ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ 11ರ ಸಂಜೆ ಐದು ಗಂಟೆಗೆ ಹೊರಡಿಸಿದ ಕರೋನಾ ಸೋಂಕಿನ ಅಂಕಿ ಅಂಶದ ಪ್ರಕಾರ ಕಳೆದ 24 ಗಂಟೆಗಳಲ್ಲಿ 69 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. ಒಟ್ಟು ಕರೋನಾ ಸೋಂಕಿತರ ಸಂಖ್ಯೆ 1056 ಕ್ಕೇರಿದೆ. ಇದುವರೆಗೂ ರಾಜ್ಯದಲ್ಲಿ 480 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಪತ್ತೆಯಾಗಿರುವ ಹೆಚ್ಚಿನ ಪ್ರಕರಣಗಳು ವಿದೇಶದಿಂದ ಹಾಗೂ ಅನ್ಯರಾಜ್ಯ ಮೂಲಗಳಿಂದ ಪತ್ತೆಯಾಗಿರುತ್ತದೆ.
ರಾಜ್ಯದಲ್ಲಿ ಸಕ್ರಿಯವಾಗಿರುವ 539 ಪ್ರಕರಣಗಳಲ್ಲಿ 528 ಮಂದಿ ಕರೋನಾ ಸೋಂಕಿತರಿಗೆ ಗೊತ್ತುಪಡಿಸಿದ ಸಾಮಾನ್ಯ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿರುವ 11 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ರಾಜ್ಯದಲ್ಲಿ ಕರೋನಾ ಸೋಂಕಿನಿಂದಾಗಿ 36 ಮಂದಿ ಅಸುನೀಗಿದ್ದಾರೆಂದು ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ದಕ್ಷಿಣ ಕನ್ನಡದಲ್ಲಿ 15 ಪ್ರಕರಣಗಳು ಪತ್ತೆಯಾಗಿದ್ದು. ಮಂಡ್ಯದಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ತಲಾ 13 ಪ್ರಕರಣಗಳು ಕಂಡುಬಂದಿದ್ದು, ಬೀದರಲ್ಲಿ 7, ಬೆಂಗಳೂರು ಗ್ರಾಮಾಂತರದಲ್ಲಿ 6, ಉಡುಪಿಯಲ್ಲಿ 5, ಕಲಬುರಗಿಯಲ್ಲಿ ಮತ್ತು ಚಿತ್ರದುರ್ಗದಲ್ಲಿ ಕ್ರಮವಾಗಿ 3 ಮತ್ತು 2 ಪ್ರಕರಣಗಲು ದಾಖಲಾಗಿವೆ. ಕೋಲಾರ ಹಾಗೂ ಶಿವಮೊಗ್ಗದಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ.












