ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶ್ವದ ಬಹುತೇಕ ಎಲ್ಲಾ ದೇಶಗಳಲ್ಲೂ ಕರೋನಾ ಸೋಂಕು ತನ್ನ ಪ್ರಭಾವ ಬೀರಿದೆ. ಪ್ರಪಂಚದ ಪ್ರತಿಯೊಂದು ರಾಷ್ಟ್ರ ಕರೋನಾ ಸೋಂಕಿಗೆ ತಲ್ಲಣಿಸಿದ್ದು ಎಷ್ಟು ಬೇಗ ಲಸಿಕೆ ಪತ್ತೆಯಾಗುತ್ತದೆಯೋ ಎನ್ನುವ ಆಶಾಭಾವನೆಯಲ್ಲಿ ಸಾಮಾನ್ಯ ಜನಜೀವನ ಆರಂಭವಾಗಿತ್ತು. ಆದರೆ ಇದೀಗ ಕಾಯುವ ಸಮಯ ಮುಕ್ತಾಯವಾಗಿದ್ದು, ಲಸಿಕೆ ಹಾಕಿಸಿಕೊಳ್ಳುವ ಸಮಯ ಈಗ ಬಂದಿದೆ.
ವಿಶ್ವದಲ್ಲಿ ಮೊದಲ ಲಸಿಕೆ ಪತ್ತೆ ಮಾಡಿದ ಕೀರ್ತಿ ರಷ್ಯಾ ಪಾಲಾಗಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಬಗ್ಗೆ ಘೋಷಣೆ ಮಾಡಿದ್ದು, ಕರೋನಾ ಸೋಂಕಿನ ವಿರುದ್ಧ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದನ್ನು ಸ್ಪುಟ್ನಿಕ್ ವಿ ಎಂದು ನಾಮಕರಣ ಮಾಡಿದ್ದೇವೆ ಎಂದಿದ್ದಾರೆ.
ಆಗಸ್ಟ್ 11ರ ಬೆಳಗ್ಗೆ ವಿಶ್ವದ ಮೊದಲ ಕರೋನಾ ವೈರಸ್‌ನ ಲಸಿಕೆ ನೋಂದಾವಣಿ ಆಗಿದೆ. ಆ ಬಳಿಕ ಟೆಲಿವಿಷನ್‌ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ವ್ಲಾದಿಮಿರ್ ಪುಟಿನ್, ಮೊದಲು ನನ್ನ ಮಗಳೇ ಲಸಿಕೆ ಹಾಕಿಸಿಕೊಳ್ಳಲಿದ್ದಾಳೆ ಎಂದು ಘೋಷಣೆ ಮಾಡಿದರು.
ರಷ್ಯಾ ಯಶಸ್ಸಿನತ್ತ ವಿಶ್ವ ಕಣ್ಣು ನೆಟ್ಟಿದ್ದು, ಲಸಿಕೆಗಾಗಿ ರಷ್ಯಾ ಮೊರೆ ಹೋಗಲಿದೆ. ಇದನ್ನು ಬಹಿರಂಗ ಮಾಡಿರುವ ರಷ್ಯಾ, ವಿಶ್ವದ 20 ಕ್ಕೂ ಹೆಚ್ಚಿನ ದೇಶಗಳು ಲಸಿಕೆಗಾಗಿ ಮನವಿ ಮಾಡಿದ್ದು, ಒಂದು ಬಿಲಿಯನ್ ಡೋಸ್ ಲಸಿಕೆ ಕಳುಹಿಸಬೇಕೆಂ ಬೇಡಿಕೆಯಿಟ್ಟಿದ್ದಾರೆ ಎಂದಿದ್ದಾರೆ.
ಲಸಿಕೆಯ ಸುರಕ್ಷತೆ ಮತ್ತು ಪರಿಣಾಮದ ಬಗ್ಗೆ ಪರೀಕ್ಷಿಸಲು ನಡೆಸುತ್ತಿರುವ ಕ್ಲಿನಿಕಲ್ ಪ್ರಯೋಗಗಳು ಕೂಡ ಇನ್ನೂ ಮುಂದುವರಿದಿವೆ ಎನ್ನಲಾಗಿದೆ. ದೂರದರ್ಶನದ ಸರ್ಕಾರಿ ಸಭೆಯಲ್ಲಿ ಮಾತನಾಡಿದ ವ್ಲಾದಿಮಿರ್ ಪುಟಿನ್, ಮಾಸ್ಕೋದ ಗಮಲೇಯ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ಲಸಿಕೆ ಸುರಕ್ಷಿತವಾಗಿದೆ. ಇನ್ನು ತನ್ನ ಹೆಣ್ಣುಮಕ್ಕಳಿಗೂ ಸಹ ನೀಡಲಾಗಿದೆ ಎಂದು ಹೇಳಿದ್ದಾರೆ. ʻಲಸಿಕೆ ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಶಕ್ತಿಯುತವಾದ ರೋಗನಿರೋಧಕ ಶಕ್ತಿಯನ್ನು ಮಾನವನ ದೇಹದಲ್ಲಿ ಸೃಷ್ಟಿಸುತ್ತದೆ ಎಂದು ನನಗೆ ತಿಳಿದಿದೆ. ನಾನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ, ಅಗತ್ಯವಿರುವ ಎಲ್ಲಾ ತಪಾಸಣೆಗಳನ್ನು ಲಸಿಕೆ ಪೂರ್ಣಗೊಳಿಸಿದೆ ಎಂದು ಪುಟಿನ್ ಹೇಳಿದ್ದಾರೆ.
ಕೆಲವೇ ದಿನಗಳಲ್ಲಿ ರಷ್ಯಾ ದೊಡ್ಡ ಮಟ್ಟದ ಉತ್ಪಾದನೆ ಮಾಡುವ ಗುರಿ ಹೊಂದಿದ್ದು, ರಷ್ಯಾ ಆರೋಗ್ಯ ಇಲಾಖೆ ಅನುಮತಿಯೊಂದಿಗೆ ಉತ್ಪಾದನೆ ಆಗಲಿದೆ ಎಂದಿದ್ದಾರೆ. ಆ ಬಳಿಕ ಇಡೀ ದೇಶಾದ್ಯಂತ ಪ್ರತಿಯೊಬ್ಬರಿಗೂ ಲಸಿಕೆ ಹಾಕಲಾಗುತ್ತದೆ ಎಂದಿದ್ದಾರೆ.
ಮೊದಲಿಗೆ ರಷ್ಯಾದಲ್ಲಿ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆ ಕೊಡಲಾಗುತ್ತದೆ. ಆ ನಂತರ ಜನಸಾಮಾನ್ಯರಿಗೆ ಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ರಷ್ಯಾ ಕಡೆಗೆ ಮುಖ ಮಾಡಿದ ಭಾರತ..!
ಆಗಸ್ಟ್ 15 ರೊಳಗೆ ಭಾರತದಲ್ಲೇ ಲಸಿಕೆ ಹೊರಬರುತ್ತದೆ ಎಂದು ಭಾರತ ಸರ್ಕಾರ ಹೇಳಿತ್ತು. ಯಾವುದೇ ಕಾರಣಕ್ಕೂ ತಜ್ಞರ ಮೇಲೆ ಒತ್ತಡ ಹೇರಬೇಡಿ, ಇಷ್ಟು ದಿನದಲ್ಲೇ ಲಸಿಕೆ ಹೊರಬೇಕು ಎನ್ನುವ ಗಡುವು ಕೂಡ ಕೊಡಬೇಡಿ ಎಂದು ತಜ್ಞರು ಆಗ್ರಹಿಸಿದ್ದರು. ಆದರೆ ಇದೀಗ ರಷ್ಯಾದಲ್ಲಿ ಮೊದಲ ಲಸಿಕೆ ನೋಂದಣಿ ಆಗಿದ್ದು, ರಷ್ಯಾದತ್ತ ಭಾರತ ಕಣ್ಣು ಹಾಯಿಸಿದೆ. ಕೋವಿಡ್-19 ಲಸಿಕೆ ಮೇಲುಸ್ತುವಾರಿಗೆ ಕೇಂದ್ರ ಸರ್ಕಾರ ರಚನೆ ಮಾಡಿರುವ ತಜ್ಞರ ಗುಂಪು ಬುಧವಾರ ಸಭೆ ನಡೆಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜೊತೆಗೆ ಕೋವಿಡ್ – 19 ಲಸಿಕೆಗಾಗಿ ರಷ್ಯಾ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಭಾರತ ಯೋಜಿಸುತ್ತಿದೆ ಎಂದು ತಿಳಿಸಲಾಗಿದೆ.
ದೇಶದಲ್ಲಿ ಸಾವಿನ ಪ್ರಮಾಣ ಶೇಕಡವಾರು 1.99 ರಷ್ಟು ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಕೊಟ್ಟಿದೆ. ಇನ್ನೂ ಕರ್ನಾಟಕ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಸಾವಿನ ಪ್ರಮಾಣ ಅಧಿಕವಾಗಿದೆ. ರಷ್ಯಾ ಲಸಿಕೆ ಬಗ್ಗೆ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿದ್ದು, 2 ಮತ್ತು 3ನೇ ಹಂತದ ಪ್ರಯೋಗಗಳಲ್ಲಿ ಭಾಗಿಯಾದ ಎಲ್ಲ 38 ಜನರಲ್ಲಿಯೂ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದನ್ನು ಗಮನಿಸಿರುವುದಾಗಿ ರಷ್ಯಾ ರಕ್ಷಣಾ ಸಚಿವಲಯ ಹೇಳಿದೆ. ಪ್ರಾಯೋಗಿಕವಾಗಿ ವ್ಲಾದಿಮಿರ್ ಪುಟಿನ್ ಅವರ ಒಬ್ಬ ಮಗಳಿಗೆ ಆಗಲೇ ಲಸಿಕೆ ನೀಡಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಇಡೀ ವಿಶ್ವಕ್ಕೆ ಇದು ಸಂತಸದ ಸುದ್ದಿ ಎಂದಿದ್ದಾರೆ
ನಾವು ರಷ್ಯಾದ ಆರೋಗ್ಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ವಿಶ್ವಸಂಸ್ಥೆ ವಕ್ತಾರಾ ಜಿನೀವಾದಲ್ಲಿ ತಿಳಿಸಿದ್ದಾರೆ. ಲಸಿಕೆ ಸ್ಪುಟ್ನಿಕ್ ವಿಯ WHO ಪೂರ್ವ ಅರ್ಹತೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ ಎಂದು ವಿಶ್ವಸಂಸ್ಥೆ ವಕ್ತಾರ ತಾರಿಕ್ ಜಸರೆವಿಕ್ ತಿಳಿಸಿದ್ದಾರೆ.
ಫಿಲಿಪೈನ್ಸ್ ಅಧ್ಯಕ್ಷ ರೋಡಿರ್ಗೋ ಡಟರ್ಟ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರಷ್ಯಾ ಸಂಶೋಧನೆ ಮೇಲೆ ಅಪಾರವಾದ ನಂಬಿಕೆ ಇದೆ. ನಾನೂ ಕೂಡ ಲಸಿಕೆಯನ್ನು ಮೊದಲಿಗನಾಗಿ ಪಡೆಯುತ್ತೇನೆ ಎಂದಿದ್ದಾರೆ. ಜೊತೆಗೆ ರಷ್ಯಾ ಕೂಡ ಫಿಲಿಪೈನ್ಸ್ ಉಚಿತವಾಗಿ ಲಸಿಕೆ ಸರಬರಾಜು ಮಾಡುವ ಸಾಧ್ಯತೆ ಇದೆ. ಇನ್ನೂ ರಷ್ಯಾ ಜೊತೆಗೆ ಈ ಮೊದಲು ನೋಂದಣಿ ಮಾಡಿಕೊಂಡಿದ್ದ ದೇಶಗಳಿಗೆ ಮೊದಲ ಆದ್ಯತೆ ಎಂದು ಮೂಲಗಳು ತಿಳಿಸಿವೆ.