ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಖಾಸಗಿ ವಲಯದ ಕಂಪನಿಗಳಿಗೆ ಹೆಚ್ಚಿನ ಮಹತ್ವ ಸಿಗುತ್ತಿದೆ. ಬ್ಯಾಂಕುಗಳ ವಿಷಯದಲ್ಲೂ ಅಷ್ಟೇ. ಖಾಸಗಿ ಬ್ಯಾಂಕುಗಳು ವ್ಯಾಪಕವಾಗಿ ಬೆಳೆಯುತ್ತಿರುವಂತೆ ಸಾರ್ವಜನಿಕ ವಲಯದ ಬ್ಯಾಂಕುಗಳು ಬೆಳೆಯುತ್ತಿಲ್ಲ. ಅಥವಾ ಬೆಳೆಯಲು ಬಿಡುತ್ತಿಲ್ಲ ಎಂದರೂ ಸರಿಯೇ. ಬ್ಯಾಂಕುಗಳ ವಿಲೀನ ಯೋಜನೆಯ ಮೂಲಕ ನರೇಂದ್ರ ಮೋದಿ ಸರ್ಕಾರವು ಸಾರ್ವಜನಿಕ ವಲಯದ ಬ್ಯಾಂಕುಗಳ ಕಾರ್ಯವ್ಯಾಪ್ತಿ ಮತ್ತು ಶಾಖೆಗಳನ್ನು ಗಣನೀಯವಾಗಿ ತಗ್ಗಿಸಲು ಯತ್ನಿಸಿದೆ.
ಮೋದಿ ಸರ್ಕಾರ ಖಾಸಗಿ ವಲಯಕ್ಕೆ ಅದೆಷ್ಟೇ ಹೆಚ್ಚಿನ ಮಹತ್ವ ನೀಡಿದರೂ ಭಾರತದ ಜನತೆ ಮಾತ್ರ ಸಾರ್ವಜನಿಕ ವಲಯದ ಬ್ಯಾಂಕುಗಳನ್ನೇ ಹೆಚ್ಚು ನಂಬುತ್ತಾರೆ. ಅದರಲ್ಲೂ ಸಂಕಷ್ಟದ ಸಮಯ ಬಂದಾಗ ಸಾರ್ವಜನಿಕ ವಲಯದ ಬ್ಯಾಂಕುಗಳೇ ಜನಸಾಮಾನ್ಯರಿಗೆ ಶ್ರೀರಕ್ಷೆ. ನರೇಂದ್ರ ಮೋದಿ ಸರ್ಕಾರವು ಖಾಸಗಿ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರೂ ಜನರು ಏಕೆ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ನಂಬುತ್ತಾರೆ?
ಸಾರ್ವಜನಿಕ ವಲಯದ ಬ್ಯಾಂಕುಗಳು ಹೆಚ್ಚು ಸುರಕ್ಷಿತ ಮತ್ತು ಸುಭದ್ರ ಎಂಬುದು ಮುಖ್ಯ ಕಾರಣ. ಈ ಬ್ಯಾಂಕುಗಳಲ್ಲಿನ ವಿವಿಧ ಸೇವಾ ಶುಲ್ಕಗಳು ಖಾಸಗಿ ವಲಯದ ಬ್ಯಾಂಕುಗಳಿಗಿಂತ ಕಡಿಮೆ ಮತ್ತು ಸಾಲಗಳ ಮೇಲಿನ ಬಡ್ಡಿಯೂ ಕಡಿಮೆ ಎಂಬುದು ಮತ್ತೊಂದು ಕಾರಣ. ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಇಟ್ಟ ಠೇವಣಿ ನಷ್ಟವಾದ ಅಥವಾ ಗ್ರಾಹಕರು ಮೋಸ ಹೋದ ಒಂದೇ ಒಂದು ಪ್ರಕರಣಗಳು ಇಲ್ಲ. ಹೀಗಾಗಿ ಜನರಿಗೆ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲೇ ನಂಬಿಕೆ ಹೆಚ್ಚು.
ಆದರೆ, ಖಾಸಗಿ ವಲಯದ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಈ ಮಾತು ಹೇಳುವಂತಿಲ್ಲ. 2004ರಲ್ಲಿ ನಡೆದ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಹಗರಣದಿಂದ ನಿಂದ ಇತ್ತೀಚಿನ ಯೆಸ್ ಬ್ಯಾಂಕ್ ವರೆಗೆ ಖಾಸಗಿ ಬ್ಯಾಂಕುಗಳ ವಹಿವಾಟುಗಳು ಅನುಮಾನಸ್ಪದವಾಗಿರುತ್ತವೆ. ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ದಿವಾಳಿಯಾಗಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನೊಂದಿಗೆ ವಿಲೀನಗೊಳಿಸಿ ಗ್ರಾಹಕರ ಠೇವಣಿಯನ್ನು RBI ರಕ್ಷಿಸಿತ್ತು. ‘ಯೆಸ್ ಬ್ಯಾಂಕ್’ ಪ್ರವರ್ತಕರಾಗಿದ್ದ ರಾಣಾ ಕಪೂರ್ ಬ್ಯಾಂಕ್ ನ ಮುಖ್ಯಸ್ಥರಾಗಿದ್ದವರೆಗೂ ವಹಿವಾಟುಗಳು ಅನುಮಾನಾಸ್ಪದವಾಗಿದ್ದವು. RBI ರಾಣಾ ಕಪೂರ್ ಗೆ ಮುಖ್ಯಸ್ಥನ ಹುದ್ದೆ ತೊರೆಯುವಂತೆ ಸೂಚಿಸಿದ ನಂತರವಷ್ಟೇ ಆ ಬ್ಯಾಂಕಿನಲ್ಲಿದ್ದ ಅವ್ಯವಹಾರಗಳು ಬೆಳಕಿಗೆ ಬಂದವು. ಸದ್ಯಕ್ಕೆ ಗ್ರಾಹಕರ ಠೇವಣಿ ಸುರಕ್ಷಿತವಗಿದ್ದರೂ, ಯೆಸ್ ಬ್ಯಾಂಕಿನ ಷೇರಿನಲ್ಲಿ ಹೂಡಿಕೆ ಮಾಡಿದ್ದ ಲಕ್ಷಾಂತರ ಹೂಡಿಕೆದಾರರು ಕೋಟ್ಯಂತರ ರುಪಾಯಿ ಕಳೆದುಕೊಂಡಿದ್ದಾರೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕ ವಲಯದ ಬ್ಯಾಂಕುಗಳು ಕಾರ್ಪೊರೆಟ್ ವಲಯಕ್ಕೆ ನೀಡಿದ್ದ 6 ಲಕ್ಷ ಕೋಟಿ ರುಪಾಯಿ ಸಾಲಗಳನ್ನು ‘ರೈಟ್ ಆಫ್’ ಮಾಡಿದೆ. (‘ರೈಟ್ ಆಫ್’ ಎಂಬುದನ್ನು ಬ್ಯಾಂಕಿಂಗ್ ಪರಿಭಾಷೆಯಲ್ಲಿ ಹೇಳುವುದಾದರೆ ನಿರ್ಧಿಷ್ಟ ಸಾಲದ ಮೊತ್ತವನ್ನು ಬ್ಯಾಂಕ್ ಸಾಲಗಳ ಖಾತೆಯಿಂದಷ್ಟೇ ಅಲ್ಲ, ಲಾಭ-ನಷ್ಟ ತಖ್ತೆ (ಬ್ಯಾಲೆನ್ಸ್ ಶೀಟ್)ಯಿಂದಲೂ ತೆಗೆದು ಹಾಕುವುದು ಎಂದರ್ಥ. ಇದನ್ನೇ ಜನಸಾಮಾನ್ಯರ ಭಾಷೆಯಲ್ಲಿ ಸರಳವಾಗಿ ಹೇಳುವುದಾದರೆ ‘ಸಾಲ ಮನ್ನಾ’ ಎನ್ನಬಹುದು.
ನಿಷ್ಕ್ರಿಯ ಸಾಲಗಳನ್ನು ಸುಧೀರ್ಘ ಅವಧಿಗೆ ಲಾಭ-ನಷ್ಟ ತಖ್ತೆಯಲ್ಲಿಟ್ಟುಕೊಳ್ಳುವುದು ಬ್ಯಾಂಕಿನ ವಹಿವಾಟು ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ಯಾವ ಮಾರ್ಗದಿಂದಲೂ ವಸೂಲು ಮಾಡಲು ಸಾಧ್ಯವಿಲ್ಲ ಎಂದಾದ ಪಕ್ಷದಲ್ಲಿ ಅಂತಹ ಸಾಲವನ್ನು ‘ರೈಟ್ ಆಫ್’ ಮಾಡಿ ಬ್ಯಾಲೆನ್ಸ್ ಶೀಟ್ ಅನ್ನು ಶುದ್ಧೀಕರಿಸಲಾಗುತ್ತದೆ. ಮೋದಿ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಈ ರೀತಿ ಕಾರ್ಪೊರೇಟ್ ಸಾಲಗಳನ್ನು ಶುದ್ಧೀಕರಿಸಿದ ಮೊತ್ತವು 6 ಲಕ್ಷ ಕೋಟಿ ಮೀರಿದೆ. ಇವೆಲ್ಲವೂ ಮೋದಿ ಆಪ್ತ ಬಳಗದ ಕಾರ್ಪೊರೇಟ್ ಕುಳಗಳಿಗೆ ಸೇರಿದ್ದು. ಹೀಗಾಗಿ ಸಾಲ ವಸೂಲಾತಿಯ ಎಲ್ಲಾ ಕಟ್ಟಕಡೆಯ ಪ್ರಯತ್ನಗಳನ್ನು ಮಾಡುವ ಮುನ್ನವೇ ‘ರೈಟ್ ಆಫ್’ ಮಾಡಲಾಗಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳ ಬಗ್ಗೆ ನಾವು ವಕಾಲತ್ತು ಹಾಕುತ್ತಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚಿನ ಹಣಕಾಸು ನೀತಿ ವರದಿಯಲ್ಲಿ (ಪುಟ-95) ಸಾರ್ವಜನಿಕ ಬ್ಯಾಂಕುಗಳಿಗಿಂತ ಖಾಸಗಿ ಬ್ಯಾಂಕುಗಳು ಹೇಗೆ ಹೆಚ್ಚಿನ ಬಡ್ಡಿ ವಸೂಲು ಮಾಡುತ್ತವೆ ಎಂಬುದನ್ನು ವಿವರಿಸಲಾಗಿದೆ. RBI ಹಣಕಾಸು ನೀತಿ ವರದಿಯಲ್ಲಿನ ವಿವಿಧ ಸಾಲಗಳ ವಿಶ್ಲೇಷಣೆ ಪ್ರಕಾರ, ಸಾರ್ವಜನಿಕ ಬ್ಯಾಂಕುಗಳಿಗೆ ಹೋಲಿಸಿದರೆ ಖಾಸಗಿ ಬ್ಯಾಂಕುಗಳು 260 ಅಂಶಗಳಷ್ಟು ಅಂದರೆ ಶೇ.2.60 ರಷ್ಟು ಹೆಚ್ಚುವರಿಯಾಗಿ ಬಡ್ಡಿ ವಿಧಿಸುತ್ತಿವೆ.RBI ಪ್ರಕಟಿಸಿರುವ ರೆಪೊ ದರದ ಮೇಲೆ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಖಾಸಗಿ ವಲಯದ ಬ್ಯಾಂಕುಗಳು ವಿಧಿಸುವ ಬಡ್ಡಿದರ ವ್ಯತ್ಯಾಸ ಇದಾಗಿದೆ. ಅಂದರೆ, ಶೈಕ್ಷಣಿಕ ಸಾಲಕ್ಕೆ ಸಾರ್ವಜನಿಕ ವಲಯದ ಬ್ಯಾಂಕುಗಳು ರೆಪೊ ದರದ ಮೇಲೆ ಶೇ.4.2ರಷ್ಟು ಬಡ್ಡಿ ವಿಧಿಸಿದರೆ, ಖಾಸಗಿ ಬ್ಯಾಂಕುಗಳು ರೆಪೊದರದ ಮೇಲೆ ಶೇ.6.8ರಷ್ಟು ಬಡ್ಡಿ ವಿಧಿಸುತ್ತಿವೆ. ಅಂದರೆ, ಸಾರ್ವಜನಿಕ ವಲಯದ ಬ್ಯಾಂಕುಗಳಿಗಿಂತ ಹೆಚ್ಚುವರಿ ಬಡ್ಡಿ ದರವು ಶೇ.2.60ರಷ್ಟಾಗುತ್ತದೆ.
ಯಾವುದಕ್ಕೆ ಎಷ್ಟು ಹೆಚ್ಚಳ?
ಹಣಕಾಸು ನೀತಿ ವರದಿ ಪ್ರಕಾರ, ಖಾಸಗಿ ಬ್ಯಾಂಕುಗಳು ಶೈಕ್ಷಣಿಕ ಸಾಲದ ಮೇಲೆ ಶೇ.2.60ರಷ್ಟು, ಗೃಹ ಸಾಲದ ಮೇಲೆ ಶೇ.2 ರಷ್ಟು, ವಾಹನ ಸಾಲದ ಮೇಲೆ ಶೇ.1.60 ರಷ್ಟು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಾಲದ ಮೇಲೆ ಶೇ.0.60ರಷ್ಟು ಮತ್ತು ವೈಯಕ್ತಿಕ ಸಾಲದ ಮೇಲೆ ಶೇ.0.40ರಷ್ಟು ಹೆಚ್ಚು ಬಡ್ಡಿ ವಿಧಿಸುತ್ತಿವೆ. ಕ್ರೆಡಿಟ್ ಕಾರ್ಡ್ ಗಳ ಮೇಲಿನ ಗರಿಷ್ಠ ಬಡ್ಡಿ ಹೇರಲಾಗುತ್ತಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಹೋಲಿಸಿದರೆ ಖಾಸಗಿ ವಲಯದ ಬ್ಯಾಂಕುಗಳ ವಿಧಿಸುವ ಹೆಚ್ಚಿನ ಬಡ್ಡಿ ಶೇ.3.54ರಷ್ಟು!.
ಈ ಉದಾಹರಣೆ ಗಮನಿಸಿ. ಒಬ್ಬ ವ್ಯಕ್ತಿ ಖಾಸಗಿ ಬ್ಯಾಂಕ್ ನಿಂದ 1 ಲಕ್ಷ ಸಾಲ ಪಡೆದರೆ, ಆತ ಸಾರ್ವಜನಿಕ ವಲಯದ ಬ್ಯಾಂಕುಗಳಿಗಿಂತ ಶೇ.2.60ರಷ್ಟು ಹೆಚ್ಚು ಬಡ್ಡಿ ಪಾವತಿಸುತ್ತಾನೆ ಎಂದಾದರೆ, ಒಂದು ವರ್ಷಕ್ಕೆ ಆತ ಪಾವತಿಸುವ ಹೆಚ್ಚುವರಿ ಬಡ್ಡಿ 2600 ರುಪಾಯಿಗಳು. ಹಾಗೆ ಅಂದಾಜಿಸಿ ನೋಡಿ- ಒಬ್ಬ ವ್ಯಕ್ತಿ 10 ಲಕ್ಷ ರುಪಾಯಿಗಳನ್ನು ಖಾಸಗಿ ಬ್ಯಾಂಕಿನಿಂದ ಸಾಲ ಪಡೆದು ಐದುವರ್ಷಗಳ ವರೆಗೆ ಮರುಪಾವತಿಸುತ್ತಾನೆ ಎಂದಾದರೆ ಆತ ಹೆಚ್ಚುವರಿಯಾಗಿ ಪಾವತಿಸುವ ಬಡ್ಡಿ 1.30 ಲಕ್ಷ ರುಪಾಯಿಗಳಾಗುತ್ತದೆ. ಹೀಗಾಗಿ ಮುಂದೆ ಸಾಲ ಪಡೆಯುವ ಮುನ್ನ ಯೋಚಿಸಿ. ಖಾಸಗಿ ಬ್ಯಾಂಕುಗಳು ಹೆಚ್ಚುವರಿ ದಾಖಲೆ ಪಡೆಯದೇ ಕಟ್ಟುನಿಟ್ಟಿನ ನಿಯಮ ಪಾಲಿಸದೇ ನಿಮಗೆ ಸಾಲ ನೀಡಬಹುದು. ಆದರೆ, ನೀವು ಪಡೆದ ಸಾಲದ ಮೇಲಿನ ಬಡ್ಡಿ ‘ದುಬಾರಿ’ಯಾಗಿರುತ್ತದೆ ಎಂಬುದು ನಿಮಗೆ ಗೊತ್ತೇ ಆಗುವುದಿಲ್ಲ!