ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಹಿರಿಯ ಶಾಸಕ ಹೆಚ್ ಕೆ ಪಾಟೀಲ್ ಸರ್ಕಾರದ ಭ್ರಷ್ಟಾಚಾರದ ಕಾರಣದಿಂದಾಗಿ ರಾಜ್ಯ ಮತ್ತು ರಾಜ್ಯದ ಜನತೆ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕರೋನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಸರ್ಕಾರದ ಬೌದ್ಧಿಕ ದಿವಾಳಿತನ, ಜನಪರ ವಿರೋಧಿ ನಿಲುವುಗಳೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
ಕರೋನಾ ಸಂಕಷ್ಟದ ಸ್ಥಿತಿಯಲ್ಲಿ ಜನತೆಗೆ ಯಾವ ರೀತಿ ಅನುಕೂಲ ಮಾಡಬೇಕು ಅನ್ನುವುದರ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿಲ್ಲ. ಕೋವಿಡ್-19 ವಿಮಾ ಯೋಜನೆ ತಕ್ಷಣ ಜಾರಿಗೆ ತರಬೇಕು. ಕ್ವಾರಂಟೈನ್ ಇರುವವರಿಗೆ ಪರಿಹಾರ ನೀಡಬೇಕು. ಕರೋನಾ ಪಾಸಿಟಿವ್ ಬಂದವರಿಗೆ 5 ಲಕ್ಷ ಪರಿಹಾರ ನಿಧಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸೇವೆ ಮಾಡುವವರನ್ನ ಸರ್ಕಾರ ಹೆಚ್ಚು ಒದಗಿಸಬೇಕು. ಸಾಮಾನ್ಯ ಬಡ ಜನರು ಆಂಬ್ಯುಲೆನ್ಸ್ ಇಲ್ಲದೆ ಸಕಾಲಕ್ಕೆ ಚಿಕಿತ್ಸೆ ದೊರೆಯದೆ, ಆಸ್ಪತ್ರೆ ತಲುಪದೆ ಅಸುನೀಗುತ್ತಿದ್ದಾರೆ. ಬೆಂಗಳೂರನ್ನು ಇಟಲಿ, ನ್ಯೂಯಾರ್ಕ್‌ನ್ನಾಗಿ ಮಾಡಬೇಡಿ ಆಂಬ್ಯುಲೆನ್ಸ್ ಬರೋದು ವಿಳಂಬವಾದರೆ ಜೀವ ಉಳಿಯೋದು ಹೇಗೆ? ಆಂಬ್ಯುಲೆನ್ಸ್ ಕೊರತೆ ಇದ್ದರೆ ಓಡಾಡದೆ ನಿಂತಿರುವ ಬಸ್‌ಗಳನ್ನು ಉಪಯೋಗಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಇನ್ನೂ ರಾಜ್ಯದಲ್ಲಿ 40 ಸಾವಿರಕ್ಕಿಂತಲೂ ಅಧಿಕ ಪರೀಕ್ಷೆ ನಡೆಸಿದವರ ಕರೋನಾ ರಿಸಲ್ಟ್ ಬರಬೇಕಿದೆ. ಆಬ್ಯುಲೆನ್ಸ್ ಗಳೇ ಒದಗಿಸದಂತಹ ಸರ್ಕಾರ ನಾಗರಿಕ ಸರ್ಕಾರವೇ ? ಜನತೆಗೆ ತೊಂದರೆಯಾದರೆ ಸರ್ಕಾರವೇ ಎಲ್ಲಾ ಜವಾಬ್ದಾರಿ ಹೊರಬೇಕು. ಕೋವಿಡ್ ಮೃತದೇಹಗಳನ್ನು ಯಾವ ರೀತಿ ಅಂತ್ಯಕ್ರಿಯೆ ಮಾಡುತ್ತಿದ್ದೀರೆಂದು ಕಾಣುತ್ತಿದೆ. ಮೃತದೇಹವನ್ನು ಎರಡು ದಿನ ಕಳೆದರೂ ಕುಟುಂಬಸ್ಥರಿಗೆ ಕೊಡುತ್ತಿಲ್ಲ. ಶವ ಸಂಸ್ಕಾರದಲ್ಲಿ ಅಲಕ್ಷ್ಯ ತೋರಿದವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕೆಂದು ವಿಪಕ್ಷದ ಹಿರಿಯ ಶಾಸಕ ಆಗ್ರಹಿಸಿದ್ದಾರೆ.
ಗುಲ್ವರ್ಗ ಮತ್ತು ರಾಮನಗರದಲ್ಲಿ SM pharmaceuticals ಕಂಪನಿ ಉತ್ತಮ ಗುಣಮಟ್ಟದ ಸ್ಯಾನಿಟೈಸರ್ ಸಪ್ಲೈ ಮಾಡುತ್ತಿಲ್ಲವೆಂಬ ಆರೋಪ ಇದೆ. ಆದರೂ ಸರ್ಕಾರ ಈ ಕಂಪೆನಿಯಿಂದ ಖರೀದಿ ಮಾಡುತ್ತದೆ. ಆ ಕಂಪೆನಿಯ ವಿರುದ್ಧ ದೂರುಗಳಿದ್ದು, ಅಲ್ಲಿಂದಲೇ ಸರ್ಕಾರ ಸ್ಯಾನಿಟೈಸ್ ಖರೀದಿ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.














