ಭಾರತ ಬಿಟ್ಟು ಗಲ್ಫ್ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ಉದ್ಯೋಗ ಅರಸಿಕೊಂಡು ಹೋಗಿರುತ್ತಾರೆ. ಮಾರ್ಚ್ 24ರಂದು ಏಕಾಏಕಿ ಲಾಕ್ಡೌನ್ ನಿಂದ ಎಲ್ಲರೂ ವಿದೇಶಗಳಲ್ಲೇ ಸಿಲುಕಿದ್ದಾರೆ. ಅದರಲ್ಲಿ ಅರಬ್ ರಾಷ್ಟ್ರಗಳಾದ ಯುಎಇ, ಸೌದಿ ಅರೇಬಿಯಾ, ಕುವೈತ್, ಒಮನ್, ಕತಾರ್ ಮತ್ತು ಬಹರೈನ್ ಗಳಲ್ಲಿ ಶೇಕಡ 70 ರಷ್ಟು ಭಾರತೀಯರು ಸಿಲುಕಿದ್ದು, ಕರೋನಾ ಸಂಕಷ್ಟ ಎದುರಾದ ಬಳಿಕ ಅದೆಷ್ಟೋ ಮಂದಿ ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಈ ರೀತಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆ ಮಾಡಲು ಭಾರತೀಯ ನೌಕಾ ಪಡೆ ತಯಾರಿ ನಡೆಸಿದ್ದು, ನೌಕಾಪಡೆಯ ಮೂರು ನೌಕೆಗಳಲ್ಲಿ ಭಾರತೀಯರನ್ನು ವಾಪಸ್ ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಭಾರತೀಯ ನೌಕಾಪಡೆಯ ʼಜಲಾಶ್ವʼ ಏಕಕಾಲದಲ್ಲಿ ಸಾವಿರಾರು ಜನರನ್ನು ಕರೆದುಕೊಂಡು ಬರುವ ಸಾಮರ್ಥ್ಯ ಹೊಂದಿದ್ದು, ಇದೇ ರೀತಿಯ ಮೂರು ನೌಕೆಗಳು ಭಾರತೀಯರನ್ನು ಹೊತ್ತು ಬರಲಿದೆ. ಗಲ್ಫ್ ರಾಷ್ಟ್ರಗಳಿಂದ ಪ್ರಯಾಣಿಕರನ್ನು ಕರೆತರುವ ಮುನ್ನ ತಪಾಸಣೆ ನಡೆಸಲಿದ್ದು, ನೌಕೆಗಳಲ್ಲೂ ಕ್ವಾರಂಟೈನ್ ಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಪ್ರಯಾಣಿಕರನ್ನು ಸಾಮಾಜಿಕ ಅಂತರ ಕಾಯ್ದುಕೊಂಡೇ ಕರೆದುಕೊಂಡು ಬರುವುದಕ್ಕೆ ಭಾರತೀಯ ನೌಕೆ ಮುಂದಾಗಿದೆ. ಪೆಟ್ರೋಲಿಯಂ ಕಣಜ ಎನಿಸಿಕೊಂಡಿರುವ 6 ಗಲ್ಫ್ ರಾಷ್ಟ್ರಗಳು ವ್ಯಾಪಾರ ವಹಿವಾಟು ಕುಸಿತದಿಂದ ಕಂಗೆಟ್ಟಿದ್ದು, ವಿದೇಶಿಗರನ್ನು ಕೆಲಸದಿಂದ ವಜಾ ಮಾಡುತ್ತಿವೆ. ಇದರಿಂದ ಉದ್ಯೋಗ ಅರಸಿ ಗಲ್ಫ್ ರಾಷ್ಟ್ರಗಳತ್ತ ಹೋಗಿದ್ದವರು ವಾಪಸ್ ಭಾರತಾಂಬೆಯ ಮಡಿಲು ಸೇರುವ ಸಮಯ ಬಂದಾಗಿದೆ.
ಭಾರತ ಸರ್ಕಾರ ಹೊರಡಿಸಿರುವ ಸೂಚನೆಯನ್ನು ಪಾಲಿಸುತ್ತ ಒಂದು ಬಾರಿಗೆ ಒಂದು ಹಡಗಿನಲ್ಲಿ ಕೇವಲ 500 ಜನರನ್ನು ಸಾಗಿಸಲು ಅವಕಾಶವಿದ್ದು, ಸಾವಿರಾರು ಜನರನ್ನು ಕರೆತರಲು ನೂರಾರು ಬಾರಿ ಸಂಚಾರ ಮಾಡಬೇಕಾದ ಅಗತ್ಯವಿದೆ. ತಪಾಸಣೆ ಬಳಿಕ ಹಡಿಗಿನಲ್ಲೂ ನಿಗಾ ವಹಿಸಿಕೊಂಡೇ ಭಾರತಕ್ಕೆ ಕರೆತರಲಾಗುವುದು ಎನ್ನಲಾಗಿದೆ. ಪುರುಷರಿಗೆ ಹಡಗಿನ ಮೇಲ೦ತಸ್ತುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ಹಾಗೂ ಮಕ್ಕಳಿಗೆ ಕೆಳ ಅಂತಸ್ತುಗಳಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಪ್ರಯಾಣಕ್ಕಾಗಿ ಹಡಗುಗಳನ್ನು ಮಾರ್ಪಾಡು ಮಾಡಲಾಗಿದೆ. ಹಡಗಿನಲ್ಲಿ ವಾಸಿಸಲು ಬೇಕಾದ ಆಹಾರ ಪದಾರ್ಥಗಳನ್ನು ಸಂಗ್ರಹಿಸಲಾಗಿದೆ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಕೊಚ್ಚಿ, ವೈಜಾಗ್, ಕಾರವಾರದ ನೌಕಾನೆಲೆಗಳಲ್ಲೂ ಸಿದ್ಧತೆ ನಡೆಸಲಾಗಿದೆ.
ನೌಕಾಪಡೆ ಜೊತೆಗೆ ಏರ್ಫೋರ್ಸ್ ಕೂಡ ಕೈ ಜೋಡಿಸಲಿದ್ದು, ಲಕ್ಷಾಂತರ ಜನರನ್ನು ಮಧ್ಯ ಪ್ರಾಚ್ಯ ರಾಷ್ಟ್ರಗಳಿಂದ ವಾಪಸ್ ಕರೆತರುವುದು ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ. ಲಕ್ಷಾಂತರ ಜನರನ್ನು ವಾಪಸ್ ಕರೆದುಕೊಂಡು ಬರಲಿದ್ದು, 2 ವಾರಗಳ ಕಾಲ ಕ್ವಾರಂಟೈನ್ ಮಾಡಲಿದ್ದು, ನಂತರ ಆರೋಗ್ಯ ತಪಾಸಣೆ ನಡೆಸಿ ಯಾವುದೇ ಸಮಸ್ಯೆ ಇಲ್ಲ ಎನ್ನುವುದು ಪತ್ತೆಯಾದರೆ ಮಾತ್ರ ಬಿಡುಗಡೆ ಮಾಡಲಾಗುವುದು. ಹೊರ ರಾಷ್ಟ್ರಗಳಿಂದ ಬಂದವರನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾಗಿದ್ದು, ಎಲ್ಲಾ ರಾಜ್ಯಗಳು ಸಿದ್ಧತೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದೆ. ವಾಯುಸೇನೆ ಕೂಡ 11 C-17 ವಿಮಾನಗಳನ್ನು ಬಳಸುತ್ತಿದ್ದು, ಒಂದು ಪ್ರಯಾಣಕ್ಕೆ 100 ಜನರನ್ನು ಹೊತ್ತು ತರಲಿದೆ. ಇನ್ನೂ ಏರ್ ಇಂಡಿಯಾ ಕೂಡ ವಿಶೇಷ ವಿಮಾನಗಳ ಸಂಚಾರಕ್ಕೆ ಸಿದ್ಧತೆ ನಡೆಸಲಾಗಿದೆ.
ಗಲ್ಫ್ ರಾಷ್ಟ್ರಗಳಲ್ಲಿ ಭಾರತದ ಸರಿ ಸುಮಾರು 80 ಲಕ್ಷ ಜನರು ಉದ್ಯೋಗ ಮಾಡುತ್ತಿದ್ದಾರೆ. ಅದರಲ್ಲೂ ಸಾವಿರಾರು ಜನರು ʼವಿಸಿಟಿಂಗ್ʼ ವೀಸಾದಲ್ಲಿ ಗಲ್ಫ್ ರಾಷ್ಟ್ರಗಳಿಗೆ ತೆರಳಿದ್ದಾರೆ. ಅದರಲ್ಲೂ ಗರ್ಭಿಣಿ ಮಹಿಳೆಯರು, ಕೆಲಸ ಕಳೆದುಕೊಂಡಿರುವ ನಿರುದ್ಯೋಗಿ ಕಾರ್ಮಿಕರು ಗಲ್ಫ್ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ವಾಪಸ್ ಕರೆತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ಕೊಡಬೇಕು ಎಂದು ಸುಪ್ರೀಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸೌದಿ ಅರೇಬಿಯಾದಲ್ಲಿ 17,522 ಕರೋನಾ ಸೋಂಕು ತಗುಲಿದ್ದು, ಯುಎಇನಲ್ಲಿ 10,349 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ ಸಾಕಷ್ಟು ಭಾರತೀಯರೂ ಇದ್ದಾರೆ ಎನ್ನಲಾಗಿದೆ.
ಗಲ್ಫ್ ರಾಷ್ಟ್ರಗಳಲ್ಲಿ ಹೇಗಿದೆ ತಯಾರಿ..?
ಗಲ್ಫ್ ರಾಷ್ಟ್ರಗಳ ಧೂತವಾಸ ಕಚೇರಿಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು ಭಾರತೀಯರಿಗಾಗಿ ಒಂದು ʼಆ್ಯಪ್ʼ ಬಿಡುಗಡೆ ಮಾಡಲಾಗಿದೆ. ʼಆ್ಯಪ್ʼ ಮೂಲಕ ಮಾಹಿತಿ ಸಂಗ್ರಹ ಮಾಡುತ್ತಿದ್ದು ಆರೋಗ್ಯದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಮೊದಲಿಗೆ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರನ್ನು ಕರೆದೊಯ್ಯಲಾಗುದು ಎಂದು ತಿಳಿಸಿದ್ದು, ಆ ನಂತರ ಸರತಿಯಂತೆ ಎಲ್ಲಾ ಭಾರತೀಯರನ್ನು ಭಾರತಕ್ಕೆ ಕರೆತರುವುದಕ್ಕೆ ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಕಂಪನಿಗಳು ಕೆಲಸದಿಂದ ತೆಗೆದಿರುವ ಕಾರ್ಮಿಕರಿಗೂ ದಿನನಿತ್ಯದ ಖರ್ಚು ವೆಚ್ಚವನ್ನು ನೋಡಿಕೊಳ್ಳಲಾಗುತ್ತಿದೆ. ಆದಷ್ಟೂ ಬೇಗ ಭಾರತಕ್ಕೆ ಕಳುಹಿಸಿಕೊಡಲು ಗಲ್ಫ್ ರಾಷ್ಟ್ರಗಳು ಸಜ್ಜಾಗಿವೆ.