ಡಿಸೆಂಬರ್ 15 ರಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವೇಳೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದಾರೆಯೇ? ಇಲ್ಲವೇ ಇಲ್ಲ. ನಾವು ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುವುದೇ? ಎಂದು ಮರು ಪ್ರಶ್ನೆಯನ್ನು ಹಾಕುತ್ತಲೇ ಬಂದಿದ್ದರು ಪೊಲೀಸರು.
ಆದರೆ, ವಾಸ್ತವವಾಗಿ ಪೊಲೀಸರು ಪ್ರತಿಭಟನೆ ವೇಳೆ ಗುಂಡು ಹಾರಿಸಿರುವುದು ಖಚಿತವಾಗಿದೆ.
ಡಿಸೆಂಬರ್ 15 ರಂದು ವಿದ್ಯಾರ್ಥಿಗಳು ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆ ಹಿಂಸಾರೂಪ ತಾಳಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿ ವಿದ್ಯಾರ್ಥಿಗಳ ಗುಂಪನ್ನು ಚದುರಿಸಲು ಪ್ರಯತ್ನಿಸಿದ್ದರು. ವಿದ್ಯಾರ್ಥಿಗಳು ಸಹ ಲಾಠಿ ರುಚಿಯನ್ನು ಸಹಿಸಿಕೊಳ್ಳಲಾರದೇ ಚದುರುತ್ತಿದ್ದರು. ಆದರೆ, ಪೊಲೀಸರು ಇಷ್ಟಕ್ಕೆ ಸುಮ್ಮನಾಗದೇ ಕೈಲಿದ್ದ ಬಂದೂಕಿನಿಂದ ಗುಂಡನ್ನು ಹಾರಿಸಿದ್ದರು. ಇದು ದೇಶಾದ್ಯಂತ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದರಿಂದ ಪೊಲೀಸರು ತಾವು ಗುಂಡು ಹಾರಿಸಿಯೇ ಇಲ್ಲ ಎಂದು ವಾದ ಮಂಡಿಸಿದ್ದರು.
ಆದರೆ, ಈ ಬಗ್ಗೆ ದೆಹಲಿ ಪೊಲೀಸ್ ಇಲಾಖೆ ನಡೆಸಿರುವ ಆಂತರಿಕ ತನಿಖೆಯಲ್ಲಿ ಪೊಲೀಸರು ಗುಂಡು ಹಾರಿಸಿರುವುದು ದೃಢಪಟ್ಟಿದೆ. ಅಂದು ಸ್ಥಳೀಯ ನಾಗರಿಕರೊಂದಿಗೆ ರ್ಯಾಲಿ ನಡೆಸಿದ್ದ ವಿದ್ಯಾರ್ಥಿಗಳು ಸಂಸತ್ತಿನೆಡೆಗೆ ಸಾಗಿದ್ದರು. ಆದರೆ, ಮಥುರಾ ರಸ್ತೆಯಲ್ಲಿ ಅವರನ್ನು ತಡೆಯಲಾಯಿತು. ಇದರಿಂದ ಉದ್ರಿಕ್ತಗೊಂಡ ಗುಂಪೊಂದು ಪೊಲೀಸರತ್ತ ಕಲ್ಲು ತೂರಾಟ ನಡೆಸಿತಲ್ಲದೇ, ಬಸ್ ಗಳಿಗೆ ಬೆಂಕಿ ಇಟ್ಟಿತು. ಇದನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಚದುರಿದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದೊಳಗೆ ಹೋದರು. ಅಲ್ಲಿಗೂ ನುಗ್ಗಿದ್ದ ಪೊಲೀಸರು ಟಿಯರ್ ಗ್ಯಾಸ್ ಸಿಡಿಸಿದರು.
ಅಷ್ಟಕ್ಕೂ ಸುಮ್ಮನಾಗದೇ ಗ್ರಂಥಾಲಯದಲ್ಲಿ ತಮ್ಮ ಪಾಡಿಗೆ ಕುಳಿತು ಓದಿಕೊಳ್ಳುತ್ತಿದ್ದ ವಿದ್ಯಾರ್ಥಿಗಳನ್ನು ಎಳೆದಾಡಿ ಹಿಗ್ಗಾಮುಗ್ಗ ಥಳಿಸಿ ಅಲ್ಲಿಂದ ಹೊರ ದಬ್ಬಿದ್ದರು. ಈ ದಬ್ಬಾಳಿಕೆಯನ್ನು ಅಲ್ಲಿಗೇ ನಿಲ್ಲಿಸದೇ ಪೊಲೀಸರು ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದಾರೆ.
ಆದರೆ, ಇದು ವಿವಾದದ ಕೇಂದ್ರ ಬಿಂದುವಾಗಿದ್ದರಿಂದ ಯಾವುದೇ ಕಾರಣಕ್ಕೂ ಗುಂಡು ಹಾರಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಬಾರದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ತಾಕೀತು ಮಾಡಿದ್ದರಿಂದ ಪೊಲೀಸರು ಗುಂಡು ಹಾರಿಸಿಯೇ ಇಲ್ಲ ಎಂಬ ವಾದವನ್ನು ಮುಂದಿಡುತ್ತಾ ಬಂದರು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪೊಲೀಸರು ನಡೆಸಿದ ದೌರ್ಜನ್ಯದಿಂದ ಗಾಯಗೊಂಡು ಸಫ್ದರಜಂಗ್ ಹಾಸ್ಪಿಟಲ್ ನಲ್ಲಿ ಇಬ್ಬರು ಮತ್ತು ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಒಬ್ಬರು ವಿದ್ಯಾರ್ಥಿಗಳು ದಾಖಲಾಗಿದ್ದರು. ಇವರನ್ನು ಪರೀಕ್ಷಿಸಿದಾಗ ಗುಂಡು ತಾಗಿದ್ದರಿಂದ ಗಾಯಗಳಾಗಿವೆ ಎಂಬುದನ್ನು ವೈದ್ಯರು ದೃಢಪಡಿಸಿದ್ದಾರೆ. ಈ ಮಾಹಿತಿಯನ್ನು ಮೆಡಿಕೋ-ಲೀಗಲ್ ರೆಕಾರ್ಡ್ಸ್ ನಲ್ಲಿ ದಾಖಲು ಮಾಡಲಾಗಿದೆ.
ಈ ವರದಿಗಳು ಬಂದಾಗ್ಯೂ ಪೊಲೀಸರು ಮಾತ್ರ ಗುಂಡು ಹಾರಿಸಿಯೇ ಇಲ್ಲ ಎಂದು ವಿತಂಡವಾದವನ್ನು ಮಂಡಿಸುತ್ತಲೇ ಬಂದಿದ್ದಾರೆ. ಅಷ್ಟಕ್ಕೂ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುವಂತಹ ಅಗತ್ಯವಿತ್ತೇ? ಅಂತಹ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತೇ? ಟಿಯರ್ ಗ್ಯಾಸ್ ಹಾರಿಸಿದಾಗಲೇ ಸಾಕಷ್ಟು ವಿದ್ಯಾರ್ಥಿಗಳು ಅಲ್ಲಿಂದ ಕಾಲ್ಕಿತ್ತಿದ್ದರು. ವಿಶ್ವವಿದ್ಯಾಲಯದ ಆವರಣದೊಳಕ್ಕೆ ನುಗ್ಗಿದ ಪೊಲೀಸರಿಗೆ ವಿದ್ಯಾರ್ಥಿಗಳನ್ನು ಹೆಡೆಮುರಿ ಕಟ್ಟಿ ಎಳೆದುಕೊಂಡು ಹೋಗುವುದು ದೊಡ್ಡ ಕೆಲಸವೇನಾಗಿರಲಿಲ್ಲ. ಆದರೆ, ಈ ಕೆಲಸ ಮಾಡದೇ ಅವರ ಮೇಲೆ ಗುಂಡು ಹಾರಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಗೆ ಸ್ಪಷ್ಟ ನಿದರ್ಶನವಾಗಿದೆ.
ಪೊಲೀಸರು ಈ ವಿಚಾರದಲ್ಲಿ ಬಹಳಷ್ಟು ಬುದ್ಧಿವಂತಿಕೆ ಉಪಯೋಗಿಸಿರುವುದು ಕಂಡುಬರುತ್ತದೆ. ಮೊದಲಿನಿಂದಲೂ ಗುಂಡು ಹಾರಿಸಿಯೇ ಇಲ್ಲ ಎಂದು ವಾದ ಮಂಡಿಸುತ್ತಾ ಬಂದಿರುವ ಪೊಲೀಸರು, ಇದಕ್ಕೆ ಪೂರಕವಾಗಿಯೇ ಎಫ್ಐಆರ್ ಗಳನ್ನು ದಾಖಲು ಮಾಡಿದ್ದಾರೆ. ಗಲಾಟೆಗೆ ಸಂಬಂಧಿಸಿದಂತೆ ಜಾಮಿಯಾ ನಗರ ಮತ್ತು ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ಎಫ್ಐಆರ್ ದಾಖಲು ಮಾಡಿರುವ ಪೊಲೀಸರು ಅದರಲ್ಲಿ ಎಲ್ಲಿಯೂ ಗುಂಡು ಹಾರಿಸಿದ ಬಗ್ಗೆ ಉಲ್ಲೇಖ ಮಾಡಿಲ್ಲ.
ಪೊಲೀಸರು ಸುಳ್ಳು ಹೇಳಿದ್ದಾರೆ ಎಂಬುದಕ್ಕೆ ಇಲ್ಲಿ ಸ್ಪಷ್ಟ ಉದಾಹರಣೆ ಇದೆ. ಘರ್ಷಣೆ ನಡೆದು ಮೂರು ದಿನಗಳ ನಂತರ ವಿಡೀಯೋವೊಂದು ಬಿಡುಗಡೆಯಾಗಿದ್ದು, ಇಬ್ಬರು ಪೊಲೀಸರು ವಿದ್ಯಾರ್ಥಿಗಳತ್ತ ಗುಂಡು ಹಾರಿಸುತ್ತಿದ್ದಾರೆ ಮತ್ತು ಅವರ ಪಕ್ಕದಲ್ಲಿಯೇ ಹಿರಿಯ ಪೊಲೀಸ್ ಅಧಿಕಾರಿ ಇದ್ದದ್ದು ಕಂಡುಬಂದಿದೆ.
ಗುಂಡು ಹಾರಿಸಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಕೆಲವು ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಇಳಿದಿದ್ದರಿಂದ ಆತ್ಮರಕ್ಷಣೆಗೆಂದು ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲಾಗಿತ್ತು ಎಂಬುದನ್ನು ಈ ಅಧಿಕಾರಿ ಒಪ್ಪಿಕೊಂಡಿದ್ದಾರೆ. ಆದರೆ, ಈ ವಿಚಾರವನ್ನು ಬಹಿರಂಗವಾಗಿ ಹಂಚಿಕೊಳ್ಳಲು ಇಷ್ಟಪಟ್ಟಿಲ್ಲ.
ಇನ್ನು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದ ನಂತರ ವಿದ್ಯಾರ್ಥಿಗಳನ್ನು ಡಿಸ್ ಚಾರ್ಜ್ ಮಾಡಲಾಗಿದೆ. ಅವರ ದೇಹದೊಳಗೆ ಹೊಕ್ಕಿದ್ದ ಗುಂಡಿನ ಚೂರನ್ನು ಹೊರತೆಗೆದು ಅದನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರೂ ನಡೆಸಿಲ್ಲ ಎಂದು ಪೊಲೀಸರು ಪ್ರತಿಪಾದಿಸುತ್ತಿರುವುದು ಏಕೆ? ಇವರ ಮೇಲೆ ಯಾವ ರಾಜಕೀಯ ಪ್ರಭಾವ ಬೀರಿದೆ? ಪೊಲೀಸರು ಒಂದು ಆಡಳಿತಾರೂಢ ರಾಜಕೀಯ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆಯೇ? ಎಂಬುದರ ಬಗ್ಗೆಯೇ ಒಂದು ಸಮಗ್ರ ತನಿಖೆಯಾಗಬೇಕಾಗಿದೆ.
ಕೃಪೆ: ದಿ ವೈರ್