ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಂತ್ರಿ ಮಂಡಲ ವಿಸ್ತರಣೆ ಕ್ಷಣ ಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನನಗೆ ದಕ್ಕದ್ದು ಬೇರೆಯವರಿಗೂ ದಕ್ಕಬಾರದು ಎಂಬ ಬಿಜೆಪಿ ಶಾಸಕರ ಹೋರಾಟಕ್ಕೆ ಮದ್ದೆರೆಯುವ ಕೊನೆಯ ಪ್ರಯತ್ನವನ್ನು ಪಕ್ಷದ ಹೈಕಮಾಂಡ್ ಮಾಡುತ್ತಿದ್ದು, ಇದರಿಂದ ಗುರುವಾರ ಸಚಿವರಾಗಿ ಅಧಿಕಾರ ಸ್ವೀಕರಿಸುವವರ ಸಂಖ್ಯೆ ಎಷ್ಟು ಎಂಬ ಗೊಂದಲ ಕಾಣಿಸಿಕೊಂಡಿದೆ. ಇದರೊಂದಿಗೆ ಸೋತವರಿಗೆ ಮಂತ್ರಿಗಿರಿ ನೀಡಬಾರದು ಎಂದು ಸಿ.ಪಿ.ಯೋಗೇಶ್ವರ್ ವಿರುದ್ಧ ಬಂಡೆದ್ದು ಪ್ರತ್ಯೇಕ ಸಭೆಗಳನ್ನು ನಡೆಸಿ ಬಂಡಾಯದ ಭೀತಿ ಮೂಡಿಸುತ್ತಿರುವ ಆಕಾಂಕ್ಷಿಗಳಿಂದಾಗಿ ಮೂಲ ಬಿಜೆಪಿ ಶಾಸಕರು ನಾಳೆ ಸಚಿವ ಸ್ಥಾನದಿಂದ ವಂಚಿತರಾಗುವ ಆತಂಕ ಕಾಣಿಸಿಕೊಂಡಿದೆ.
ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಕಳೆದ ವಾರ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು 10+3 (10 ಮಂದಿ ನೂತನವಾಗಿ ಗೆದ್ದವರು, ಮೂವರು ಹಳೇ ಬಿಜೆಪಿ) ಲೆಕ್ಕಾಚಾರದೊಂದಿಗೆ ಮಂತ್ರಿಮಂಡಲವನ್ನು ವಿಸ್ತರಣೆ ಮಾಡಲು ಅನುಮತಿ ಪಡೆದುಕೊಂಡು ಬಂದಿದ್ದರು. ಅರ್ಹ 11 ಶಾಸಕರ ಪೈಕಿ ಮಹೇಶ್ ಕುಮುಟಳ್ಳಿ ಹೊರತುಪಡಿಸಿ ಉಳಿದವರಿಗೆ ಮಂತ್ರಿ ಸ್ಥಾನ ನೀಡುವುದು ಹಾಗೂ ಮೂಲ ಬಿಜೆಪಿಯವರಲ್ಲಿ ಶಾಸಕರಾದ ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ ಮತ್ತು ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಅವರ ಯೋಚನೆಯಾಗಿತ್ತು.
ಇದನ್ನೂ ಓದಿ: ಸಂಪುಟ ಸಂಕಟ- CM BSY ಬೆಂಬಲಕ್ಕೆ ನಿಂತ ವರಿಷ್ಠರು

ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲು ಮೂಲ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗಾಗಲೇ ಸೋತ ಲಕ್ಷ್ಮಣ ಸವದಿ ಅವರನ್ನು ಸಚಿವರನ್ನಾಗಿ ಮಾಡಿ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ಇದೀಗ ಮತ್ತೆ ಸೋತವರಿಗೇ ಸಚಿವ ಸ್ಥಾನ ನೀಡಿದರೆ ಗೆದ್ದು ಬಂದವರ ಕಥೆ ಏನು ಎಂದು ಪ್ರಶ್ನಿಸಿದ್ದರು. ಅಲ್ಲದೆ, ಸಂಪುಟ ವಿಸ್ತರಣೆಯಲ್ಲೂ ಪ್ರಾದೇಶಿಕ ಅಸಮತೋಲನವಾಗುತ್ತಿದೆ. ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ತಂದುಕೊಟ್ಟ ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಗುಲ್ಲೆಬ್ಬಿಸಿದ್ದರು. ಯಾವುದೇ ಕಾರಣಕ್ಕೂ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಪಟ್ಟು ಹಿಡಿದು ಕುಳಿತಿರುವ ಈ ಶಾಸಕರು, ಬಂಡಾಯವೇಳುವ ಸೂಚನೆಯನ್ನೂ ನೀಡಿದ್ದರು. ಇದರ ಪರಿಣಾಮ ಸಂಪುಟ ವಿಸ್ತರಣೆಯಲ್ಲಿ 10+3 ಫಾರ್ಮುಲಾ ಬದಿಗಿಟ್ಟು ಅರ್ಹ ಹತ್ತು ಶಾಸಕರಿಗೆ ಮಾತ್ರ ಗುರುವಾರ ಬೆಳಗ್ಗೆ 10.30ಕ್ಕೆ ಮಂತ್ರಿಗಿರಿ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಇದನ್ನೂ ಓದಿ: ಸಂಪುಟ ವಿಸ್ತರಣೆ ಸುಸೂತ್ರ- ಫಲಿಸಿತೇ ಸಿಎಂ ತಂತ್ರಗಾರಿಕೆ?
10+3 ಬದಲು ಅರ್ಹ ಹತ್ತು ಮಂದಿಗೆ ಮಾತ್ರ ಸಚಿವ ಸ್ಥಾನ ಎಂಬುದು ನಿಜವೇ?
10+3 ಫಾರ್ಮುಲಾ ಬದಿಗಿಟ್ಟು ಅರ್ಹ ಹತ್ತು ಶಾಸಕರಿಗೆ ಮಾತ್ರ ಗುರುವಾರ ಬೆಳಗ್ಗೆ 10.30ಕ್ಕೆ ಮಂತ್ರಿಗಿರಿ ಸಿಗಲಿದೆ ಎಂಬ ಊಹಾಪೋಹಗಳ ಬಗ್ಗೆ ಪರಿಶೀಲಿಸಿದಾಗ ಸದ್ಯ ಇದು ಎಚ್ಚರಿಕೆ. ಆದರೆ, ಅಸಮಾಧಾನಗೊಂಡಿರುವ ಶಾಸಕರು ಸಮಾಧಾನಗೊಳ್ಳದೇ ಇದ್ದರೆ ನಿಜವಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದರೆ, ಶಾಸಕರು ತಮ್ಮ ಪಟ್ಟು ಸಡಿಲಿಸಿ ಮಂತ್ರಿ ಮಂಡಲ ವಿಸ್ತರಣೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಂಡರೆ ಈ ಹಿಂದೆ ನಿರ್ಧಾರವಾದಂತೆ 10+3 (10 ಮಂದಿ ನೂತನವಾಗಿ ಗೆದ್ದವರು, ಮೂವರು ಹಳೇ ಬಿಜೆಪಿ ಶಾಸಕರು) ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಗೊಂದಲ ಬಗೆಹರಿದ ಮೇಲೆ ಮೂಲ ಬಿಜೆಪಿ ಶಾಸಕರಿಗೆ ಸಚಿವರಾಗುವ ಯೋಗ ಬರುತ್ತದೆ.
ಇದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ವರಿಷ್ಠರು ಚರ್ಚಿಸಿಯೇ ನಿರ್ಧರಿಸಿದ್ದಾರೆ. ಸಂಪುಟ ವಿಸ್ತರಣೆ ಗೊಂದಲದಿಂದಾಗಿ ಆರಂಭದಲ್ಲಿ ಗುರುವಾರದ ಸಂಪುಟ ವಿಸ್ತರಣೆಯನ್ನೇ ಮುಂದೂಡಲು ಯೋಚಿಸಲಾಗಿತ್ತು. ಆದರೆ, ಫೆಬ್ರವರಿ 17ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದ್ದು, ಅದಕ್ಕೆ ಮೊದಲು ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿಗೆ ಸೇರಿ ಗೆದ್ದವರಿಗೆ ಸಚಿವ ಸ್ಥಾನ ನೀಡಲೇ ಬೇಕು. ಇಲ್ಲವಾದಲ್ಲಿ ಅಧಿವೇಶನದಲ್ಲಿ ಸರ್ಕಾರ ಮುಜುಗರಕ್ಕೆ ಒಳಗಾಗುತ್ತದೆ. ಅಷ್ಟೇ ಅಲ್ಲ, ಈ ಶಾಸಕರು ಅಧಿವೇಶನದಿಂದ ದೂರ ಉಳಿದು ಸರ್ಕಾರ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ಈ ಕಾರಣಕ್ಕಾಗಿ ಗುರುವಾರ ಅರ್ಹ 11 ಶಾಸಕರ ಪೈಕಿ 10 ಮಂದಿ ಗುರುವಾರ ಸಚಿವರಾಗಿ ಅಧಿಕಾರ ಸ್ವೀಕರಿಸಲೇಬೇಕು. ಬುಧವಾರ ಸಂಜೆಯೊಳಗೆ ವಿವಾದ ಬಗೆಹರಿಯದೇ ಇದ್ದಲ್ಲಿ ಈ ಹತ್ತು ಮಂದಿಗೆ ಸಚಿವ ಸ್ಥಾನ ನೀಡೋಣ. ಉಳಿದವರ ವಿಚಾರವನ್ನು ಅಧಿವೇಶನ ಮುಗಿದ ಬಳಿಕ ನಿರ್ಧರಿಸೋಣ ಎಂಬ ಮುಖ್ಯಮಂತ್ರಿಯವರ ಸಲಹೆಗೆ ಹೈಕಮಾಂಡ್ ಒಪ್ಪಿಕೊಂಡಿದೆ.

ರಾತ್ರಿಯೊಳಗೆ ಎಲ್ಲವೂ ಅಂತಿಮವಾಗುವ ಸಾಧ್ಯತೆ
ಸದ್ಯದ ಮಾಹಿತಿ ಪ್ರಕಾರ ಗುರುವಾರ ಸಚಿವ ಸ್ಥಾನ ಸ್ವೀಕರಿಸುವವರು 10 ಮಂದಿಯೇ ಅಥವಾ 13 ಮಂದಿಯೇ ಎಂಬ ಬಗ್ಗೆ ಬುಧವಾರ ರಾತ್ರಿಯೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಅಸಮಾಧಾನಗೊಂಡು ಪ್ರತ್ಯೇಕ ಸಭೆ ನಡೆಸಿರುವ ಶಾಸಕರನ್ನು ತೃಪ್ತಿ ಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಹೈಕಮಾಂಡ್ ನಾಯಕರ ಪ್ರತಿನಿಧಿಗಳ ಜತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಅತೃಪ್ತ ಶಾಸಕರೊಂದಿಗೆ ಚರ್ಚಿಸುತ್ತಿದ್ದಾರೆ. ಮಾತುಕತೆ ಫಲಪ್ರದವಾಗಿ ಯಡಿಯೂರಪ್ಪ ಮತ್ತು ಹೈಕಮಾಂಡ್ ನಿರ್ಧರಿಸಿದಂತೆ ಸಚಿವ ಸಂಪುಟ ವಿಸ್ತರಿಸಲು ಈ ಶಾಸಕರು ಒಪ್ಪಿಕೊಂಡರೆ ನಾಳೆಯೇ ಎಲ್ಲಾ 13 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇಲ್ಲವಾದಲ್ಲಿ ಅರ್ಹ 10 ಶಾಸಕರಿಗೆ ಮಾತ್ರ ಸಚಿವರಾಗುವ ಅವಕಾಶ ಸಿಗುತ್ತದೆ.
ಪ್ರಸ್ತುತ ಅಸಮಾಧಾನಗೊಂಡು ಪ್ರತ್ಯೇಕ ಸಭೆ ನಡೆಸುತ್ತಿರುವವರೆಲ್ಲರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ವಲಯಕ್ಕೆ ಸೇರಿದವರು. ಹೇಗಾದರೂ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವೋ ನೋಡೋಣ ಎಂಬ ಕಾರಣಕ್ಕೆ ಈ ರೀತಿಯ ಹೋರಾಟ ಮಾಡುತ್ತಿದ್ದಾರೆ. ಸಿಗುವುದಿಲ್ಲ ಎಂದು ಖಾತರಿಯಾದರೆ ಸರ್ಕಾರಕ್ಕೆ ಅಪಾಯ ತಂದೊಡ್ಡಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಯುವ ಮಟ್ಟಕ್ಕೆ ಇವರ ಹೋರಾಟ ಹೋಗುವುದಿಲ್ಲ. ಹೀಗಾಗಿ ರಾತ್ರಿಯೊಳಗೆ ಸಮಸ್ಯೆ ಬಗೆಹರಿದು ಪರಿಸ್ಥಿತಿ ತಿಳಿಗೊಳ್ಳಲಿದೆ. ಬಹುತೇಕ ನಾಳೆ ಎಲ್ಲಾ 13 ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಬಹುದು. ಒಂದೊಮ್ಮೆ ಸಮಸ್ಯೆ ಬಗೆಹರಿಯದಿದ್ದಲ್ಲಿ 10 ಮಂದಿಗೆ ಮಾತ್ರ ಈ ಬಾರಿ ಅವಕಾಶ ಸಿಗುತ್ತದೆ.