ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಪರಿಚ್ಛೇಧ 370 ಮತ್ತು 35(ಎ) ರದ್ದುಗೊಳಿಸಿ ಆದೇಶಿತ್ತು. ಈ ಕಾರಣದಿಂದ ಜಮ್ಮು-ಕಾಶ್ಮಿರ ರಾಜ್ಯ ಕೇಂದ್ರದ ಅಧೀನಕ್ಕೆ ಒಳಪಡಬೇಕಾಯ್ತು. ಬಳಿಕ ಕೇಂದ್ರ ಸರ್ಕಾರವೇ ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು. ಲಡಾಕ್ ಅನ್ನು ಜಮ್ಮು-ಕಾಶ್ಮೀರದಿಂದ ಪ್ರತ್ಯೇಕಗೊಳಿಸಿತು. ಜಮ್ಮು-ಕಾಶ್ಮೀರವೂ ಕೂಡ ದಿಲ್ಲಿಯಂತೆಯೇ ಕೇಂದ್ರಾಡಳಿತ ಪ್ರದೇಶವಾದವು. ಹೀಗಾಗಿ 370ನೇ ವಿಧಿ ರದ್ದು ಬಳಿಕ ಜಮ್ಮು-ಕಾಶ್ಮೀರದಲ್ಲಿ ಯಾವುದೇ ಚುನಾವಣೆ ನಡೆದರೂ ಅದು ಜನತಾ ಅಭಿಪ್ರಾಯ ಸಂಗ್ರಹಣೆ ಎಂದೇ ಪರಿಗಣಿಸಲಾಗುತ್ತಿತ್ತು.
ಹೀಗಿರುವಾಗಲೇ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಸಮಿತಿ (DDC) ಚುನಾವಣೆ ನಡೆಯಿತ್ತು. ಇದೀಗ ಈ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ನ್ಯಾಷನಲ್ ಕಾನ್ಫೆರೆನ್ಸ್ ನೇತೃತ್ವದ ಗುಪ್ಕರ್ ಮೈತ್ರಿಕೂಟ ಸ್ಪಷ್ಟ ಮೇಲುಗೈ ಸಾಧಿಸಿದೆ. ಒಟ್ಟು 280 ಡಿಡಿಸಿ ಸ್ಥಾನಗಳ ಪೈಕಿ ಗುಪ್ಕರ್ ಮೈತ್ರಿಕೂಟದ ಪಕ್ಷಗಳು 112 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. 280 ಸ್ಥಾನಗಳ ಪೈಕಿ ಬಿಜೆಪಿಯೊಂದೇ 74 ಸ್ಥಾನಗಳನ್ನ ಜಯಿಸಿ ಮೊದಲನೇ ಸ್ಥಾನದಲ್ಲಿದ್ದರೇ, ಜಮ್ಮುಕಾಶ್ಮೀರ ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷ 67 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಗುಪ್ಕರ್ ಮೈತ್ರಿಕೂಟದ ಭಾಗವಾಗಿರುವ ಪಿಡಿಪಿ 27 ಸ್ಥಾನಗಳನ್ನ ಗೆದ್ದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇನ್ನು, ಸ್ವತಂತ್ರ ಅಭ್ಯರ್ಥಿಗಳು 49 ಸ್ಥಾನಗಳನ್ನು ಗೆಲ್ಲುವ ಮೂಲಕ ಯಾವುದೇ ಪಕ್ಷವಾದರೂ ಅಧಿಕಾರ ಹಿಡಿಯಲು ಇವರ ಸಹಾಯ ಕೇಳುವ ಪರಿಸ್ಥಿತಿ ನಿರ್ಮಿಸಿದ್ದಾರೆ. ಮೆಹಬೂಬಾ ಮುಫ್ತಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ 27 ಸ್ಥಾನ ಗಳಿಸಿದೆ. ಇನ್ನೊಂದೆಡೆ ಕಾಂಗ್ರೆಸ್ 26 ಸ್ಥಾನ ಗೆದ್ದರೆ, ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಕ್ಷಕ್ಕೆ 12 ಸ್ಥಾನಗಳು ಸಿಕ್ಕಿವೆ. ಸಿಪಿಐ(ಎಂ) 6 ಸ್ಥಾನ ಗೆದ್ದಿದೆ. ಪೀಪಲ್ಸ್ ಕಾನ್ಫರೆನ್ಸ್ 5 ಸ್ಥಾನ, ಜೆಕೆಪಿಎಂಗೆ 3 ಸ್ಥಾನ, ನ್ಯಾಷನಲ್ ಪ್ಯಾಂಥರ್ಸ್ ಪಕ್ಷಕ್ಕೆ 2 ಸ್ಥಾನ, ಪಿಡಿಎಫ್ ಮತ್ತು ಬಿಎಸ್‌ಪಿಗೆ ತಲಾ ಒಂದು ಸ್ಥಾನ ಸಿಕ್ಕಿದೆ.
ಬಿಜೆಪಿ ಜಮ್ಮು ಮತ್ತು ಉಧಂಪುರ್ ಜಿಲ್ಲೆಗಳಲ್ಲಿ ತಲಾ 11, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ತಲಾ 13 ಸ್ಥಾನಗಳನ್ನು ಗೆದ್ದಿದೆ. ರಿಯಾಸಿಯಲ್ಲಿ ಬಿಜೆಪಿ 7 ಸ್ಥಾನಗಳನ್ನು, ದೋಡಾದಲ್ಲಿ 8 ಸ್ಥಾನಗಳನ್ನು ಗಳಿಸಿತು. ಸ್ವತಂತ್ರರು 8 ಸ್ಥಾನಗಳಲ್ಲಿ ಬಹುಮತ ಪಡೆದ ಏಕೈಕ ಜಿಲ್ಲೆ ಪೂಂಚ್. ರಜೌರಿ ಮತ್ತು ರಾಂಬನ್ ಜಿಲ್ಲೆಗಳಿಂದ ಬಿಜೆಪಿಗೆ ತಲಾ ಮೂರು ಸ್ಥಾನಗಳು ದೊರೆತಿವೆ.
ಜಮ್ಮು ವಲಯದಲ್ಲಿ ಅಂದರೆ ಉಧಂಪುರ್, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಬಿಜೆಪಿ ಸ್ಪಷ್ಟ ಗೆಲುವು ಪಡೆದಿದೆ. ಕಾಶ್ಮೀರದಲ್ಲೂ ಬಿಜೆಪಿ ತಕ್ಕ ಮಟ್ಟಿಗೆ ಪೈಪೋಟಿ ನೀಡಿದೆ. ಗುಪ್ಕರ್ ಜನತಾ ಮೈತ್ರಿಕೂಟ ಕಾಶ್ಮೀರದ 9 ಡಿಡಿಸಿಗಳನ್ನ ಜಯಿಸಿದೆ. ಒಟ್ಟಾರೆ 49 ಸ್ಥಾನಗಳನ್ನ ಗೆದ್ದಿರುವ ಪಕ್ಷೇತರರು 5 ಅತಂತ್ರ ಡಿಡಿಸಿಗಳಲ್ಲಿ ಕಿಂಗ್ ಮೇಕರ್ಸ್ ಆಗಲಿದ್ದಾರೆ.
ಗುಪ್ಕರ್ ಮೈತ್ರಿಕೂಟ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳು ಈ ಫಲಿತಾಂಶವನ್ನ ಸ್ವಾಗತಿಸಿವೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಸಂದ ಜಯ ಎಂದು ಬಣ್ಣಿಸಿವೆ. ಈ ಫಲಿತಾಂಶವು ಕೇಂದ್ರದ 370ನೇ ವಿಧಿ ರದ್ದತಿ ಕ್ರಮದ ವಿರುದ್ಧವಾಗಿ ಬಂದ ಜನತಾ ತೀರ್ಪು ಎಂದು ಜನತಾ ಮೈತ್ರಿಕೂಟ ಅಭಿಪ್ರಾಯಪಟ್ಟಿದೆ. ಕಾಂಗ್ರೆಸ್ ಕೂಡ ಇದೇ ಅನಿಸಿಕೆ ವ್ಯಕ್ತಪಡಿಸಿದೆ.
ಜಮ್ಮು-ಕಾಶ್ಮೀರದ ಜನರು ಗುಪ್ಕರ್ ಮೈತ್ರಿಗೆ ಜನ ಬೆಂಬಲ ನೀಡಿದ್ದಾರೆ ಎಂದು ಮಾಜಿ ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಕೇಂದ್ರ ಸರ್ಕಾರದ ತಮಗೆ ನಿರಂತರ ತೊಂದರೆ ನೀಡುತ್ತಿರುವಾಗ ಜನ ತಮಗೆ ಮತ ಹಾಕಿರುವುದು ಬಲ ತುಂಬಿದಂತಾಗಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ತಿಳಿಸಿದ್ದಾರೆ.
ಫಲಿತಾಂಶ ಘೋಷಿತ ಸ್ಥಾನಗಳು: 276
ಬಿಜೆಪಿ: 74
ನ್ಯಾಷನಲ್ ಕಾನ್ಫೆರೆನ್ಸ್: 67
ಪಿಡಿಪಿ: 27
ಕಾಂಗ್ರೆಸ್: 26
ಅಪ್ನಿ ಪಾರ್ಟಿ: 12
ಜೆಕೆಪಿಸಿ: 8
ಸಿಪಿಐ(ಎಂ): 5
ಜೆಕೆಪಿಎಂ: 3
ಪಿಡಿಎಫ್ 2
ಜೆಕೆಎನ್ಪಿಪಿ: 2
ಬಿಎಸ್ಪಿ: 1
ಪಕ್ಷೇತರರು: 49













