ಕರೋನಾ ಹೊಡೆತಕ್ಕೆ ಜಗತ್ತಿನ ಜಂಘಾಬಲವೇ ಹುದುಗಿಹೋಗಿರುವುದರ ನಡುವೆಯೂ ದೇಶದ ಹಣಕಾಸು ಸ್ಥಿತಿ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಭಾರೀ ಆಶಾಭಾವ ವ್ಯಕ್ತಪಡಿಸಿದ್ದಾರೆ. ಮಕಾಡೆ ಮಲಗಿರುವ ಭಾರತದ ಆರ್ಥಿಕತೆ ವರ್ಷವೊಂದರಲ್ಲೇ ಚೇತರಿಕೆ ಕಾಣಲಿದೆ ಎಂಬ ಚೇತೋಹಾರಿ ಮಾತನ್ನಾಡಿದ್ದಾರೆ. ಅವರು ಏಕಕಾಲಕ್ಕೆ ಭಾರತದ ಆರ್ಥಿಕತೆ ಬಗ್ಗೆ ಭರವಸೆಯನ್ನೂ ಮತ್ತು ಜಾಗತಿಕ ಹಣಕಾಸಿನ ಸ್ಥಿತಿ ಬಗ್ಗೆ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ.
ಕರೋನಾ ಕಷ್ಟ ಆರಂಭವಾಗಿ ಲಾಕ್‍ಡೌನ್ ಶುರುವಾದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ಶಕ್ತಿಕಾಂತ್ ದಾಸ್ ಅವರದು ಇದು ಎರಡನೇ ಸುದ್ದಿಗೋಷ್ಟಿ. ಮಹಾತ್ಮಾ ಗಾಂಧಿ ಅವರ ‘ಸಾವುಗಳ ನಡುವೆಯೂ ಜೀವನ ನಿರಂತವಾಗಿ ಸಾಗುತ್ತಿರುತ್ತದೆ’ ಎಂಬ ಹೇಳಿಕೆ ಮೂಲಕ ಮಾತು ಆರಂಭಿಸಿದರು. ಗಾಂಧಿ ಗುಡಿ ಕೈಗಾರಿಕೆಗಳ ಬಗ್ಗೆ ಮಾತನಾಡಿದ್ದರು. ಶಕ್ತಿಕಾಂತ್ ದಾಸ್ ಇವತ್ತು ದೇಶದ ಆರ್ಥಿಕತೆ ಸರಿದಾರಿಗೆ ಬರಲು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ಮತ್ತೆ ಪೂರ್ಣ ಪ್ರಮಾಣದಲ್ಲಿ ಕೆಲಸ ಶುರುಮಾಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ಜೊತೆಗೆ ಅದಕ್ಕಾಗಿ ರಿಸರ್ವ್ ಬ್ಯಾಂಕ್ 50 ಸಾವಿರ ಕೋಟಿ ರೂಪಾಯಿಗಳನ್ನು ನೆರವು ನೀಡುವುದಾಗಿ ಘೋಷಿಸಿದರು.

ಗಾಂಧಿ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಮಾತನಾಡಿದ್ದರು. ಸದ್ಯ ಬಹುತೇಕ ಎಲ್ಲಾ ರಾಜ್ಯಗಳೂ ಕರೋನಾ ಮತ್ತು ಲಾಕ್‍ಡೌನ್ ಪರಿಸ್ಥಿತಿ ಎದುರಿಸಲು ಆರ್ಥಿಕವಾಗಿ ಸಮರ್ಥವಾಗಿಲ್ಲದೆ ಪರಿತಪಿಸುತ್ತಿವೆ. ಕೇಂದ್ರ ಸರ್ಕಾರವನ್ನು ಬೇಡಿಕೊಳ್ಳುತ್ತಿವೆ. ಕರೋನಾ ಅಥವಾ ಲಾಕ್‍ಡೌನ್ ಪರಿಸ್ಥಿತಿ ನಿರ್ವಹಣೆಗೆಂದುವಿಶೇಷವಾಗಿ ಕೊಡಬೇಡಿ, ಕಡೆಪಕ್ಷ ಬಾಕಿ ಉಳಿಸಿಕೊಂಡಿರುವ ಜಿಎಸ್‍ಟಿ ಕಾಂಪನ್ಷೇಷನ್, ನರೇಗಾ ಮತ್ತು ಎನ್‍ಡಿಆರ್‍ಎಫ್ ಹಣವನ್ನಾದರೂ ನೀಡಿ ಎಂದು ಕೇಳಿಕೊಳ್ಳುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಪರಿಸ್ಥಿತಿ ನಿರ್ವಹಣೆಗೆ ರಾಜ್ಯಗಳಿಗೆ ಹೆಚ್ಚಿನ ಹಣದ ಅಗತ್ಯವಿದೆ. ಕೇಂದ್ರ ಸರ್ಕಾರ ಸದ್ಯದ ಪರಿಸ್ಥಿತಿಯಲ್ಲಿ ಉದಾರವಾಗಿ ನಡೆದುಕೊಳ್ಳಬೇಕು ಎಂದೇ ಸಲಹೆ ನೀಡಿದ್ದಾರೆ. ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಕೇಂದ್ರ ಸರ್ಕಾರದ ಬಳಿ ಸಂಪನ್ಮೂಲ ಇದೆ, ಆದರದು ರಾಜ್ಯಗಳಿಗೆ ಬಿಡುಗಡೆ ಮಾಡತ್ತಿಲ್ಲ ಎಂದಿದ್ದಾರೆ. ಅವರುಗಳ ಹೇಳಿಕೆಗಳ ಹೊರತಾಗಿಯೂ ರಾಜ್ಯಗಳಲ್ಲಿ ಹಣ ಇಲ್ಲದಿರುವುದು ಮತ್ತು ಹೆಚ್ಚಿನ ಹಣದ ಅಗತ್ಯ ಇರುವುದು ಸುಳ್ಳಲ್ಲ. ಆದುದರಿಂದ ಕೇಂದ್ರ ಸರ್ಕಾರ ಹಣ ಕೊಡದಿದ್ದರೆ ರಾಜ್ಯಗಳು ಸಾಲದ ಮೊರೆ ಹೋಗಬೇಕಾಗುತ್ತದೆ. ಆದರೆ ಕೆಲವು ರಾಜ್ಯಗಳು ಈಗಾಗಲೇ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ ವಿಧಿಸಿರುವ ಮಿತಿಯ ಬಳಿ ಬಂದಾಗಿದೆ. ಅವುಗಳಿಗೆ ಹೊಸದಾಗಿ ಸಾಲಮಾಡುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಆದರೀಗ ಶಕ್ತಿಕಾಂತ್ ದಾಸ್ ರಾಜ್ಯಗಳ ಸಾಲ ಮಾಡುವ ಮಿತಿಯನ್ನು ಶೇಕಡ 30ರಿಂದ 60ಕ್ಕೆ ಏರಿಸಿದ್ದಾರೆ.
ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು, ಆರ್ಥಿಕ ನಿರ್ವಹಣೆಯನ್ನು ಸುಧಾರಿಸಲು 2003ರಲ್ಲಿ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ ತರಲಾಗಿತ್ತು. ಕಾಯಿದೆ ಪ್ರಕಾರ ರಾಜ್ಯದ ಸಾಲವು ರಾಜ್ಯದ ಒಟ್ಟಾರೆ ಬಜೆಟ್ ಗಾತ್ರದ ಶೇಕಡ 30ರಷ್ಟು ಮಾತ್ರವೇ ಇರಬೇಕು. ಆಗ ಕೆಲ ರಾಜ್ಯಗಳು ಎರ್ರಾಬಿರ್ರಿ ಸಾಲ ಮಾಡುತ್ತಿದ್ದುದನ್ನು ತಪ್ಪಿಸಲೆಂದೇ ಈ ಕಾಯಿದೆ ತರಲಾಗಿತ್ತು. ಈಗ ನಿಲುವನ್ನು ಸಡಿಲಿಸಲಾಗಿದೆ. ಸದ್ಯದ ಪರಿಸ್ಥಿತಿಗೆ ಇದು ಸರಿ ಎನಿಸಿದರೂ ಮುಂದೊಂದು ದಿನ ಮತ್ತೆ ಹಳೆ ಸಮಸ್ಯೆ ತಲೆದೂರಬಹುದು. ಆದುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ‘ಈ ವಿನಾಯಿತಿ’ ಸದ್ಯದ ಸಂಕಷ್ಟಕ್ಕೆ ಮಾತ್ರವೋ ಅಥವಾ ಶಾಶ್ವತವೋ ಎಂಬುದನ್ನೂ ತಿಳಿಸಬೇಕು.
ಲಾಕ್‍ಡೌನ್‍ನಿಂದಾಗಿ ಕೃಷಿ ಚಟುವಟಿಕೆ, ವ್ಯಾಪರ, ವಹಿವಾಟು, ಉತ್ಪಾದನೆಗಳು ಸ್ಥಗಿತಗೊಂಡಿವೆ. ಇದರಿಂದ ಹಣದ ಹರಿದಾಡುವಿಕೆ ಕೂಡ ಕುಂಠಿತವಾಗಿದೆ. ಇದನ್ನು ತಪ್ಪಿಸಲೆಂದು ರಿಸರ್ವ್ ಬ್ಯಾಂಕ್, ನಬಾರ್ಡ್‍ಗೆ 25 ಸಾವಿರ ಕೋಟಿ, ಎನ್‍ಎಚ್‍ಬಿಗೆ 10 ಸಾವಿರ ಕೋಟಿ ಮತ್ತು ಎಸ್‍ಐಡಿಬಿಐಗಳಿಗೆ 15 ಸಾವಿರ ಕೋಟಿ ರೂಪಾಯಿ ನೀಡಲು ನಿರ್ಧರಿಸಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ ಹಿಂದೆಯೇ ಹೇಳಿದ್ದಂತೆ ಜಾಗತಿಕ ಜಿಡಿಪಿ ತೀವ್ರವಾಗಿ ಕಿರಿದಾಗಿದೆ. ಜಾಗತಿಕವಾಗಿ 9 ಟ್ರಿಲಿಯನ್ ಡಾಲರ್ ಕುಸಿದಿದೆ. ಆದರೆ ಭಾರತದ ಜಿಡಿಪಿ ಕೇವಲ 1.9ರಷ್ಟು ಕೆಳಕ್ಕೆ ಬಿದ್ದಿದ್ದು 4.4ಕ್ಕೆ ಬಂದು ನಿಂತಿದೆ ಎಂದರು. ವಾಸ್ತವದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಈ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ 1.9ರಷ್ಟು ಕುಸಿಯಲಿದೆ ಎಂಬ ಸರಿಯಾದ ಮುನ್ನಂದಾಜನ್ನೇ ಮಾಡಿತ್ತು. ಅಲ್ಲದೆ ಇದು 2012-22ಕ್ಕೆ 7.4ಕ್ಕೆ ಏರಿಕೆಯಾಗಲಿದೆ ಎಂಬ ನಂಬಲು ತುಸು ಕಷ್ಟವಾಗುವಂತೆ ಹೇಳಿದರು. ಏಕೆಂದರೆ ವರ್ಷವೊಂದರಲ್ಲಿ ಸದ್ಯದ 4.4ರಿಂದ 7.8ಕ್ಕೆ ಜಿಡಿಪಿ ಏರಿಕೆ ಆಗುವುದು ಅಸಾಧಾರಣ ಬೆಳವಣಿಗೆ ವೇಳೆ ಮಾತ್ರ ಸಾಧ್ಯ. ಆದರೆ ಮುಂದಿನ ತ್ರೈಮಾಸಿಕದಲ್ಲಿ ಇರುವ ಜಿಡಿಪಿ ಕುಸಿಯದಿದ್ದರೆ ಸಾಕು ಎಂಬ ಪರಿಸ್ಥಿತಿ ಇರುವಾಗ ರಿಸರ್ವ್ ಬ್ಯಾಂಕ್ ಗೌರ್ನರ್ 7.8ರಷ್ಟು ಜಿಡಿಪಿ ಸಾಧಿಸುತ್ತೇವೆ ಎಂದು ಹೇಳಿರುವುದು ಆಶ್ಚರ್ಯಕರವಾಗಿದೆ.
ಮೂರು ರೀತಿಯಲ್ಲಿ ಹಣದ ಹರಿವನ್ನು ಹೆಚ್ಚಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ ಶಕ್ತಿಕಾಂತ್ ದಾಸ್, ಇವುಗಳಿಗೆ ಪೂರಕವಾಗಿ ಲಾಕ್‍ಡೌನ್ ನಡುವೆಯೂ ಬ್ಯಾಂಕಿಂಗ್ ಕ್ಷೇತ್ರ ಸಕ್ರೀಯವಾಗಿರಲಿದೆ. ಶೇಕಡ 91ರಷ್ಟು ಎಟಿಎಂಗಳು ಕೆಲಸ ಮಾಡಲಿವೆ. ಲಾಕ್‍ಡೌನ್‍ನಿಂದಾಗಿ ಉತ್ಪಾದನಾ ವಲಯ ಸಂರ್ಪೂವಾಗಿ ಕುಸಿತ ಕಂಡಿದೆ. ಇನ್ನೊಂದೆಡೆ 25ರಿಂದ 30ರಷ್ಟು ಬೇಡಿಕೆ ಕೂಡ ಕುಂಠಿತವಾಗಿದೆ. ದೇಶದ ಆರ್ಥಿಕತೆಗೆ ಶಕ್ತಿ ತುಂಬುವ ಉದ್ದೇಶದಿಂದ ರೆಪೋ ದರಗಳನ್ನು 75 ಬೇಸಿಸ್ ಪಾಯಿಂಟ್‍ಗಳಿಗೆ ಇಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿ ಮುಗಿಸುವ ಮುನ್ನ ದೇಶದ ಆರ್ಥಿಕತೆ ಮೇಲೆ ಆಗುತ್ತಿರುವ ಎಲ್ಲಾ ಪರಿಣಾಮಗಳ ಮೇಲೂ ರಿಸರ್ವ್ ಬ್ಯಾಂಕ್ ಕಣ್ಣಿರಿಸಿದ್ದು, ಅಗತ್ಯ ಇದ್ದರೆ ಮಧ್ಯಪ್ರವೇಶ ಮಾಡಲಾಗುವುದು ಎಂದು ಹೇಳಿದರು.