ಜಾಗತಿಕ ಮಟ್ಟದಲ್ಲಿ ಕರೋನಾ ಮಹಾಮಾರಿ ಉಂಟು ಮಾಡಿರುವ ಪ್ರಾಣಹಾನಿ ಒಂದು ಕಡೆಯಾದರೆ, ಜಾಗತಿಕ ಚರಿತ್ರೆಯಲ್ಲೇ ಭೀಕರವಾದ ಈ ವಿಶ್ವವ್ಯಾಪಿ ವೈರಾಣು ಉಂಟುಮಾಡಿರುವ ಆರ್ಥಿಕ ಸಂಕಷ್ಟದ ಬಿರುಗಾಳಿ ದೈತ್ಯ ಆರ್ಥಿಕ ಶಕ್ತಿಗಳನ್ನೇ ನಿವಾಳಿಸಿ ಎಸೆಯುತ್ತಿದೆ.
ಕರೋನಾ ಕೊಡುತ್ತಿರುವ ಆರ್ಥಿಕ ಪೆಟ್ಟಿನ ಹಿನ್ನೆಲೆಯಲ್ಲಿ ನೋಡಿದರೆ, ಇಡೀ ಜಾಗತಿಕ ವ್ಯವಸ್ಥೆಯನ್ನೇ ಈ ರೋಗ ಬುಡಮೇಲು ಮಾಡುವ ಸಾಧ್ಯತೆ ಇದೆ. ಕಳೆದ ಮೂರ್ನಾಲ್ಕು ಶತಮಾನಗಳ ಜಾಗತಿಕ ಯಜಮಾನಿಕೆ ವಹಿಸಿದ್ದ ಅಮೆರಿಕ ಮತ್ತು ಯುರೋಪಿನ ಬಂಡವಾಳಶಾಹಿ ವ್ಯವಸ್ಥೆಗೆ ಇದು ಕೊಟ್ಟಿರುವ ಭಾರೀ ಏಟು, ಭವಿಷ್ಯ ತತಕ್ಷಣಕ್ಕೆ ಅಲ್ಲದೇ ಇದ್ದರೂ, ಸದ್ಯದಲ್ಲೇ ಆ ರಾಷ್ಟ್ರಗಳ ಆರ್ಥಿಕ ಬಲ ಮತ್ತು ಆ ಆರ್ಥಿಕ ಬಲದ ಕಾರಣಕ್ಕೆ ಅವು ಹೊಂದಿರುವ ಜಾಗತಿಕ ರಾಜಕೀಯ ಮತ್ತು ಮಿಲಿಟರಿ ಪ್ರಾಬಲ್ಯಕ್ಕೂ ಪೆಟ್ಟು ಬೀಳಲಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಅದರಲ್ಲೂ ಮುಖ್ಯವಾಗಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಸ್ಪೇನ್ ನಂತಹ ರಾಷ್ಟ್ರಗಳಲ್ಲಿ ಭಯಾನಕ ಕರೋನಾ ಸೃಷ್ಟಿಸಿರುವ ಅನಾಹುತದ ಹಿನ್ನೆಲೆಯಲ್ಲಿ ಆ ರಾಷ್ಟ್ರಗಳ ಒಟ್ಟಾರೆ ಪ್ರಗತಿ ದಶಕಗಳಷ್ಟು ಹಿಂದೆ ಸರಿಯಲಿದೆ. ಮುಖ್ಯವಾಗಿ ಸೇವಾ ವಲಯವನ್ನೇ ಹೆಚ್ಚಾಗಿ ಅವಲಂಬಿಸಿರುವ ದೇಶಗಳಲ್ಲಿ ಆರ್ಥಿಕ ಹಿಂಜರಿತ ಹೆಚ್ಚು ತೀವ್ರವಾಗಿರಲಿದೆ. ಹಾಗಾಗಿ ಸೇವಾ ವಲಯ ಹೊರತುಪಡಿಸಿ ತಯಾರಿಕಾ ವಲಯ ಮತ್ತು ಕೃಷಿ ವಲಯದ ಮೇಲೆ ಹೆಚ್ಚು ಅವಲಂಬಿತವಾಗಿರುವ ರಾಷ್ಟ್ರಗಳಿಗೆ ಇದೊಂದು ಅವಕಾಶವಾಗಿಯೂ ಒದಗಿಬರಲಿದೆ ಎಂಬ ಮಾತುಗಳೂ ಜಾಗತಿಕ ಮಟ್ಟದಲ್ಲಿ ಕೇಳಿಬರುತ್ತಿವೆ.
ಇಂತಹ ವಿಶ್ಲೇಷಣೆಗಳ ಹಿನ್ನೆಲೆಯಲ್ಲೇ, ಭಾರತ ಕೂಡ ಜಾಗತಿಕ ಮಟ್ಟದಲ್ಲಿ ಆರ್ಥಿಕ ಪ್ರಾಬಲ್ಯ ಸಾಧಿಸಲು ಒಂದು ಅವಕಾಶ ಈ ಮಹಾಮಾರಿಯ ಸಂದರ್ಭವಾಗಿದೆ. ಆದರೆ, ತನ್ನ ಸೇವಾ ವಲಯಕ್ಕೆ ನೀಡುತ್ತಿರುವ ಆದ್ಯತೆಯನ್ನು ಪುನರ್ ಪರಿಶೀಲಿಸಬೇಕಾದ ಸಮಯ ಇದಾಗಿದ್ದು, ದೇಶದ ನಿಜವಾದ ಆರ್ಥಿಕ ಬಲವಾಗಿರುವ ಕೃಷಿ ವಲಯದ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಮತ್ತು ಯೋಜಿತ ದೂರಗಾಮಿ ಕಾರ್ಯಕ್ರಮಗಳ ಮೂಲಕ ಮುನ್ನಡೆದಲ್ಲಿ ದೇಶದ ಶೇ.60ರಷ್ಟು ಮಂದಿ(ಸುಮಾರು 80 ಕೋಟಿ ಜನ) ಅವಲಂಬಿತರಾಗಿರುವ ಮತ್ತು ಗ್ರಾಮೀಣ ಭಾರತದ ಜೀವದ್ರವ್ಯವಾಗಿರುವ ಕೃಷಿಯನ್ನು ದೇಶದ ಆರ್ಥಿಕತೆಯ ಬೆನ್ನುಲುಬಾಗಿ ಪರಿವರ್ತಿಸಲು ಸಾಧ್ಯವಿದೆ ಎಂಬ ಸಲಹೆಗಳೂ ಕೇಳಿಬರುತ್ತಿವೆ.
ಈ ನಡುವೆ ದೇಶದ ಜಿಡಿಪಿ ಕರೋನಾ ಲಾಕ್ ಡೌನ್ ನಿಂದಾಗಿ ಭಾರೀ ಕುಸಿತ ಕಾಣಲಿದ್ದು, ಈ ಹಿಂದಿನ ಶೇ.4.7 ರಿಂದ ಶೇ.1.9ಕ್ಕೆ ಕುಸಿಯಲಿದೆ ಎಂದು ಐಎಂಎಫ್ ಹೇಳಿದೆ. ಆದರೆ, ಜಾಗತಿಕ ಮಟ್ಟದ ಮತ್ತೊಂದು ಸಂಸ್ಥೆ ಬಾರ್ಕ್ಲೆ, ಭಾರತದ ಜಿಡಿಪಿ ಶೂನ್ಯಕ್ಕೆ ಕುಸಿಯಲಿದೆ ಎಂದು ಹೇಳಿದೆ. ಆದರೆ, ಐಎಂಎಫ್ ಅಂದಾಜನ್ನು ಒಪ್ಪಿಕೊಂಡಿರುವ ಆರ್ ಬಿಐ, ಜಿ-20 ರಾಷ್ಟ್ರಗಳ ಪೈಕಿ ಭಾರತದ ಅಭಿವೃದ್ಧಿ ದರವೇ ಹೆಚ್ಚಿದೆ. ಅದು ನಮ್ಮ ಭರವಸೆ ಎಂದು ಹೇಳಿದೆ. ಈ ಮೊದಲು ವಿಶ್ವಬ್ಯಾಂಕ್ ಕೂಡ ಭಾರತದ ಜಿಡಿಪಿ ದರ ಶೇ. 1.5ರಿಂದ 2.8ರ ಮಿತಿಯಲ್ಲಿರಲಿದೆ ಎಂದು ಹೇಳಿತ್ತು.
ಆದರೆ, ಪ್ರಧಾನಮಂತ್ರಿಗಳ ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣ್ಯಂ ಅವರು ಈ ಲೆಕ್ಕಾಚಾರಗಳು ಬಹಳ ಆಶಾವಾದದ ನೆಲೆಯ ಮೇಲೆ ನಿಂತಿವೆ. ವಾಸ್ತವವಾಗಿ ಲಾಕ್ ಡೌನ್ ನಿಂದಾಗಿ ನಾವು ಕನಿಷ್ಠ ಒಂದು ತಿಂಗಳ ದೇಶದ ಒಟ್ಟಾರೆ ಉತ್ಪಾದನೆಯನ್ನು ಕಳೆದುಕೊಂಡೆವು ಎಂದು ಅಂದಾಜಿಸಿದರೂ ನಮ್ಮ ಜಿಡಿಪಿ ದರ ನಕಾರಾತ್ಮಕ ಹಾದಿ ಹಿಡಿಯುತ್ತದೆ. ಜೊತೆಗೆ ಅದೇ ಹೊತ್ತಿಗೆ ಮಹಾಮಾರಿಯ ನಿಯಂತ್ರಣ, ಚಿಕಿತ್ಸೆಯ ವೆಚ್ಚವನ್ನೂ ದೇಶ ಭರಿಸಬೇಕಾಗಿದೆ. ಜೊತೆಗೆ ದೇಶದ ತೆರಿಗೆ ಆದಾಯ ಕೂಡ ಭಾರೀ ಕುಸಿತ ಕಂಡಿದೆ. ಆ ಹಿನ್ನೆಲೆಯಲ್ಲಿ ವಾಸ್ತವ ಜಿಡಿಪಿ ದರ ನೆಗೇಟಿವ್ ಆಗಿರಲಿದೆ ಎಂದು ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕೂಡ ಹಲವು ದೇಶಗಳಲ್ಲಿ ಜಿಡಿಪಿ ದರ ನಕಾರಾತ್ಮಕವಾಗಿರಲಿದೆ. 1930ರ ಮಹಾ ಆರ್ಥಿಕ ಕುಸಿತಕ್ಕಿಂತ ಭೀಕರ ಪರಿಸ್ಥಿತಿ ಜಾಗತಿಕವಾಗಿ ಉಂಟಾಗಲಿದ್ದು, ಮುಂಚೂಣಿ ಆರ್ಥಿಕ ಶಕ್ತಿಗಳ ಜಿಡಿಪಿ ಲೆಕ್ಕಾಚಾರಗಳು ಕೂಡ ಇನ್ನೊಂದೆರಡು ತಿಂಗಳಲ್ಲಿ ಸಂಪೂರ್ಣ ತಲೆಕೆಳಗಾಗಲೂಬಹುದು ಎಂದು ಹೇಳಲಾಗುತ್ತಿದೆ.
ಇಂತಹ ನಿರಾಶಾದಾಯಕ ಸ್ಥಿತಿಯ ನಡುವೆಯೂ ಒಂದು ಭರವಸೆಯ ಬೆಳ್ಳಿಕಿರಣವಾಗಿ ಕಾಣುತ್ತಿರುವುದು ಭಾರತದ ಕೃಷಿ ವಲಯದ ಬೆಳವಣಿಗೆ ಮತ್ತು ಆಶಾದಾಯಕ ಮುಂಗಾರು ಮುನ್ಸೂಚನೆ. ಕುಸಿಯುತ್ತಿರುವ ಆರ್ಥಿಕತೆಯ ನಡುವೆ ಸದ್ಯ ಒಂದೇ ಬೆಳ್ಳಿಗೆರೆಯಾಗಿ ಕಾಣುತ್ತಿರುವುದು ದೇಶದ ಕೃಷಿ ಬೆಳವಣಿಗೆ ದರ. ಕಳೆದ ಬಾರಿ ಶೇ 2.8 ಮತ್ತು ಅದರ ಹಿಂದಿನ ಬಾರಿ 2.9ರಷ್ಟಿದ್ದ ವಲಯದ ಬೆಳವಣಿಗೆ ದರ, ಏಪ್ರಿಲ್ 1ರಿಂದ ಆರಂಭವಾಗಿರುವ ಪ್ರಸ್ತುತ ಹಣಕಾಸು ವರ್ಷದಲ್ಲಿ ಶೇ.3ಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಭಾರತೀಯ ಹವಾಮಾನ ಇಲಾಖೆ ಮುಂಗಾರು ಕುರಿತ ತನ್ನ ಮೊದಲ ಮುನ್ನೋಟದಲ್ಲಿ ಶೇ.100ರಷ್ಟು ವಾಡಿಕೆಯ ಮಳೆಯಾಗಲಿದೆ ಎಂದು ಹೇಳಿರುವುದು ಮತ್ತೊಂದು ಆಶಾವಾದ ಎಂದು ಪ್ರಧಾನಮಂತ್ರಿಗಳ ಸಲಹೆಗಾರ ರಮೇಶ್ ಚಾಂದ್ ಹೇಳಿದ್ದಾರೆ.
ನೀತಿ ಆಯೋಗದ ಸದಸ್ಯರಲ್ಲಿ ಒಬ್ಬರಾಗಿರುವ ಚಾಂದ್ ಅವರ ಈ ಭರವಸೆಯ ಮಾತು, ಜಾರಿಯಲ್ಲಿರುವ ಲಾಕ್ ಡೌನ್ ನಿಂದ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಿಗೆ ವಿನಾಯ್ತಿ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಮಹತ್ವದ್ದಾಗಿದ್ದು, ಬರಲಿರುವ ದಿನಗಳಲ್ಲಿ ಸರ್ಕಾರ ಕೃಷಿ ವಲಯದ ಉತ್ತೇಜನಕ್ಕೆ ಇನ್ನಷ್ಟು ಪೂರಕ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಭರವಸೆ ಮೂಡಿಸಿದೆ.
ಈ ನಡುವೆ, ದೇಶದ ಆರ್ಥಿಕ ಸಂಕಷ್ಟದ ಹೊತ್ತಲ್ಲಿ ಇನ್ನಷ್ಟು ಪ್ರಪಾತಕ್ಕೆ ಕುಸಿಯುವುದರಿಂದ ನಮ್ಮನ್ನು ಪಾರು ಮಾಡುವುದು ಕೃಷಿ ಮಾತ್ರ. ಕೃಷಿ ದೇಶದ ಬೆನ್ನೆಲುಬು ಎಂಬ ಮಾತು ಹಳೆಯದಾದರೂ, ಕೃಷಿಯನ್ನು ಮೂಲೆ ತಳ್ಳಿ, ಉದಾಸೀನ ಮಾಡಿ ಕಾರ್ಪೊರೇಟ್ ಕಂಪನಿಗಳ ಲಾಬಿಗೆ ಮಣಿದು ಸೇವಾ ವಲಯಕ್ಕೆ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುತ್ತಾ, ಸೇವಾ ವಲಯ, ತಯಾರಿಕಾ ವಲಯಕ್ಕೆ ಬೇಕಾದ ಮೂಲಸೌಕರ್ಯಕ್ಕಾಗಿ ಜನರ ತೆರಿಗೆ ಹಣವನ್ನು ನೀರಿನಂತೆ ಸುರಿಯುತ್ತಿರುವಾಗಲೂ, ನಿಜವಾಗಿ ದೇಶದ ಜಿಡಿಪಿಯನ್ನು ಕುಸಿಯದಂತೆ ಹಿಡಿದಿಟ್ಟುಕೊಂಡಿರುವುದು ಕೃಷಿ ವಲಯ. ದೇಶದ ಕೃಷಿ ವಲಯದ ಕೊಡುಗೆ ಇಲ್ಲದೇ ಹೋಗಿದ್ದರೆ ಕರೋನಾ ಲಾಕ್ ಡೌನ್ ಗೆ ಮುನ್ನವೇ ದೇಶದ ಪ್ರಗತಿ ದರ ನಕಾರಾತ್ಮಕ ಹಾದಿಯಲ್ಲಿರುತ್ತಿತ್ತು. ಆದರೆ, ಈ ವಾಸ್ತವಾಂಶವನ್ನು ಹೇಳಲು ದೇಶದ ಅರ್ಥಶಾಸ್ತ್ರಜ್ಞರು, ನೀತಿ ನಿರೂಪಕರಿಗೆ ಕಾರ್ಪೊರೇಟ್ ವಲಯದ ಲಾಬಿಗಳು ಬಾಯಿಕಟ್ಟಿಸುತ್ತಿವೆ.
ಹಾಗಾಗಿ ಸರ್ಕಾರಗಳು ಸೇವಾ ವಲಯ ಮತ್ತು ತಯಾರಿಕಾ ರಂಗಕ್ಕೆ ಬೆಣ್ಣೆ, ಕೃಷಿ ವಲಯಕ್ಕೆ ಸುಣ್ಣ ಎಂಬ ನೀತಿಯನ್ನು ಬಹುತೇಕ ಕಳೆದ 25 ವರ್ಷಗಳಿಂದಲೂ ಪಾಲಿಸಿಕೊಂಡು ಬರುತ್ತಿವೆ. ಐಎಂಎಫ್, ವಿಶ್ವಬ್ಯಾಂಕ್, ವಿಶ್ವ ವ್ಯಾಪಾರ ಒಕ್ಕೂಟದಂತಹ ಸಂಸ್ಥೆಗಳ ಒತ್ತಡ ಕೂಡ ಸರ್ಕಾರಗಳ ಕೃಷಿ ವಲಯದ ಕುರಿತ ನಿರ್ಲಕ್ಷ್ಯದ ಹಿಂದೆ ಕೆಲಸ ಮಾಡುತ್ತಿದೆ. ಆದರೆ, ಕರೋನದಂತಹ ಭೀಕರ ಮಹಾಮಾರಿ ಕೊಟ್ಟಿರುವ ಬಲವಾದ ಪೆಟ್ಟು ಅಂತಹ ಜಾಣ ಮರೆವನ್ನು ಈಗ ನೆನಪಿಸಿದೆ. ಹಾಗಾಗಿಯೇ ಆಳುವ ಮಂದಿ ಈಗ ಕೃಷಿ ವಲಯದ ಕುರಿತ ಯೋಚನೆ ಚಾಲನೆ ನೀಡಿದ್ಧಾರೆ ಎಂಬ ಮಾತೂ ಇದೆ.

ಆ ಹಿನ್ನೆಲೆಯಲ್ಲಿ ಸರ್ಕಾರ ಈಗಲಾದರೂ ದೇಶದ ಅರ್ಥವ್ಯವಸ್ಥೆ ಬೆನ್ನೆಲುಬು ಕೃಷಿ ಎಂಬುದನ್ನು ಅರ್ಥಮಾಡಿಕೊಂಡು, ಕನಿಷ್ಠ ಆರ್ಥಿಕ ಪ್ರಗತಿಯನ್ನು ಖಾತರಿ ಪಡಿಸುವ ನಿಟ್ಟಿನಲ್ಲಿ ಈ ಸಂಕಷ್ಟದ ಹೊತ್ತಲ್ಲಿ ಕೃಷಿ ವಲಯದ ಆಮೂಲಾಗ್ರ ಸುಧಾರಣೆಗಾಗಿ ಪ್ರಯತ್ನಿಸಬೇಕಿದೆ. ಕೃಷಿಗೆ ಚೈತನ್ಯ ತುಂಬಲು ಅಗತ್ಯವಾಗಿ ಬೇಕಿರುವ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಸಕಾಲಿಕ ಮತ್ತು ಸಮರ್ಪಕ ಬೆಂಬಲ ಬೆಲೆ ವ್ಯವಸ್ಥೆ, ಮಾರುಕಟ್ಟೆ ಜಾಲ ವಿಸ್ತರಣೆ ಮತ್ತು ಶಿಥಿಲೀಕರಣ ಘಟಕಗಳ ಸರಣಿ ವ್ಯವಸ್ಥೆ, ಕೃಷಿ ಸಬ್ಸಿಡಿ ವ್ಯವಸ್ಥೆಯ ಬದಲಾವಣೆ ಮೂಲಕ ಮಧ್ಯವರ್ತಿ ಕಂಪನಿಗಳ ಬದಲಾಗಿ ನೇರವಾಗಿ ಕೃಷಿಕರಿಗೆ ಸರ್ಕಾರದ ಸಬ್ಸಿಡಿ ಪ್ರಯೋಜನ ಸಿಗುವಂತೆ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ.
ಕಾರ್ಪೊರೇಟ್ ಕೃಷಿ ಮತ್ತು ಜಾಗತಿಕ ಮಾರುಕಟ್ಟೆಯ ಜಪ ಮಾಡುವ ಮೂಲಕ ಕೃಷಿ ವಲಯವನ್ನು ಕೂಡ ಬೃಹತ್ ಹೂಡಿಕೆ ಮತ್ತು ಲಾಭದ ಉದ್ಯಮವಾಗಿಸುವ ಬದಲು, ತುಂಡುಭೂಮಿ ಮತ್ತು ನೀರಾವರಿ ಬಿಕ್ಕಟ್ಟಿನ ನಡುವೆಯೇ ಲಾಭದಾಯಕ ಕೃಷಿ ಮತ್ತು ಸುಸ್ಥಿರ ಬದುಕು ಸಾಧ್ಯವಾಗಿಸುವ ದೇಸಿ ಮತ್ತು ಪಾರಂಪರಿಕ ಕೃಷಿ ವಿಧಾನಗಳನ್ನು ಪುನರ್ ಸ್ಥಾಪಿಸಬೇಕಿದೆ. ಸಹಕಾರ ಕೃಷಿ ಮತ್ತು ಸಹಕಾರ ಮಾರುಕಟ್ಟೆ ವ್ಯವಸ್ಥೆಯ ಮೂಲಕ ಕೃಷಿಯಲ್ಲಿ ಕ್ರಾಂತಿಕಾರಕ ಬದಲಾವಣೆ ಸಾಧ್ಯ ಎಂಬುದನ್ನು ಜಪಾನ್, ಕೊರಿಯಾದಂತಹ ರಾಷ್ಟ್ರಗಳಿಂದ ಕಲಿಯಬೇಕಿದೆ. ಆ ದಿಸೆಯಲ್ಲಿ ಪ್ರಧಾನಿಯವರು ಈ ಮೊದಲು ಹೇಳುತ್ತಿದ್ದ ‘ಪೌರಾತ್ಯ ಗಮನ’ ಎಂಬ ಘೋಷಣೆ ಕೃಷಿಯಲ್ಲಿ ಈ ರೀತಿಯಲ್ಲಿ ಅನುಷ್ಠಾನಕ್ಕೆ ಬರಬೇಕಿದೆ. ಬೃಹತ್ ಹೂಡಿಕೆಯ ಬಂಡವಾಳಶಾಹಿ ಕೃಷಿ ಪದ್ಧತಿಯಿಂದ ಸುಧಾರಿಸಿಕೊಳ್ಳಲಾಗದ ಪ್ರಮಾಣದಲ್ಲಿ ಕೃಷಿ ಬಿಕ್ಕಟ್ಟಿಗೆ ಸಿಲುಕಿರುವ ಅಮೆರಿಕದ ದುಃಸ್ಥಿತಿಯನ್ನು ನೋಡಿಯೂ ನಾವು ಅವರ ಮಾದರಿಯನ್ನು ಅನುಸರಿಸುವುದು ಮೂರ್ಖತನವಾದೀತು.
ಇದೇ ಅರ್ಥದಲ್ಲಿಯೇ ಖ್ಯಾತ ಕೃಷಿ ಅರ್ಥಶಾಸ್ತ್ರಜ್ಞ ದೇವಿಂದರ್ ಶರ್ಮಾ, ದೇಶದ ಜಿಡಿಪಿ ಬೆಳವಣಿಗೆ ದರದ ಕನಿಷ್ಠ ಖಾತ್ರಿಗೆ ಕೃಷಿ ವಲಯವೇ ಬುನಾದಿ. ಅದರ ಮೇಲೆ ಉಳಿದೆಲ್ಲಾ ವಲಯಗಳ ಕೊಡುಗೆ ನಿಂತಿದೆ. ದೇಶದ ಶೇ.65-70 ಶೇ.ಜನರು ನೇರವಾಗಿ ಇಲ್ಲವೇ ಪರೋಕ್ಷವಾಗಿ ಕೃಷಿ ಮತ್ತು ಅದಕ್ಕೆ ಪೂರಕ ಚಟುವಟಿಕೆಗಳನ್ನೇ ಆಶ್ರಯಿಸಿ ಬದುಕುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಸರ್ಕಾರ ಕೃಷಿಕರ ಕನಿಷ್ಟ ಆದಾಯ ಖಾತ್ರಿಗೆ ಯೋಜನೆ ರೂಪಿಸಬೇಕಿದೆ. ಕೃಷಿ ವಲಯದ ಸಮಗ್ರ ಪುನರ್ರಚನೆಗಾಗಿ ರೂಪಿಸಿರುವ ಉನ್ನತ ಮಟ್ಟದ ಕಾರ್ಯಪಡೆಯ ಸಲಹೆ ಮೇರೆಗೆ ತುರ್ತಾಗಿ ಕೃಷಿ ವಲಯದ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕಿದೆ ಎಂದು ಹೇಳಿದ್ದಾರೆ.
2019ರ ಜುಲೈನಲ್ಲಿ ಪ್ರಧಾನಿ ಮೋದಿಯವರು ಘೋಷಿಸಿದ್ದ ಕೃಷಿ ವಲಯದ ಸಮಗ್ರ ಪುನರ್ ರಚನೆಯ ಉದ್ದೇಶದ ಉನ್ನತ ಮಟ್ಟದ ಸಮಿತಿ ರಚನೆ ಘೋಷಿಸಿದ್ದರು. ಅಂದಿನ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದ ಆ ಸಮಿತಿ ಈ ಹತ್ತು ತಿಂಗಳಲ್ಲಿ ಏನು ಮಾಡಿದೆ ಎಂಬುದು ತಿಳಿದಿಲ್ಲ. ಆದರೆ, ಸಮಿತಿ ಕೃಷಿ ಕ್ಷೇತ್ರದ ಪುನರುತ್ಥಾನಕ್ಕೆ ಪ್ರಾಯೋಗಿಕವಾಗಿ ಸಾಧ್ಯವಿರುವ ಕ್ರಮಗಳನ್ನು ಸೂಚಿಸಲು ಮತ್ತು ಸರ್ಕಾರ ಅವುಗಳನ್ನು ಅನುಷ್ಠಾನಕ್ಕೆ ತರಲು ಇದು ಸೂಕ್ತ ಸಮಯ. ಒಂದು ಕಡೆ ನಗರಗಳಿಗೆ ಉದ್ಯೊಗ ಅರಸಿ ಹೋದ ಕಾರ್ಮಿಕರು ಮರುವಲಸೆ ಬಂದು ಹಳ್ಳಿಗಳಲ್ಲಿ ನಿರುದ್ಯೋಗಿಗಳಾಗಿ ನೆಲೆಸಿದ್ದಾರೆ.
ಮತ್ತೊಂದು ಕಡೆ ಭಾರತವೂ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಆಹಾರದ ಬೇಡಿಕೆ ಹೆಚ್ಚಿದೆ. ಜೊತೆಗೆ ಹಣ ಮತ್ತು ಸಂಪತ್ತಿನ ಬೆನ್ನುಬಿದ್ದ ನಾಗರಿಕತೆ ಮೊದಲ ಬಾರಿಗೆ ಬದುಕಿನ ಕನಿಷ್ಠ ನೆಮ್ಮದಿ ಮತ್ತು ಹಸಿವಿನ ಬೆಲೆಯನ್ನು ಅರ್ಥಮಾಡಿಕೊಳ್ಳತೊಡಗಿದೆ. ಹಾಗಾಗಿ ಮೇಟಿವಿದ್ಯೆಯ ಮೇಲೆ ಜನರ ನಂಬಿಕೆಯನ್ನು ಪುನರ್ ಸ್ಥಾಪಿಸಲು ಮತ್ತು ಹಳ್ಳಿಗಳ ಸಬಲೀಕರಣಕ್ಕೆ ಇದು ಸಕಾಲ. ಆದರೆ, ಸರ್ಕಾರಗಳಿಗೆ ಸರಿಯಾದ ವಿವೇಕ ಮತ್ತು ವಿವೇಚನೆ, ದೂರದೃಷ್ಟಿ ಮತ್ತು ಸಮಗ್ರ ನೋಟದ ಅಗತ್ಯವಿದೆ.