ಸಫೂರಾ ಝರ್ಗಾರ್.. ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿ ಬಿಡುಗಡೆಗಾಗಿ ಕಾಯತ್ತಿರುವ 5 ತಿಂಗಳ ಗರ್ಭಿಣಿ ಹೆಣ್ಣು ಮಗಳು. ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆ ಸಂಬಂಧ ಆಕೆಯನ್ನ ಪ್ರಮುಖ ಸಂಚುಕೋರಳು ಎಂದು ಆರೋಪಿಸಿ ಎಪ್ರಿಲ್ 13 ನೇ ತಾರೀಕಿಗೆ ಬಂಧಿಸಲಾಗುತ್ತದೆ. ಅಂದಿನಿಂದ ನಿರಂತರ ಕಾನೂನು ಸಂಘರ್ಷದ ಹೊರತಾಗಿಯೂ ಆಕೆಗೆ ಜಾಮೀನು ನೀಡಲು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ನಿರಾಕರಿಸುತ್ತಲೇ ಬಂದಿದೆ. ಆದರೆ ಅದೇ ಸಮಯಕ್ಕೆ UAPA ಕಾಯ್ದೆಯಡಿ ಬಂಧಿಸಲ್ಪಟ್ಟ ಮನೀಶಾ ಸಿರೋಹಿ ಎಂಬ ಗನ್ ಸಪ್ಲೈಯರ್ ಗೆ ಇದೇ ಪಟಿಯಾಲ ಹೌಸ್ ನ್ಯಾಯಾಲಯ ಜಾಮೀನು ನೀಡಿದೆ. ಆತನ ಮೇಲೆ ದೆಹಲಿ ಗಲಭೆ ಸಮಯದಲ್ಲಿ ಗಲಭೆ ನಿರತ ಬಲಪಂಥೀಯ ಗುಂಪಿಗೆ ಗನ್ ಪೂರೈಸಿರುವ ಆರೋಪವಿತ್ತು. ಆದರೂ ಕಳೆದ ತಿಂಗಳ ಎರಡನೇ ವಾರದಲ್ಲಿ ಆತನು ಜಾಮೀನು ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಆದರೆ ಅದೇ ಸೆಕ್ಷನ್‌ನಡಿ ಬಂಧಿಸಲ್ಪಟ್ಟ ಸಫೂರಾ ಝರ್ಗಾರ್ ಗೆ ಮಾತ್ರ ಜಾಮೀನು ನಿರಾಕರಿಸುತ್ತಲೇ ಬರಲಾಗಿದೆ. ಕಳೆದ ಗುರುವಾರವೂ (ಜೂನ್ 4) ನಡೆದ ವಿಚಾರಣೆಯಲ್ಲೂ ಗರ್ಭಿಣಿ ಸಫೂರಾ ಝರ್ಗಾರ್ ಗೆ ಮತ್ತೊಂದು ಬಾರಿ ಜಾಮೀನು ನಿರಾಕರಿಸಲಾಯಿತು.
ಪ್ರಕರಣದ ವಿಚಾರಣೆ ನಡೆಸಿದ್ದ ಪಟಿಯಾಲ ಹೌಸ್ ನ್ಯಾಯಾಲಯದ ನ್ಯಾಯಮೂರ್ತಿ ಧರ್ಮೇಂದ್ರ ರಾಣ ಜಾಮೀನು ನೀಡಲು ನಿರಾಕರಿಸಿ ವಿವರಣೆ ನೀಡಿದ್ದರು. ”ಬೆಂಕಿ ಕೆಂಡದ ಜೊತೆ ಆಟವಾಡುವಾಗ, ಬೆಂಕಿ ಹತ್ತಿಕೊಂಡು ಹರಡಿದರೆ ಅದಕ್ಕೆ ಗಾಳಿಯನ್ನ ದೂಷಿಸುವಂತಿಲ್ಲ. ಅದೇ ಪ್ರಕಾರ ಸಹ-ಪಿತೂರಿಕೋರರ ದ್ವೇಷದ ಭಾಷಣ ಹಾಗೂ ಕೃತ್ಯಗಳು ಕೂಡಾ ಸೆಕ್ಷನ್ 10ರ ಅಡಿ ಗಲಭೆ ಹತ್ತಿಕೊಳ್ಳುವಲ್ಲಿ ಅಷ್ಟೇ ಮಹತ್ವದ್ದಾಗಿರುತ್ತದೆ” ಎಂದಿದ್ದಾರೆ.
ಇನ್ನು ಸಫೂರಾ ಝರ್ಗಾರ್ ಪರ ವಾದಿಸಿದ್ದ ರಿತೇಶ್ ಧಾರ್ ದುಬೆ ಹಾಗು ತ್ರಿದೀಪ್ ಪಾಯಸ್ ಆಕೆಯ ಮೇಲೆ ಹೊರಿಸಿದ್ದ ಆರೋಪಗಳು ಆಧಾರ ರಹಿತ ಎಂದು ತಮ್ಮ ವಾದ ಮುಂದಿರಿಸಿದರಾದರೂ ನ್ಯಾಯಾಲಯ ಅವರ ವಾದವನ್ನ ಪರಿಗಣಿಸಲಿಲ್ಲ. ತನಿಖಾ ಸಂಸ್ಥೆ ಸರಕಾರದ ಕಾನೂನು ವಿರೋಧಿಸಿದ್ದಕ್ಕಾಗಿ ಅಮಾಯಕ ವಿದ್ಯಾರ್ಥಿಗಳ ಮೇಲೆ ಆರೋಪವನ್ನ ದಾಖಲು ಮಾಡಲಾಗಿದೆ. ಅಲ್ಲದೇ ಪ್ರಾಸಿಕ್ಯೂಷನ್ ಸಲ್ಲಿಸಿರುವ ಕಡತದಲ್ಲೂ ಸಫೂರಾ ಝರ್ಗಾರ್ ಫೆಬ್ರವರಿ 23, 2020 ರಂದು ಚಾಂದ್ ಬಾಗ್ ನಲ್ಲಿ ಪ್ರಚೋದನಕಾರಿ ಭಾಷಣ ನಡೆಸಿದ್ದಾರೆ ಅನ್ನೋದು ತಪ್ಪು ಮಾಹಿತಿಯಿಂದ ಕೂಡಿದೆ. ಅಂದು ಅವರು ಚಾಂದ್ ಬಾಗ್ ಭೇಟಿ ನೀಡಿದ್ದು ಗಲಭೆ ಆರಂಭಕ್ಕೂ ಮುನ್ನವೇ ಆಗಿತ್ತು. ಮಾತ್ರವಲ್ಲದೇ ಅಂದು ಅವರು ಚಾಂದ್ ಬಾಗ್ ನಲ್ಲಿ ಯಾವುದೇ ಸಭೆಯನ್ನ ಉದ್ದೇಶಿಸಿ ಭಾಷಣ ಮಾಡಿರಲಿಲ್ಲ. ಆದರೆ ಆ ದಿನ ಅವರು ಭಾಷಣ ಮಾಡಿದ್ದು ಖಜೂರಿಯಲ್ಲಾಗಿದ್ದು, ಅದರಲ್ಲೂ ಯಾವುದೇ ರೀತಿಯ ದ್ವೇಷ ಅಥವಾ ಪ್ರಚೋದನಕಾರಿ ಅಂಶ ಹೊಂದಿಲ್ಲ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು.
Also Read: ಅರ್ನಬ್ ಗೋಸ್ವಾಮಿ ಪ್ರಕರಣದ ವಿಚಾರಣೆ; ಸುಪ್ರೀಂ ಕೋರ್ಟ್ ತಾರತಮ್ಯಕ್ಕೆ ಟ್ವಿಟ್ಟಿಗರ ಅಸಮಾಧಾನ!
Also Read: ಸರ್ಕಾರದ ವಿರುದ್ಧದ ಹೋರಾಟಗಳನ್ನೇ ಅಪರಾಧಿಕರಿಸುತ್ತಿರುವ ಕೇಂದ್ರ ಸರಕಾರ
Also Read: CAA ವಿರೋಧಿ ಹೋರಾಟಗಾರ್ತಿ ಸಫೂರಾ ಝರ್ಗಾರ್ ಬಂಧನಕ್ಕೆ ಲಂಡನ್ ಮೂಲದ 90 ವಿದ್ವಾಂಸರ ಕಳವಳ
ಆದರೆ ಅಚ್ಚರಿ ಅಂದ್ರೆ, ಇದರ ವಿರುದ್ಧವಾಗಿ ವಾದ ಮಂಡಿಸಬೇಕಿದ್ದ ಪ್ರಾಸಿಕ್ಯೂಷನ್ ಇದರ ವಿರುದ್ಧವಾಗಿ ಸಲ್ಲಿಸಿದ ಮೆಮೋ (Seizure memo) ವಿಚಿತ್ರವಾಗಿತ್ತು. ಕಾರಣ, ಪ್ರಾಸಿಕ್ಯೂಷನ್ ಸಲ್ಲಿಸಿದ ಆ ಮೆಮೋ ಖಜೂರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಇನ್ನೊಂದು FIR (FIR 101/2020) ನ ಆರೋಪಗಳನ್ನ ಈ ಪ್ರಕರಣಕ್ಕೆ ಸಂಬಂಧ ಕಲ್ಪಿಸಿ ಮೆಮೋ ಸಲ್ಲಿಸುತ್ತದೆ. ಆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕನ ಮನೆಯಿಂದ ನಿಂತು ಕಲ್ಲು, ಬಾಟಲಿ, ಇಟ್ಟಿಗೆ ಹಾಗೂ ಇನ್ನಿತರ ಆಯುಧಗಳಿಂದ ದಾಳಿ ನಡೆಸಿರುವ ಆರೋಪವಿದ್ದು, ಅದರಿಂದಾಗಿ ಆಪ್ ನಾಯಕ ತಾಹೀರ್ ಹುಸೇನ್ ಪಕ್ಷದಿಂದಲೂ ವಜಾಗೊಂಡಿದ್ದರು. ದುರಂತ ಅಂದರೆ ಇದೇ FIR ಅನ್ನು ಸಫೂರಾ ಝರ್ಗಾರ್ ಪ್ರಕರಣದ FIR 59/2020 ಗೂ ಸಂಬಂಧ ಕಲ್ಪಿಸಲಾಗುತ್ತದೆ.
ಇದನ್ನ ವಿರೋಧಿಸಿದ ಸಫೂರಾ ಪರ ವಕೀಲರು, ಕೇವಲ ಆಕೆ ಮಾಡಿರುವ ಭಾಷಣ ಹಾಗೂ ಚಟುವಟಿಕೆಗೆ ಮಾತ್ರ ಆಕೆಯನ್ನ ಹೊಣೆಗಾರರನ್ನಾಗಿಸಬೇಕೆ ವಿನಃ ಗುಂಪಿನ ಇತರ ಸದಸ್ಯರ ವಿಚಾರಕ್ಕೆ ಸಂಬಂಧಿಸಿ ಹೊಣೆಗಾರರನ್ನಾಗಿಸಕೂಡದು ಅನ್ನೋ ವಾದವನ್ನ ನ್ಯಾಯಾಲಯವು ಆಲಿಸಲು ಇಚ್ಛೆಪಡಲಿಲ್ಲ.
ಆದರೆ ನ್ಯಾಯಾಧೀಶರು ಪ್ರತ್ಯಕ್ಷದರ್ಶಿ ಹೇಳಿಕೆ ಹಾಗೂ ವಾಟ್ಸಾಪ್ ಸಂದೇಶವನ್ನೇ ಬಲವಾಗಿ ಆಧಾರವಾಗಿ ಹಿಡಿದುಕೊಂಡಿದ್ದು, ಸಫೂರಾ ಝರ್ಗಾರ್ ಗಲಭೆ ಸ್ಥಳದಲ್ಲಿದ್ದು, ರಸ್ತೆ ಬಂದ್ ಮಾಡುವ ಮೂಲಕ ಪಿತೂರಿಯಲ್ಲಿ ಭಾಗವಹಿಸಿದ್ದಾಗಿ ತಿಳಿಸಿ ಜಾಮೀನು ನಿರಾಕರಿಸಿದೆ.
ಇನ್ನು 21 ವಾರಗಳ ಗರ್ಭಿಣಿ ಆಗಿರುವ ಹಿನ್ನೆಲೆ ಸಫೂರಾ ಪರ ವಕೀಲರು ಮಾನವೀಯ ದೃಷ್ಟಿಯಿಂದಲಾದರೂ ಜಾಮೀನು ನೀಡುವಂತೆ ಕೇಳಿಕೊಂಡರು. ಅಲ್ಲದೇ ಆಕೆ ಗರ್ಭದ ಅಂಡಾಶಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆಯೂ ಮನವರಿಕೆ ಮಾಡಿಕೊಟ್ಟರು. ಜೊತೆಗೆ ದೆಹಲಿಯ ಜೈಲಿನಲ್ಲಿ ಈಗಾಗಲೇ ಮೂರು ಮಂದಿಗೆ ಕರೋನಾ ಸೋಂಕು ದೃಢಪಟ್ಟಿರುವ ಬಗ್ಗೆಯೂ ತಿಳಿ ಹೇಳಲಾಯಿತು. ಆದರೆ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಧೀಶರು, ಆಕೆಗೆ ಬೇಕಾದ ಔಷಧಿ ಹಾಗೂ ನೆರವು ನೀಡುವಂತೆ ಜೈಲು ಅಧೀಕ್ಷಕರಿಗೆ ಸೂಚನೆ ನೀಡಿದ್ದಾರೆ.
ಒಟ್ಟಿನಲ್ಲಿ ಕೇಂದ್ರ ಸರಕಾರದ ಸಿಎಎ ಕಾಯ್ದೆ ವಿರೋಧಿಸಿದ್ದ ಏಕಮಾತ್ರ ಕಾರಣಕ್ಕಾಗಿ ಹತ್ತಾರು ವಿದ್ಯಾರ್ಥಿಗಳ ಮೇಲೆ ಕಠೀಣ ಕಾಯ್ದೆ ಹೇರಿ ಜೈಲಿಗೆ ತಳ್ಳಲಾಗಿದೆ. ಆದರೆ ಅದರಲ್ಲೂ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಸಂಶೋಧನಾ ವಿದ್ಯಾರ್ಥಿನಿ, ವಿವಾಹಿತೆ, ಗರ್ಭಿಣಿ ಸಫೂರಾ ಝರ್ಗಾರ್ ಪ್ರಕರಣದಲ್ಲಿ ನ್ಯಾಯಾಂಗವು ಸತತವಾಗಿ ಜಾಮೀನು ನಿರಾಕರಿಸುತ್ತಲೇ ಬಂದಿದೆ.
ಇನ್ನು ಸಫೂರಾ ಝರ್ಗಾರ್ ಜಾಮೀನು ನಿರಾಕರಣೆ ಸಂಬಂಧ ʼದಿ ಕ್ವಿಂಟ್ʼ ಜೊತೆ ಮಾತನಾಡಿರುವ ಆಕೆಯ ಸಹೋದರಿ ಸಮೀಯಾ ಝರ್ಗಾರ್ “ ನೀವೆಲ್ಲರೂ ಅಂದ್ಕೊಂಡಿರುವುದಕ್ಕಿಂತಲೂ ಆಕೆ ಬಲಿಷ್ಠವಾಗಿದ್ದಾಳೆ. ಆಕೆ ಓದು ಮತ್ತು ಪ್ರಾರ್ಥನೆ ಎರಡರಲ್ಲೂ ತೊಡಗಿಸಿಕೊಂಡಿದ್ದಾಳೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ನ್ಯಾಯಾಂಗ ವ್ಯವಸ್ಥೆಯ ಈ ಇಬ್ಬಗೆ ನೀತಿ ವಿರುದ್ಧ ಟ್ವಿಟ್ಟರ್ ನಲ್ಲಿ ಅಸಮಾಧಾನ ವ್ಯಕ್ತವಾಗುತ್ತಲೇ ಬಂದಿವೆ. ಜೂನ್ 4 ರ ವಿಚಾರಣೆ ಸಮಯದಲ್ಲೂ ಸಫೂರಾ ಝರ್ಗಾರ್ ಗೆ ಜಾಮೀನು ನೀಡಲು ನಿರಾಕರಿಸಿ ಜಡ್ಜ್ ಹೇಳಿರುವ ಹೇಳಿಕೆ ಬಗ್ಗೆಯೂ ಸಾಕಷ್ಟು ಅಸಮಾಧಾನ ವ್ಯಕ್ತವಾಗಿದೆ. ಸೆಲೆಬ್ರಿಟಿಗಳು, ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳು ಟ್ವೀಟ್ ಮೂಲಕ ಜಾಮೀನು ನಿರಾಕರಣೆಗೆ ನೀಡಿದ ಹೇಳಿಕೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.