ಬುದ್ಧಿವಂತ ಯಾವಾಗಲೂ ಯುದ್ಧ ಮಾಡುವಾಗ ಬೇರೆಯವರ ಹೆಗಲ ಮೇಲೆಯೇ ಕೋವಿ ಇಟ್ಟು ಗುಂಡು ಹಾರಿಸುತ್ತಾನೆ ಎನ್ನುವ ನಾಣ್ಣುಡಿ ಒಂದಿದೆ. ಇದೇ ಬುದ್ಧಿವಂತಿಕೆಯನ್ನು ನಮ್ಮ ರಾಜ್ಯ ಸರ್ಕಾರ ಕೋವಿಡ್ – 19 ವಿಚಾರದಲ್ಲಿ ಮಾಡಿದೆ. ಸೋಂಕಿನ ಜೊತೆಗೆ ಸಾವು ನೋವು ಹೆಚ್ಚಾಗಿ ಸಂಭವಿಸುತ್ತಿರುವ ಈ ಸಮಯದಲ್ಲಿ ಹಿಂದೆ ಮುಂದೆ ನೋಡದೆ ಸೋಂಕಿನ ವಿರುದ್ಧ ಗುಂಡು ಹಾರಿಸಬೇಕಿದ್ದ ಸರಕಾರ ಬೇರೆಯವರ ಹೆಗಲ ಮೇಲೆ ಕೋವಿ ಇಟ್ಟು ಗುಂಡು ಹಾರಿಸಲು ಮುಂದಾಗಿದೆ. ಇದರ ಮೂಲಕ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನ ಮಾಡಿದೆಯಾ ಎನ್ನುವ ಅನುಮಾನ ಮೂಡಿಸುತ್ತಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡೋಕೆ ಸಾಧ್ಯಾನಾ..?
ರಾಜ್ಯ ಸರ್ಕಾರವೇನೋ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಬೇಕು ಎಂದು ಒತ್ತಡ ಹೇರಿಕೆ ಮಾಡಿದೆ. ಮೊದಲಿಗೆ ಚಿಕಿತ್ಸೆ ನೀಡಲು ನಿರಾಕರಣೆ ಮಾಡಿದ್ದ ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಆ ಬಳಿಕ ಮುಖ್ಯಮಂತ್ರಿಗಳ ಒತ್ತಡದ ಬಳಿಕ ಚಿಕಿತ್ಸೆ ನೀಡಲು ಒಪ್ಪಿಕೊಂಡಿವೆ. ಆದರೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಶಕ್ತವೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಸಾಮಾನ್ಯವಾಗಿ ಆಸ್ಪತ್ರೆಗಳಿಗೆ ಕರೋನಾ ಸೋಂಕು ಇಲ್ಲದೆ ಬೇರೆ ಕಾಯಿಲೆಗಳಿಂದ ಬಳಲು ರೋಗಿಗಳು ಎಡತಾಕುತ್ತಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಆಗದ್ದು ಖಾಸಗಿಯಲ್ಲಿ ಆಗುತ್ತಾ..?
ಕರೋನಾ ಸೋಂಕು ಕಾಣಿಸಿಕೊಂಡ ಕೂಡಲೇ ಜಿಲ್ಲಾಸ್ಪತ್ರೆಗಳೂ ಸೇರಿದಂತೆ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಾದ ವಿಕ್ಟೋರಿಯಾ, ರಾಜೀವ್ ಗಾಂಧಿ ಆಸ್ಪತ್ರೆ ಸೇರಿದಂತೆ ಹಲವಾರು ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ಮಾರ್ಪಾಡು ಮಾಡಿತ್ತು. ಈ ಆಸ್ಪತ್ರೆಗಳಲ್ಲಿ ಬೇರೆ ಕಾಯಿಲೆಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿ ಪರ್ಯಾಯ ಆಸ್ಪತ್ರೆಗಳಲ್ಲಿ ಬೇರೆ ಕಾಯಿಲೆಯ ರೋಗಿಗಳು ಚಿಕಿತ್ಸೆ ಪಡೆಯುವಂತೆ ಸೂಚನೆ ಕೊಟ್ಟಿತ್ತು. ಅಂದರೆ ಕೋವಿಡ್ ಆಸ್ಪತ್ರೆಗಳಲ್ಲಿ ಸಾಮಾನ್ಯ ಕಾಯಿಲೆಗಳ ರೋಗಿಗಳು ಆಗಮಿಸಿದರೆ ಅದನ್ನು ನಿರ್ವಹಣೆ ಮಾಡುವುದು ಕಷ್ಟ. ಜನರು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸುತ್ತಾಡಿ ಕರೋನಾ ಸೋಂಕು ಮತ್ತಷ್ಟು ಉಲ್ಬಣ ಆಗಬಹುದು. ಅದರಲ್ಲೂ ಈಗಾಗಲೇ ಬೇರೊಂದು ಕಾಯಿಲೆಯಿಂದ ಬಳಸುತ್ತಿರುವ ರೋಗಿಗಳು ಕರೋನಾ ಸೋಂಕಿಗೆ ಒಮ್ಮೆ ಸಿಲುಕಿದರೆ ಜೀವ ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ ಎನ್ನುವ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿತ್ತು. ಆದರೆ ಇದೀಗ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ರೋಗಿಗಳ ಜೊತೆಗೆ ಕೋವಿಡ್ ರೋಗಿಗಳಿಗೂ ಚಿಕಿತ್ಸೆ ನೀಡಬೇಕು ಎಂದು ಅಧಿಸೂಚನೆ ಹೊರಡಿಸಿರುವುದು ಸರ್ಕಾರದ ದ್ವಂದ್ವ ನಿಲುವನ್ನು ಪ್ರದರ್ಶನ ಮಾಡುತ್ತಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಇದೆಯಾ..?
ಖಾಸಗಿ ಆಸ್ಪತ್ರೆಗಳು ತಮ್ಮದೇ ಆದ ಸೀಮಿತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ. ತನಗೆ ಬೇಕಾದ ಕಟ್ಟಡವನ್ನು ತನ್ನ ಚಿಕಿತ್ಸಾ ಸೌಲಭ್ಯಕ್ಕೆ ತಕ್ಕಂತೆ ರೂಪಿಸಿಕೊಂಡು ಇರುತ್ತಾರೆ. ಆಸ್ಪತ್ರೆಯಲ್ಲಿ ನೀಡಲಾಗುವ ಚಿಕಿತ್ಸೆಗೆ ಅನುಗುಣವಾಗಿ ಯಂತ್ರೋಪಕರಣಗಳನ್ನು ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಇದೀಗ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದರೆ ಎಲ್ಲವನ್ನೂ ಬೇರೆ ಕಡೆಗೆ ಶಿಫ್ಟ್ ಮಾಡಬೇಕು. ಅದಕ್ಕಾಗಿ ಬದಲಿ ಕಟ್ಟಡದ ವ್ಯವಸ್ಥೆ ಆಗಬೇಕು. ಕೋವಿಡ್ ರೋಗಿಗಳು ಬರುವ ಕಟ್ಟಡ ಹಾಗೂ ಸಾಮಾನ್ಯ ರೋಗಿಗಳು ಆಗಮಿಸುವ ಕಟ್ಟಡಕ್ಕೆ ಪ್ರತ್ಯೇಕ ಗೇಟ್‌ಗಳನ್ನು ಮಾಡಿಕೊಳ್ಳಬೇಕು. ಇದಕ್ಕಾಗಿಯೇ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಬೇಕು. ಇದಕ್ಕೆ ಬಂಡವಾಳ ಬೇಕು. ಇದೆಲ್ಲಾ ಮಾಡಿಕೊಳ್ಳಲು ಕನಿಷ್ಠ ಸಮಯವಾದರೂ ಕಾಲಾವಕಾಶ ಬೇಕಿದೆ.
ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಒತ್ತಡ ಹಾಕ್ತಿರೋದ್ಯಾಕೆ..?
ರಾಜ್ಯದಲ್ಲಿ ಕರೋನಾ ಸೋಂಕಿನಿಂದ ಸಾವು ನೋವು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪುವ ಸಮಯ ಅತಿ ಶೀಘ್ರದಲ್ಲಿಯೇ ಬರಲಿದೆ. ಆಗ ಸರ್ಕಾರಿ ಅಸ್ಪತ್ರೆಗಳಲ್ಲಿ ಬೆಡ್ ಸಿಗದೆ ಸಾವನ್ನಪ್ಪಿದರು ಎನ್ನುವ ಆರೋಪದಿಂದ ಸರ್ಕಾರ ತಪ್ಪಿಸಿಕೊಳ್ಳಬೇಕಿದೆ. ಅದರ ಜೊತೆಗೆ ಇದೀಗ ಕರೋನಾ ಸೋಂಕು ಸಮುದಾಯಕ್ಕೆ ಹರಡಿ ಆಗಿದೆ. ಸರ್ಕಾರ ಇನ್ನೂ ಕೂಡ ಸಮುದಾಯಕ್ಕೆ ಬಂದಿಲ್ಲ. ಸರ್ಕಾರ ನಿಯಂತ್ರ ಮಾಡುತ್ತಿದೆ ಎಂದು ಎಷ್ಟೇ ಹೇಳಿಕೊಂಡರೂ ಸಮುದಾಯಕ್ಕೆ ಸೋಂಕು ಹರಡಿ ಆಗಿದೆ. ಹಾಗಾಗಿ ಇನ್ಮುಂದೆ ಸಾವಿನ ಸಂಖ್ಯೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರದ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ ಎಲ್ಲರ ಲೆಕ್ಕವೂ ಬಹಿರಂಗ ಆಗುತ್ತದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದವರು ಹಾಗೂ ಸಾವಿನ ಸಂಖ್ಯೆಯನ್ನು ಸರ್ಕಾರ ಲೆಕ್ಕ ಹಾಕುವ ಗೋಜಿಗೆ ಹೋಗುವುದಿಲ್ಲ. ಸಾಕಷ್ಟು ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದರಿಂದ ಸೋಂಕು ಮಿತಿ ಮೀರುತ್ತದೆ ಎನ್ನುವ ಆರೋಪ ತಡೆಯುವುದು ಸುಲಭವಾಗಲಿದೆ.
ಒಟ್ಟಾರೆ, ಕರೋನಾ ಸೋಂಕು ನಿಯಂತ್ರಣ ಮಾಡುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಆರೋಪದಿಂದ ಮುಕ್ತವಾಗಲು ಖಾಸಗಿ ಆಸ್ಪತ್ರೆಗಳ ಹೆಗಲ ಮೇಲೆ ಬಂದೂಕು ಇರಿಸಿ ಗುಂಡು ಹಾರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದೆ.