಚೀನಾ ಅಪ್ಲಿಕೇಶನ್ ಬ್ಯಾನ್”ಎಂಬ ಹೊಸ ಆದೇಶದ ಮೇಲೆ.
Also Read: ಟಿಕ್‌ಟಾಕ್ ಸೇರಿ ಚೀನಾ ಮೂಲದ 59 ಆ್ಯಪ್‌ಗಳ ಮೇಲೆ ಭಾರತದಲ್ಲಿ ನಿಷೇಧ
ಅಮಿತ್ ಶಾ ಹೇಳುವಂತೆ ಇದೊಂದು ಕ್ರೊನೋಲಜಿಯ ಕತೆ. ಹಲವು ಬಿಂದುವನ್ನು ಸರಿಯಾದ ಅನುಕ್ರಮದಲ್ಲಿ ಜೋಡಿಸದ ಹೊರತು ಈ ಚಿತ್ರಣಕ್ಕೊಂದು ಪೂರ್ಣರೂಪ ಬರುವುದಿಲ್ಲ. ಅಷ್ಟೊಂದು ಬುದ್ಧಿವಂತರ ತಂಡ ನಮ್ಮನ್ನು ಆಳುವವರ ಹಿಂದೆ ಇದೆ. ನಾವು ಯಾವುದನ್ನು ಮಾತನಾಡಬೇಕು, ಯಾವುದನ್ನು ಮಾತನಾಡಬಾರದೆಂದು, ಯಾವುದನ್ನು ಕೇಳಬೇಕು, ಕೇಳಬಾರದೆಂದು ಎಲ್ಲವೂ ಈ ವರ್ಗ ತೀರ್ಮಾನಿಸುತ್ತದೆ.
ಅಮೇರಿಕಾದ ಕ್ಯಾಂಪಸ್ ಒಂದರಲ್ಲಿ 2004ರಲ್ಲಿ ಹುಟ್ಟಿಕೊಂಡ ಫೇಸ್‌ಬುಕ್ 2020 ರ ಹೊತ್ತಿಗೆ ಸೋಶಿಯಲ್ ಪ್ಲಾಟ್‌ಫಾರಂಗಳಲ್ಲೇ ದೈತ್ಯಾಕಾರದಲ್ಲಿ ಬೆಳೆದು ನಿಂತ ಬಗೆ ಕುತೂಹಲಕಾರಿಯಾದದ್ದು. ಹೀಗೆ ನೋಡನೋಡುತ್ತಿದ್ದಂತೆ ಬೆಳೆದು ನಿಂತ ಫೇಸ್‌ಬುಕ್ ತನಗೆ ಪರ್ಯಾಯವಾಗಬಹುದೆಂದು ಅಥವಾ ಪೈಪೋಟಿ ನಿಲ್ಲಬಲ್ಲಂತಹ ಅಪಾಯವಿದ್ದ ಇನ್ಸ್ಟಾಗ್ರಾಮನ್ನು ಖರೀದಿಸಿಕೊಂಡದ್ದು ಹಳೆಕತೆ. ಇನ್ಸ್ಟಗ್ರಾಮ್ ಮಾತ್ರವಲ್ಲದೆ ಭಾರತೀಯರು ಅತೀಹೆಚ್ಚು ಬಳಸುವ ವಾಟ್ಸಪನ್ನೂ ಫೇಸ್‌ಬುಕ್ ಖರೀದಿಸಿಕೊಂಡಿದೆ.
2017 ರಿಂದ ಭಾರತದಲ್ಲಿ ವೇಗವಾಗಿ ಪ್ರಚಾರ ಪಡೆದ, ಬಳಕೆದಾರರನ್ನು ಆಕರ್ಷಿಸಿದ ಮೊಬೈಲ್ ಅಪ್ಲಿಕೇಶನ್ ಚೀನಾ ಮೂಲದ ಟಿಕ್‌ಟಾಕ್. ಟಿಕ್‌ಟಾಕ್ ಭಾರತದಲ್ಲಿ ಜನಪ್ರಿಯಗೊಳ್ಳುತ್ತಿದ್ದಂತೆ ಭವಿಷ್ಯದಲ್ಲಿ ಎಲ್ಲಾ ಅಪ್ಲಿಕೇಶನ್‌ಗಳನ್ನು ಮೀರಿ ಟಿಕ್‌ಟಾಕ್ ಅತೀಹೆಚ್ಚು ಭಾರತದ ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್ ಆಗಬಹುದಾದ ಸಾಧ್ಯತೆ ಇದೆ ಎಂಬುದು ತಜ್ಞರ ಅಂದಾಜಾಗಿತ್ತು. ಸದ್ಯ ಚೀನಾ ಅಪ್ಲಿಕೇಶನ್ ನಿಷೇಧದೊಂದಿಗೆ ಟಿಕ್‌ಟಾಕಿಗೆ ಭಾರತದಲ್ಲಿ ಭಾರೀ ಹಿನ್ನಡೆ ಎದುರಾಗಿದೆ.
Also Read: ಗೂಗಲ್ ʼಪ್ಲೇ ಸ್ಟೋರ್ʼ ನಿಂದ ಗೇಟ್ ಪಾಸ್ ಪಡೆದ ದೇಸಿ ಟಿಕ್‌ಟಾಕ್ ʼMitronʼ!
ಅಸಲಿ ಮಜಾ ಇರೋದು ಇಲ್ಲಿ. ಜೂನ್ 26 ರಂದು ಇಂಡಿಯಾ ಟಿವಿ ತನ್ನ ಅಂತರ್ಜಾಲ ಪತ್ರಿಕೆಯಲ್ಲಿ ʼಟಿಕ್‌ಟಾಕ್ʼ ಅಪ್ಲಿಕೇಶನ್ ನೀಡುವಂತಹ ಫೀಚರ್ಗಳನ್ನು ಫೇಸ್‌ಬುಕ್ ಅಧೀನದ ಇನ್ಸ್ಟಗ್ರಾಮ್ ಇನ್ನು ಮುಂದೆ ನೀಡಲಿದೆ ಎಂದು ವರದಿ ಮಾಡಿದೆ. ಆ ವರದಿ ಬಂದು ಮೂರೇ ದಿನಗಳಲ್ಲಿ ಕೇಂದ್ರ ಸರ್ಕಾರ ಟಿಕ್‌ಟಾಕ್ ಸೇರಿದಂತೆ 59 ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿಷೇಧಿಸಿದೆ. ಹಾಗಾಗಿ ಟಿಕ್‌ಟಾಕ್ ಬಳಕೆದಾರರು ಸಹಜವಾಗಿ ಅದೇ ಫೀಚರ್ ಕೊಡುವ ಇನ್ಸ್ಟಗ್ರಾಮ್ ಮೊರೆ ಹೋಗಲಿದ್ದಾರೆ.
ಇನ್ನು ಒಂದಿಷ್ಟು ಹಿಂದೆ, ಅಂದರೆ ಇದೇ ವರ್ಷದ ಎಪ್ರಿಲ್ 22ರ ಸುದ್ದಿಯ ಕಡೆಗೆ ಗಮನ ಹರಿಸಬೇಕಾಗುತ್ತದೆ. ಯಾಕೆಂದರೆ ಇನ್ನೊಂದು ಮುಖ್ಯವಾದ ಬಿಂದು ಅಲ್ಲಿದೆ. ಝುಕರ್ಬರ್ಗ್ ಒಡೆತನದ ಫೇಸ್‌ಬುಕ್ ಮುಕೇಶ್ ಅಂಬಾನಿಯ ರಿಲಾಯನ್ಸ್ ಜಿಯೋ ಪ್ಲಾಟ್‌ಫಾರಮ್‌ಗಳ ಮೇಲೆ 45 ಸಾವಿರ ಕೋಟಿ ರುಪಾಯಿ ಬಂಡವಾಳವನ್ನು ಹೂಡುತ್ತದೆ. ಗುಜರಾತ್ ಮೂಲದ ಅಂಬಾನಿಗೂ ಪ್ರಧಾನಿ ಮೋದಿಗೂ ಇರುವ ಗೆಳೆತನದ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರು ಆಗಾಗ ಬೆಳಕು ಚೆಲ್ಲುತ್ತಿರುತ್ತಾರೆ.
ಇಲ್ಲಿ ಒಂದು ಸ್ಪಷ್ಟವಾಗುತ್ತದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡಿರುವ ಅಪ್ಲಿಕೇಶನ್ ಬ್ಯಾನ್ ಪ್ರಹಸನದ ನೇರ ಲಾಭ ಪಡೆಯುವುದು, ನರೇಂದ್ರ ಮೋದಿಯ ಗೆಳೆಯ ಮುಖೇಶ್ ಅಂಬಾನಿಯ ಕಂಪೆನಿಗೆ ಬಂಡವಾಳ ಹೂಡಿರುವ ಫೇಸ್‌ಬುಕ್‌ನ ಅಧೀನದಲ್ಲಿರುವ ಇನ್ಸ್ಟಗ್ರಾಮ್ ಎಂಬ ಅಮೇರಿಕಾ ಮೂಲದ ಅಪ್ಲಿಕೇಶನ್‌ಗೆ.
130 ಕೋಟಿ ಜನರ ಡಾಟಾ ಸುರಕ್ಷಿತವಲ್ಲ ಎಂಬ ಕಾರಣ ನೀಡಿ 59 ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿಷೇಧಿಸುವುದಾಗಿ ಕೇಂದ್ರ ಆದೇಶ ಪತ್ರದಲ್ಲಿ ಹೇಳಿದೆ. ಈ ಹೇಳಿಕೆಯೇ ವೈರುಧ್ಯದಿಂದ ಹಾಗೂ ಅಜ್ಞಾನದ ಪರಮಾವಧಿಯಿಂದ ಕೂಡಿರುವಂತೆ ಭಾಸವಾಗುತ್ತದೆ. ಯಾಕೆಂದರೆ ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆಯೇ 40 ಕೋಟಿ, ಅದರಲ್ಲಿ ಟಿಕ್‌ಟಾಕ್ ಬಳಸುವವರು 12 ಕೋಟಿ ಮಂದಿ, ಇನ್ನುಳಿದ ಅಪ್ಲಿಕೇಶನ್ ಬಳಕೆದಾರರ ಸಂಖ್ಯೆ ಇದಕ್ಕಿಂತಲೂ ಕಡಿಮೆ. ಹಾಗಾಗಿ ಕೇಂದ್ರ ಹೇಳಿರುವಂತೆ 130 ಕೋಟಿ ಭಾರತೀಯರ ಡೇಟಾ ಸುರಕ್ಷಿತವಲ್ಲ ಅನ್ನುವ ವಾದ, ಕೇವಲ ಬಾಯಿ ಮಾತಿನ ಅಂದಾಜು, ಯಾವುದೇ ರೀತಿಯ ಅಧ್ಯಯನ ಇದರ ಹಿಂದೆಯಿಲ್ಲ. ಇನ್ನು ಚೀನಾದ ಮೇಲಿನ ಧ್ವೇಷದಿಂದ ನಿಷೇಧಿಸಲಾಗಿದೆ ಎಂದರೆ ಅದೂ ಅಲ್ಲ. ಕೇವಲ 59 ಅಪ್ಲಿಕೇಶನ್ ಮಾತ್ರವಲ್ಲ ಚೀನಾ ಮೂಲದ್ದು, ಇನ್ನೂ ಹಲವು ಅಪ್ಲಿಕೇಶನ್‌ಗಳು ಚೀನಾ ಮೂಲದವುಗಳು ಭಾರತದಲ್ಲಿ ಸಕ್ರಿಯವಾಗಿರಲಿವೆ.
ಫೇಸ್‌ಬುಕ್ ಹಾಗೂ ಬಿಜೆಪಿ ಐಟಿ ಸೆಲ್
ಫೇಸ್‌ಬುಕ್ ಬಳಕೆದಾರರಲ್ಲಿ ಸಾಮಾನ್ಯವಾಗಿ ಮೋದಿಯನ್ನು ಟೀಕಿಸಿ ಬರೆಯುವ, ಪೋಸ್ಟ್ ಹಾಕುವ ಪ್ರೊಫೈಲ್‌ಗಳನ್ನು ಕಮ್ಯುನಿಟಿ ಸ್ಟಾಂಡರ್ಡ್ಸ್ ಅಡಿಯಲ್ಲಿ ನಿರ್ಬಂಧಿಸುವ ಫೇಸ್‌ಬುಕ್ ಅದೇ ವೇಳೆ ಮೋದಿ ಅಭಿಮಾನಿಗಳೆಂದು ಹೇಳಿಕೊಂಡು ಅಶ್ಲೀಲವಾಗಿ ಬರೆಯುವ, ನಿಂದಿಸುವ ಕಮೆಂಟ್‌ಗಳನ್ನು, ಪೋಸ್ಟ್‌ಗಳನ್ನು ಅದರ ಗಮನಕ್ಕೆ ತಂದರೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೆಂಬ ಆಕ್ರೋಶ ಹಲವು ಬಾರಿ ಇದೇ ಫೇಸ್‌ಬುಕ್ ಬಳಕೆದಾರರು ಎತ್ತಿದ್ದಾರೆ. ಇದೇ ವಿಚಾರವಾಗಿ ಹಲವು ನೆಟ್ಟಿಗರು ಬಿಜೆಪಿ ಐಟಿ ಸೆಲ್ ಹಾಗೂ ಫೇಸ್‌ಬುಕ್ ನಡುವೆ ಸಂಬಂಧವಿದೆಯೆಂದು ಆರೋಪಿಸಿದ್ದಾರೆ.
ಇನ್ನು ಭಾರತದ ಶ್ರೀಮಂತ ಪಕ್ಷ ಹಾಗೂ ಪ್ರಪಂಚದ ದೈತ್ಯ ಸಾಮಾಜಿಕ ಜಾಲತಾಣದ ಸಂಬಂಧದ ಕುರಿತಂತೆ ಹಲವಾರು ಲೇಖನಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ ಹಲವು ಆಯಾಮಗಳಲ್ಲಿ ಪ್ರಕಟಗೊಂಡಿದೆ. 2014 ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಪ್ರಚಾರವೇ ಭಾರತದ ಜನಪ್ರಿಯ ನಾಯಕನನ್ನಾಗಿಸುವಲ್ಲಿ ಪಾತ್ರವಹಿಸಿತು. ಅದರಲ್ಲಿ ಮುಖ್ಯವಾಗಿ ನಿಲ್ಲುವುದು ಅಮೇರಿಕ ಮೂಲದ ಇದೇ ಫೇಸ್‌ಬುಕ್.
ಸರಳ ಲೆಕ್ಕಾಚಾರದ ಪ್ರಕಾರ, ಮೋದಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದೆಯೆಂದು ಆರೋಪವಿರುವ ಫೇಸ್‌ಬುಕ್, ಮೋದಿಯ ಗುಜರಾತ್ ಮೂಲದ ಗೆಳೆಯ ಅಂಬಾನಿ ಒಡೆತನದ ಮೇಲೆ 45 ಸಾವಿರ ಕೋಟಿ ಬಂಡವಾಳ ಹೂಡುತ್ತದೆ. ಅದಾಗಿ ಕೆಲವು ದಿನಗಳ ಬಳಿಕ ತನ್ನ ಅಧೀನದಲ್ಲಿರುವ ಇನ್ಸ್ಟಗ್ರಾಮ್ ಅಪ್ಲಿಕೇಶನ್‌ಗೆ ಟಿಕ್‌ಟಾಕ್ ಫೀಚರ್‌ಗಳಿಗೆ ಹೋಲಿಕೆಯಾಗುವ ಫೀಚರ್‌ಗಳನ್ನು ಪರಿಚಯಿಸುವುದಾಗಿ ಹೇಳುತ್ತದೆ. ಇದಾಗಿ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಯಾರಿಗೆ ಸಹಾಯ ಮಾಡಿದೆಯೆಂಬ ಆರೋಪ ಫೇಸ್‌ಬುಕ್ ಮೇಲಿದೆಯೋ ಅವರ ನೇತೃತ್ವದ ಸರ್ಕಾರವೇ ಫೇಸ್‌ಬುಕ್‌ಗೆ ಸಹಾಯಕವಾಗುವಂತಹ ಆದೇಶವನ್ನು ಹೊರಡಿಸುತ್ತದೆ.
“ಅಭೀ ಆಪ್ ಕ್ರೊನೋಲಜಿ ಸಮಜ್ ಲೀಜಿಯೇ”