ಇಡೀ ವಿಶ್ವವೇ ಕೋವಿಡ್-19 ಭೀತಿಯಲ್ಲಿ ತಲ್ಲಣಿಸುತಿತ್ತು. ಎಲ್ಲ ಜನರೂ ಕೂಡ ತಾವು ಈವರೆಗೆ ಕಂಡು ಕೇಳದ ಈ ಭೀಕರ ವೈರಸ್ ಬಗ್ಗೆಯೇ ಚರ್ಚೆ ಮಾಡುತಿದ್ದರು. ದೃಶ್ಯ ಮಾಧ್ಯಮಗಳಲ್ಲಂತೂ ನಿತ್ಯ ʼಪ್ರೈಂ ಟೈಮ್ʼ ನಲ್ಲಿ ಇದೇ ವಿಷಯ ಚರ್ಚೆ ಆಗುತಿತ್ತು. ಸರ್ಕಾರಗಳು ಈ ಕೋವಿಡ್-19 ಸೋಂಕನ್ನು ಹೊಡೆದೋಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿವ ಬಗ್ಗೆ ಚಿಂತನೆ ನಡೆಸುತಿದ್ದವು. ದೇಶದಲ್ಲಿ ಸಾವಿನ ಸಂಖ್ಯೆಯೂ ದಿನೇ ದಿನೇ ಹೆಚ್ಚಳಗೊಳ್ಳುತಿತ್ತು.
ಅದೇ ಸಮಯದಲ್ಲಿ ದೆಹಲಿಯ ನಿಜಾಮುದ್ದೀನ್ ನಲ್ಲಿ ತಬ್ಲಿಗಿ ಜಮಾತ್ ನ ಸಮಾವೇಶವೊಂದು ನಡೆದಿರುವ ಸಂಗತಿ ಬೆಳಕಿಗೆ ಬಂದಿತು. ಅದರಲ್ಲೂ ಈ ಮುಸ್ಲಿಂ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದವರೆಲ್ಲರೂ ಥೈಲ್ಯಾಂಡ್ , ಇಂಡೋನೇಷ್ಯಾ, ಈಜಿಪ್ಟ್ ಮುಂತಾದ ವಿದೇಶಗಳಿಂದ ಬಂದಿದ್ದರೆನ್ನುವುದು ಖಚಿತವಾಗುತಿದ್ದಂತೆ ಈ ಧಾರ್ಮಿಕ ಸಮಾವೇಶದ ವಿರುದ್ದ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಮಾದ್ಯಮಗಳಲ್ಲಿ ದಿನಕ್ಕೊಂದು ರೀತಿಯ ಕಥೆಗಳು ಪ್ರಕಟಗೊಳ್ಳತೊಡಗಿದವು.

ನಿಜಾಮುದ್ದೀನ್ ನ ಮಸೀದಿಯಲ್ಲಿ ಸೇರಿದ್ದ ತಬ್ಲಿಘಿ ಧಾರ್ಮಿಕ ಸಮಾವೇಶದಲ್ಲಿ ವಿದೇಶೀಯರೂ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಈ ಸಮಾವೇಶ ದೇಶದ ಗಮನವನ್ನು ಸೆಳೆದಿತ್ತು. ದೆಹಲಿಯ ಪೋಲೀಸ್ ಮತ್ತು ಭದ್ರತಾ ಪಡೆಗಳು ನಿಜಾಮುದ್ದೀನ್ ಗೆ ತೆರಳಿ ಸ್ಥಳವನ್ನು ಕೂಡಲೇ ತೆರವುಗೊಳಿಸುವಂತೆ ಸೂಚಿಸಿದರೂ ನಿಜಾಮುದ್ದೀನ್ ನ ಮುಖ್ಯಸ್ಥ ಮೌಲಾನಾ ಸಾದ್ ಅವರು ಸಮಾವೇಶ ಸ್ಥಗಿತಗೊಳಿಸಲು ನಿರಾಕರಿಸಿದರು ಎಂದೂ ವರದಿ ಅಯಿತು. ನಂತರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರನ್ನು ಮಾರ್ಚ್ 28 ರಂದು ರಾತ್ರಿ ನಿಜಾಮುದ್ದೀನ್ ಗೆ ತೆರಳಿ ತೆರವುಗೊಳಿಸಲು ಮನವೊಲಿಸಿ ನಂತರ ತೆರವುಗೊಳಿಸಲಾಯಿತು ಎಂದು ಮಾದ್ಯಮ ವರದಿಗಳು ಹೇಳಿದವು.
ಇದಾದ ನಂತರ ತಬ್ಲಿಘಿಗಳಲ್ಲಿ ನೂರಾರು ಜನರಲ್ಲಿ ಕರೋನ ಪಾಸಿಟಿವ್ ಕಂಡು ಬಂತು, ಅವರನ್ನೆಲ್ಲ ಅಸ್ಪತ್ರೆಗಳಿಗೆ ದಾಖಲಿಸಲಾಯಿತು. ಅಲ್ಲದೆ ನೂರಾರು ಜನ ತಬ್ಲಿಘಿಗಳು ತಪ್ಪಿಸಿಕೊಂಡರೆಂದೂ ಕ್ವಾರಂಟೈನ್ ನಲ್ಲಿ ಇರಿಸಲಾದವರು ವೈದ್ಯರು ನರ್ಸ್‌ಗಳ ಜತೆ ಅನುಚಿತ ವರ್ತನೆ ತೋರಿದರೆಂದೂ , ಅವರಿಗೆ ಉಗುಳಿದರೆಂದೂ ವರದಿ ಆಯಿತು. ನಂತರ ಅಸ್ಪತ್ರೆ ವಾರ್ಡ್ ನಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಾಮೂಹಿಕ ನಮಾಜ್ ನಲ್ಲಿ ತೊಡಗಿದರೆಂದೂ ಮಾದ್ಯಮ ವರದಿ ಹೇಳಿತ್ತು. ಅದರಲ್ಲೂ ಸಾಮಾಜಿಕ ಜಾಲ ತಾಣಗಳಲ್ಲಂತೂ ತಬ್ಲಿಘಿಗಳಿಗೆ ಅತಿ ರಂಜಿತ ಪ್ರಚಾರ ದೊರೆಯುತಿತ್ತಲ್ಲದೆ ನಕಲಿ ವೀಡಿಯೋಗಳೂ ಶೇರ್ ಆಗತೊಡಗಿದವು. ಅದರಲ್ಲೂ ಪಾಕಿಸ್ಥಾನದ ಮಾನಸಿಕ ಆಸ್ಪತ್ರೆಯಲ್ಲಿ ಅಸ್ವಸ್ಥನೊಬ್ಬ ಆಸ್ಪತ್ರೆಯ ಗಾಜಿನ ಬಾಗಿಲು ಮತ್ತು ಕಿಟಕಿಗಳನ್ನು ಒಡೆದು ಹಾಕುತ್ತಿರುವ ವೀಡಿಯೋ ಸಹಸ್ರಾರು ಬಾರಿ ಶೇರ್ ಆಯಿತು. ಕೊನೆಗೆ ಇದು ಪಾಕಿಸ್ತಾನದ ಹಳೇ ವೀಡಿಯೋ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ವರದಿ ಆಗುವವರೆಗೂ ಈ ನಕಲಿ ವೀಡಿಯೋ ಹಂಚಿಕೆ ಮುಂದುವರೆದಿತ್ತು.
ಇದಾದ ನಂತರ ಕೋವಿಡ್ 19 ಸೋಂಕನ್ನು ಗುಣಪಡಿಸಲು ದೇಶದಲ್ಲಿ ಪ್ಲಾಸ್ಮಾ ಚಿಕಿತ್ಸೆ ನೀಡಲು ಸರ್ಕಾರ ಅನುವು ಮಾಡಿಕೊಟ್ಟಿತು. ಆ ಸಂದರ್ಭದಲ್ಲಿ ಕೋವಿಡ್ ನಿಂದ ಗುಣಮುಖರಾದವರ ರಕ್ತ ಪಡೆಯಲಾಗುತಿತ್ತು. ತಬ್ಲಿಘಿಗಳಲ್ಲಿ ಕೋವಿಡ್ 19 ಸೋಂಕಿನಿಂದ ಗುಣಮುಖರಾದ ನೂರಾರು ಜನರು ರಕ್ತ ನೀಡುವುದಕ್ಕೆ ಮುಂದೆ ಬಂದರು. ಇದಲ್ಲದೆ ಸಾವಿರಾರು ಜನ ತಬ್ಲಿಘಿಗಳು ಅವರ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಯಿತು.
ಕ್ವಾರಂಟೈನ್ ಅವಧಿಯು ಗರಿಷ್ಟ 28 ದಿನಗಳೆಂದು ಸರ್ಕಾರವೇ ನಿಗದಿ ಮಾಡಿದೆ. ಆದರೆ ಕ್ವಾರಂಟೈನ್ ನಲ್ಲಿ ಇರಿಸಲಾದ ತಬ್ಲಿಘಿಗಳನ್ನು ಅವಧಿ ಮುಗಿದರೂ ಇನ್ನೂ ಬಿಡುಗಡೆ ಮಾಡಿಲ್ಲ. ಇದಕ್ಕೆ ಕೇಂದ್ರ ಗೃಹ ಇಲಾಖೆ ಮೀನ ಮೇಷ ಎಣಿಸುತ್ತಿದೆ ಎಂದು ಆರೋಪಿಸಲಾಗಿದೆ. ಕೋವಿಡ್ 19 ನೆಗೆಟಿವ್ ಇದ್ದು ಮತ್ತು ಕಡ್ಡಾಯವಾದ ಸಂಪರ್ಕತಡೆಯನ್ನು ಪೂರ್ಣಗೊಳಿಸಿದರೂ ತಬ್ಲಿಘಿ ಜಮಾತ್‌ನ 3,000 ಕ್ಕೂ ಹೆಚ್ಚು ಸದಸ್ಯರು ದೆಹಲಿಯ ವಿವಿಧ ಸಂಪರ್ಕ ತಡೆಯನ್ನು ಕೇಂದ್ರಗಳಲ್ಲಿ ಇನ್ನೂ ಇದ್ದಾರೆ. ದೆಹಲಿ ಆರೋಗ್ಯ ಇಲಾಖೆಯು ಕೇಂದ್ರ ಗೃಹ ಸಚಿವಾಲಯಕ್ಕೆ ಏಪ್ರಿಲ್ 17 ಮತ್ತು ಮೇ 3 ರಂದು ಎರಡು ಬಾರಿ ಪತ್ರ ಬರೆದು ತಬ್ಲಿಘಿ ಜಮಾತ್ ಸದಸ್ಯರ ಬಿಡುಗಡೆಯ ಕುರಿತು ನಿರ್ದೇಶನಗಳನ್ನು ಕೋರಿದೆ. ಆದರೆ ಆರೋಗ್ಯ ಇಲಾಖೆಯಿಂದ ಉತ್ತರ ಬಂದಿಲ್ಲ ಎಂದು ತಿಳಿದು ಬಂದಿದೆ.
ಮೊನ್ನೆ ಗುರುವಾರ ಮಾದ್ಯಮ ಪ್ರತಿನಿಧಿಗಳು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ತಬ್ಲಿಘೀ ಜಮಾತ್ ಪ್ರತಿನಿಧಿಗಳನ್ನು ಕ್ವಾರಂಟೈನ್ ಅವಧಿ ಮುಗಿದರೂ ಇನ್ನೂ ಬಿಡುಗಡೆಗೊಳಿಸದ ಕುರಿತು ಪ್ರಶ್ನಿಸಿದಾಗ, ಇಡೀ ದೇಶಾದ್ಯಂತ ಲಾಕ್ ಡೌನ್ ಇದೆ . ಎಲ್ಲ ರೀತಿಯ ಚಲನೆಯನ್ನು ನಿರ್ಬಂಧಿಸಿರುವುದರಿಂದ ಬಿಡುಗಡೆ ನಿಧಾನವಾಗಿದೆ ಎಂದು ಹೇಳಿದರು. ಆದರೆ ಲಾಕ್ ಡೌನ್ ನಡುವೆಯೂ ವಲಸೆ ಕಾರ್ಮಿಕರನ್ನು ಬಿಹಾರ, ಉತ್ತರ ಪ್ರದೇಶ ಇನ್ನಿತರ ರಾಜ್ಯಗಳು ವಾಪಾಸ್ ಕರೆಸಿಕೊಂಡಿವೆ . ಅವರ ಓಡಾಟಕ್ಕೆ ಅಡ್ಡಿಯಾಗದ ಲಾಕ್ ಡೌನ್ ತಬ್ಲಿಘಿಗಳಿಗೆ ಮಾತ್ರ ಏಕೆ ಅಡ್ಡಿಯಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರರೋರ್ವರು ಪ್ರಶ್ನಿಸುತ್ತಾರೆ.
ಮರ್ಕಾಜ್ ಸ್ಥಳಾಂತರಿಸುವ ಕಾರ್ಯ ಮುಗಿದು ಈಗಾಗಲೇ ಒಂದು ತಿಂಗಳು ಕಳೆದಿರುವುದರಿಂದ, ಈ ಮಸೀದಿಗಳಿಂದ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಗೊಂಡ ವ್ಯಕ್ತಿಗಳು ಮತ್ತು ಸಂಪರ್ಕ ತಡೆಯನ್ನು ಪೂರ್ಣಗೊಳಿಸಿರುವುದರಿಂದ ತಮ್ಮ ರಾಜ್ಯಗಳಿಗೆ ಮತ್ತು ದೇಶಗಳಿಗೆ ಹಿಂತಿರುಗಲು ಕಾತರರಾಗಿದ್ದಾರೆ. ತಬ್ಲಿಘಿಯ ಎಲ್ಲಾ 3,013 ವ್ಯಕ್ತಿಗಳು ನೆಗೆಟಿವ್ ಹೊಂದಿದ್ದಾರೆ ಮಾತ್ರವಲ್ಲದೆ ಆಸ್ಪತ್ರೆಗಳು / ಕ್ವಾರಂಟೈನ್ ಸೌಲಭ್ಯಗಳಲ್ಲಿ 28 ದಿನಗಳಿಗಿಂತ ಹೆಚ್ಚಿನ ಅವಧಿಯನ್ನು ಪೂರೈಸಿದ್ದಾರೆ ಎಂದು ದೆಹಲಿ ಆರೋಗ್ಯ ಕಾರ್ಯದರ್ಶಿ ಪದ್ಮಿನಿ ಸಿಂಗ್ಲಾ ಅವರು ಕೇಂದ್ರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಯವರಿಗೆ ಪತ್ರ ಬರೆದಿದ್ದಾರೆ. ಅರೋಗ್ಯ ಇಲಾಖೆಯು ಬಡುಗಡೆ ಮಾಡುವಂತೆ ವಿವಿಧ ರಾಜ್ಯಗಳಿಂದ ಮನವಿ ಸ್ವೀಕರಿಸಿದೆ. ನಮ್ಮ ಹಿಂದಿನ ಪತ್ರಕ್ಕೆ ಗೃಹ ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ . ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ವಿದೇಶಿಯರನ್ನು ಬಿಡುಗಡೆಗೊಳಿಸುವ ಕುರಿತು ಗೃಹ ಇಲಾಖೆಯ ನಿಯಮಾವಳಿಗಳನ್ನು ಪರಿಶೀಲಿಸಲಾಗಿದೆ. ಬಿಡುಗಡೆಗೊಳಿಸಲು ಹೆಚ್ಚಿನ ಒತ್ತಡ ಇರುವುದರಿಂದ ಕೂಡಲೇ ಪ್ರತಿಕ್ರಿಯಿಸುವಂತೆ ಸಿಂಗ್ಲಾ ಕೋರಿದ್ದಾರೆ.

ಆದರೆ ಈವರೆಗೂ ಕೇಂದ್ರ ಗೃಹ ಸಚಿವಾಲಯ ಪ್ರತಿಕ್ರಿಯೆಯನ್ನೇ ನೀಡಿಲ್ಲ ಅಷ್ಟೇ ಅಲ್ಲ ನೀಡುವ ಉತ್ಸಾಹವನ್ನೂ ತೋರಿಲ್ಲ. ಕ್ವಾರಂಟೈನ್ ಕೇಂದ್ರಗಳಲ್ಲಿ 3,013 ತಬ್ಲಿಘಿಗಳಲ್ಲಿ 567 ವಿದೇಶಿ ಪ್ರಜೆಗಳು ಮತ್ತು 2,446 ಭಾರತೀಯರು ಇದ್ದಾರೆ . ಭಾರತೀಯರಲ್ಲಿ 191 ಮಂದಿ ದೆಹಲಿಗೆ ಸೇರಿದವರು. ನಿಜಾಮುದ್ದೀನ್‌ನ ಮಾರ್ಕಾಜ್ ಕಟ್ಟಡದಿಂದ ಸುಮಾರು 2,346 ಜನರನ್ನು ಸರ್ಕಾರ ಸ್ಥಳಾಂತರಿಸಿದೆ. ಸ್ಥಳಾಂತರಿಸಿದವರಲ್ಲಿ 536 ಜನರನ್ನು ಆಸ್ಪತ್ರೆಗಳಿಗೆ ಮತ್ತು ಉಳಿದವರನ್ನು ಸಂಪರ್ಕತಡೆ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಕೂಡಲೇ ಗೃಹ ಸಚಿವಾಲಯ ಪ್ರತಿಕ್ರಿಯಿಸಬೇಕಿದೆ ಇಲ್ಲದಿದ್ದರೆ ಪ್ರತಿಭಟನೆಯ ಮಾರ್ಗ ಹಿಡಿಯುತ್ತೇವೆ ಎಂದು ತಬ್ಲಿಘಿಯೊಬ್ಬರ ಸಂಬಂಧಿ ಎಚ್ಚರಿಸಿದ್ದಾರೆ.