ಭಾರತ ಹಾಗೂ ಚೀನಾ ಸೈನಿಕರ ನಡುವೆ ಲಡಾಖ್‌ನ ಗಲ್ವಾನ್ ಬಾರ್ಡರ್‌ನಲ್ಲಿ ಜೂನ್ 15ರ ರಾತ್ರಿ ಘರ್ಷಣೆ ಆಗಿತ್ತು. ಭಾರತೀಯ 20 ಮಂದಿ ವೀರ ಯೋಧರು ಹುತಾತ್ಮರಾಗಿದ್ದರು. ಆ ಬಳಿಕ 2 ದಿನಗಳ ಕಾಲ ಅಂದರೆ ಜೂನ್ 17ರ ರಾತ್ರಿ 10:15ಕ್ಕೆ ಪ್ರಧಾನಿ ನರೇಂದ್ರ ಮೋದಿ ತಮ್ಮ ವೈಯಕ್ತಿಕ ಟ್ವಿಟರ್ ಅಕೌಂಟ್‌ನಿಂದ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಆದರೆ ಭಾರತ ಪ್ರಧಾನಿ ( @PMOIndia ) ಅಕೌಂಟ್‌ನಿಂದ ಯಾವುದೇ ಸಂತಾಪದ ಸಂದೇಶ ಬರಲಿಲ್ಲ. ಇದೇ ಸಮಯವನ್ನು ಬಳಸಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಮೌನಕ್ಕೆ ಶರಣಾಗಿರುವುದು ಏಕೆ ಎಂದು ಕಠಿಣವಾಗಿ ಪ್ರಶನೆ ಮಾಡಿದ್ದರು. ನಿರಂತರವಾಗಿ ದಾಳಿ ಮಾಡಿದ ಬಳಿಕ ಮೌನ ಮುರಿದ ಪ್ರಧಾನಿ ನರೇಂದ್ರ ಮೋದಿ, ಸಂತಾಪ ಸೂಚಿಸಿವ ಮುನ್ನವೇ ಪ್ರಧಾನಿ ಅಧಿಕೃತ ಟ್ವಿಟರ್ ಅಕೌಂಟ್‌ನಿಂದ ಆಲ್ ಪಾರ್ಟಿ ಮೀಟಿಂಗ್ ಕರೆದಿರುವ ಬಗ್ಗೆ ಘೋಷಣೆ ಮಾಡಿದ್ದರು.
ಟ್ವೀಟ್‌ನಲ್ಲಿ ಹೇಳಿದಂತೆ ಜೂನ್ 19ರ ಸಂಜೆ 5 ಗಂಟೆಗೆ 15ಕ್ಕೂ ಹೆಚ್ಚು ಪಕ್ಷಗಳ ಮುಖ್ಯಸ್ಥರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಚೀನಾ ಹಾಗೂ ಭಾರತೀಯ ಸೇನೆ ನಡುವಿನ ಸಂಘರ್ಷದ ಬಗ್ಗೆ ಚರ್ಚೆ ನಡೆಸಿದರು. ದೇಶದ ಮುಂದಿನ ನಡೆ ಏನಾಗಿರಬೇಕು ಎನ್ನುವ ಬಗ್ಗೆ ಸಲಹೆ ಸೂಚನೆ ಪಡೆದರು. ಸರ್ವಪಕ್ಷಗಳ ಸಭೆ ಬಳಿಕ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿತ್ತು. ಆದರೆ ಏಕಾಏಕಿ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ ಎನ್ನುವ ಮೂಲಕ ಸುದ್ದಿಗೋಷ್ಠಿಗೆ ಬ್ರೇಕ್ ಬಿದ್ದಿತ್ತು. ಚೀನಾ ವಿರುದ್ಧ ಇಲ್ಲಿವರೆಗೂ ಏನನ್ನೂ ಮಾತನಾಡದೆ ಮೌನವಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಏನನ್ನು ಹೇಳಲಿದ್ದಾರೆ ಎನ್ನುವ ಬಗ್ಗೆ ಇಡೀ ದೇಶದ ಜನರು ಕುತೂಹಲದಿಂದ ಕಾದಿದ್ದರು.
ಚೀನಾದ ವಾದಕ್ಕೆ ಪೂರಕವಾದ ಹೇಳಿಕೆ ನೀಡಿದ ಭಾರತದ ಪ್ರಧಾನಿ
ಚೀನಾ ಕೀಟಲೆ ಬಗ್ಗೆ ತಡವಾಗಿ ಪ್ರತಿಕ್ರಿಯೆ ಕೊಟ್ಟಿದ್ದರೂ ಸರ್ವ ಪಕ್ಷಗಳ ಸಭೆ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ನಮ್ಮ ದೇಶದ ಭೂಭಾಗವನ್ನು ಯಾರೂ ಆಕ್ರಮಿಸಿಕೊಂಡಿಲ್ಲ. ನಮ್ಮ ದೇಶದ ಗಡಿಯೊಳಗೆ ಯಾರೂ ಬಂದಿಲ್ಲ ಬರುವುದಕ್ಕೆ ಬಿಡುವುದಿಲ್ಲ. ನಮ್ಮ ದೇಶದ ಸೈನಿಕರು ಸಮರ್ಥವಾಗಿ ಎದುರಿಸಿದ್ದಾರೆ. ಬಾಹ್ಯ ಒತ್ತಡಕ್ಕೆ ಭಾರತ ಯಾವತ್ತೂ ಒಳಗಾಗಲ್ಲ. ದೇಶದ ರಕ್ಷಣೆಗೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ನಮ್ಮ ದೇಶದ ಒಂದಿಂಚು ಭೂಮಿಯನ್ನೂ ಯಾರೂ ವಶಕ್ಕೆ ಪಡೆಯಲು ಬಿಡಲ್ಲ ಎಂದು ಘರ್ಜಿಸಿಸಿದ್ದರು. ಈ ಮಾತನ್ನು ಹೇಳುವಾಗ ಮಾತಿನ ಭರದಲ್ಲಿ ಚೀನಾ ದೇಶ ಭಾರತದ ಗಡಿಯೊಳಕ್ಕೆ ಪ್ರವೇಶ ಮಾಡಿಲ್ಲ. ಮಾಡಲು ಬಿಡುವುದಿಲ್ಲ ಎನ್ನುವ ಹೇಳಿಕೆ ಇದೀಗ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ಮಾತು ಚೀನಾ ದೇಶಕ್ಕೆ ಸಹಕಾರಿಯೂ ಆದಂತಾಗಿದೆ.
ಮೋದಿಯ ಒಂದು ಹೇಳಿಕೆ ಚೀನಾಗೆ ಸಾಧಕವಾಯಿತೇ?
ದೂರದರ್ಶನ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೇರಿದ ಎರಡು ಯೂಟ್ಯೂಬ್ ಚಾನೆಲ್‌ನಲ್ಲೂ ಪ್ರಧಾನಿ ಭಾಷಣವನ್ನು ನೇರ ಪ್ರಸಾರ ಮಾಡಲಾಗಿತ್ತು. ಆ ಬಳಿಕ ತಪ್ಪಿನ ಅರಿವಾಗಿ ಅಷ್ಟು ಭಾಗವನ್ನು ಮಾತ್ರ ಕತ್ತರಿಸಿ ಮತ್ತೊಮ್ಮೆ ಅಪ್‌ಲೋಡ್ ಮಾಡಲಾಗಿದೆ. ಅಂದರೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುವ ಭರದಲ್ಲಿ ದೇಶದ ಜನರನ್ನು ಸೆಳೆಯುವ ಉದ್ದೇಶದಿಂದ ಎದುರಾಳಿ ದೇಶಕ್ಕೆ ಸಹಕಾರಿಯಾಗುವಂತೆ ಮಾಡಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಭಾರತೀಯ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಎದುರಾಳಿಗಳನ್ನು ಸದೆ ಬಡಿಯಲು ಭಾರತೀಯ ಸೇನೆ ಸದಾ ಸಿದ್ಧವಾಗಿದೆ. ಆದರೆ ಜೂನ್ 15ರ ರಾತ್ರಿ ಚೀನಾ ದೇಶದ ಸೈನಿಕರು ನಮ್ಮ ದೇಶದ ಗಡಿಯೊಳಕ್ಕೆ ಪ್ರವೇಶ ಮಾಡಿಲ್ಲ ಎಂದಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ಭಾರತದ ನಿಲುವಿಗೆ ವಿರುದ್ಧವಾಗಿ ಕೊಟ್ಟ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿತ್ತು.
ಎರಡು ದಿನಗಳ ಹಿಂದಷ್ಟೇ, ವಿದೇಶಾಂಗ ಸಚಿವಾಲಯ ಚೀನಾ ಸೈನ್ಯ ವಾಸ್ತವಿಕ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಗಾಲ್ವಾನ್ ಕಣಿವೆ ಪ್ರವೇಶ ಮಾಡಿತ್ತು. ಜೊತೆಗೆ ಚೀನಾ ರಕ್ಷಣಾ ಪಡೆಗಳು ಫಿಂಗರ್ 8 ದಾಟಿಕೊಂಡು ಫಿಂಗರ್ 4 ಬಳಿಯ ಪಾಂಗೊಂಗ್ ತ್ಸೋ ಸರೋವರದ ಬಳಿಗೆ ಬಂದಿದ್ದವು ಎಂದು ಮಾಹಿತಿ ನೀಡಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಯಾರೂ ನಮ್ಮ ದೇಶದ ಗಡಿಯೊಳಕ್ಕೆ ಬಂದೇ ಇಲ್ಲ ಎಂದು ನೀಡಿದ ಹೇಳಿಕೆ ಅಸಂಬದ್ಧವಾಗಿತ್ತು. ಪ್ರಧಾನಿ ಮೋದಿ ಹೇಳಿಕೆಯನ್ನು ಚೀನಾದ ಸುದ್ದಿ ವಾಹಿನಿ ಸಿಜಿಟಿಎನ್‌ನ ಸುದ್ದಿ ನಿರ್ಮಾಪಕರೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದರು. ಅದಕ್ಕೊಂದು ಟ್ಯಾಗ್‌ಲೈನ್ ಹಾಕಿದ್ದ ಆತ “ಯಾರೂ ಒಳನುಗ್ಗಲಿಲ್ಲ” ಎಂಬುದರ ಜೊತೆಗೆ ಮೋದಿಯವರ ಭಾಷಣದ ತುಣುಕು ಸೇರಿಸಿದ್ದ.
“ನಾ ಕೋಯಿ ವಹನ್ ಹಮಾರಿ ಸೀಮಾ ಮೇ ಘಸ್ ಆಯಾ ಹೈ, ನಾ ಹಿ ಕೊಯಿ ಘುಸಾ ಹುವಾ ಹೈ, ನಾ ಹಿ ಹಮಾರಿ ಕೊಯಿ ಪೋಸ್ಟ್ ಕಿಸಿ ದುಸ್ರೆ ಕೆ ಕಬ್ಜೆ ಮೇ ಹೈನ್ ಅಂದರೆ “ನಮ್ಮ ಭೂಪ್ರದೇಶಕ್ಕೆ ಯಾರೂ ಒಳನುಗ್ಗಿಲ್ಲ, ನುಗ್ಗಲು ಬಿಡುವುದಿಲ್ಲ. ನಮ್ಮ ಯಾವುದೇ ಪೋಸ್ಟ್‌ಗಳನ್ನು ಅವರು ವಶಕ್ಕೆ ಪಡೆದಿಲ್ಲ” ಎಂದಿದ್ದರು. ಈ ಮಾತುಗಳೇ ಚೀನಾ ದೇಶಕ್ಕೆ ರಕ್ಷಣಾ ಕವಚದಂತಾಗುತ್ತೆ ಎಂದು ಯಾರೂ ಭಾವಿಸಿರಲಿಲ್ಲ. ಹಾಗಾಗಿ ಭಾರತದ ಮಾಧ್ಯಮಗಳಲ್ಲಿ ಬಾರೀ ಪ್ರಚಾರವೂ ಸಿಕ್ಕಿತ್ತು. ಆ ಪ್ರಚಾರವೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಳ್ಳಾಗಿದೆ. ಚೀನಾ ದೇಶದ ಸೈನಿಕರು ಭಾರತದ ಗಡಿಯೊಳಕ್ಕೆ ನುಗ್ಗಿಲ್ಲ, ನುಗ್ಗಲು ಬಿಡುವುದಿಲ್ಲ ಎಂದರೆ ಭಾರತದ ಸೈನಿಕರೇ ಚೀನಾ ಗಡಿಯೊಳಕ್ಕೆ ನುಗ್ಗಿದರೆ ಎನ್ನುವ ಪ್ರಶ್ನೆಯೂ ಉದ್ಬವ ಆಗುತ್ತದೆ.
ಇದೇ ವಿಚಾರವಾಗಿ ಮಾತನಾಡಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, “ನಮ್ಮ ರಾಷ್ಟ್ರದ ಭದ್ರತೆಯ ಮೇಲೆ ಪ್ರಧಾನಿಯ ಮಾತುಗಳು ಮತ್ತು ಘೋಷಣೆಗಳು ಬೀರುವ ಪರಿಣಾಮಗಳ ಬಗ್ಗೆ ಎಚ್ಚರವಿರಬೇಕು” ಎಂದಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಸರೆಂಡರ್ ಎಂದು ಟೀಕಿಸಿ ಟ್ವೀಟ್ ಮಾಡಿದ್ದರು. ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಆಗಿದ್ದ ಶ್ಯಾಮ್ ಸರನ್ ಅವರು ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯ ಅಂಕಣದಲ್ಲಿ ಹೀಗೆ ಬರೆದಿದ್ದು, “ಗಡಿಯಲ್ಲಿ ಭಾರತದ ನಿಲುವಿನ ಬಗ್ಗೆ ಗೊಂದಲವನ್ನು ಸೃಷ್ಟಿಸಿವೆ ಮತ್ತು ಗಡಿ ಮಾತುಕತೆಗಳಲ್ಲಿ ನಮ್ಮ ಸ್ಥಾನವನ್ನು ಗಂಭೀರವಾಗಿ ರಾಜಿ ಮಾಡಿಕೊಳ್ಳಬಹುದು” ಎಂದಿದ್ದಾರೆ. ಚೀನಾದ ಮಾಧ್ಯಮ ಪ್ರಧಾನಿ ಭಾಷಣವನ್ನು ಸ್ವಾಗತಿಸಿವೆ ಎಂದು ದಿ ಹಿಂದೂ ಪತ್ರಿಕೆಯಲ್ಲಿ ವರದಿಯಾಗಿದೆ.