ಚೀನಾ, ಭಾರತ ನಡುವಿನ ಹಾವು-ಮುಂಗುಸಿ ಆಟ ಇಂದು ನಿನ್ನೆಯದ್ದಲ್ಲ. ದಶಕಗಳಿಂದಲೂ ಇದು ಮುಂದುವರೆಯುತ್ತಲೇ ಬಂದಿದೆ. ಅದರಲ್ಲೂ ಕರೋನಾ ಲಾಕ್ಡೌನ್ ಮಧ್ಯೆಯೂ ಲಡಾಖ್ ಕೇಂದ್ರಾಡಳಿತ ಪ್ರದೇಶದ ಗಡಿ ಬಳಿ ಅಕ್ರಮವಾಗಿ ಗಸ್ತು ಆರಂಭಿಸುವ ಮೂಲಕ ಚೀನಿ ಸೈನಿಕರು ಯುದ್ಧ ಸನ್ನಿವೇಶವನ್ನೇ ಸೃಷ್ಟಿಸಿದ್ದರು. ಇದಕ್ಕೆ ಖಡಕ್ ಪ್ರತಿಕ್ರಿಯೆ ಅನ್ನೋ ಹಾಗೆ ಭಾರತವೂ ತಮ್ಮ ಯೋಧರನ್ನು ಗಡಿಯಲ್ಲಿ ಜಮಾಯಿಸಿತ್ತು. ಇದರಿಂದಾಗಿ ಎರಡೂ ಕಡೆಯಲ್ಲೂ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಅತ್ತ ಕರೋನಾ ಭೀತಿ ನಡುವೆ ಇತ್ತ ಚೀನಾ ಅನಗತ್ಯ ಯುದ್ಧ ಭೀತಿ ಸನ್ನವೇಶವನ್ನ ಸೃಷ್ಟಿ ಮಾಡಿತ್ತು.
ಇದರ ಬೆನ್ನಿಗೆ ದೇಶಾದ್ಯಂತ ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಂದೋಲನ ನಡೆಯಿತು. ಟಿಕ್ಟಾಕ್ ನಂತಹ ಜನಪ್ರಿಯ App ಗಳನ್ನ ಜನರು ತಮ್ಮ ಮೊಬೈಲ್ ನಿಂದಲೇ ಮುಕ್ತಿ ನೀಡಿ ʼದೇಶದ ಪರವಾಗಿದ್ದೀವಿʼ ಅಂತಾ ತೋರಿಸಿಕೊಟ್ಟರು. ಆದರೆ ದೇಶದಲ್ಲಿ ಚೀನಾ ವಸ್ತುಗಳ ಬಹಿಷ್ಕಾರವಾದರೂ, ಅಥವಾ ಚೀನಾ-ಭಾರತ ನಡುವೆ ಹೊಗೆಯಾಡುತ್ತಿರುವ ದ್ವೇಷವಿದ್ದರೂ ಅದು ಭಾರತದಲ್ಲಿ ತಲೆ ಎತ್ತಿ ನಿಂತಿರುವ ಚೀನಿ ಬ್ಯಾಂಕ್ ಗಳಿಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಗಡಿಯಲ್ಲಿ ಮುಖಾಮುಖಿಯಾಗುತ್ತಲೇ ಚೀನಾದ ಪೀಪಲ್ಸ್ ಬ್ಯಾಂಕ್ ಆಫ್ ಚೀನಾಗೆ ಭಾರತದಲ್ಲಿ ಕಾರ್ಯಾಚರಿಸಲು ನರೇಂದ್ರ ಮೋದಿ ಸರಕಾರ ಅವಕಾಶ ಮಾಡಿಕೊಟ್ಟಿದೆ.
2018 ರಲ್ಲಿ ಸಿಕ್ಕಿಂ ರಾಜ್ಯದ ಡೋಕ್ಲಾಂ ಬಳಿ ಗಡಿಯಲ್ಲಿ ಚೀನಾ ಹಾಗೂ ಭಾರತೀಯ ಸೈನಿಕರ ಮುಖಾಮುಖಿ ನಡೆದು ಉದ್ವಿಗ್ನ ಸ್ಥಿತಿ ಏರ್ಪಟ್ಟ ಸಮಯದಲ್ಲೂ ಭಾರತದಲ್ಲಿ ಬ್ಯಾಂಕ್ ಆಫ್ ಚೀನಾಕ್ಕೆ ಕಾರ್ಯಾಚರಿಸಲು ನರೇಂದ್ರ ಮೋದಿ ಸರಕಾರ ಅನುವು ಮಾಡಿಕೊಟ್ಟಿತ್ತು. ಈ ಬಾರಿ ಮತ್ತೆ ಕರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಸಮಯದಲ್ಲೂ ಲಡಾಕ್ ಗಡಿಯಲ್ಲಿ ಅನಗತ್ಯ ಕ್ಯಾತೆ ತೆಗೆದು ಕಾಲ್ಕೆರೆದು ಜಗಳಕ್ಕೆ ಮುಂದಾಗಿತ್ತು. ಇದಕ್ಕೆ ಭಾರತವೂ ತನ್ನದೇ ದಾಟಿಯಲ್ಲಿ ಉತ್ತರ ನೀಡುತ್ತಿದೆ. ಇನ್ನೊಂದೆಡೆ ದೇಶದೊಳಗೆ ಗಡಿ ವಿಷಮ ಸ್ಥಿತಿಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಚೀನಾ ದೇಶದ ವಸ್ತುಗಳನ್ನ ಬಹಿಷ್ಕರಿಸಲಾಗುತ್ತಿದೆ. ಆದರೆ ಈ ರೀತಿ ಚೀನಾ ವಸ್ತುಗಳನ್ನು ಬಹಿಷ್ಕರಿಸಿದ ಮಂದಿಯಲ್ಲಿ ಕೇವಲ ಕೆಲವೇ ಮಂದಿಗಷ್ಟೇ ಚೀನಾ ಬ್ಯಾಂಕ್ ಗಳಿಂದಾಗುವ ಸಂಭವೀಯ ಬೆದರಿಕೆ ಬಗ್ಗೆ ಅರಿತುಕೊಂಡಿದ್ದಾರೆ. 2019 ರಲ್ಲಿ 28.46 ಬಿಲಿಯನ್ ಯುಎಸ್ ಡಾಲರ್ ನಿವ್ವಳ ಲಾಭ ಪಡೆದಿದ್ದ ಬ್ಯಾಂಕ್ ಆಫ್ ಚೀನಾ, ಭಾರತದ ಖಾಸಗಿ ಬ್ಯಾಂಕ್ HDFC ಜೊತೆ 1% ಪಾಲನ್ನೂ ಹೊಂದಿದೆ. ಅಲ್ಲದೇ ಭಾರತೀಯ ಬ್ಯಾಂಕ್ ಗಳ ಜೊತೆಗೆ ಸಾಲವನ್ನೂ ಇದು ವಿಸ್ತರಿಸಿಕೊಂಡಿದೆ.
ಬ್ಯಾಂಕ್ ಆಫ್ ಚೀನಾವು ಭಾರತದಲ್ಲಿರುವ ಎರಡನೇ ಚೀನಾ ದೇಶದ ಬ್ಯಾಂಕ್ ಆಗಿದೆ. ಇದಕ್ಕೂ ಮೊದಲು 2011 ರಲ್ಲಿ ಇಂಡಸ್ಟ್ರಿಯಲ್ ಆಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ ಮುಂಬೈನಲ್ಲಿ ತನ್ನ ಶಾಖೆಯನ್ನ ತೆರೆದಿತ್ತು. ಆನಂತರ 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ದೇಶ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸರಣಿ ಮಾತುಕತೆ ಬಳಿಕ ಅನುಮತಿ ನೀಡಲಾಯಿತು.
2019 ರ ಆಗಸ್ಟ್ ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕ್ ಆಫ್ ಚೀನಾ ಸೇರಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 1934 ರ ಕಾಯ್ದೆ ಅನ್ವಯ ಭಾರತೀಯ ಇತರೆ ಕಮರ್ಷಿಯಲ್ ಬ್ಯಾಂಕ್ ಗಳಂತೆ ಸೇವೆ ನೀಡಲು ಅವಕಾಶ ಮಾಡಿಕೊಟ್ಟಿತು. ಚೀನಾದಲ್ಲಿ ಆರಂಭವಾದ ಕರೋನಾ ಆ ದೇಶವನ್ನ ಇಂಚಿಂಚಾಗಿ ಬಲಿ ಪಡೆಯುತ್ತಲೇ ಬಂದಿತ್ತು. ಆರ್ಥಿಕತೆ ಮೇಲೂ ಅಗಾಧ ಪರಿಣಾಮ ಬೀರಿತ್ತು. ಬ್ಯಾಂಕಿಂಗ್ ಕ್ಷೇತ್ರದ ಮೇಲೂ ದೊಡ್ಡ ಮಟ್ಟಿನ ನಷ್ಟ ಉಂಟು ಮಾಡಿತ್ತು. ದಶಕಗಳ ನಂತರ ಚೀನಾ ಬಹುದೊಡ್ಡ ಮೊತ್ತದ ವಸೂಲಾಗದ ಸಾಲದ ಸುಳಿಗೆ ತುತ್ತಾಗಿದೆ. ಹಾಗೂ ಅಮೆರಿಕಾ ಜೊತೆಗಿನ ವ್ಯಾವಹಾರಿಕ ಯುದ್ಧವೂ ಚೀನಾವನ್ನ ಇನ್ನಷ್ಟು ಕಂಗೆಡಿಸಿದೆ. S&P ರೇಟಿಂಗ್ಸ್ ಪ್ರಕಾರ, ಕರೋನಾ ವೈರಸ್ ನಿಂದಾಗಿ ಚೀನಾದಲ್ಲಿ ಸಾಲ ಮರುಪಾವತಿ ಆಗದೇ ಇರುವ ಮೊತ್ತವು ದ್ವಿಗುಣಗೊಳ್ಳುವ ಹಂತ ತಲುಪಿದೆ. ಅಂತಹ ಮೊತ್ತ 10 ಟ್ರಿಲಿಯನ್ ಯುವಾನ್ ಎಂದು ಎಂದು ಅಂದಾಜಿಸಲಾಗಿದೆ.
ಮಾಹಿತಿಯೊಂದರ ಪ್ರಕಾರ ಚೀನಾದಲ್ಲಿ 586 ಬ್ಯಾಂಕ್ ಗಳು ಹಾಗೂ ಶೇಕಡಾ 13 ರಷ್ಟು ಫೈನಾನ್ಸ್ ಸಂಸ್ಥೆಗಳು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ ಮತ್ತು ಕೆಲವೊಂದು ಈಗಾಗಲೇ ದಿವಾಳಿಗಳಾಗಿದ್ದಾಗಿ ಘೋಷಿಸಲಾಗಿದೆ. ಇಂತಹ ಸಮಯದಲ್ಲಿ ಚೀನಾ ವಸ್ತುಗಳನ್ನ ಬಹಿಷ್ಕರಿಸಬೇಕೆ? ಅಥವಾ ಬಹಿಷ್ಕಾರ ಕೇವಲ ಸರಕುಗಳಿಗಷ್ಟೇ ಸೀಮಿತವೇ? ಸೇವೆಗಳಿಗೆ ಅನ್ವಯಿಸುವುದಿಲ್ಲವೇ? ಇಂತಹ ಪ್ರಶ್ನೆಗಳು ಸಹಜವಾದುದು. ಚೀನಾ ಬ್ಯಾಂಕ್ಗಳಿಂದ ಭಾರತಕ್ಕೆ ಯಾವ ರೀತಿಯ ಬೆದರಿಕೆ ಇದೆ ಅನ್ನೋದರ ಬಗ್ಗೆಯೂ ಒಂದೊಮ್ಮೆ ಅಭ್ಯಸಿಸಬೇಕು.
ಚೀನಾ-ಭಾರತ ರಾಜತಾಂತ್ರಿಕ ಸಂಬಂಧಿತ ವಿದ್ವಾಂಸ ಜೆಎನ್ಯು ಪ್ರಾಧ್ಯಾಪಕ ಪ್ರೊ.ಸ್ವರನ್ ಸಿಂಗ್ ಇದು ಚೀನಾ ವಸ್ತುಗಳ ಬಹಿಷ್ಕಾರದ ಸಮಯವಲ್ಲ ಎನ್ನುತ್ತಾರೆ. ಅವರ ಪ್ರಕಾರ, “ಚೀನಾ ದೇಶದ ಬ್ಯಾಂಕಿಂಗ್ ಗಳು ಕಳೆದ 20-25 ವರುಷಗಳಿಂದ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುತ್ತಾ ಇದೆ. ಇಂತಹ ಪರಿಸ್ಥಿತಿಯಲ್ಲಿ ಕೋವಿಡ್-19 ನೀಡಿರುವ ಹೊಡೆತ ಇನ್ನಷ್ಟು ಆಘಾತಕಾರಿ. ಆದರೆ ನಾವು ಚೀನಾ ವಸ್ತುಗಳನ್ನ ಬಹಿಷ್ಕರಿಸುವುದು ಸರಿಯಲ್ಲ. ಕಾರಣ, ಭಾರತ ಕೂಡಾ ಚೀನಾದ ಬಹುದೊಡ್ಡ ವ್ಯಾವಹಾರಿಕ ಪಾಲುದಾರರಾಗಿದ್ದೇವೆ. ಜೊತೆಗೆ ಭಾರತದಲ್ಲಿನ ಹೂಡಿಕೆಯನ್ನೂ ತಡೆ ಹಿಡಿಯಲೂ ಇದು ಸೂಕ್ತ ಸಮಯವಲ್ಲ. ಗಡಿ ಜೊತೆಗಿನ ವಾಗ್ವಾದಗಳಿಂದ ಭಾರತೀಯರು ಕೋಪಗೊಂಡಿರುವುದು ನಿಜ. ಆದರೆ ಅದು ಚೀನಾ ಬಹಿಷ್ಕಾರ ಅಗತ್ಯತೆಯನ್ನು ಸಾರುವುದಿಲ್ಲ” ಎಂದಿದ್ದಾರೆ.