ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಏಕೈಕ ರಾಷ್ಟ್ರ ಅದುವೇ ನಮ್ಮ ಭಾರತ. ಈ ದೇಶದಲ್ಲಿ ವಿವಿಧ ಪ್ರಾಂತ್ಯಗಳಲ್ಲಿ ವಿವಿಧ ಆಚರಣೆಗಳನ್ನು ಆಚರಿಸುವುದನ್ನು ಇಂದಿನವರೆಗೂ ನಾವು ಕಾಣಬಹುದು.ಅಂತಹದ್ದೇ ಒಂದು ವಿಶಿಷ್ಟ ಆಚರಣೆಯೂ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿಯೂ ಕೂಡ ಆಚರಿಸುವುದನ್ನು ನೋಡಬಹುದು ಅದುವೇ ಜೋಕುಮಾರಸ್ವಾಮಿ ಹಬ್ಬ.
ದೊಡ್ಡದಾದ ಬಿದಿರಿನ ಬುಟ್ಟಿಯಲ್ಲಿ ಜೋಕುಮಾರಸ್ವಾಮಿಯನ್ನಿಟ್ಟು ಜೋಕುಮಾರನ ಹಾಡನ್ನು ಹಾಡುತ್ತಾ ಗ್ರಾಮದ ಗ್ರಾಮೀಣ ಪ್ರದೇಶದ ಮಹಿಳೆಯರು ಎಳು ಗ್ರಾಮಗಳ ಪ್ರತಿಯೊಂದು ಮನೆಗೆ ಭೇಟಿ ನೀಡುತ್ತಾ ಮನೆಯ ಅಂಗಳದಲ್ಲಿ ಇಟ್ಟುಕೊಂಡು ಜೋಕುಮಾರಸ್ವಾಮಿಯ ಕಥಾಲೀಲಾ ಹಾಡುತ್ತಾರೆ.
ಜೋಕುರಸ್ವಾಮಿಯ ಹಬ್ಬದ ಹಿನ್ನಲೆ:
ಗಣೇಶ ವಿಸರ್ಜನೆ ನಂತರ ಭಾದ್ರಪದ ಮಾಸದ ಅಷ್ಟಮಿಯ ದಿನ ಜನಿಸಿ ಹುಟ್ಟುವ ಎಳು ದಿನಗಳ ಅಲ್ಪಾಯುಷಿ ಈ ಜೋಕುಮಾರ ಈ ಜೋಕುಮಾರನ ಮೂರ್ತಿಯನ್ನು ಹುತ್ತದ ಮಣ್ಣು ಹಾಗೂ ಎಣ್ಣೆ ಸಮ್ಮಿಶ್ರಣದಿಂದ ತಯಾರಿಸಿ ಬೇವಿನ ಎಲೆಗಳಿಂದ ಶೃಂಗರಿಸಿರುತ್ತಾರೆ.
ಈ ಜೋಕುಮಾರನನ್ನು ಜೋಕುಮಾರ ಹುಟ್ಟಲಿ, ಲೋಕವೆಲ್ಲ ಬೆಳಗಲಿ, ಆ ತಾಯಿ ಹಾಲು ಕರೆಯಲಿ, ಕಟ್ಟಿದ ಮೊಸರು ಕಟಿಯಲಿ ನಮ್ಮ ದೇವಿ…ಎಂದು ಹೀಗೆ ಸಾಮೂಹಿಕವಾಗಿ ಮಹಿಳೆಯರು ಜೋಕುಮಾರನ ಕುರಿತು ಜನಪದ ಶೈಲಿಯಲ್ಲಿ ಸೋಗಸಾಗಿ ಹಾಡುವ ಹಾಡುಗಳನ್ನು ಕೇಳುವುದೇ ಚಂದ ಮನಕ್ಕೆ ಆನಂದ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಡ್ಡಡ್ಡ ಮಳೆ ಬಂದು, ದೊಡ್ಡ ದೊಡ್ಡ ಕೆರಿ ತುಂಬಿ, ಗೊಡ್ಡುಗಳೆಲ್ಲಾ ಹೈನಾಗಿ ಜೋಕುಮಾರ. ಮಡಿವಾಳರ ಕೇರಿ ಹೊಕ್ಯಾನೆ ಜೋಕುಮಾರ, ಮುಡಿ ತುಂಬಾ ಹೂ ಮುಡಿದಂತೆ ಚಲುವಿ ತನ್ನ ಮಡದಿಯಾಗೆಂದ ಸುಕುಮಾರ. ಈ ರೀತಿ ಜನಪದ ಶೈಲಿಯಲ್ಲಿ ವಿಶಿಷ್ಟವಾಗಿ ಹಾಡುಗಳನ್ನು ಹಾಡುವ ಗಂಗಾ ಮತಸ್ಥರಾದ ಬಾರಿಕೇರ ಸಮುದಾಯದ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನನ್ನು ಬೇವಿನ ಎಲೆಗಳ ಮಧ್ಯೆ ಪ್ರತಿಷ್ಠಾಪಿಸಿಕೊಂಡು ಆತನ ಬಾಯಿಯಲ್ಲಿ ಬೆಣ್ಣೆಯನ್ನು ಇಟ್ಟು ಮನೆಗಳಿಗೆ ಹೊತ್ತೂಯ್ಯುವ ಜೋಗಪ್ಪನ ಹಬ್ಬದ ಆಚರಣೆಯು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಇನ್ನೂ ಆಚರಣೆಯಲ್ಲಿದೆ.
ಗಂಗಾಮತಸ್ಥರ ಮನೆಯಲ್ಲಿ ವಿಘ್ಞ ನಿವಾರಕ ಗಣೇಶ್ ವಿಸರ್ಜಜನೆಯ ನಂತರ ಜನಿಸಿರುವ ಜೋಕುಮಾರ ಸ್ವಾಮಿಯನ್ನು ಎಳು ದಿನ ಏಳು ಗ್ರಾಮಗಳಲ್ಲಿ ಗಂಗಾಮತ ಸಮುದಾಯದ ಬಾರಕೇರ್ ಸಮಾಜದ ಮಹಿಳೆಯರು ಜೋಕುಮಾರಸ್ವಾಮಿಯನ್ನು ಮೆರೆಸುವುದುಂಟು.
ಎಣ್ಣೆ ಮತ್ತು ಹುತ್ತದ ಮಣ್ಣಿನಿಂದ ತಯಾರಿಸಿದ ಜೋಕುಮಾರನನ್ನು ಹೊಸ ಬಿದಿರಿನ ಬುಟ್ಟಿಯಲ್ಲಿ ಪ್ರತಿಷ್ಠಾಪಿಸಿ ಬೇವಿನ ಎಲೆ, ಸಜ್ಜೆ, ಜೋಳ, ದಾಸವಾಳ ಹೂವಿನಿಂದ ಪೂಜೆ ಮಾಡಿ ಅಲಂಕರಿಸಲಾಗಿರುತ್ತದೆ. ಹೀಗೆ ಬುಟ್ಟಿಯಲ್ಲಿ ಹೊತ್ತೂಯ್ಯುವ ಜೋಕುಮಾರನಿಗೆ ಮನೆ ಮಂದಿ ಅಡಿಕೆ, ಎಲೆ, ಅಕ್ಕಿ, ಜೋಳ ಇತ್ಯಾದಿ ಕಾಳುಕಡಿ, ಎಣ್ಣೆ ಉಪ್ಪು, ಹುಣಸೆ, ಒಣ ಮೆಣಸಿನಕಾಯಿ, ಬೆಲ್ಲ ಮುಂತಾದ ಪದಾರ್ಥಗಳನ್ನು ಕೊಡುವರು.
ಜೊಕುಮಾರನ ಹುಣ್ಣಿಮೆ ರಾತ್ರಿ ಅಗಸರ ಮನೆಗೆ ತೆರಳಿ ಬಿಳಿ ಬಟ್ಟೆ ಪಡೆದು ಜೋಕುಮಾರನ ಮೂರ್ತಿಗೆ ಸುತ್ತಿದ ನಂತರ ಗ್ರಾಮದ ಸಂಪ್ರದಾಯದ ಪ್ರಕಾರ ಸ್ಮಶಾನದಲ್ಲಿ ಅಂತ್ಯಕ್ರಿಯೆ ವಿಧಿವಿಧಾನವನ್ನು ನೆರವೇರಿಸುವ ವಾಡಿಕೆಯುಂಟು. ಸಂಚರಿಸಿದ ಸಂದರ್ಭದಲ್ಲಿ ದೊರೆತ ಧವಸ ಧಾನ್ಯಗಳಿಂದ ಅಡುಗೆ ಮಾಡಿ ಜನಪದ ದೈವದ ದೇವರಾದ ಜೋಕುಮಾರಸ್ವಾಮಿಗೆ ನೈವೇದ್ಯ ಸಮರ್ಪಿಸಿದ ನಂತರ ಸಾಮೂಹಿಕ ಭೋಜನದ ವ್ಯವಸ್ಥೆಯನ್ನು ಮಾಡುವುದು ಉಂಟು.
ಜೋಕುಮಾರಸ್ವಾಮಿಯ ಜನಪದ ಕಥೆ:
ಗಣೇಶನ ವಿಸರ್ಜನೆಯಾದ ನಂತರ ಮರುದಿನ ಆರಂಭವಾಗುವ ಜೋಕುಮಾರಸ್ವಾಮಿ ಆಚರಣೆ ಹಿಂದೆಯೂ ಒಂದು ಜಾನಪದ ಕಥೆಯಿದೆ.
‘ಜೋಕ ಮತ್ತು ಎಳೆಗೌರಿ’ ದಂಪತಿಗೆ ಸಂತಾನ ಪ್ರಾಪ್ತಿಯಾಗದ ಕಾರಣ ಶಿವನನ್ನು ಆರಾಧಿಸಿ ಪೂಜಾ ಫಲದಿಂದ ಶಿವನ ಕೃಪೆಯಿಂದ ಒಬ್ಬ ಗಂಡು ಮಗ ಜನನವಾಗುತ್ತದೆ. ಆದರೆ ಆ ಮಗುವಿಗೆ ಶೀಘ್ರ ಬೆಳವಣಿಗೆ ಹಾಗೂ ಏಳು ದಿನಗಳ ಆಯಸ್ಸು ಮಾತ್ರ ಇರುತ್ತದೆ. ಹೀಗಿರಬೇಕಾದರೆ, ಒಮ್ಮೆ ನಾಡಿನಲ್ಲಿ ಮಳೆ ಹೋಗಿ ಭೀಕರ ಬರ ಬಿದ್ದು ಬೆಳೆಗಳೆಲ್ಲಾ ಒಣಗಿ ಜನರ ಸಂಕಟ ಮುಗಿಲು ಮುಟ್ಟುತ್ತದೆ. ಆಗ ಜೋಕುಮಾರ ತನ್ನ ಕುದುರೆಯನ್ನೇರಿ ಲೋಕ ಸಂಚಾರ ಮಾಡುವನು.ಜೋಕುಮಾರನು ತನ್ನ ಮೇಲು ಹೊದಿಕೆಯನ್ನು ಒಮ್ಮೆ ಜೋರಾಗಿ ಬೀಸಿದಾಗ ಅದರ ಸೆಳೆತಕ್ಕೆ ಚದುರಿದ ಮೋಡಗಳು ಮಳೆ ಸುರಿಸುತ್ತವೆ. ಯಥೇಚ್ಛವಾಗಿ ಬಿದ್ದ ಮಳೆಯಿಂದಾಗಿ ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತವೆ. ಬತ್ತಿ ಬರಿದಾಗಿದ್ದ ಕೆರೆ ಕುಂಟೆಗಳು ತುಂಬಿತುಳುಕುತ್ತವೆ.
ಇದರಿಂದ ಸಂತಸಗೊಂಡು ಜೋಕುಮಾರನು ಹಾಗೆ ಹೊಲ ಗದ್ದೆಗಳಲ್ಲಿ ಸಂಚರಿಸುತ್ತಿರುವಾಗ ಸುಂದರಿಯಾದ ಯುವತಿಯನ್ನು ನೋಡಿ ಇಷ್ಟಪಡುತ್ತಾನೆ. ಇದನ್ನು ಸಹಿಸದ ಆ ಯುವತಿಯ ತಂದೆ ಜೋಕುಮಾರನ ತಲೆಯನ್ನು ಕತ್ತರಿಸಿ ನದಿಗೆ ಎಸೆಯುತ್ತಾನೆ. ಆ ತಲೆಯು ಒಬ್ಬ ಮೀನುಗಾರನಿಗೆ ದೊರಕುತ್ತದೆ. ಆತನು ಇದು ಜೋಕುಮಾರನ ತಲೆ ಎಂದು ಗುರುತಿಸುತ್ತಾನೆ.
ಗದಗ್ ಜಿಲ್ಲೆಯ ಮುಂಡರಗಿ ತಾಲೂಕಿನ ಸಮಾಜ ಸೇವಕರಾದ ಎಚ್.ಎಸ್. ಸಂದಿಗೌಡರ ಅವರು, “ತಮ್ಮ ಬೆಳೆಗಳನ್ನು ರಕ್ಷಿಸಿ ತಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ಊರಿಗೆ ತರುತ್ತಿದ್ದಂತೆ ಊರವರೆಲ್ಲಾ ಸೇರಿ ಪೂಜೆ ಸಲ್ಲಿಸುತ್ತಾರೆ. ಅಂದಿನಿಂದ ಜೋಕುಮಾರನ ಪೂಜೆ ಆಚರಣೆಗೆ ಬಂದಿದೆ ಎಂಬ ವಾಡಿಕೆಯಿದೆ.
ಹೀಗೆ ಗ್ರಾಮಗಳಲ್ಲಿ ಸಂಚರಿಸಿ ಮನೆಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಜೋಕುಮಾರನ ಮಡಿಲಲ್ಲಿರುವ ಬೇವಿನತಪ್ಪಲು ಹಾಗೂ ಅಂಗಾರ (ಅಳಲು) ನೀಡಿರುವುದನ್ನು ತಮ್ಮ ತಮ್ಮ ಜಮೀನುಗಳಲ್ಲಿ ಬೆಳೆದು ನಿಂತಿರುವ ಫಸಲುಗಳ ಮಧ್ಯ ಭೂಮಿಯಲ್ಲಿ ಮುಚ್ಚಿದರೆ ಆ ಬೆಳೆಗಳಿಗೆ ಯಾವುದೇ ರೋಗ ರುಜಿನಗಳು ಬರದೇ ಉತ್ತಮ ಬೆಳೆ ಬರುತ್ತದೆ ಎಂಬ ನಂಬಿಕೆಗಳು ಜನರಲ್ಲಿ ಇನ್ನೂ ಹಚ್ಚ ಹಸಿರಾಗಿದೆ ಹೀಗೆ ಇಂಥಹ ಸಂಸ್ಕೃತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಅವಶ್ಯಕತೆ ಇದೆ ಎಂದರೆ ತಪ್ಪಾಗಲಾರದು” ಎಂದು ಹೇಳಿದ್ದಾರೆ.










