ಕರೋನಾ ಸೋಂಕಿತರಲ್ಲಿ ಕೇವಲ ತೀವ್ರ ರೋಗ ಲಕ್ಷಣವಿರುವ ಶೇ.20ರಷ್ಟು ಮಂದಿಗೆ ಮಾತ್ರ ಆಸ್ಪತ್ರೆಯ ವಿಶೇಷ ಚಿಕಿತ್ಸೆ ಬೇಕಾಗುತ್ತದೆ. ಉಳಿದಂತೆ ಶೇ.80ರಷ್ಟು ಸೋಂಕಿತರು ಸಾಮಾನ್ಯವಾಗಿ ಮನೆಯಲ್ಲಿ ಪ್ರತ್ಯೇಕವಾಗಿದ್ದುಕೊಂಡೇ ಸಾಮಾನ್ಯ ಮಾತ್ರೆ-ಔಷಧಗಳ ಮೂಲಕವೇ ಗುಣಮುಖರಾಗುತ್ತಾರೆ ಎಂದು ವೈದ್ಯಕೀಯ ಲೋಕದ ತಜ್ಞರು ಹೇಳುತ್ತಲೇ ಇದ್ದಾರೆ. ಆದರೂ ಸರ್ಕಾರ ಮತ್ತು ಮಾಧ್ಯಮಗಳು ಕರೋನಾ ಸೋಂಕು ದೃಢವಾಗುತ್ತಿದ್ದಂತೆ ಬದುಕೇ ಮುಗಿದು ಹೋಯಿತು ಎಂಬಂತೆ ಹುಲಿಲೆಬ್ಬಿಸುತ್ತಲೇ ಇವೆ.
ಸೋಂಕು ಆರಂಭದಲ್ಲಿ ಇದ್ದ ವೈರಾಣು ಕುರಿತ ಮಾಹಿತಿ ಕೊರತೆ ಮತ್ತು ಸೋಂಕಿನ ತೀವ್ರತೆ ಕುರಿತ ತಪ್ಪುಗ್ರಹಿಕೆಗಳಿಂದಾಗಿ ಸಹಜವಾಗೇ ಸೋಂಕು ದೃಢಪಡುತ್ತಿದ್ದಂತೆ ಆತಂಕ ಮತ್ತು ಸಾವಿನ ಭಯ ಕಾಡುತ್ತಿತ್ತು. ಆದರೆ, ಇದೀಗ ಈ ಆರು ತಿಂಗಳಲ್ಲಿ ಜಗತ್ತಿನಾದ್ಯಂತ ನಡೆದಿರುವ ಅಧ್ಯಯನಗಳು ಹಲವು ಮಹತ್ವದ ಸಂಗತಿಗಳನ್ನು ಹೊರಗೆಡವಿದ್ದು, ಪ್ರಮುಖವಾಗಿ ರೋಗಲಕ್ಷಣಗಳೇ ಇಲ್ಲದ ಸೋಂಕಿತರಿಗೆ ಬಹುತೇಕ ತಾನೇ ತಾನಾಗಿ ಸೋಂಕು ವಾಸಿಯಾಗುತ್ತದೆ. ರೋಗ ಲಕ್ಷಣವುಳ್ಳವರಲ್ಲೂ ಬಹುತೇಕ ಮಂದಿಗೆ ಮನೆಯಲ್ಲಿಯೇ ಸೂಕ್ತ ವೈದ್ಯರ ಮೇಲ್ವಿಚಾರಣೆಯಲ್ಲಿ ಔಷಧ ಪಡೆದು ಗುಣಮುಖರಾಗುವ ಸಾಧ್ಯತೆ ಇರುವವರೇ ಹೆಚ್ಚು. ಹಾಗಾಗಿ ಸೋಂಕಿತರ ಪೈಕಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತಹವರ ಪ್ರಮಾಣ ಶೇ.20ರಷ್ಟು ಮಾತ್ರ ಎಂದು ಹೇಳಲಾಗುತ್ತಿದೆ.
ಆದರೆ, ಕರೋನಾ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟ ಎಲ್ಲರನ್ನು; ಅವರ ವಯೋಮಾನ, ಅಪಾಯಕಾರಿ ರೋಗ ಮುಂತಾದ ದೈಹಿಕ ಲಕ್ಷಣಗಳನ್ನು ಒಳಗೊಂಡಂತೆ ಯಾವ ಅಂಶಗಳನ್ನೂ ಪರಿಗಣಿಸದೆ , ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿ, ಕನಿಷ್ಟ ಹದಿನೈದಿ ದಿನದಿಂದ ತಿಂಗಳುಗಳವರ ಚಿಕಿತ್ಸೆ ನೀಡಿ ಹೊರಬಿಡುತ್ತಿರುವ ವಾಡಿಕೆ ಮುಂದುವರಿದಿದೆ. ಹಾಗಾಗಿ ನಿಗದಿತ ಆಸ್ಪತ್ರೆಗಳಲ್ಲಿ ಈಗ ಹಾಸಿಗೆ, ಕೋಣೆ, ವೈದ್ಯಕೀಯ ಸಿಬ್ಬಂದಿ, ಸಲಕರಣೆ ಸೇರಿದಂತೆ ಎಲ್ಲವೂ ಕೊರತೆಯಾಗಿದ್ದು, ದೇಶಾದ್ಯಂತ ಗಂಭೀರ ಪರಿಸ್ಥಿತಿಯಲ್ಲಿರುವವರಿಗೂ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಜೀವ ಬಿಡುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ನಡುವೆ ಸೋಂಕಿತ ಸಂಖ್ಯೆ ಹೆಚ್ಚಿತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಖಾಸಗೀ ಆಸ್ಪತ್ರೆಗಳಿಗೂ ರೋಗಿಗಳ ಚಿಕಿತ್ಸೆಗೆ ಅವಕಾಶ ನೀಡಿದ್ದು, ಖಾಸಗೀ ಆಸ್ಪತ್ರೆಗಳ ಬೇಡಿಕೆಯಂತೆ ಒಬ್ಬ ಕರೋನಾ ಸೋಂಕಿತನಿಗೆ ಚಿಕಿತ್ಸೆ ನೀಡಲು ಕನಿಷ್ಟ 3.5 ಲಕ್ಷ ರೂ. ದರವನ್ನು ಕೂಡ ನಿಗದಿ ಮಾಡಲಾಗಿದೆ.
ಆಡಳಿತ ವ್ಯವಸ್ಥೆಯ ವಿವೇಚನಾಹೀನ ನಡೆಯೊಂದಿಗೆ ಪ್ರಮುಖವಾಗಿ ಟಿವಿ ಮಾಧ್ಯಮಗಳ ಹುಯಿಲೆಬ್ಬಿಸುವ ಸುದ್ದಿಗಳೂ ಸೇರಿ ದೇಶದಲ್ಲಿ ಕರೋನಾ ಪಾಸಿಟಿವ್ ಎಂದರೆ ಜಿವನ ಮುಗಿದೇಹೋಯಿತು. ಆಸ್ಪತ್ರೆ, ಚಿಕಿತ್ಸೆ, ದುಬಾರಿ ವೆಚ್ಚ, ಕೊನೆಗೆ ಬದುಕುವ ಭರವಸೆ ಕೂಡ ಇಲ್ಲದ ಸ್ಥಿತಿ ಎಂಬುದು ಜನರಲ್ಲಿ ಸೋಂಕಿನ ಕುರಿತ ಆತಂಕ ಮತ್ತು ಉದ್ವೇಗಕ್ಕೆ ಕಾರಣವಾಗಿದೆ. ಜನಸಾಮಾನ್ಯರ ಈ ಆತಂಕವೇ ಇದೀಗ ಕರೋನಾ ಸೋಂಕನ್ನೇ ಸರ್ಕಾರಿ ವ್ಯವಸ್ಥೆ ಮತ್ತು ಖಾಸಗೀ ವೈದ್ಯಕೀಯ ವಲಯದ ಪಾಲಿನ ಭರ್ಜರಿ ಲಾಭದ ದಂಧೆಯಾಗಿ ಮಾಡಿದೆ.
ಸರ್ಕಾರಿ ವ್ಯವಸ್ಥೆಯ ಪಾಲಿಗೆ ಕರೋನಾ ಸೋಂಕು ಲಾಭದ ದಂಧೆ ಹೇಗೆ ಎಂಬುದಕ್ಕೆ ವೈದ್ಯಕೀಯ ಸುರಕ್ಷಾ ಸಾಧನಗಳಿಂದ ಆರಂಭವಾಗಿ ಆಸ್ಪತ್ರೆಗಳ ಸೌಕರ್ಯ, ವಾರ್ಡುಗಳ ನಿರ್ಮಾಣ, ಹಾಸಿಗೆ ಹೊದಿಕೆ, ದಿಂಬಿನಿಂದ ಆರಂಭವಾಗಿ ಶವಸಂಸ್ಕಾರದ ವರೆಗೆ ಬಳಕೆಯಾಗುವ ವಸ್ತುಗಳ ಖರೀದಿಯಲ್ಲಿ ಭಾರೀ ಅವ್ಯವಹಾರವಾಗಿರುವ ವರದಿಗಳು ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಕೇಳಿಬಂದಿವೆ. ಕರ್ನಾಟಕವೊಂದರಲ್ಲೇ ಕರೋನಾ ಚಿಕಿತ್ಸಾ ಮತ್ತು ರೋಗಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸುಮಾರು ಎರಡು ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರೆ ಸಮಿತಿಯ ಮುಂದೆ ಈ ಕುರಿತ ಪ್ರಕರಣ ವಿಚಾರಣೆ ನಡೆಯುತ್ತಿದೆ.
ಇನ್ನು ಯಾವಾಗ ಸರ್ಕಾರ ಖಾಸಗೀ ಲ್ಯಾಬ್ ಗಳಿಗೂ ಕರೋನಾ ವೈರಾಣು ಪರೀಕ್ಷೆಯ ಅನುಮತಿ ನೀಡಿತೋ ಆಗಲೇ ಖಾಸಗೀ ವೈದ್ಯಕೀಯ ವ್ಯವಸ್ಥೆಗೆ ಕರೋನಾ ಸೋಂಕು ಲಾಭದ ಭಾಗ್ಯದ ಬಾಗಿಲು ತೆರೆಯಿತು. ವೈರಾಣು ಪರೀಕ್ಷೆಯ ವಿಷಯವನ್ನೇ ತೆಗೆದುಕೊಂಡರೂ ಪರೀಕ್ಷಾ ಶುಲ್ಕ 4500 ರೂ ಮಿತಿಯಲ್ಲಿರಬೇಕು ಎಂದು ಆರಂಭದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿತ್ತು. ಆದರೆ, ನಂತರ ಒಂದೊಂದು ರಾಜ್ಯಗಳು ಒಂದೊಂದು ದರ ನಿಗದಿ ಮಾಡಿದ್ದರೂ, ಸರಿಸುಮಾರು 2500ದಿಂದ 5000 ಮಿತಿಯಲ್ಲಿದೆ. ಆದರೆ, ಇದು ಪ್ರಯೋಗಾಲಯಗಳು ಪ್ರತಿ ಪರೀಕ್ಷೆಗೆ ವಿಧಿಸುವ ದರ. ಆದರೆ, ಕರೋನಾ ಪರೀಕ್ಷೆಯ ಮಾದರಿಯನ್ನು ನೇರವಾಗಿ ಸೋಂಕಿತರೇ ನೀಡಲಾಗುವುದಿಲ್ಲ. ಹಾಗಾಗಿ ಗಂಟಲುದ್ರವದ ಮಾದರಿ ಸಂಗ್ರಹಿಸುವ ಆಸ್ಪತ್ರೆಗಳೇ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳಿಸಿ, ನಂತರ ವರದಿಯನ್ನು ಕೂಡ ಅವರೇ ಸೋಂಕಿತರಿಗೆ ನೀಡುತ್ತಾರೆ. ಹಾಗಾಗಿ ಖಾಸಗೀ ಆಸ್ಪತ್ರೆಗಳು ಈ ಅವಕಾಶ ಬಳಸಿಕೊಂಡು ಕೆಲವು ಕಡೆ, ಬರೋಬ್ಬರಿ 7000 ರೂ.ವರೆಗೆ ಪರೀಕ್ಷಾ ಶುಲ್ಕ ವಸೂಲಿ ಮಾಡಿದ ಉದಾಹರಣೆಗಳೂ ಇವೆ!
ಇನ್ನು ಸೋಂಕಿತರು ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು, ಕನಿಷ್ಟ 15 ದಿನಕ್ಕೆ ಸೋಂಕಿನ ತೀವ್ರತೆಗೆ ಅನುಗುಣವಾಗಿ ಅಗತ್ಯ ಚಿಕಿತ್ಸೆಗೆ ತಕ್ಕಂತೆ ನಿರ್ದಿಷ್ಟ ದರ ನಿಗದಿ ಮಾಡಿ ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯ ಸರ್ಕಾರಗಳು ಆದೇಶ ಹೊರಡಿಸಿವೆ. ಆದರೆ, ಆ ದರಗಳು ಕೇವಲ ಕೊಠಡಿ ಬಾಡಿಗೆಯನ್ನು ಮಾತ್ರ ಒಳಗೊಂಡಿದ್ದು, ಉಳಿದಂತೆ ವೈದ್ಯಕೀಯ ಸಿಬ್ಬಂದಿ ಧರಿಸುವ ಪಿಪಿಇ ಕಿಟ್, ಎನ್ 95 ಮಾಸ್ಕ್, ವೈದ್ಯರ ಶುಲ್ಕ ಮತ್ತಿತರ ಶುಲ್ಕಗಳು ಪ್ರತ್ಯೇಕ. ಹಾಗಾಗಿ ಒಬ್ಬ ಕರೋನಾ ಸೋಂಕಿತನನ್ನು ಸಂಪೂರ್ಣ ಗುಣಪಡಿಸಲು ಸರ್ಕಾರದ ಚಿಕಿತ್ಸಾ ವೆಚ್ಚ ಸರಿಸುಮಾರು 3.5ರಿಂದ 4.5 ಲಕ್ಷದ ಆಸುಪಾಸಿನಲ್ಲಿದ್ದರೆ, ಖಾಸಗೀ ಆಸ್ಪತ್ರೆಗಳಲ್ಲಿ ಆ ವೆಚ್ಚ ಕನಿಷ್ಟ 5ರಿಂದ 20ಲಕ್ಷದವರೆಗೆ ತಲುಪುತ್ತದೆ.
ಖಾಸಗೀ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಬಂದಿರುವ ಕೆಲವು ಸೋಂಕಿತರ ಗೋಳಿನ ಕಥೆಗಳು ಚಿಕಿತ್ಸಾ ವೆಚ್ಚ ಎಂಬುದು ಹೇಗೆ ಯಾವುದೇ ಸರ್ಕಾರಿ ನಿಯಂತ್ರಣವಿಲ್ಲದೆ, ಕೇವಲ ಖಾಸಗೀ ಆಸ್ಪತ್ರೆಗಳ ಮನಸೋಇಚ್ಛೆ ದುಡ್ಡು ಮಾಡುವ ದಂಧೆಯಾಗಿದೆ ಎಂಬುದನ್ನು ಸಾರಿ ಹೇಳುತ್ತವೆ.
ತಮಿಳುನಾಡಿನ ಕಾಂಪಿಪುರಂ ಜಿಲ್ಲೆಯ ಎಸ್ಆರ್ ಎಂ ನಗರದ ಎಸ್ ಆರ್ ಎಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ 38 ವರ್ಷದ ವ್ಯಕ್ತಿಯೊಬ್ಬರ ಚಿಕಿತ್ಸಾ ವೆಚ್ಚದ ಬಿಲ್ ಪ್ರಕಾರ, 16 ದಿನಗಳ ಅವಧಿಗೆ ಆತ ಒಟ್ಟು 3,55,595 ರೂಗಳನ್ನು ಪಾವತಿಸಿದ್ದಾನೆ. ಆ ಪೈಕಿ 2,40,000 ರೂ. ಕೇವಲ 120 ಪಿಪಿಇ ಕಿಟ್ ಗಳಿಗೆ ಮಾಡಿದ ವೆಚ್ಚ ಎಂದು ರಶೀದಿಯಲ್ಲಿ ತೋರಿಸಲಾಗಿದೆ! ಆ ಆಸ್ಪತ್ರೆ ತಲಾ ಪಿಪಿಇ ಕಿಟ್ ಗೆ 2000 ರೂ ದರ ನಿಗದಿ ಮಾಡಲಾಗಿದೆ. ವಾಸ್ತವವಾಗಿ ಆರಂಭದಲ್ಲಿ 350-450 ರೂ. ಆಸುಪಾಸಿನಲ್ಲಿ ಲಭ್ಯವಿದ್ದ ಪಿಪಿಇ ಕಿಟ್ ಬೆಲೆ ಸದ್ಯ 1000 ರೂ. ಆಸುಪಾಸಿನಲ್ಲಿದೆ. ಆಯಾ ಪ್ರದೇಶದ ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಬೆಲೆ ವ್ಯತ್ಯಾಸ ಇದೆ. ಆದರೆ, ತಲಾ 2000 ರೂ. ವಿಧಿಸುವಷ್ಟು ದುಬಾರಿಯಾಗಿಲ್ಲ ಎನ್ನಲಾಗುತ್ತಿದೆ.
ದೆಹಲಿಯ ಗಂಗಾ ರಾಮ್ ಆಸ್ಪತ್ರೆಯಲ್ಲಿ 60 ವರ್ಷದ ಸೋಂಕಿತರೊಬ್ಬರು 30 ದಿನಗಳ ಕಾಲ ಚಿಕಿತ್ಸೆ ಪಡೆದರು. ಆಸ್ಪತ್ರೆ ಅವರಿಗೆ ನೀಡಿದ 22 ಪುಟಗಳ ಬಿಲ್ ನೋಡಿ ಬಳಿಕ ಮನೆಮಂದಿ ಅವಕ್ಕಾದರು! ಬರೋಬ್ಬರಿ 16,14,596 ರೂ. ಮೊತ್ತದ ಆ ಬಿಲ್ ನಲ್ಲಿ ಮತ್ತಷ್ಟು ಆಘಾತಕಾರಿಯಾದ ಸಂಗತಿ ಎಂದರೆ, ದಿನವೊಂದಕ್ಕೆ ಕೇವಲ ಪಿಪಿಇ ಕಿಟ್ ಗಾಗಿಯೇ ಭರ್ಜರಿ 10 ಸಾವಿರ ರೂ, ವೆಚ್ಚ ವಿಧಿಸಲಾಗಿತ್ತು. ಒಟ್ಟ 16 ಲಕ್ಷದ ಪೈಕಿ ಬರೋಬ್ಬರಿ 2 ಲಕ್ಷದ 90 ಸಾವಿರ ರೂಪಾಯಿ ಕೇವಲ ಪಿಪಿಇಗೇ ಆ ಕುಟುಂಬ ತೆರಬೇಕಾಯಿತು!
ಸಾಮಾನ್ಯ ಜನ ಬಳಕೆಯ ಮಾಸ್ಕ್, ಸ್ಯಾನಿಟೈಸರ್, ಪರೀಕ್ಷಾ ಕಿಟ್ ಗಳ ಮೇಲೆ ಸರ್ಕಾರದ ಬೆಲೆ ನಿಗದಿಯ ನಿರ್ಬಂಧವಿದೆ. ಆದರೆ, ಪ್ರಮುಖವಾಗಿ ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ರೋಗಿಗಳ ಪಾಲಿಗೆ ಅತಿ ದುಬಾರಿಯಾಗಿರುವ ಮತ್ತು ಖಾಸಗೀ ಆಸ್ಪತ್ರೆಗಳಿಗೆ ಹಣ ಸುಲಿಗೆಯ ದಾರಿಯಾಗಿರುವ ಪಿಪಿಇ ಕಿಟ್, ಎನ್ 95 ಮಾಸ್ಕ್ ಮತ್ತಿತರ ಕೆಲವು ಸಲಕರಣೆಗಳ ದರದ ಮೇಲೆ ಯಾವುದೇ ನಿರ್ಬಂಧವಾಗಲೀ, ಬೆಲೆ ನಿಗದಿಯನ್ನಾಗಲೀ ಮಾಡಲೇ ಇಲ್ಲ.
ಹಾಗಾಗಿ ಹಲವು ಆಸ್ಪತ್ರೆಗಳಿಗೆ ಕೋವಿಡ್ ಸೋಂಕು ಲಾಭದ ಅವಕಾಶವಾಗಿ ಒದಗಿಬರಲು ಪ್ರಮುಖವಾಗಿ ಪಿಪಿಇ ಕಿಟ್, ಎನ್95 ಮಾಸ್ಕ ಮತ್ತು ಐಸಿಯು ಮತ್ತು ಐಸೋಲೇಷನ್ ವಾರ್ಡು ದರಗಳೇ ಕಾರಣವಾಗಿವೆ. ದೆಹಲಿಯಂತಹದ್ದೇ ಮತ್ತೊಂದು ಪ್ರಕರಣದಲ್ಲಿ ಮುಂಬೈನ ನಾನಾವತಿ ಆಸ್ಪತ್ರೆಗೆ ಸುಮಾರು 74 ವರ್ಷದ ವಯೋವೃದ್ಧರೊಬ್ಬರು ದಾಖಲಾಗಿದ್ದರು. ಸೋಂಕು ತೀವ್ರಗೊಂಡ ಹಿನ್ನೆಲೆಯಲ್ಲಿಆಸ್ಪತ್ರೆಗೆ ದಾಖಲಾಗಿ ಕೇವಲ 13 ದಿನದಲ್ಲೇ ಸಾವುಕಂಡರು. ಆದರೆ, ಅವರ ಕುಟುಂಬಕ್ಕೆ ಸಿಕ್ಕ ಆಸ್ಪತ್ರೆ ಬಿಲ್ ಬರೋಬ್ಬರಿ 16,44,714 ರೂ! ಆ ಪೈಕಿ ಸುಮಾರು 1,15,000 ರೂಗಳನ್ನು ಕೇವಲ ಪಿಪಿಇ ವೆಚ್ಚವೆಂದು ನಮೂದಿಸಲಾಗಿತ್ತು!
ಕೋವಿಡ್ ರೋಗಿಗಳ ಆಸ್ಪತ್ರೆ ಬಿಲ್ಲುಗಳಲ್ಲಿ ಹೀಗೆ ಬಹುಪಾಲು ವೆಚ್ಚವನ್ನು ನುಂಗುತ್ತಿರುವ ಈ ಪಿಪಿಇ ಕಿಟ್ಗಳ ದರ ಕಳೆದ ಎರಡು ತಿಂಗಳಲ್ಲಿ ಏರಿರುವ ಪರಿ ಗ್ರಹಿಸಿದರೆ, ಬಹುಶಃ ಕರೋನಾ ಸೋಂಕು ಎಂಬುದು ವೈದ್ಯಕೀಯ ವಲಯದ ಪಾಲಿಗೆ ಎಂತಹ ಹಣದ ಥೈಲಿಯನ್ನೇ ಹರಿಸುತ್ತಿದೆ ಎಂಬುದರ ಅಂದಾಜು ಸಿಗದೇ ಇರದು. ಏಕೆಂದರೆ ಸಾಮಾನ್ಯವಾಗಿ ಕರೋನಾ ರೋಗಿಗಳ ಆಸ್ಪತ್ರೆ ಬಿಲ್ಲುಗಳೇ ಹೇಳುವಂತೆ ಶೇ. 50-60ರಷ್ಟು ವೆಚ್ಚ ಈ ಪಿಪಿಇ ಕಿಟ್ಗಳಿಗೇ ಆಗುತ್ತಿದೆ. ಇನ್ನುಳಿದ ಮೊತ್ತ ಆಸ್ಪತ್ರೆಯ ವೈದ್ಯರ ವೆಚ್ಚ, ನರ್ಸ್ ಸೇವಾ ವೆಚ್ಚ, ಐಸಿಯು ಅಥವಾ ಐಸೋಲೇಷನ್ ಕೊಠಡಿ ವೆಚ್ಚ ಒಳಗೊಂಡಿರುತ್ತದೆ. ವಾಸ್ತವಿಕ ಔಷಧ, ಮಾತ್ರೆಯ ವೆಚ್ಚವಂತೂ ತೀರಾ ಕಡಿಮೆ!
ವಾಸ್ತವಾಗಿ ಕೇವಲ ಮೂರು ತಿಂಗಳ ಹಿಂದೆ, ಕರೋನಾ ಆರಂಭದ ಹೊತ್ತಲ್ಲಿ ಪಿಪಿಇ ಕಿಟ್ ದರ ಕೇವಲ 350-400 ರೂ ಆಸುಪಾಸಿನಲ್ಲಿತ್ತು! ಮಾರ್ಚ್ ತಿಂಗಳಿನಲ್ಲಿ ತಮಿಳುನಾಡು ಸರ್ಕಾರ ಖಾಸಗೀ ಸರಬರಾಜುದಾರರಿಂದ ಪಿಪಿಇ ಖರೀದಿಸಿದ ದರ ತಲಾ ಪಿಪಿಇಗೆ ಕೇವಲ 362 ರೂ. ನಷ್ಟು ದರದಲ್ಲಿ! ಅದೂ ಎನ್ 95 ಮಾಸ್ಕ್ ಮತ್ತು ತ್ರಿ ಮಡಿಕೆ ಮಾಸ್ಕ್ ಸೇರಿ!
ಕೋವಿಡ್ ವೈರಾಣುವಿನಿಂದ ರಕ್ಷಣೆ ಪಡೆಯಲು ವೈದ್ಯರು, ನರ್ಸ್, ಸಹಾಯಕರು, ಸ್ವಚ್ಛತಾ ಕೆಲಸಗಾರರು, ಶವ ನಿರ್ವಹಣೆ ಮಾಡುವವರು ಸೇರಿದಂತೆ ಹಲವರು ಈ ಪಿಪಿಇ ಕಿಟ್ ಧರಿಸುವುದು ಕಡ್ಡಾಯ. ಇಂತಹ ಅತ್ಯವಶ್ಯ ವಸ್ತುವಿನ ಬೆಲೆಯ ಮೇಲೆ ಸರ್ಕಾರ ಈವರೆಗೆ ಮಿತಿ ಹೇರಿಲ್ಲ ಎಂಬುದು ಕೂಡ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಸರ್ಕಾರದ ಯಾವುದೇ ನಿಯಂತ್ರಣವಿಲ್ಲದೆ ಸಂಪೂರ್ಣ ಉತ್ಪಾದಕರು, ಸರಬರಾಜುದಾರರು ಮತ್ತು ಅಂತಿಮವಾಗಿ ಬಳಕೆದಾರ ಆಸ್ಪತ್ರೆಗಳು ತಮಗೆ ಮನಸ್ಸಿಗೆ ಬಂದಷ್ಟು ದರ ವಿಧಿಸುವುದೇ ವಾಡಿಕೆಯಾಗಿದೆ. ಈ ನಡುವೆ ಗಮನಿಸಬೇಕಾದ ಸಂಗತಿ ಎಂದರೆ, ಪಿಪಿಇ ಕಿಟ್ ಮತ್ತು ಎನ್ 95 ಮಾಸ್ಕುಗಳ ಗುಣಮಟ್ಟ ಕಳಪೆಯಾಗಿದೆ ಅಥವಾ ಕೊರತೆ ಎಂದು ಹಲವೆಡೆ ಸರ್ಕಾರಿ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ, ಹೇಳಿಕೆಗಳನ್ನು ನೀಡಿದ್ದಾರೆ ವಿನಃ ಖಾಸಗೀ ವಲಯದಲ್ಲಿ ಇಂತಹ ಯಾವ ಕೂಗೂ ಕೇಳಿಬಂದಿಲ್ಲ!
ಇಷ್ಟೆಲ್ಲಾ ಗಮನಿಸಿದ ಮೇಲೆ, ಈಗ ಕರೋನಾ ಸೋಂಕಿತರ ವಿಷಯದಲ್ಲಿ ಹುಯಿಲೆಬ್ಬಿಸುತ್ತಿರುವ ಮಾಧ್ಯಮ ಮತ್ತು ಪಾಸಿಟಿವ್ ಬಂದವರನ್ನೆಲ್ಲಾ, ಸೋಂಕಿನ ತೀವ್ರತೆ ಮತ್ತಿರರ ಯಾವ ಸಂಗತಿಯನ್ನೂ ಪರಿಗಣಿಸದೆ ಸೀದಾ ಆಸ್ಪತ್ರೆಗೆ ದಾಖಲಿಸುತ್ತಿರುವ ಆಡಳಿತಗಳ ವರಸೆಯ ಹಿಂದಿನ ಭಾರೀ ವಹಿವಾಟಿನ, ದಂಧೆಯ ಮಾಯಾಜಾಲದ ಅರಿವು ಕಿಂಚಿತ್ತಾದರೂ ಆಗಿರಬಹುದಲ್ಲವೆ?