71ನೇ ಗಣರಾಜ್ಯೋತ್ಸವದಂದು ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈಗಿರು ರಾಮ ಜನ್ಮಭೂಮಿ ಸ್ಥಳದಿಂದ 20 ಕಿಲೋಮೀಟರ್ ದೂರದಲ್ಲಿರುವ ದನ್ನಿಪುರ್ ಗ್ರಾಮದಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗುವುದು.
ನವೆಂಬರ್ 2019ರ ಸುಪ್ರಿಂಕೋರ್ಟ್ ಆದೇಶದ ಪ್ರಕಾರ ಸುನ್ನಿ ವಕ್ಫ್ ಬೋರ್ಡ್ಗೆ ನೀಡಲಾಗಿದ್ದ 5 ಎಕರೆ ಪ್ರದೇಶದಲ್ಲಿ ಮಸೀದಿ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಸುನ್ನಿ ವಕ್ಫ್ ಬೋರ್ಡ್ನಿಂದ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಎಂಬ ಟ್ರಸ್ಟ್ ನಿರ್ಮಿಸಿದ ಆರು ತಿಂಗಳಿಗೆ ಮಸೀದಿ ನಿರ್ಮಾಣ ಕಾರ್ಯ ಆರಂಭಿಸುವ ನಿರ್ಧಾರವನ್ನು ತಾಳಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಟ್ರಸ್ಟ್ನ ಕಾರ್ಯದರ್ಶಿಯಾಗಿರುವ ಅಥರ್ ಹುಸೈನ್ ಅವರು ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿ, ದೇಶದಲ್ಲಿ ಸಂವಿಧಾನ ಜಾರಿಯಾಗಿ ಏಳು ದಶಕಗಳು ಪೂರ್ಣಗೊಂಡ ದಿನದಂದು ನಾವುಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದ್ದೇವೆ. ನಮ್ಮ ಸಂವಿಧಾನವು ಬಹುತ್ವದ ಮೇಲೆ ರೂಪಿತವಾಗಿದೆ. ಇದುವೇ ನಮ್ಮ ಮಸೀದಿ ನಿರ್ಮಾಣ ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಹೇಳಿದ್ದಾರೆ.
ಇಲ್ಲಿ ಕೇವಲ ಮಸೀದಿ ಮಾತ್ರವಲ್ಲದೇ, ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಅಡುಗೆ ಮನೆ ಸೇರಿದಂತೆ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಇತರ ಸೌಕರ್ಯಗಳನ್ನು ಕೂಡಾ ನಿರ್ಮಾಣ ಮಾಡಲಾಗುವುದು. ಈ ಯೋಜನೆಯ ನೀಲಿನಕ್ಷೆಯನ್ನು ಡಿಸೆಂಬರ್ 19ರಂದು ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುಮಾರು 300 ಬೆಡ್ಗಳ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುವ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಮಸೀದಿ ನಿರ್ಮಾಣ ಯೋಜನೆಯ ಮುಖ್ಯ ವಾಸ್ತುಶಿಲ್ಪಿಯಾದ ಪ್ರೊ. ಎಸ್ ಎಂ ಅಖ್ತರ್ ಅವರು ಹೇಳಿದ್ದಾರೆ.