ಕೋವಿಡ್-19 ನಿಂದಾಗಿ ಉಂಟಾದ ಜಾಗತಿಕ ಆರೋಗ್ಯ ಬಿಕ್ಕಟ್ಟು ಆರ್ಥಿಕ ವಲಯದಲ್ಲೂ ತನ್ನ ಗಂಭೀರ ಪರಿಣಾಮವನ್ನು ಬೀರಿದೆ. ಕರೋನಾ ಸೋಂಕು ನಿಯಂತ್ರಿಸಲು ವಿಶ್ವದಾದ್ಯಂತ ದೇಶಗಳು ಲಾಕ್ಡೌನ್ ಘೋಷಿಸಿದ್ದರಿಂದ ಆರ್ಥಿಕ ಚಟುವಟಿಕೆಗಳು ಭಾಗಶಃ ನಿಂತಿದ್ದು ಜಗತ್ತಿನೆಲ್ಲೆಡೆ ಆರ್ಥಿಕ ಸಂಕಷ್ಟ ತಲೆದೋರಿದೆ. ಆರ್ಥಿಕ ವಲಯದಲ್ಲಿ ಉಂಟಾದ ಈ ನಾಟಕೀಯ ಬೆಳವಣಿಗೆಗಳಿಂದ ಹಲವಾರು ಕ್ಷೇತ್ರದಲ್ಲಿ ಈಗಾಗಲೇ ಉದ್ಯೋಗಗಳು ಅಸ್ಥಿರವಾಗಿದ್ದು ಇದರ ಬಿಸಿ ಮಾಧ್ಯಮ ರಂಗಕ್ಕೂ ತಟ್ಟಿದೆ.
ಕರೋನಾ ಸೋಂಕು ಭಾರತದ ಮಾಧ್ಯಮ ರಂಗದ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆ ಇದೆ. ಮಾಧ್ಯಮ ಸಂಸ್ಥೆಗಳು ಈಗಾಗಲೇ ಕಳೆದ ವರ್ಷ 1000 ಕ್ಕೂ ಮಿಕ್ಕಿ ಉದ್ಯೋಗಿಗಳನ್ನು ವಜಾ ಮಾಡಿತ್ತು. ಕಳೆದ ಹದಿನೈದು ದಿನಗಳಲ್ಲಿ ಮಾಧ್ಯಮ ರಂಗದ ನೂರು ಮಂದಿಯನ್ನು ಕೆಲಸದಿಂದ ವಜಾ ಮಾಡಿದ್ದು, ಹಲವಾರು ಉದ್ಯೋಗಿಗಳನ್ನು ವೇತನ ರಹಿತ ರಜೆಯ ನಿಮಿತ್ತ ಕಳುಹಿಸಲಾಗಿದೆ. ಮಾಧ್ಯಮದ ಮಂದಿ ಮುಂದಿನ ದಿನಗಳಲ್ಲಿ ಇತರೆ ಕ್ಷೇತ್ರದ ಉದ್ಯೋಗಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಬಹುದೆಂದು ಉದ್ಯಮದ ಪರಿಣಿತರು ಅಭಿಪ್ರಾಯಿಸಿದ್ದಾರೆ.
ದೇಶದಾದ್ಯಂತ ಸುದ್ದಿ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ,ಅಥವಾ ಬಲವಂತದ ರಜೆಯ ಮೇಲೆ ಮನೆಗೆ ಕಳುಹಿಸುತ್ತಿದೆ. ಇದು ಬಿಕ್ಕಟ್ಟಿನಲ್ಲಿರುವ ಮಾಧ್ಯಮ ಮಾರುಕಟ್ಟೆಯನ್ನು ಪತ್ರಕರ್ತರಿಗೆ ಮತ್ತಷ್ಟು ಸ್ಪರ್ಧಾತ್ಮಕವನ್ನಾಗಿಸುತ್ತಿದೆ. ಭಾರತೀಯ ಪತ್ರಿಕಾರಂಗವು ಜಾಬ್ ಓಪನಿಂಗ್ಗಿಂತಲೂ ಹೆಚ್ಚು ನಿರುದ್ಯೋಗಿ ಪತ್ರಕರ್ತರನ್ನು ಹೊಂದಿದೆ. ವರದಿಗಳ ಪ್ರಕಾರ ಪ್ರತಿ ವರ್ಷ 3000 ಕ್ಕಿಂತಲೂ ಮಿಕ್ಕಿ ಪತ್ರಿಕೋದ್ಯಮ ಪದವೀಧರರು ಪದವಿ ಪಡೆದು ಹೊರಗೆ ಬರುತ್ತಿದ್ದಾರೆ.
2019ರಲ್ಲಿ ಸಾವಿರಕ್ಕೂ ಮಿಕ್ಕಿ ಉದ್ಯೋಗಿಗಳನ್ನು T.V, ಮುದ್ರಣಾ ಹಾಗೂ ಅಂತರ್ಜಾಲ ಮಾಧ್ಯಮಗಳಲ್ಲಿ ಕೆಲಸದಿಂದ ವಜಾ ಮಾಡಿದಾಗ ಹಲವಾರು ಮಂದಿ ಇದು ಬಹಳ ಕೆಟ್ಟ ಸನ್ನಿವೇಶ, 2012-13ರ ಜಾಗತಿಕ ಆರ್ಥಿಕ ಬಿಕ್ಕಟ್ಟಿಗಿಂತ ಭೀಕರವಾಗಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಭಾರತದಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಬ್ಯುಸಿನೆಸ್ ಸ್ಟಾಂಡರ್ಡ್ ಮೊದಲ ಬಾರಿಗೆ ವೇತನ ಕಡಿತ ಘೋಷಿಸಿತು. ನಂತರ ದೇಶದ ದಿಗ್ಗಜ ಸುದ್ದಿಮನೆಗಳು ಸಾಮೂಹಿಕ ವಜಾಗೊಳಿಸುವಿಕೆಯನ್ನು ಘೋಷಿಸ ತೊಡಗಿತು.ಟೈಮ್ಸ್ ಗ್ರೂಪಿನ ಪತ್ರಕರ್ತ ನೊನ ವಾಲಿಯ ತನ್ನ ಸಾಮಾಜಿಕ ಜಾಲತಾಣದಲ್ಲಿ ‘ ಟೈಮ್ಸ್ ಆಫ್ ಇಂಡಿಯಾದ ಸಂಡೇ ಮ್ಯಾಗಝಿನಿನ ಇಡೀ ತಂಡವನ್ನು ಮನೆಗೆ ಕಳುಹಿಸಲಾಗಿದೆ ಎಂದು ಬಾಸ್ ಪೂನಮ್ ಸಿಂಗ್ ಕರೆ ಮಾಡಿದ್ದಾರೆ. ಇಪ್ಪತ್ತಾನಾಲ್ಕು ವರ್ಷದ ಬಳಿಕ ನಾನು ಅತ್ಯಂತ ಪ್ರೀತಿಯಿಂದ ಸೇವೆ ಮಾಡುತ್ತಿದ್ದ ಸಂಸ್ಥೆಯಿಂದ ವಜಾಗೊಳಿಸಲಾಯಿತು.ವಾವ್” ಎಂದು ನೋವಿನಿಂದ ಬರೆದುಕೊಂಡಿದ್ದಾರೆ.
ಇದುವರೆಗೂ ಉದ್ಯೋಗ ಕಡಿತದ ಸುದ್ದಿಗಳು ಬರುತ್ತಲೇ ಇದೆ. ಕೆಲವು ಸುದ್ದಿ ಸಂಸ್ಥೆಗಳು ಸಂಪೂರ್ಣ ತಂಡವನ್ನೇ ವಜಾ ಗೊಳಿಸಿದ್ದರೆ, ಇನ್ನು ಕೆಲವು 5ರಿಂದ 30% ವೇತನ ಕಡಿತಗೊಳಿಸಿವೆ. ʼದಿ ವಾಲ್ಟ್ ಡಿಸ್ನೆ ಕಂಪೆನಿ’ ಯಂತಹ ಸಂಸ್ಥೆಗಳು ಸ್ವಯಂ ಪ್ರೇರಿತ ಸಂಬಳ ಕಡಿತದಂತಹ ಯೋಜನೆಗಳೊಂದಿಗೆ ಮುಂದೆ ಬಂದಿದೆ, ಇದರ ಪ್ರಕಾರ ಹಿರಿಯ ಉದ್ಯೋಗಿಗಳು ಸ್ವಯಂ ಪ್ರೇರಿತವಾಗಿ ವೇತನ ಕಡಿತವನ್ನು ಪಡೆಯಬಹುದು.
ಆದರೆ ಪತ್ರಿಕೋದ್ಯಮ ಸ್ವಯಂ ಪ್ರೇರಿತವಾಗಿ ವೇತನ ಕಡಿತವನ್ನು ಒಪ್ಪಿಕೊಳ್ಳುವಂತಹ ವೈಟ್ ಕಾಲರ್ ಉದ್ಯೋಗಗಳಾಗಿ ಉಳಿದಿಲ್ಲ. ಪದ್ಮಶ್ರೀ ಪ್ರಶಸ್ತಿ ವಿಜೇತ ಹಿರಿಯ ಪತ್ರಕರ್ತ ಅಲೋಕ್ ಮೆಹ್ತಾ ಪ್ರಕಾರ “ಭಾರತವೆಂದರೆ ದೆಹಲಿ ಮತ್ತು ಮುಂಬೈ ಮಾತ್ರವಲ್ಲ. ಭಾರತದ ಎಲ್ಲಾ ಜಿಲ್ಲೆಗಳಲ್ಲೂ ತಿಂಗಳ ವೇತನ 10000 ದಾಟದ ಪತ್ರಕರ್ತರಿದ್ದಾರೆ. ಅವರ ಗಳಿಕೆ ಈ ಸಮಯದಲ್ಲಿ ಶೂನ್ಯವನ್ನು ತಲುಪಿದೆ. ಅವರ ಸ್ಥಿತಿ ರೈತರಿಗಿಂತಲೂ ಶೋಚನೀಯವಾಗಿದ್ದು ಅವರಿಗೆ ಯಾವ ಪರಿಹಾರ ಮತ್ತು ಪ್ರಯೋಜನಗಳು ಲಭ್ಯವಾಗುತ್ತಿಲ್ಲ. ಪತ್ರಕರ್ತರಿಗೆ ಸಹಾಯ ಮಾಡುವಲ್ಲಿ ಸರಕಾರಗಳು ಇನ್ನಷ್ಟು ಕ್ರಿಯಾತ್ಮಕವಾಗಬೇಕು. ದೂರದರ್ಶನದಲ್ಲಿ ನೂರಾರು ಹುದ್ದೆಗಳು ಖಾಲಿ ಇವೆ. ಸರಕಾರ ಅರ್ಹ ಇರುವ ಪತ್ರಕರ್ತರನ್ನು ಖಾಲಿ ಇರುವ ಸ್ಥಾನಗಳಿಗೆ ಭರ್ತಿಗೊಳಿಸಬೇಕು” ಎಂದಿದ್ದಾರೆ.
ವೇತನರಹಿತ ರಜೆಯಲ್ಲಿ ಕಳುಹಿಸಿರುವ ಪತ್ರಕರ್ತರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆಯೇ ಎಂದು ಪ್ರಶ್ನಿಸಿದಾಗ, “ಎಲ್ಲಾ ಪತ್ರಕರ್ತರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳವ ಸಾಧ್ಯತೆ ಇಲ್ಲಾ” ಎಂದು ಮೆಹ್ತಾ ಹೇಳಿದ್ದಾರೆ.
ಮಾರ್ಚ್ 16 ರಂದು ಮುಂಬೈ ಪ್ರೆಸ್ ಕ್ಲಬ್ ಪ್ರಕಟಿಸಿದ ಹೇಳಿಕೆಯಲ್ಲಿ ಏಕಾಏಕಿ ಪತ್ರಕರ್ತರನ್ನು ವಜಾಗೊಳಿಸಿರುವುದನ್ನು ಖಂಡಿಸಿದೆ. ಇದು ಸರಕಾರದ ನಿರ್ದೇಶನವನ್ನು ಮೀರಿ ಮಾಧ್ಯಮ ಸಂಸ್ಥೆಗಳು ಗೌಪ್ಯ ಕಾರ್ಯಚರಣೆ ನಡೆಸಿ ಉದ್ಯೋಗ ಕಡಿತಗೊಳಿಸಿದೆ. ಕೈಗಾರಿಕಾ ನಿಯಮಗಳನ್ನು ಮೀರಿ ಸಂಸ್ಥೆಗಳು ಕಾರ್ಯಾಚರಿಸಿವೆ. ಇದು ಕಾನೂನಿನ ಉಲ್ಲಂಘನೆ ಎಂದಿದೆ.
ಸಾಂಕ್ರಾಮಿಕ ರೋಗವು ಮುದ್ರಣಾ ಮಾಧ್ಯಮವನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿವೆ. ಜನರು ಬದಲಾವಣೆ ಒಪ್ಪಿಕೊಳ್ಳುತ್ತಿದ್ದಾರೆ. ವೃತ್ತ ಪತ್ರಿಕೆಗೆ ಒಗ್ಗಿಕೊಂಡಿದ್ದ ಹೆಚ್ಚಿನ ಓದುಗರು ಕ್ರಮೇಣ ಅಂತರ್ಜಾಲ ಅವತರಣಿಕೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಸಣ್ಣ ಪ್ರಮಾಣದ ಓದುಗರಷ್ಟೇ ವೃತ್ತಪತ್ರಿಕೆಯನ್ನೇ ಅವಲಂಬಿಸಿರುತ್ತಾರೆ. ವೃತ್ತಪತ್ರಿಕೆಯ ಸುಸ್ಥಿರತೆ ಇನ್ನಷ್ಟು ಉದ್ಯೋಗ ಉಳಿತಾಯದ ಸವಾಲಾಗಿ ಪರಿಣಮಿಸುತ್ತದೆ. ಹೀಗಾದಾಗ ನ್ಯೂಸ್ ರೂಮಿನ ಒಳಗೆ ಕೆಲಸ ಮಾಡುವ ಪೇಜ್ ಮೇಕರ್, ವಿನ್ಯಾಸಕರಂತಹ ಕೆಲಸಗಳಿಗೆ ಸವಾಲಾಗುತ್ತದೆ. ಅಲ್ಲಿ ಹಲವಾರು ಅನಗತ್ಯ ಉದ್ಯೋಗಗಳಿವೆ ಲಾಕ್ಡೌನ್ ಮುಕ್ತಾಯದ ಬಳಿಕ ಅದೆಲ್ಲವೂ ವಜಾಗೊಳ್ಳಲಿದೆ ಎಂದು HR ತಜ್ಞ ರಜನೀಶ್ ಸಿಂಗ್ ಹೇಳಿದ್ದಾರೆ.
ಈ ಸಂಕಷ್ಟವು ಬರೀ ಮುದ್ರಣ ಮಾಧ್ಯಮಕ್ಕೆ ಸಂಬಂಧಿಸಿದ್ದಲ್ಲ.ಡಿಜಿಟಲ್ ನ್ಯೂಸ್ ರೂಮ್ಗಳಲ್ಲಿ ಭವಿಷ್ಯವನ್ನು ಗಮನದಲ್ಲಿಡದೆ ಹಲವಾರು ನೇಮಕಾತಿಗಳನ್ನು ಮಾಡಲಾಗುತ್ತಿತ್ತು. ಹಾಗಾಗಿಯೇ ಕೆಲಸದಿಂದ ವಜಾಗೊಳಿಸುವುದು ಈ ಉದ್ಯಮದ ಸಹಜ ಅಗತ್ಯವಾಗುತ್ತದೆ ಎಂದು ಸಿಂಗ್ ಹೇಳಿದರು.
ಕಳೆದ ಎರಡು ಮೂರು ವರ್ಷಗಳಿಂದ ಮಾಧ್ಯಮ ರಂಗದಿಂದ ಬೇರೆ ಬೇರೆ ಕ್ಷೇತ್ರಗಳಿಗೆ ವರ್ಗವಾಣೆಯಾಗಲು ತೊಡಗಿದ್ದಾರೆ. ವೇತನ ರಹಿತ ರಜೆಯು ಯಾವಾಗ ಮುಕ್ತಾಯಗೊಳ್ಳಲಿದೆಯೆಂದು ಸೂಚನೆಯಿಲ್ಲದರಿಂದ ಈ ಸಂಪ್ರದಾಯ ಇನ್ನೂ ಮುಂದುವರೆಯಲಿದೆ. ಕಂಪೆನಿಗಳು ಈ ಸಮಯದಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡುವ ತಂಡಗಳ ಕಡೆಗೆ ಹೆಚ್ಚು ಗಮನ ಹರಿಸುತ್ತದೆ ಎಂದು ರಜನೀಶ್ ಸಿಂಗ್ ಹೇಳಿಕೆ ನೀಡಿದ್ದಾರೆ.