ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ತಿಂಗಳಿಂದ ನಿಷೇಧಿಸಲ್ಪಟ್ಟಿದ್ದ ಇಂಟರ್ನೆಟ್ ಅನ್ನು ಪುನಾರಂಭಿಸಲಾಗಿದೆ. ಕಳೆದ ವಾರ ಆಯ್ದ 300 ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆದರೆ, ಮೆಸೇಂಜರ್ ಆ್ಯಪ್ ಆಗಿದ್ದ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋಚಾಟ್ ಅನ್ನು ಮಾತ್ರ ಬಳಕೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಯೋ ಚಾಟ್ ಬಳಕೆಗೆ ನೀಡಲಾಗಿದ್ದ ಅನುಮತಿಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದುಕೊಂಡಿದೆ.
ಇತ್ತೀಚಿಗೆ ಸರ್ಕಾರ ಪ್ರಕಟಿಸಿರುವ ಪರಿಷ್ಕೃತ ವೆಬ್ ಸೈಟ್ ಗಳ ಪಟ್ಟಿಯಲ್ಲಿ ಜಿಯೋಚಾಟ್ ಗೆ ಕೊಕ್ ನೀಡಲಾಗಿದೆ. ಇದುವರೆಗೆ ಆಯ್ದ 300 ವೆಬ್ ಸೈಟ್ ಗಳಿಗೆ ಅನುಮತಿ ನೀಡಲಾಗಿದ್ದು, ಇದೀಗ ಇನ್ನೂ ಹೆಚ್ಚು ಕಾಶ್ಮೀರಿ ವೆಬ್ ಸೈಟ್ ಗಳ ಬಳಕೆಗೆ ಅನುಮತಿ ನೀಡಲಾಗಿದೆ.
ಕಳೆದ ವಾರ ಮೊಬೈಲ್ ಫೋನ್ ಮತ್ತು 2ಜಿ ಇಂಟರ್ನೆಟ್ ಸೇವೆಗಳನ್ನು ಪುನಾರಂಭಿಸಿದ ನಂತರ ಸರ್ಕಾರ 301 ವೆಬ್ ಸೈಟ್ ಗಳ ಸೇವೆಯನ್ನೂ ಪುನಾರಂಭ ಮಾಡಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370 ನೇ ವಿಧಿಯನ್ನು ವಾಪಸ್ ಪಡೆದಿದ್ದರಿಂದ ಕಣಿವೆ ರಾಜ್ಯದಲ್ಲಿ ಅಶಾಂತಿ ನೆಲೆಸಬಹುದು ಎಂಬ ಕಾರಣಕ್ಕೆ ಎಲ್ಲಾ ಮೊಬೈಲ್, ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಿತ್ತು. ಇದರಿಂದ ರಾಜ್ಯದ ಜನತೆ ತೀವ್ರ ಸಂಕಷ್ಟವನ್ನು ಎದುರಿಸಬೇಕಾಗಿ ಬಂದಿತು. ಸುಪ್ರೀಂಕೋರ್ಟ್ ಸಹ ಜನತೆಯ ಅವಿಭಾಜ್ಯ ಅಂಗವಾಗಿರುವ ಇಂಟರ್ನೆಟ್ ಮತ್ತು ಫೋನ್ ಸೇವೆಗಳನ್ನು ನಿಷೇಧಿಸಿರುವುದಕ್ಕೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಜಮ್ಮು ಮತ್ತು ಕಾಶ್ಮೀರ ಆಡಳಿತವು ಹಂತಹಂತವಾಗಿ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳನ್ನು ಪುನಾರಂಭಿಸುತ್ತಾ ಬಂದಿದೆ. ಆದರೆ, ಕೇಂದ್ರ ಸರ್ಕಾರ ಜನವರಿ 24 ರಂದು ವ್ಯಕ್ತಿಯಿಂದ ವ್ಯಕ್ತಿಗೆ ಸಂಪರ್ಕ ಕಲ್ಪಿಸುವ ಸಾಮಾಜಿಕ ಮಾಧ್ಯಮ ಅಪ್ಲಿಕೇಷನ್ ಮೇಲೆ ಸಂಪೂರ್ಣ ನಿಷೇಧ ಹೇರಿತ್ತಾದರೂ, ಒಂದು ಗ್ರೂಪಿನಲ್ಲಿ 500 ಜನರನ್ನು ಸೇರಿಸಿಕೊಂಡು ಚಾಟ್ ಮಾಡಲು, ವಿಡಿಯೋ-ಫೋಟೋಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸುವ ಮುಕೇಶ್ ಅಂಬಾನಿ ಒಡೆತನದ ಜಿಯೋಚಾಟ್ ಅನ್ನು ವೈಟ್ ಲೀಸ್ಟ್ ನಲ್ಲಿ ಸೇರಿಸಿತ್ತು. ಅಂದರೆ ಜಿಯೋಚಾಟ್ ಹೊರತುಪಡಿಸಿ ಯಾವುದೇ ಇತರೆ ಸಾಮಾಜಿಕ ಮಾಧ್ಯಮಗಳಿಗೆ ಅನುಮತಿ ನೀಡಿರಲಿಲ್ಲ.
ಇತರೆ ಸಾಮಾಜಿಕ ಮಾಧ್ಯಮದ ಸೇವೆಗಳನ್ನು ಕಲ್ಪಿಸುವ ದೂರಸಂಪರ್ಕ ಕಂಪನಿಗಳ ಸೇವೆಗಳಲ್ಲಿ ಕೇವಲ 260-280 ಜನರ ಗ್ರೂಪ್ ಮಾಡಿಕೊಳ್ಳಲು ಅವಕಾಶವಿದೆ. ಆದರೆ, ಜಿಯೋಚಾಟ್ ನಲ್ಲಿ 500 ಜನರ ಗ್ರೂಪನ್ನು ಮಾಡಿಕೊಂಡು ಚರ್ಚೆಗಳನ್ನು ನಡೆಸಬಹುದು ಮತ್ತು ವಿಡಿಯೋ-ಫೋಟೋಗಳನ್ನು ಪರಸ್ಪರ ಹಂಚಿಕೊಳ್ಳಬಹುದಾಗಿದೆ. ಅಂದರೆ ಇತರೆ ಕಂಪನಿಗಳ ಸೇವೆಗಿಂತ ಕ್ಷಿಪ್ರವಾಗಿ ಮತ್ತು ಹೆಚ್ಚು ಮಂದಿಗೆ ಮಾಹಿತಿ ರವಾನೆಯಾಗುವುದು ಇದೇ ಜಿಯೋಚಾಟ್ ನಲ್ಲಿ. ಹೀಗಿರುವಾಗ ಜಿಯೋಚಾಟ್ ಗೆ ಅನುಮತಿ ನೀಡಿದ್ದ ಉದ್ದೇಶವಾದರೂ ಏನು? ಎಂದು ತಂತ್ರಜ್ಞಾನ ಪರಿಣತರು ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದರು.
ಮೊದಲು ಹೊರಡಿಸಲಾಗಿದ್ದ ಎರಡು ಲೀಸ್ಟ್ ಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರಮುಖ ದಿನಪತ್ರಿಕೆಗಳಿಗೆ ಅನುಮತಿ ನೀಡಲಾಗಿತ್ತು. ಆದರೆ, ಯಾವುದೇ ಸ್ಥಳೀಯ ಪೋರ್ಟಲ್ ಗಳನ್ನು ಹೆಸರಿಸಲಾಗಿರಲಿಲ್ಲ. ಇದೀಗ ಮತ್ತಷ್ಟು ಸುದ್ದಿ ಮಾಧ್ಯಮಗಳನ್ನು ಸೇರಿಸಿ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಿಂದ ಜಿಯೋ ಚಾಟ್ ಅನ್ನು ಹೊರಗಿಟ್ಟಿರುವುದು ಇದರ ವಿಶೇಷವಾಗಿದೆ.
ವರ್ಚುವಲ್ ಪ್ರೈವೇಟ್ ನೆಟ್ ವರ್ಕ್(ವಿಪಿಎನ್) ಅಕ್ಸೆಸ್ ಮಾಡುವ ಮೂಲಕ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಇಂಟರ್ನೆಟ್ ಅನ್ನು ದುರ್ಬಳಕೆ ಮಾಡುವ ಶಂಕೆಗಳು ಇವೆ. ಈ ಕಾರಣದಿಂದ ಜಿಯೋಚಾಟ್ ಅನ್ನು ಹೊರಗಿಡಲಾಗಿದೆ ಎಂದು ಗೃಹ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.
ಅಲ್ಲದೇ, ಇಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ವಿಚ್ಛಿದ್ರ ಶಕ್ತಿಗಳು ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಅಥವಾ ಈ ಬಗ್ಗೆ ಪ್ರಚೋದನಾಕಾರಿ ವದಂತಿಗಳನ್ನು ಹಬ್ಬಿಸುವ ಸಾಧ್ಯತೆಗಳಿವೆ. ಅದೇ ರೀತಿ ಇಂತಹ ಮೆಸೇಜ್ ಗಳನ್ನು ರವಾನೆ ಮಾಡಲು ಬಳಸಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಿತದೃಷ್ಟಿಯಿಂದ ಜಿಯೋಚಾಟ್ ನಂತಹ ಸಾಮಾಜಿಕ ಮಾಧ್ಯಮದ ಅಪ್ಲಿಕೇಷನ್ ಅನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ.
ಇದೇ ವೇಳೆ, ಜಮ್ಮು ಲಿಂಕ್ಸ್ ಮತ್ತು ಸ್ಟ್ರೇಟ್ ಲೈನ್ ನ್ಯೂಸ್ ನಂತಹ ಪೋರ್ಟಲ್ ಗಳನ್ನೂ ಈ ಹಿಂದೆ ನಿಷೇಧಿಸಲಾಗಿತ್ತು. ಆದರೆ, ಸರ್ಕಾರ ಹೊರಡಿಸಿರುವ ಹೊಸ ಆದೇಶದಲ್ಲಿ ಇಂತಹ ಪೋರ್ಟಲ್ ಗಳನ್ನೂ ಸೇರ್ಪಡೆ ಮಾಡಲಾಗಿದೆ.