ತುಮಕೂರು ಜಿಲ್ಲೆಯ ಚೇಳೂರು ಗ್ರಾಮದಲ್ಲಿ ರ‌್ಯಾಗೋಡಿಡೆ ಕುಟುಂಬಕ್ಕೆ ಸೇರಿದ ರ‌್ಯಾಗೋಡಿಮಾ ಪ್ರಭೇದದ ಚೇಳು ಜೇಡವೊಂದು ಪತ್ತೆಯಾಗಿದೆ. (ಆಯಾ ಪ್ರದೇಶಕ್ಕೆ ಅನುಗುಣವಾಗಿ ಒಂಟೆ ಜೇಡ ಅಥವಾ ಸೂರ್ಯ ಜೇಡ ಹೆಸರುಗಳಿಂದಲು ಇದನ್ನು ಕರೆಯುತ್ತಾರೆ) ಚೇಳೂರು ಗ್ರಾಮದ ಪಕ್ಷಿ ಪ್ರೇಮಿ ಮಂಜುನಾಥ್ ಎಸ್ ಮತ್ತು ಸುನಿಲ್ ಕುಮಾರ್ ಮರಳಕುಂಟೆ ಇವರು ಪಕ್ಷಿ ವೀಕ್ಷಣೆ ಮಾಡುತ್ತಿರುವಾಗ ಈ ಸೊಲಿಫುಗೇ ಗೊಚರಿಸಿದ್ದು ಛಾಯಾಚಿತ್ರ ಸೆರೆ ಹಿಡಿದಿದ್ದಾರೆ.
ರ‌್ಯಾಗೋಡಿಮಾ ಸಂಪೂರ್ಣ ನಿಶಾಚರಿ ಜೀವಿಯಾಗಿದ್ದು ರಾತ್ರಿ ಸಮಯದಲ್ಲಿ ಚಟುವಟಿಕೆಯಿಂದ ಕೂಡಿರುತ್ತದೆ. ಹಗಲಿನಲ್ಲಿ ಗೊಚರಿಸುವುದು ತುಂಬಾ ವಿರಳ. ಸೊಲಿಫುಗೆಗಳು ನಮ್ಮ ದೇಶದ ಶುಷ್ಕ, ಮತ್ತು ಹುಲ್ಲುಗಾವಲಿನ ಕಾಡಿನಲ್ಲಿ ಹಂಚಿಕೆಯಾಗಿದ್ದರೂ ಗೋಚರಿಸುವುದು ತೀರಾ ವಿರಳ. ಇವುಗಳ ಹಂಚಿಕೆ ಮತ್ತು ಜೀವನ ಕ್ರಮದ ಬಗ್ಗೆ ಅಧ್ಯಯನ ಆಗಿರದ ಕಾರಣ ಇಲ್ಲಿವರೆಗೆ ದಾಖಲಾಗಿಲ್ಲ. ಕರ್ನಾಟದಲ್ಲಿ ಬೆಂಗಳೂರಿನ ಜಿ.ಕೆ.ವಿ.ಕೆ ಕ್ಯಾಂಪಸ್‍ನಲ್ಲಿ ಕೀಟಗಳ ಅಧ್ಯಯನ ತಂಡದ ಚಿನ್ಮಯ್ ಮಳಿಯೆ, ಹರ್ಶಿತ್, ಜಿತೇಶ್ ಮತ್ತು ಸನತ್ ಸಾಯಂಕಾಲದ ಸಮಯದಲ್ಲಿ ಕಳೆದ ತಿಂಗಳು ದಾಖಲಿಸಿದ್ದಾರೆ.

ಮಂಜುನಾಥ್ ಇವರು ದಾಖಲಿಸಿರುವ ಪ್ರಭೇದ 4.5 ಸೆ.ಮೀ ಇದ್ದು ನೋಡಗುರಲ್ಲಿ ಸ್ವಲ್ಲ ಭಯ ಹುಟ್ಟಿಸುವಂತೆ ಕಾಣುತ್ತದೆ. ಇದು ವಿಷಕಾರಿಯಲ್ಲ, ಮಾನವರಿಗೆ ಅಪಾಯಕಾರಿಯೂ ಅಲ್ಲ. ಇದರ ದೇಹರಚನೆಯು ಅರ್ಧ ಸ್ಯೂಡೋಸ್ಕಾರ್ಪಿಯನ್/ಹುಸಿ ಚೇಳಿನ ರೂಪ ಮತ್ತು ಜೇಡಗಳಂತೆ ಎಂಟು ಕಾಲಿನ ಜೋಡಣೆ ಹೊಂದಿರುವುದರಿಂದ ಇದನ್ನು ಚೇಳು ಜೇಡ ಎಂದು ಕರೆಯುತ್ತಾರೆ.
ಇದರ ಪ್ರಮುಖ ಆಹಾರ ಕೃಷಿಗೆ ಪೀಡಕವಾದ ಕೀಟಗಳು ಮತ್ತು ಸಹ ಅರಾಕ್ನಿಡ್‍ಗಳು. ಇವು ದ್ವಂಶಕಗಳಾದ ಇಲಿಗಳನ್ನು ಕೂಡಾ ಬೇಟೆ ಆಡಿ ತಿನ್ನಬಲ್ಲ ಸಾಮರ್ಥ್ಯ ಹೊಂದಿವೆ. ಶತಪದಿ, ಸಹಸ್ರಪದಿ ಮತ್ತು ಚೇಳುಗಳನ್ನು ಸಹ ತಿನ್ನುತ್ತವೆ.
ಭಾರತದಲ್ಲಿ ವಿಶೇಷವಾಗಿ (ಸೊಲಿಫುಗೆ) ಒಂಟೆ ಜೇಡಗಳ ಕುರಿತು ಅಧ್ಯಯನ ಬ್ರಿಟಿಷ್ ಕಾಲದಲ್ಲಿ ಆಗಿದ್ದು ಬಿಟ್ಟರೆ ಇವುಗಳ ಕುರಿತು ಹೆಚ್ಚಿನ ಅಧ್ಯಯನ ಆಗಿಲ್ಲ. ಪ್ರತಿ ಜೇಡಗಳಂತೆ ಈ ಪ್ರಭೇದದ ಜೇಡಗಳು ಕೂಡಾ ಅವು ಹಂಚಿಕೆಯಾಗಿರುವ ಪರಿಸರ ವ್ಯವಸ್ಥೆಯ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಇವುಗಳ ಅಧ್ಯಯನ ಮತ್ತು ಸಂರಕ್ಷಣೆ ಅವಶ್ಯವಾಗಿದೆ.











