ಮಾರಣಾಂತಿಕ ‘ಕೋವಿಡ್-19’ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ರಾಷ್ಟ್ರವ್ಯಾಪಿ ಲೌಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕೆಲವು ಪರಿಹಾರ ಕ್ರಮಗಳನ್ನು ಪ್ರಕಟಿಸಿದೆ. ಲಾಕ್ ಡೌನ್ ಅವಧಿಯಲ್ಲಿ ಗ್ರಾಹಕರು ಪಡೆದಿರುವ ಸಾಲಗಳ ಮರುಪಾವತಿ ಮಾಡುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ಮೂರು ತಿಂಗಳ ಅವಧಿಗೆ ಸಾಲ ಮರುಪಾವತಿಗೆ ವಿನಾಯಿತಿ ನೀಡಿದೆ. ಅಂದರೆ, ಗ್ರಾಹಕರು ಪಡೆದಿರುವ ವಿವಿಧ ಸಾಲಗಳ ಮೇಲಿನ ಇಎಂಐ (ಸಮಾನ ಮಾಸಿಕ ಕಂತು) ಗಳನ್ನು ಪಾವತಿಸದೇ ಇರಲು ಅವಕಾಶ ಇದೆ.
ಕಳೆದವಾರ ಆರ್ಬಿಐ ಕೋವಿಡ್-19 ರಿಲೀಫ್ ಪ್ಯಾಕೆಜ್ ಘೋಷಿಸಿದ ಕೂಡಲೇ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತಾನು ಎಲ್ಲಾ ಸಾಲಗಳ ಮೇಲಿನ ಮರುಪಾವತಿಗೆ ಮೂರು ತಿಂಗಳ ವಿನಾಯ್ತಿ ನೀಡುವುದಾಗಿ ಘೋಷಿಸಿತು. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪಾವತಿ ಮಾಡಬೇಕಿರುವ ಇಎಂಐಗಳನ್ನು ಗ್ರಾಹಕರು ಪಾವತಿ ಮಾಡದೇ ಇದ್ದರೂ ಬ್ಯಾಂಕ್ ತಕ್ಷಣ ಪಾವತಿ ಮಾಡುವಂತೆ ಒತ್ತಾಯಿಸುವುದಿಲ್ಲ. ಅಂದರೆ ಎಲ್ಲಾ ಗ್ರಾಹಕರ ಸಾಲ ಮರುಪಾವತಿಯು ತನ್ನಿಂತಾನೆ ಮೂರು ತಿಂಗಳು ಮುಂದೂಡಲ್ಪಡುತ್ತದೆ.
ಸಾರ್ವಜನಿಕ ವಲಯದ ಬ್ಯಾಂಕುಗಳು ಕೆಲವು ಎಸ್ಬಿಐ ಹಾದಿಯನ್ನೇ ಹಿಡಿದಿವೆ. ಅವುಗಳು ಸಹ ಮೂರು ತಿಂಗಳ ಇಎಂಐ ಪಾವತಿಗೆ ವಿನಾಯ್ತಿ ನೀಡಿವೆ. ಆದರೆ, ಖಾಸಗಿ ವಲಯದ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು(NBFC) ಮಾತ್ರ ತನ್ನಿಂತಾನೆ ಇಎಂಐ ಪಾವತಿಗೆ ವಿನಾಯ್ತಿ ನೀಡಿಲ್ಲ. ಒಂದು ವೇಳೆ ಆರ್ಬಿಐ ಘೋಷಿಸಿರುವ ಪರಿಹಾರ ಪ್ಯಾಕೇಜ್ ಸೌಲಭ್ಯವನ್ನು ಪಡೆಯ ಬೇಕಾದರೆ, ಗ್ರಾಹಕರು ತಮ್ಮ ತಮ್ಮ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳಿಗೆ ಮನವಿ ಸಲ್ಲಿಸಿ, ಮೂರು ತಿಂಗಳ ಇಎಂಐ ಪಾವತಿ ವಿನಾಯಿತಿ ಸೌಲಭ್ಯವನ್ನು ಪಡೆಯುವುದಾಗಿ ಘೋಷಿಸಬೇಕು. ಆ ನಂತರವಷ್ಟೇ ಗ್ರಾಹಕರಿಗೆ ಈ ಸೌಲಭ್ಯ ಸಿಗುತ್ತದೆ.
ಆರ್ಬಿಐ ಘೋಷಿಸಿರುವ ಮರುಪಾವತಿ ವಿನಾಯಿತಿಯು ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು, ಲೋಕಲ್ ಏರಿಯಾ ಬ್ಯಾಂಕುಗಳು, ಸಹಕಾರ ಬ್ಯಾಂಕುಗಳು, ಮೈಕ್ರೋ ಫೈನಾನ್ಸ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ಬಿಎಫ್ಸಿ) ಹಾಗೂ ಗೃಹ ಹಣಕಾಸು ಸಂಸ್ಥೆಗಳಿಗೂ (HFC) ಅನ್ವಯಿಸುತ್ತದೆ. ಇದರ ಜತೆಗೆ ಕ್ರೆಡಿಟ್ ಕಾರ್ಡ್ ಬಳಸಿ ಪಡೆದಿರುವ ಸಾಲಕ್ಕೂ ಅನ್ವಯಿಸುತ್ತದೆ.
ನೀವು ಈ ಸೌಲಭ್ಯ ಬಳಸಿಕೊಳ್ಳುತ್ತೀರಾ? ಈ ಅಂಶಗಳನ್ನು ಗಮನಿಸಿ.
ಸಾಲ ಮರುಪಾವತಿಗೆ ವಿನಾಯಿತಿ ನೀಡಿರುವ ಸೌಲಭ್ಯವನ್ನು ಬಳಸಿಕೊಳ್ಳುವ ಮುನ್ನ ಒಂದು ಬಾರಿ ಯೋಚಿಸಿ. ಆರ್ಬಿಐ ನೀಡಿರುವ ಮರುಪಾವತಿ ವಿನಾಯಿತಿ ಕೇವಲ ಅಸಲು ಪಾವತಿಗೆ ಮಾತ್ರ. ಬಡ್ಡಿ ಪಾವತಿಗೆ ಅಲ್ಲ. ಅಂದರೆ, ಈ ಮೂರು ತಿಂಗಳಲ್ಲಿ ನೀವು ಪಾವತಿಸದ ಅಸಲಿನ ಮೇಲೆ ಬಡ್ಡಿ ಪಾವತಿಸಲೇ ಬೇಕು. ಈ ಬಡ್ಡಿಯು ನಿಮ್ಮ ಬಾಕಿ ಮೊತ್ತಕ್ಕೆ ಸೇರ್ಪಡೆಯಾಗುತ್ತದೆ. ನೀವು ನಿಮ್ಮ ಸಾಲದ ಅವಧಿ ಮುಗಿಯುವವರೆಗೂ ಮೂರು ತಿಂಗಳು ಪಾವತಿಸದ ಅಸಲಿನ ಮೇಲಿನ ಬಡ್ಡಿಯನ್ನು ಪಾವತಿಸುತ್ತಲೇ ಇರುತ್ತೀರಿ.
ಉದಾಹರಣೆಗೆ 10 ಲಕ್ಷ ರುಪಾಯಿ ಸಾಲ ಬಾಕಿ ಇದೆ. ನೀವು ಮೂರು ತಿಂಗಳು ಅಸಲು ಬಾಕಿ ಪಾವತಿಸುವುದಿಲ್ಲ. ನಿಮ್ಮ ಸಾಲದ ಮೇಲಿನ ಬಡ್ಡಿ ಶೇ.12ರಷ್ಟಿದೆ ಎಂದಿಟ್ಟುಕೊಳ್ಳಿ. ನೀವು ತಿಂಗಳಿಗೆ ಪಾವತಿಸುವ ಬಡ್ಡಿ 10,000 ರುಪಾಯಿಗಳು. ಈ ಮೂರು ತಿಂಗಳಲ್ಲಿ ನೀವು ಸಾಲದ ಅಸಲು ಪಾವತಿಸದೇ ಇದ್ದರೂ ಬಡ್ಡಿಯನ್ನು ಮುಂದೆ ಪಾವತಿಸಲೇ ಬೇಕಾಗುತ್ತದೆ. ಈ ಮೂರು ತಿಂಗಳ ಬಡ್ಡಿ ಮೊತ್ತವು ಸೇರಿದಂತೆ ಜೂನ್ ತಿಂಗಳಲ್ಲಿ ನಿಮ್ಮ ಬಾಕಿ ಮೊತ್ತವು 10,30,000 ಕ್ಕೆ ಏರಿರುತ್ತದೆ. ಜೂನ್ ತಿಂಗಳಿಂದ ನೀವು ಪಾವತಿಸಬೇಕಾದ ಬಡ್ಡಿ ಮೊತ್ತವು ಹಿಂದಿನಂತೆ 10,000 ರುಪಾಯಿ ಮಾತ್ರವಲ್ಲ, 10,300 ರುಪಾಯಿ ಪಾವತಿಸುತ್ತೀರಿ. ಅಂದರೆ, ಒಂದು ವರ್ಷದಲ್ಲಿ ನೀವು 3,600 ಹೆಚ್ಚಿನ ಬಡ್ಡಿ ಪಾವತಿಸಿದಂತಾಗುತ್ತದೆ. ಮೇಲ್ನೋಟಕ್ಕೆ ಕಡಮೆ ಎನಿಸಿದರೂ ದೀರ್ಘಕಾಲದಲ್ಲಿ ಇದು ಭಾರಿ ಮೊತ್ತವಾಗಿರುತ್ತದೆ.
ಇದು ಸಾಮಾನ್ಯ ಸಾಲದ ಮೇಲಿನ ಬಡ್ಡಿ ಲೆಕ್ಕಾಚಾರವಾದರೆ, ಕ್ರೆಡಿಟ್ ಕಾರ್ಡ್ ಬಳಸಿ ಪಡೆದಿರುವ ಸಾಲದ ಮೇಲಿನ ಬಡ್ಡಿಯು ಶೇ.18ರಿಂದ 36ರಷ್ಟಿರುತ್ತದೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆದವರು ಪಾವತಿಸಬೇಕಾದ ಇಎಂಐ ಮೊತ್ತವನ್ನು ಮುಂದೂಡುವುದು ಸೂಕ್ತವಲ್ಲ. ಒಂದು ವೇಳೆ ಮುಂದೂಡಿದರೆ, ಅಸಲಿನ ಮೇಲೆ ಬ್ಯಾಂಕುಗಳು ಗರಿಷ್ಠ ಪ್ರಮಾಣದಲ್ಲಿ ಬಡ್ಡಿ ಹೇರುತ್ತವೆ. ಅಂತಿಮವಾಗಿ ಈ ಬಡ್ಡಿಯು ನಿಮ್ಮ ಬಾಕಿ ಮೊತ್ತಕ್ಕೆ ಸೇರ್ಪಡೆಯಾಗುವುದರಿಂದ ಸಾಲ ಮರುಪಾವತಿ ವಿನಾಯಿತಿ ಅವಧಿ ಮುಗಿದ ನಂತರ ನಿಮ್ಮ ಇಎಂಐ ಹೆಚ್ಚಾಗಿರುತ್ತದೆ ಇಲ್ಲವೇ ನಿಮ್ಮ ಪಾವತಿ ಅವಧಿಯು ಹಿಗ್ಗಿರುತ್ತದೆ.
ನಿಮಗೆ ಈ ಸಂಕಷ್ಟ ಕಾಲದಲ್ಲೂ ಬ್ಯಾಂಕಿನ ಸಾಲ ಮರುಪಾವತಿ ಮಾಡಲು ಸಾಧ್ಯ ಇದೆ ಎಂದಾದರೆ, ಆರ್ಬಿಐ ಘೋಷಿಸಿರುವ ಸಾಲಮರುಪಾವತಿ ವಿನಾಯ್ತಿ ಸೌಲಭ್ಯವನ್ನು ಪಡೆದುಕೊಳ್ಳಬೇಡಿ. ಈ ಸೌಲಭ್ಯವು, ತೀರಾ ಸಂಕಷ್ಟದಲ್ಲಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಮಾತ್ರ. ಮೇಲ್ನೋಟಕ್ಕೆ ಇದು ಗ್ರಾಹಕರಿಗೆ ನೀಡಿರುವ ಪರಿಹಾರ ಎಂದು ಅನ್ನಿಸಿದರೂ ಇದರಿಂದ ಬ್ಯಾಂಕುಗಳಿಗೆ ಹೆಚ್ಚಿನ ಲಾಭವಾಗುತ್ತದೆ.
ಆರ್ಬಿಐ ಸಾಲ ಮರುಪಾವತಿ ವಿನಾಯ್ತಿ ಸೌಲಭ್ಯವನ್ನು ಘೋಷಿಸಿರುವುದರ ಹಿಂದೆ ಪ್ರಮುಖ ಕಾರಣವೊಂದಿದೆ. ಒಂದು ವೇಳೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡದೇ ಇದ್ದರೆ, ಬಡ್ಡಿ ಹೆಚ್ಚಾಗುವುದಲ್ಲದೇ, ಕ್ರಿಡಿಟ್ ಸ್ಕೋರ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕ್ರೆಡಿಟ್ ಸ್ಕೋರ್ ಸಮರ್ಪಕವಾಗಿಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಸಾಲ ಪಡೆಯುವುದು ಕಷ್ಟವಾಗುತ್ತದೆ. ಅಲ್ಲದೇ ಕಂಪನಿಗಳ 5 ಕೋಟಿ ರುಪಾಯಿ ಮೀರಿದ ಸಾಲದ ಮೊತ್ತದ ಮರುಪಾವತಿ ವಿವರಗಳನ್ನು ಬ್ಯಾಂಕುಗಳು ಪ್ರತಿ ತಿಂಗಳೂ ಆರ್ಬಿಐಗೆ ನೀಡಬೇಕಿದೆ. ಈ ವರದಿ ಆಧರಿಸಿ ಕ್ರೆಡಿಟ್ ಏಜೆನ್ಸಿಗಳು ಆಯಾ ಕಂಪನಿಗಳ ಸಾಲ ಮರುಪಾವತಿ ಸಾಮರ್ಥ್ಯದ ಶ್ರೇಣಿಯನ್ನು ನೀಡುತ್ತವೆ. ಸಂಕಷ್ಟದ ಅವಧಿಯಲ್ಲಿ ಕಂಪನಿಗಳ ಸಾಲ ಮರುಪಾವತಿ ಸಾಮರ್ಥ್ಯದ ಶ್ರೇಣಿಯನ್ನು ನೀಡಬಾರದೆಂದು ಆರ್ಬಿಐ ರೇಟಿಂಗ್ ಏಜೆನ್ಸಿಗಳಿಗೆ ಸೂಚಿಸಿದೆ.
ಕಂತು ಪಾವತಿಗೆ ನೋಟಿಸ್ ಬಂತೇ?
ನಿಮಗೆ ಸಾಲ ನೀಡಿದ ಬ್ಯಾಂಕು ಅಥವಾ ಫೈನಾನ್ಸ್ ಕಂಪನಿಯು ನಿಮ್ಮ ಬಾಕಿ ಕಂತು ಪಾವತಿಸುವಂತೆ ನಿಮಗೆ ಇಮೇಲ್, ಮೆಸೆಜ್ ಮೂಲಕ ಸೂಚಿಸುತ್ತಿದೆಯೇ? ಇದಕ್ಕಾಗಿ ನೀವು ಚಿಂತಿಸಬೇಕಿಲ್ಲ. ನಿಮಗೆ ಕಂತು ಪಾವತಿಸಲು ಸಾಧ್ಯವಾಗದೇ ಇದ್ದಲ್ಲಿ, ನೀವು ಆರ್ಬಿಐ ಘೋಷಿಸಿರುವ ಸಾಲ ಮರುಪಾವತಿ ವಿನಾಯ್ತಿ ಸೌಲಭ್ಯವನ್ನು ಪಡೆಯುವುದಾಗಿ ನಿಮ್ಮ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ತಿಳಿಸಬೇಕು. ಅದನ್ನು ಲಿಖಿತ, ಇಮೇಲ್ ಅಥವಾ ಮೆಸೆಜ್ ಮೂಲಕ ತಿಳಿಸುವುದು ಅತ್ಯಗತ್ಯ.
ಕೊನೆಯದಾಗಿ, ನೀವು ತೀರಾ ಸಂಕಷ್ಟದಲ್ಲಿದ್ದರೆ, ಮಾತ್ರ ಈ ಸೌಲಭ್ಯವನ್ನು ಪಡೆದುಕೊಳ್ಳಿ, ಇಲ್ಲದಿದ್ದರೆ, ಎಂದಿನಂತೆ ಇಎಂಐ ಪಾವತಿಸಿ, ದೀರ್ಘಕಾಲದಲ್ಲಾಗುವ ಹೊರೆಯನ್ನು ಈಗಲೇ ತಗ್ಗಿಸಿಕೊಳ್ಳಿ!