ಅಮೆರಿಕದ 38 ರಾಜ್ಯಗಳು ಗೂಗಲ್ ವಿರುದ್ಧ ‘ಅಪನಂಬಿಕೆ’ಯ ಮೊಕದ್ದಮೆ ಹೂಡಿವೆ. ಅಂತರ್ಜಾಲ ಹುಡುಕಾಟದ ದೈತ್ಯ ಸಂಸ್ಥೆಯಾದ ಗೂಗಲ್ ಆನ್‌ಲೈನ್ ಹುಡುಕಾಟ ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆ ಹೊಂದಿದ್ದು ಅದು ಗ್ರಾಹಕರನ್ನು ಮತ್ತು ಜಾಹಿರಾತುದಾರರನ್ನು ಶೋಷಿಸುತ್ತಿದೆ ಎಂದಿದೆ.
ವಾಷಿಂಗ್ಟನ್‌ನ ಫೆಡರಲ್ ಕೋರ್ಟಿನಲ್ಲಿ ಅಟಾರ್ನಿ ಜನರಲ್ ಫಿಲ್ ವೈಸರ್ ಕಳೆದ ವಾರ ಗೂಗಲ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಈಗಿರುವುದಕ್ಕಿಂತ ಉತ್ತಮ ಖಾಸಗಿತನದ ರಕ್ಷಣೆ ಮತ್ತು ಗುಣಮಟ್ಟದ ಸೇವೆಯನ್ನು ಗ್ರಾಹಕರು ಪಡೆದುಕೊಳ್ಳುವ ಸಾಧ್ಯತೆ ಇದ್ದು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯೇ ಇಲ್ಲದಿರುವುದರಿಂದ ಅವರಿಗೆ ಇವೆರಡೂ ಸವಲತ್ತುಗಳು ನಷ್ಟವಾಗಿವೆ. ಜಾಹಿರಾತುದಾರರೂ ಹೆಚ್ಚಿನ ಬೆಲೆ ತೆತ್ತು ಕಡಿಮೆ ಗುಣಮಟ್ಟವನ್ನು ಪಡೆದುಕೊಳ್ಳುತ್ತಿದ್ದಾರೆ” ಎಂದು ವೈಸರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲಾಸ್ಕಾ, ಅರಿಝೋನಾ, ಕನೆಟಿಕಟ್, ಡೆಲವೇರ್, ಹವಾಯಿ, ಅಯೋವಾ, ಐಡಹೋ, ಅಲಿನೋಯ್ಸ್, ಕನ್ಸಸ್, ಮೇಯಿನ್, ಮೇರಿಲ್ಯಾಂಡ್, ಮ್ಯಾಸಚುಸೆಟ್ಸ್, ಮಿನಸೋಟಾ, ನೆಬ್ರಾಸ್ಕಾ, ನವಾಡಾ, ನ್ಯೂ ಹ್ಯಾಂಪ್ಶೈರ್, ನ್ಯೂಜೆರ್ಸಿ, ನ್ಯೂ ಮೆಕ್ಸಿಕೋ, ನೋರ್ಥ್ ಡಕೋಟಾ, ಓಹೈಯೋ, ಓಕ್ಲಹೋಮಾ, ಓರಗನ್, ಪೆನ್ಸಿಲ್ವೇನಿಯಾ, ರೋಡ್ ಐಲ್ಯಾಂಡ್, ಸೌಥ್ ಡಕೋಟಾ, ವರ್ಮೌಂಟ್, ವರ್ಜಿನಿಯಾ, ವಾಶಿಂಗ್‌ಟನ್, ವೆಸ್ಟ್ ವರ್ಜಿನಿಯಾ, ವ್ಯೋಮಿಂಗ್, ಕೋಲಂಬಿಯಾ, ಗುವಾಮ್, ಪೋರ್ಟೋರಿಕೋ ಮುಂತಾದ ಸಂಸ್ಥಾನಗಳ ಅಟಾರ್ನಿ ಜನರಲ್ ಗಳು ಈ ಮೊಕದ್ದಮೆಯಲ್ಲಿ ಕೈ ಜೋಡಿಸಿದ್ದಾರೆ.
ಕಳೆದ ಎರಡು ತಿಂಗಳಿಂದಲೂ ಅಮೆರಿಕಾದ್ಯಂತ ಅಟಾರ್ನಿ ಜನರಲ್ ಗಳು ಗೂಗಲ್ ತನ್ನ ಅನಿಯಂತ್ರಿತ ಅಧಿಕಾರವನ್ನು ದುರಪಯೋಗಿಸಿ ಇತರ ವ್ಯವಹಾರವನ್ನು, ಆವಿಷ್ಕಾರವನ್ನು ಹೇಗೆ ಪ್ರಭಾವಿಸುತ್ತಿದೆ ಎಂದು ವಿವಿಧ ರೀತಿಯ ಅಭಿಪ್ರಾಯ ಸಲ್ಲಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದಲೂ ಗೂಗಲ್‌ನ್ನು ನಿಯಂತ್ರಿಸಲು ಯತ್ನಿಸುತ್ತಿರುವ, ಹಲವು ವಿಚಾರಗಳಲ್ಲಿ ಗೂಗಲ್‌ಗೆ ದಂಡ ವಿಧಿಸಿರುವ ಯುರೋಪಿನ ಬೆಂಬಲವನ್ನು ಪಡೆದುಕೊಳ್ಳಲು ಈ ಮೊಕದ್ದಮೆಯು ಪ್ರಯತ್ನಿಸುತ್ತಿದೆ. ಕಳೆದ ಬುಧವಾರ ಹತ್ತು ರಾಜ್ಯಗಳ ಅಟಾರ್ನಿ ಜನರಲ್‌ಗಳು ಗೂಗಲ್ ವಿರುದ್ದ ಆನ್ಲೈನ್ ಜಾಹಿರಾತಿನಲ್ಲಿ ಸ್ಪರ್ಧಾತ್ಮಕತೆ ತೋರುವುದಿಲ್ಲ ಎಂದು ಮೊಕದ್ದಮೆ ಹೂಡಿದೆ. ಈ ಮೊಕದ್ದಮೆಯು ಗೂಗಲ್‌ನ ಹೃದಯ ಎಂದೇ ಪರಿಗಣಿಸಲ್ಪಟ್ಟಿರುವ, ಆರ್ಥಿಕತೆಯ ಮೂಲವಾಗಿರುವ ಡಿಜಿಟಲ್ ಜಾಹಿರಾತುಗಳನ್ನೇ ಗುರಿಯಾಗಿಸಿಕೊಂಡಿದೆ.
ಈ ಸಂಬಂಧ ಗೂಗಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.