ಜಿಲ್ಲಾ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳದ ಕುರಿತು ಗೋಳು ತೋಡಿಕೊಂಡ ಸಂತ್ರಸ್ತರ ಕಾಲು ಮುಗಿಯಲು ಜಿಲ್ಲಾಧಿಕಾರಿ ಮುಂದಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆಸ್ಪತ್ರೆಗಳ ಪರಿಸ್ಥಿತಿ ಅವಲೋಕಿಸಲು ಪರಿಶೀಲನೆಗೆ ತೆರಳಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಉಚ್ಚಂಗಪ್ಪ ಎಂಬವರ ಸಂಬಂಧಿಯನ್ನು ದಾಖಲಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿಗಳು ನಿರಾಕರಿಸಿದ್ದರು. ಪರಿಶೀಲನೆ ನಡೆಸಲು ತೆರಳಿದ ಜಿಲ್ಲಾಧಿಕಾರಿಯ ಬಳಿ ಉಚ್ಚಂಗಪ್ಪ ತಮ್ಮ ನೋವು ತೋಡಿಕೊಂಡಿದ್ದಾರೆ. ಆಸ್ಪತ್ರೆ ಅವ್ಯವಸ್ಥೆ ಸರಿ ಮಾಡುವಂತೆ ಡಿಸಿಗೆ ಕೈ ಮುಗಿದು ಮನವಿ ಮಾಡಿದ್ದಾರೆ. ಈ ವೇಳೆ ಸ್ವತಃ ಜಿಲ್ಲಾಧಿಕಾರಿಯೇ ಸಂತ್ರಸ್ತರ ಕಾಲಿಗೆ ಬೀಳಲು ಮುಂದಾಗಿದ್ದಾರೆ.
ಬಳಿಕ ರೋಗಿಯ ಸಂಬಂಧಿಯನ್ನು ಸಮಾಧಾನಿಸಿದ ಜಿಲ್ಲಾಧಿಕಾರಿ, ಸಮಸ್ಯೆ ಬಗೆಹರಿಸುತ್ತೇನೆ, ನಿಮ್ಮ ಸಂಬಂಧಿಯನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳುವಂತೆ ಮಾಡಿಕೊಂಡಿದ್ದೇವೆ, ಚಿಂತೆ ಮಾಡಬೇಡಿ ಎಂದು ಸಾಂತ್ವನ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಚಿಕಿತ್ಸೆಗೆ ದಾಖಲಿಸಿಕೊಳ್ಳದಿರುವ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.