ರಾಜ್ಯದಲ್ಲಿ ಕೋವಿಡ್ ಸಂಕಷ್ಟ ಎದುರಾಗದೇ ಇದ್ದಿದ್ದರೆ ಅಭಿವೃದ್ದಿ ಇನ್ನಷ್ಟು ವೇಗವಾಗಿ ಸಾಗುತ್ತಿತ್ತು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೆಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ದಿ ಕುಂಠಿತವಾಗಲು ಕೋವಿಡ್ ಕಾರಣ ಎಂದು ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ಭಾಷಣದ ಪ್ರಮುಖ ಅಂಶಗಳು:
ಇನ್ನು ಮುಂದೆ ಲಾಕ್‌ಡೌನ್ ಕುರಿತು ಯಾವುದೇ ಚರ್ಚೆ ಮಾಡುವುದಿಲ್ಲ. ಲಾಕ್‌ಡೌನ್ ಇಲ್ಲದೇ, ಕೋವಿಡ್ ಜೊತೆ ಬದುಕುವುದು ಕಲಿತು ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಶ್ರಮ ವಹಿಸಬೇಕು.
ಆರ್ಥಿಕ ಸೋರಿಕೆಯನ್ನು ತಡೆದು ಸರ್ಕಾರದ ಖಜಾನೆಯನ್ನು ತುಂಬಿಸುವ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೆಲಸ ನಿರ್ವಹಿಸಬೇಕು.
ಅಧಿಕಾರಕ್ಕೆ ಬಂದ ನಂತರ 3-4 ತಿಂಗಳು ಎದುರಾದ ಪ್ರವಾಹ ಪರಿಸ್ಥಿತಿಯನ್ನು ಒಬ್ಬನೇ ನಿಂತು ಎದುರಿಸಿದ್ದೇನೆ. ಪ್ರವಾಹದಿಂದ ಮನೆಯನ್ನು ಕಳೆದುಕೊಂಡ ಎಲ್ಲರಿಗೂ ತಲಾ 5 ಲಕ್ಷ ಮಂಜೂರು ಮಾಡಿ ಸೂರು ಕಟ್ಟಿಕೊಳ್ಳಲು ಸಹಕಾರ ನೀಡಿದ್ದೇನೆ.
ರಾಜ್ಯದಲ್ಲಿ ದಲಿತರು, ನೇಕಾರರು ಮತ್ತು ರೈತರು ಸ್ವಾಭಿಮಾನದ ಬದುಕು ಬಾಳಬೇಕೆಂಬುದು ನನ್ನ ಆಶಯ. ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ.
ನೇಕಾರರ ಸಾಲ ಮನ್ನಾ, ಕೋವಿಡ್ ಪರಿಹಾರವಾಗಿ ರೂ. 2000 ಸಹಾಯ ಧನ ನೀಡಲಾಗಿದೆ.
ಎಲ್ಲಾ ಜನಾಂಗದವರು ನೆಮ್ಮದಿಯಿಂದ ಬದುಕಬೇಕು ಎಂಬುದು ಸರ್ಕಾರದ ಆಶಯ.
ಮುಂದಿನ ಮೂರು ವರ್ಷದಲ್ಲಿ ಪ್ರತಿಯೊಬ್ಬರಿಗೂ ಸೂರು ಒದಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರೈತ ತನ್ನ ಬೇಳೆಯನ್ನು ರಾಜ್ಯದಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯ ಇರಬೇಕು ಎನ್ನುವ ಉದ್ದೇಶದಿಂದ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಜನ ಅದನ್ನು ಖುಷಿಯಿಂದ ಸ್ವೀಕಾರ ಮಾಡಿದ್ದಾರೆ.
ಕೈಗಾರಿಕಾ ಕ್ಷೇತ್ರದ ಅಭಿವೃದ್ದಿಗಾಗಿ ಮಾತ್ರ ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಾಗಿದೆ.
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕೆಂಪೇಗೌಡ ಪ್ರತಿಮೆ ಹಾಗೂ ಸೆಂಟ್ರಲ್ ಪಾರ್ಕ್ ಅನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವ ಎಲ್ಲಾ ಪ್ರಯತ್ನ ಮಾಡಲಾಗುವುದು.
ಕೇಂದ್ರ ಸರ್ಕಾರದ ನೆರವಿನಿಂದ ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ 785 ಕಿ.ಮೀ. ರಸ್ತೆ ನಿರ್ಮಾಣವಾಗಿದೆ. ಇದಕ್ಕಾಗಿ 4762 ಕೋಟಿಯ ನೆರವನ್ನು ಕೇಂದ್ರ ಸರ್ಕಾರ ನೀಡಿದೆ.
ಈಗಾಗಲೇ 970 ಕಿ.ಮೀಗಳಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. ಕೇಂದ್ರದಿಂದ ವರ್ಷಕ್ಕೆ 500 ಕೋ. ಮಾತ್ರ ಅನುದಾನ ದೊರಕುತ್ತಿದೆ. ಹೀಗಾಗಿ ಸಾಲ ಮಾಡಿಯಾದರೂ ಇನ್ನೂ ವೇಗದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮಾಡಲಾಗುವುದು.
ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಮಾನ್ಯತೆ ತರುವ ನಿಟ್ಟಿನಲ್ಲಿ ಕಾರ್ಯ.
ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ನೀಲಿ ನಕ್ಷೆ ಸಿದ್ದ. ಎಲ್ಲರೂ ಆಶ್ಚರ್ಯ ಪಡುವಂತೆ ಮುಂದಿನ ಮೂರು ವರ್ಷದಲ್ಲಿ ಬೆಂಗಳೂರು ಸಿದ್ದ.
ಎಲ್ಲರ ಸಹಕಾರದಿಂದ ರಾಜ್ಯ ಅಭಿವೃದ್ದಿ ಪತದಲ್ಲಿ ಸಾಗಬೇಕು. ಕಾನೂನು ಸುವ್ಯವಸ್ಥೆಗೆ ಎಲ್ಲರೂ ಸಹಕರಿಸಬೇಕು. ಕೋಮು ಗಲಭೆಗಳಿಗೆ ಅವಕಾಶ ಕೊಡದೇ ಮುಂದೆ ಹಜ್ಜೆ ಇಡಬೇಕು. ಲೋಕಸಭಾ ಚುನಾವಣೆಯನ್ನು ಎಲ್ಲರ ಸಹಕಾರದಿಂದ 25 ಸೀಟುಗಳನ್ನು ಗೆದ್ದಿದ್ದೇವೆ. ಆ ನೆಮ್ಮದಿ ನಮಗಿದೆ.
ಮಾಡಬೇಕಾದ ಕೆಲಸ ಇನ್ನೂ ಬಹಳಷ್ಟಿದೆ. ಮುಂದಿನ ಎಲ್ಲಾ ಕೆಲಸಗಳಿಗೂ ನಿಮ್ಮೆಲ್ಲರ ಸಹಕಾರ ಅಗತ್ಯ