ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಮಾಂಸದ ವ್ಯಾಪಾರಿ ಮೊಯಿನ್ ಖುರೇಷಿಯಿಂದ ಎರಡು ಕೋಟಿ ರುಪಾಯಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಕೇಂದ್ರೀಯ ತನಿಖಾ ದಳದ (ಸಿಬಿಐ) ಮಾಜಿ ವಿಶೇಷ ನಿರ್ದೇಶಕ, ಗುಜರಾತ್ 1984ರ ಕೇಡರ್ ಐಪಿಎಸ್ ಅಧಿಕಾರಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನೀಲಿಗಣ್ಣಿನ ಅಧಿಕಾರಿ ರಾಕೇಶ್ ಅಸ್ತಾನಾ ಅವರಿಗೆ ತನಿಖಾ ದಳವು ಕ್ಲೀನ್ ಚಿಟ್ ನೀಡಿರುವ ವಿಚಾರವು ಹಲವು ರೀತಿಯ ಚರ್ಚೆಗಳಿಗೆ ನಾಂದಿಯಾಡಿದೆ. “ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಅವರ ಸೂಚನೆಯಂತೆ ತಮ್ಮ ವಿರುದ್ಧ ದೂರು ದಾಖಲಿಸಲಾಗಿದೆ” ಎಂದು ಅಸ್ತಾನಾ ಅವರು ತನಿಖಾ ದಳದ ಮುಂದೆ ಹೇಳಿಕೆ ನೀಡಿದ್ದರು. ಅಸ್ತಾನಾ ವಿರುದ್ಧದ ಆರೋಪ ಸಾಬೀತುಪಡಿಸುವಂಥ ಯಾವುದೇ ದಾಖಲೆಗಳು ಇಲ್ಲ ಎಂದು ಸಿಬಿಐ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. ಈ ಮಧ್ಯೆ, ನಾಗರಿಕ ವಿಮಾನಯಾನ ಭದ್ರತಾ ವಿಭಾಗದ ಮಹಾನಿರ್ದೇಶಕರಾಗಿರುವ ಅಸ್ತಾನಾ ಅವರು ದೆಹಲಿ ಪೊಲೀಸ್ ಕಮಿಷನರ್ ಹುದ್ದೆಗೇರಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅಸ್ತಾನಾ ಅವರಿಗೆ ಮೋದಿ ಅವರ ಸರ್ಕಾರವು ಹೆಚ್ಚುವರಿಯಾಗಿ ಮಾದಕದ್ರವ್ಯ ನಿಯಂತ್ರಣ ಬ್ಯುರೊದ ಹೊಣೆಯನ್ನೂ ನೀಡಿದೆ.
ಜಾರಿ ನಿರ್ದೇಶನಾಲಯದ ವಶದಲ್ಲಿರುವ ಖುರೇಷಿ ಬೆಂಬಲಿಗರಿಂದ ಲಂಚ ಪಡೆದ ಆರೋಪದಲ್ಲಿ ಅಸ್ತಾನಾ ವಿರುದ್ಧ ಪ್ರಥಮ ತನಿಖಾ ವರದಿ ದಾಖಲಿಸಿ (ಎಫ್ ಐಆರ್) ತನಿಖೆ ನಡೆಸುವಂತೆ ಅಲೋಕ್ ವರ್ಮಾ ಆದೇಶಿಸಿದ್ದರು. ಇದರ ಬೆನ್ನಿಗೆ ಕೇಂದ್ರೀಯ ವಿಚಕ್ಷಣಾ ಸಮಿತಿಯು (ಸಿವಿಸಿ) ಅಲೋಕ್ ವರ್ಮಾ ವಿರುದ್ಧ ಭ್ರಷ್ಟಾಚಾರ ಆರೋಪದ ಕುರಿತು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ವರದಿ ಸಲ್ಲಿಸಿತ್ತು. ಇದನ್ನು ಆಧರಿಸಿ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿಯು ಅಲೋಕ್ ವರ್ಮಾ ಅವರನ್ನು ಕರ್ತವ್ಯದಿಂದ ವಜಾಗೊಳಿಸಿತ್ತು. ಸಿಬಿಐ ವರ್ಚಸ್ಸಿಗೆ ಮಸಿ ಬಳಿದ ಈ ಪ್ರಕರಣದ ಆರೋಪಿ ಅಸ್ತಾನಾ ಅವರನ್ನು ನಾಗರಿಕ ವಿಮಾನಯಾನ ಭದ್ರತಾ ವಿಭಾಗದ ಮಹಾನಿರ್ದೇಶಕ ಸ್ಥಾನಕ್ಕೆ ಮೋದಿ ನೇತೃತ್ವದ ಸಮಿತಿ ವರ್ಗಾವಣೆ ಮಾಡಿತ್ತು. ಅಷ್ಟಕ್ಕೂ ಅಸ್ತಾನಾ ಅವರ ಬೆನ್ನಿಗೆ ನರೇಂದ್ರ ಮೋದಿ ಸರ್ಕಾರ ನಿಂತಿರುವುದೇಕೆ ಎಂಬ ವಿಚಾರದ ಹಿಂದೆ ರೋಚಕ ವಿಚಾರಗಳು ಅಡಕವಾಗಿವೆ. ಅಸ್ತಾನಾ ವಿಚಾರ ಮುನ್ನೆಲೆಗೆ ಬಂದಿರುವ ಹಿನ್ನೆಲೆಯಲ್ಲಿ ಗುಜರಾತ್ ನವರೇ ಆದ 1988ರ ಕೇಡರ್ ನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಮೋದಿ ಸರ್ಕಾರ ನಡೆಸಿಕೊಂಡಿರುವ ವಿಚಾರವನ್ನು ಇಲ್ಲಿ ನೆನೆಯಬೇಕಿದೆ.
2002ರ ಗುಜರಾತ್ ಹತ್ಯಾಕಾಂಡ ಹಾಗೂ ಸಾಬರಮತಿ ರೈಲು ದುರಂತ ಪ್ರಕರಣದ ಕುರಿತು ಮೋದಿ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದ (ಎಸ್ ಐಟಿ) ನೇತೃತ್ವ ವಹಿಸಿದ್ದ ರಾಕೇಶ್ ಅಸ್ತಾನಾ ಅವರು ರಾಜ್ಯ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದರು. ಅಲ್ಲದೇ 2008ರಲ್ಲಿ ಅಹಮದಾಬಾದ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೋದಿಯವರ ಮನ ಗೆಲ್ಲುವ ಕಾರ್ಯ ಮಾಡಿದ್ದರು. “ಗುಜರಾತ್ ಹತ್ಯಾಕಾಂಡಕ್ಕೂ ಮುನ್ನ ತಮ್ಮ ಗೃಹ ಕಚೇರಿಯಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾದ ನರೇಂದ್ರ ಮೋದಿಯವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದು, ಮುಸ್ಲಿಮರ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತೀಕಾರ ತೀರಿಸಿಕೊಳ್ಳುತ್ತಾರೆ. ಇದನ್ನು ಪೊಲೀಸರು ತಡೆಯಬಾರದು” ಎಂದು ಮೌಖಿಕವಾಗಿ ಎಚ್ಚರಿಸಿದ್ದರು ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ, ನಾನಾವತಿ ಆಯೋಗ ಮತ್ತು ಸುಪ್ರೀಂಕೋರ್ಟ್ ನೇಮಿಸಿದ್ದ ಎಸ್ಐಟಿ ಮುಂದೆ ನುಡಿದಿದ್ದ ಸಂಜೀವ್ ಭಟ್ ಅವರ ವಿರುದ್ಧ ಇಲಾಖಾ ತನಿಖೆ ನಡೆಸಿದ್ದ ತಂಡದಲ್ಲಿ ರಾಕೇಶ್ ಅಸ್ತಾನ ಇದ್ದರು.
ಮೋದಿಯವರ ವಿರುದ್ಧ ಧ್ವನಿ ಎತ್ತಿದ ಸಂಜೀವ್ ಭಟ್ ವಿರುದ್ದ ಅವರದೇ ಕಾರು ಚಾಲಕ ಎ ಡಿ ಪಂಥ್ ದೂರು ದಾಖಲಿಸಿದ್ದರು. ಮೋದಿಯವರು ಕರೆದಿದ್ದ ಸಭೆಗೆ ಸಂಜೀವ್ ಭಟ್ ಹಾಜರಾಗಿರಲಿಲ್ಲ ಎಂದು ಪಂಥ್ ದೂರಿನಲ್ಲಿ ತಿಳಿಸಿದ್ದರು. ಇದನ್ನೇ ಸುಪ್ರೀಂಕೋರ್ಟ್ ನೇಮಿಸಿದ್ದ ಎಸ್ ಐಟಿ ಮುಂದೆ ಪಂಥ್ ನುಡಿದಿದ್ದರು, ಈ ಆರೋಪ ಆಧರಿಸಿ 2011ರ ಆಗಸ್ಟ್ 8ರಂದು ಮೋದಿ ಸರ್ಕಾರವು ಸಂಜೀವ್ ಭಟ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು.
ಪಂಥ್ ದಾಖಲಿಸಿದ ದೂರಿನ ಆಧಾರದಲ್ಲಿ ಸಂಜೀವ್ ಭಟ್ ಅವರನ್ನು ಬಂಧಿಸಿದ ಗುಜರಾತ್ ಪೊಲೀಸರು 17 ದಿನಗಳ ಕಾಲ ಅವರನ್ನು ಸಾಬರಮತಿ ಜೈಲಿನಲ್ಲಿಟ್ಟಿದ್ದರು. ಸರ್ಕಾರದ ವಾದವನ್ನು ತಳ್ಳಿಹಾಕಿದ ಸ್ಥಳೀಯ ನ್ಯಾಯಾಲಯವು ಸಂಜೀವ್ ಭಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಇದರ ಬೆನ್ನಲ್ಲೇ 2012ರ ನವೆಂಬರ್ ನಲ್ಲಿ ಸಂಜೀವ್ ಭಟ್ ಉಸ್ತುವಾರಿಯಲ್ಲಿ 1990ರಲ್ಲಿ ನಡೆದಿತ್ತು ಎನ್ನಲಾದ ಲಾಕ್ ಅಪ್ ಡೆತ್ ಪ್ರಕರಣವನ್ನು ಮುನ್ನೆಲೆಗೆ ತರಲಾಗಿತ್ತು.
2013ರ ಏಪ್ರಿಲ್ ನಲ್ಲಿ ಸುಪ್ರೀಂಕೋರ್ಟ್ ನೇಮಿಸಿದ್ದ ಎಸ್ಐಟಿ ಯು 2002ರ ಫೆಬ್ರುಬರಿ 27ರಂದು ಮೋದಿ ಕರೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಸಂಜೀವ್ ಭಟ್ ಭಾಗವಹಿಸಿದ್ದರು ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಹೇಳಿತ್ತು. ಇಷ್ಟೊತ್ತಿಗಾಗಲೇ ಪ್ರಧಾನಿ ಹುದ್ದೆಗೇರಿದ್ದ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು 2015ರ ಆಗಸ್ಟ್ ನಲ್ಲಿ ಸಂಜೀವ್ ಭಟ್ ಅವರನ್ನು ಐಪಿಎಸ್ ಸೇವೆಯಿಂದಲೇ ವಜಾಗೊಳಿಸಿತ್ತು.
1990ರಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂಜೀವ್ ಭಟ್ ಅವರು ದೊಂಬಿ ಪ್ರಕರಣ ಒಂದರಲ್ಲಿ 150 ಮಂದಿಯನ್ನು ಬಂಧಿಸಿದ್ದರು. ಈ ಪೈಕಿ ಪ್ರಭುದಾಸ್ ವೈಷ್ಣಾಣಿ ಎಂಬಾತ ಕಿಡ್ನಿ ವಿಫಲವಾಗಿ ಸಾವನ್ನಪ್ಪಿದ್ದ. ಇದನ್ನು ಲಾಕಪ್ ಡೆತ್ ಎಂದು ಸಂಜೀವ್ ಭಟ್ ಅವರ ಮೇಲೆ ಆರೋಪ ಹೊರಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮ್ ನಗರ ಸೆಷನ್ಸ್ ನ್ಯಾಯಾಲಯವು ಸಂಜೀವ್ ಭಟ್ ಅವರಿಗೆ ಆಜೀವ ಶಿಕ್ಷೆ ವಿಧಿಸಿದ್ದು, ಅವರು ಜೈಲಿನಲ್ಲಿದ್ದಾರೆ.
ಇದರ ಜೊತೆಗೆ 1996ರಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲು ಮಾದಕ ವಸ್ತುಗಳನ್ನು ಬೆಳೆಸಿದ ಆರೋಪದಲ್ಲಿ ಸಂಜೀವ್ ಭಟ್ ಅವರನ್ನು ಗುಜರಾತಿನ ಸಿಐಡಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ ನಿವೃತ್ತ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ದೀಪಕ್ ಗುಪ್ತಾ ಹಾಗೂ ನ್ಯಾ. ಸಂಜೀವ್ ಖನ್ನಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಸಂಜೀವ್ ಭಟ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಇದಕ್ಕೂ ಮುನ್ನ ಜಾಮೀನು ಕೋರಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದ ಸಂಜೀವ್ ಭಟ್ ಅವರ ಅರ್ಜಿ ವಿಚಾರಣೆಯಿಂದ ನ್ಯಾಯಮೂರ್ತಿ ಹಿಂದೆ ಸರಿದಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಿದ್ದಂತೆ ರಾಕೇಶ್ ಅಸ್ತಾನಾ ಅವರು 2016ರ ಏಪ್ರಿಲ್ ನಲ್ಲಿ ಕೇಂದ್ರ ಸೇವೆಗೆ ನಿಯುಕ್ತಿಗೊಂಡಿದ್ದರು. ಸಿಬಿಐ ವಿಶೇಷ ನಿರ್ದೇಶಕನಂಥ ಮಹತ್ವದ ಸ್ಥಾನಕ್ಕೆ ನೇಮಕಗೊಂಡ ಅಸ್ತಾನಾ ಅವರು ರಾಜಕೀಯವಾಗಿ ಸೂಕ್ಷ್ಮವಾದ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ ಎನ್ನಲಾದ ವಿವಾದಿತ ಅಗಸ್ಟಾ ವೆಸ್ ಲ್ಯಾಂಡ್ ಪ್ರಕರಣ, ಕಲ್ಲಿದ್ದಲು ಹಗರಣ, ವಿಜಯ ಮಲ್ಯ ವಿರುದ್ಧದ ಪ್ರಕರಣ, ಲಾಲೂ ಪ್ರಸಾದ್ ಮತ್ತು ಕುಟುಂಬದ ವಿರುದ್ಧದ ರೈಲ್ವೆ ಕೇಟರಿಂಗ್ ಗುತ್ತಿಗೆ ಪ್ರಕರಣಗಳ ತನಿಖೆಯ ನೇತೃತ್ವವಹಿಸಿದ್ದರು. ರೈಲ್ವೆ ಕೇಟರಿಂಗ್ ಗುತ್ತಿಗೆ ವಿಚಾರದಲ್ಲಿ ಬಿಹಾರದ ಅಂದಿನ ಉಪಮುಖ್ಯಮಂತ್ರಿ ಹಾಗೂ ಲಾಲು ಪ್ರಸಾದ್ ಅವರ ಪುತ್ರ ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬರುತ್ತಿದ್ದಂತೆ ಆರ್ ಜೆಡಿ-ಕಾಂಗ್ರೆಸ್ ಹಾಗೂ ಜೆಡಿಯು ಒಳಗೊಂಡ ಮಹಾಮೈತ್ರಿ ಮುರಿದಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದರು ಎಂಬುದು ಇಲ್ಲಿ ನೆನೆಯಬಹುದಾಗಿದೆ. ಹವಾಲಾ ಹಣ ಆರೋಪದಲ್ಲಿ ಸಿಲುಕಿದ್ದ ಸ್ಟೆರ್ಲಿಂಗ್ ಬಯೋಟೆಕ್ ಎಂಬ ಸಂಸ್ಥೆಯಿಂದ 3.83 ಕೋಟಿ ರುಪಾಯಿ ಲಂಚ ಪಡೆದ ಆರೋಪ ಅಸ್ತಾನಾ ವಿರುದ್ಧ ಕೇಳಿಬಂದಿತ್ತು. ಗುಜರಾತ್ ನಲ್ಲಿ ಇತ್ತೀಚೆಗೆ ಪುತ್ರಿಯ ವಿವಾಹವನ್ನು ಅದ್ದೂರಿಯಾಗಿ ಮಾಡಿದ್ದ ರಾಕೇಸ್ ಅಸ್ತಾನಾ ಅವರು ಹಲವರು ಹುಬ್ಬೇರಿಸುವಂತೆ ಮಾಡಿದ್ದರು.