ಕೋವಿಡ್ ಸಾಂಕ್ರಮಿಕ ಸೋಂಕು, ದೇಶಕ್ಕೆ ಕಾಲಿಟ್ಟ ನಂತರ ಕರೋನಾ ವಿರುದ್ದದ ಹೋರಾಟಗಳು, ಜಾಗೃತಿ ಮೂಡಿಸುವ ಪ್ರಕ್ರಿಯೆಗಳು ಸಾಕಷ್ಟು ವೇಗದಲ್ಲಿ ನಡೆಯಲು ಆರಂಭಿಸಿದವು. ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡುವ ಕೆಲಸ ಜೋರಾಗಿಯೇ ನಡೆಯಿತು. ಕರೋನಾ ಕುರಿತು ಮೊದಲೇ ಎಚ್ಚೆತ್ತುಕೊಳ್ಳಬೇಕಿದ್ದ ಆಡಳಿತದಲ್ಲಿರುವ ನಾಯಕರು, ತಮ್ಮ ʼImage’ ವೃದ್ದಿಯ ಕೆಲಸದಲ್ಲಿ ತೊಡಗಿಕೊಂಡಿದ್ದು ದೇಶಕ್ಕೇ ಮಾರಕವಾಗಿ ಪರಿಣಮಿಸಿತು.
ಕೋವಿಡ್ ಕುರಿತು ಜಾಗೃತಿ ಮೂಡಿಸಬೇಕಿದ್ದ ಮಾಧ್ಯಮಗಳು, ಒಂದು ಸಾಂಕ್ರಮಿಕ ಸೋಂಕಿಗೆ ಧರ್ಮದ ಬಣ್ಣ ಬಳಿದು ಅದಕ್ಕಿಂತಲೂ ಹೆಚ್ಚಾಗಿ ಜನರಲ್ಲಿ ಕೋವಿಡ್ ಕುರಿತು ಇದ್ದಂತಹ ಅಜ್ಞಾನದ ಪ್ರಯೋಜನ ಪಡೆದು ಅವರನ್ನು ಭಯ ಬೀಳಿಸುವಂತಹ ವರದಿಗಳನ್ನು ಪ್ರಸಾರ ಮಾಡಿದ್ದು, ಜನರಲ್ಲಿ ಕೋವಿಡ್ ಪಾಸಿಟಿವ್ ಎಂದರೆ, ಕಳಂಕಿತರು ಎಂಬ ಭಾವನೆ ಮೂಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತು. ಜನವರಿಯ ಕೊನೆಯ ವಾರದಲ್ಲಿ ದೇಶದಲ್ಲಿ ಮೊದಲ ಕೋವಿಡ್ ಕೇಸ್ ಕಂಡು ಬಂದ ಸಮಯದಿಂದ ಇಲ್ಲಿಯವರೆಗೆ ಜಾಗೃತಿ ಮೂಡಿಸುವ (?) ಭರದಲ್ಲಿ ಭಯ ಮತ್ತು ಕೋವಿಡ್ ಸೋಂಕಿತರು ಕಳಂಕಿತರು ಎಂಬ ಮನೋಭಾವನೆಯನ್ನು ಹುಟ್ಟು ಹಾಕುವಲ್ಲಿ ಮಾಧ್ಯಮಗಳು ಯಶಸ್ವಿಯಾದವು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೋವಿಡ್ ಕುರಿತಾಗಿನ ಸಾಮಾಜಿಕ ಮನಸ್ಥಿಯನ್ನು ಅತಿಯಾಗಿ ಚಿಂತಿಸಿ ಆತ್ಮಹತ್ಯೆ ಮಾಡಿಕೊಂಡ ನೂರಾರು ಉದಾಹಣೆಗಳು ನಮ್ಮ ಮುಂದಿವೆ. ಅದರಲ್ಲೂ, ವಿದ್ಯಾವಂತರು ಅನ್ನಿಸಿಕೊಂಡವರು ಕೂಡಾ ಆತ್ಮಹತ್ಯೆಯಂತಹ ಹೇಯ ಕೃತ್ಯಕ್ಕೆ ಮುಂದಾಗಿದ್ದು, ಸಮಾಜದಲ್ಲಿ ಕೋವಿಡ್ ಕುರಿತು ಮೂಡಿರುವಂತಹ ತಪ್ಪು ಪರಿಕಲ್ಪನೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ತಪ್ಪು ಪರಿಕಲ್ಪನೆ ಹಾಗೂ ಭಯ ಜನರಿಗೆ ಕೋವಿಡ್‌ಗೆ ಸೂಕ್ತ ಚಿಕಿತ್ಸೆಯನ್ನು ಪಡೆಯುಲು ಕೂಡಾ ಹಿಂದೇಟು ಹಾಕುವಂತೆ ಮಾಡಿತು. ಎಲ್ಲಿ ತಮಗೆ ಅಥವಾ ತಮ್ಮ ಕುಟುಂಬದವರಿಗೆ ಕೋವಿಡ್ ಇದೆ ಎಂದು ತಿಳಿದು ಬಂದರೆ, ಸಮಾಜದಲ್ಲಿ ನಮ್ಮನ್ನು ʼಅಸ್ಪೃಶ್ಯರಂತೆʼ ಕಾಣುವರೋ ಎಂಬ ಭಯ, ಕೋವಿಡ್‌ನ ಮೇಲಿನ ಭಯಕ್ಕಿಂತಲೂ ಹೆಚ್ಚಾಗಿ ಕಾಣುತ್ತಿತ್ತು ಮತ್ತು ಇದು ಕಳೆದ ದಿನಗಳಲ್ಲಿ ಮುಂದುವರೆಯುತ್ತಲೇ ಬಂದಿದೆ.
ಕೋವಿಡ್ ಎಷ್ಟು ಅಪಾಯಕಾರಿ?
ಕೋವಿಡ್ ಕುರಿತಾಗಿ ಜನರಲ್ಲಿರುವ ಭಯವನ್ನು ಹೋಗಲಾಡಿಸಿ, ನಿಜವಾದ ಅರ್ಥದಲ್ಲಿ ಅವರಲ್ಲಿ ಜಾಗೃತಿ ಮೂಡಿಸುವ ಮುಂಚೆ ಕೋವಿಡ್ ಎಷ್ಟು ಅಪಾಯಕಾರಿ ಎಂಬ ವಿಚಾರವನ್ನು ನಾವು ತಿಳಿದುಕೊಳ್ಳಬೇಕು. ಶೇ. 80ಕ್ಕಿಂತಲೂ ಹೆಚ್ಚಿನ ಸೋಂಕಿತರು, ಕೋವಿಡ್‌ನಿಂದ ಗುಣಮುಖರಾಗುತ್ತಾರೆ. ನಿಜವಾಗಿಯೂ ನೋಡಬೇಕೆಂದರೆ, ಕೋವಿಡ್‌ಗಿಂತಲೂ ಹೆಚ್ಚಿನ ಮಟ್ಟದಲ್ಲಿ ಅಪಾಯಕಾರಿಯಾದ ಸಾರ್ಸ್, ನಿಫಾ, ಮಾರ್ಬರ್ಗ್‌ನಂತಹ ವೈರಸ್ ದಾಳಿಗಳನ್ನು ಈ ಜಗತ್ತು ಸಮರ್ಥವಾಗಿ ಎದುರಿಸಿದೆ. ಕೋವಿಡ್‌ನಲ್ಲಿ ಸಂಭವಿಸುವ ಸಾವಿಗಿಂತಲೂ, ನೂರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಇತರೆ ವೈರಸ್‌ಗಳಿಂದ ಆಗಿದೆ.
ಜಾಗತಿಕವಾಗಿ ನೋಡಿದಾಗ ಕೋವಿಡ್‌ನಿಂದ ಸಂಭವಿಸಿದ ಸಾವುಗಳ ಸಂಖ್ಯೆ ಶೇ. 3.4ರಷ್ಟು ಮಾತ್ರ. ಅದರಲ್ಲೂ ಜಗತ್ತಿನ ಕೆಲವು ಪ್ರದೇಶಗಳಲ್ಲಿ ಈ ಸಂಖ್ಯೆ 0.2%ದಷ್ಟಿದೆ. ಇಷ್ಟು ಕಡಿಮೆ ಪ್ರಮಾಣದಲ್ಲಿರುವ ಸಾವಿನ ಪ್ರಮಾಣಕ್ಕೆ ಹೆದರಿ, ಸೋಂಕಿತರನ್ನು ಕಳಂಕಿತರಂತೆ ನೋಡುವುದು ಎಷ್ಟು ಸರಿ?

ಇತ್ತೀಚಿನ ದಿನಗಳಲ್ಲಿ, ಕೋವಿಡ್ ಸೋಂಕು ಹಬ್ಬುವ ಪ್ರಮಾಣ ಸಾಕಷ್ಟು ಹೆಚ್ಚುತ್ತಿದೆ. ಜನರಿಗೆ ಕೋವಿಡ್ ಎನ್ನುವ ವಿಚಾರ ಸಾಮಾನ್ಯವಾಗಿ ಹೋಗಿವೆ. ಮಾಧ್ಯಮಗಳಿಗೆ ಕೂಡಾ ಈ ವಿಚಾರದ ಕುರಿತಾಗಿ ಮತ್ತಷ್ಟು ಉತ್ಸಾಹವಿದ್ದಂತೆ ಕಾಣುತ್ತಿಲ್ಲ. ಕೋವಿಡ್‌ಗಿಂತ ಹಿಂದಿನ ಕಾರ್ಯಕ್ರಮಗಳ ಪಟ್ಟಿಯನ್ನು ಮತ್ತೆ ಪ್ರಸಾರ ಮಾಡಲು ಆರಂಭಿಸಿವೆ ಮಾಧ್ಯಮಗಳು. ಆದರೆ, ಇದೇ ಮಾಧ್ಯಮಗಳು ಕೇವಲ ಎರಡರಿಂದ ಮೂರು ತಿಂಗಳ ಹಿಂದೆ ತಾವು ಪ್ರಸಾರ ಮಾಡಿದ ಕಾರ್ಯಕ್ರಮಗಳ ಕುರಿತು ಸ್ಪಷ್ಟನೆಯನ್ನು ನೀಡಬಲ್ಲವೇ? ಅಥವಾ ಕೇವಲ ಜನರಿಗೆ ಭಯ ಹುಟ್ಟಿಸಿ ತಮ್ಮ ಚಾನೆಲ್‌ನ ಟಿಆರ್‌ಪಿಯನ್ನು ಹೆಚ್ಚಿಸುವತ್ತ ಮಾತ್ರ ತಮ್ಮ ಗಮನವನ್ನು ಕೇಂದ್ರೀಕೃತಗೊಳಿಸಿದವೇ?
ಜಾಗೃತಿ ಮತ್ತು ಭಯದ ನಡುವಿನ ವ್ಯತ್ಯಾಸ:
ಕೋವಿಡ್‌ನಿಂದ ಇಡೀ ಜಗತ್ತು ಸಾಕಷ್ಟು ಪಾಠಗಳನ್ನು ಕಲಿತಿವೆ. ಭಾರತದಲ್ಲಿಯೂ, ಆಡಳಿತ ಪಕ್ಷಗಳ ವೈಫಲ್ಯದಿಂದ ಹಿಡಿದು ತಮ್ಮ ವೈಯಕ್ತಿಕ ಆರ್ಥಿಕ ಪರಿಸ್ಥಿಯನ್ನು ಸುಧಾರಿಸಿಕೊಳ್ಳುವ ಅಗತ್ಯತೆಯನ್ನು ತಿಳಿಸಿಕೊಟ್ಟಿದೆ. ಇದರೊಂದಿಗೆ, ಭಯ ಮತ್ತು ಜಾಗೃತಿ ಎನ್ನುವ ಎರಡು ಪದಗಳ ನಡುವೆ ಇರುವಂತಹ ವ್ಯತ್ಯಾಸವನ್ನು ಕೂಡಾ ತಿಳಿಸಿಕೊಟ್ಟಿದೆ.
ಆಧಾರಗಳಿಲ್ಲದೇ ಅಥವಾ ಒಂದು ವಿಚಾರದ ಕುರಿತು ಸರಿಯಾದ ಜ್ಞಾನವಿಲ್ಲದೇ ಅದರ ಕುರಿತು ಜಾಗೃತಿ ಮೂಡಿಸಲು ಹೊರಟರೆ ಅದು ಭಯ ಮೂಡಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಕೋವಿಡ್ ವಿಚಾರದಲ್ಲಿಯೂ ನಡೆದಿದ್ದು ಇದೇ. ಕೋವಿಡ್ ಕುರಿತು ತಜ್ಞರಿಂದ ಅಭಿಪ್ರಾಯವನ್ನು ತಿಳಿದುಕೊಳ್ಳುವ ಗೋಜಿಗೆ ಯಾರೂ ಹೋಗಲಿಲ್ಲ. ಬದಲಾಗಿ, ತಮ್ಮ ಕಿವಿಗೆ ಬಿದ್ದಂತಹ ವಿಚಾರಗಳಿಗೆ ಉಪ್ಪು, ಹುಳಿ, ಖಾರ ಸೇರಿಸಿ ಮತ್ತಷ್ಟು ರುಚಿಕರವಾಗಿ ಮತ್ತು ಮಸಾಲೆಭರಿತವಾಗಿ ಇನ್ನೊಬ್ಬರಿಗೆ ಹೇಳಿದ ಪರಿಣಾಮವಾಗಿ ಜನರಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡುವ ಬದಲು ಭಯ ಮೂಡಿತು.

ಇತಿಹಾಸದಿಂದ ಇಲ್ಲಿಯವರೆಗೆ ನಾವು ಯಾವತ್ತೂ ಒಳ್ಳೆಯ ವ್ಯಕ್ತಿ ಮತ್ತು ಕೆಟ್ಟ ವ್ಯಕ್ತಿಯೆಂಬ ವ್ಯತ್ಯಾಸವನ್ನು ಗಮನಿಸುತ್ತಲೇ ಬಂದಿದ್ದೇವೆ. ಆ ವ್ಯತ್ಯಾಸದ ಆಧಾರದ ಮೇಲೆ ಜನರನ್ನು ಅಳೆಯುತ್ತೇವೆ. ಇಲ್ಲಿಯೂ, ಸೋಂಕಿತರು ಕೆಟ್ಟವರು, ಸೋಂಕು ಇಲ್ಲದೇ ಇರುವವರು ಒಳ್ಳೆಯವರು ಎಂಬ ವಿಂಗಡನೆ ಮಾಡಿದ್ದೇ ಇಲ್ಲಿ ತಪ್ಪಾಗಿ ಪರಿಣಮಿಸಿತು.
ಒಂದು ಸಾಂಕ್ರಾಮಿಕ ಸೋಂಕಿನ ಕುರಿತು ಇರುವಂತಹ ಅರೆಬೆಂದ ಜ್ಞಾನದ ಪರಿಣಾಮದಿಂದ ಭಯಪಟ್ಟು ಪರಿತಪಿಸುವುದಕ್ಕಿಂತ, ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಯೊಂದಿಗೆ ನಮ್ಮನ್ನು ನಾವು ʼಜಾಗೃತʼರಾಗಿಸುವ ಪ್ರಯತ್ನವನ್ನು ಮಾಡಬೇಕಿದೆ. ಈ ಜಾಗೃತಿಯನ್ನು ಕೋವಿಡ್ ವಿರುದ್ದದ ಹೋರಾಟದಲ್ಲಿ ಬಳಸೊಕೊಳ್ಳಬೇಕಿದೆ. ದೇಶ ಯಾವ ವಿಚಾರದಲ್ಲಿ ಆತ್ಮ ನಿರ್ಭರ್ (ಸ್ವಾವಲಂಬಿ) ಆಗುತ್ತದೆ ಎಂಬುದನ್ನು ಭವಿಷ್ಯದಲ್ಲಿ ತಿಳಿದುಕೊಳ್ಳಬೇಕಿದೆ. ಆದರೆ, ಕೋವಿಡ್ ಕುರಿತ ಭಯವನ್ನು ಹೋಗಲಾಡಿಸಿ ಭಯದ ಜಾಗದಲ್ಲಿ ಜಾಗೃತಿಯನ್ನು ಮೂಡಿಸುವಂತಹ ಕೆಲಸವನ್ನು ನಾವು ಸ್ವಾವಲಂಬಿಗಳಾಗಿ ಮಾಡಬೇಕಾದ ಅನಿವಾರ್ಯತೆ ಇದೆ.