ಕರ್ನಾಟಕ ರಾಜ್ಯದಲ್ಲಿ ಕರೋನಾ ಸೋಂಕಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೂ, ಇದನ್ನು ತಹಬದಿಗೆ ತರಬೇಕಿದ್ದ ಸರ್ಕಾರ ಜಾಣ ನಿದ್ರೆಗೆ ಜಾರುತ್ತಿದೆಯೋ..? ಅಥವಾ ಆರೋಗ್ಯ ಇಲಾಖೆ ತನ್ನ ಕೆಲಸ ನಿರ್ವಹಣೆ ಮಾಡುವಲ್ಲಿ ಸೋತು ಬಿಟ್ಟಿದೆಯೋ ಎನ್ನುವಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಜನರಲ್ಲಿ ಆತಂಕ ಮೂಡಿಸುವ ವಿಚಾರ. ಏಕೆಂದರೆ, ರಾಜ್ಯದ ಜನರು ನಂಬಿರುವುದು ಆರೋಗ್ಯ ಇಲಾಖೆಯ ಕಾರ್ಯ ವೈಖರಿಯನ್ನು.
ಕೊಡಗಿನಲ್ಲಿ ಆರೋಗ್ಯ ಇಲಾಖೆ ನಿದ್ರೆ..!
ಕೊಡಗಿನ ವಿರಾಜಪೇಟೆಯಲ್ಲಿ ವ್ಯಕ್ತಿಯೊಬ್ಬರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದಿದ್ದಾಗ 45 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದನು. ಮೃತ ವ್ಯಕ್ತಿ ಒಂದು ವಾರದಿಂದ ಜ್ವರದಿಂದ ಬಳಲುತಿದ್ದರೂ ಕೂಡ ಜಿಲ್ಲಾಡಳಿತ ಕೋವಿಡ್ 19 ಟೆಸ್ಟ್ ಮಾಡುವ ಕೆಲಸ ಮಾಡಿರಲಿಲ್ಲ. ಅಂತಿಮವಾಗಿ ಶನಿವಾರ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿಸಿದಾಗ ರ್ಯಾಪಿಡ್ ಟೆಸ್ಟ್ನಲ್ಲಿ ಕರೋನಾ ಸೋಂಕು ಧೃಡವಾಗಿದೆ. ಸೋಂಕಿತನ ಸಾವಿಗೆ ಜಿಲ್ಲಾಡಳಿತವೇ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಆಶಾ ಕಾರ್ಯಕರ್ತೆಯರ ಸಂಕಷ್ಟ..!
ಬಾಗಲಕೋಟೆಯಲ್ಲಿ ಆರೋಗ್ಯ ಇಲಾಖೆ ಎಡವಟ್ಟಿಗೆ ಆಶಾ ಕಾರ್ಯಕರ್ತೆಯರು ಸಂಕಷ್ಟಕ್ಕೆ ಒಳಗಾದ ಘಟನೆ ನಡೆದಿದೆ. ಒಮ್ಮೆ ನೆಗೆಟಿವ್ ಫಲಿತಾಂಶ ಬಂದರೆ, ಇನ್ನೊಮ್ಮೆ ಪಾಸಿಟಿವ್ ಫಲಿತಾಂಶ ಬರುತ್ತದೆ. ಮತ್ತೊಮ್ಮೆ ಕರೋನಾ ಸೋಂಕು ಇಲ್ಲ ನೆಗೆಟಿವ್ ಎನ್ನುತ್ತಿದ್ದಾರೆ. ಇದು ಐವರು ಆಶಾ ಕಾರ್ಯಕರ್ತೆಯರಿಗೆ ಸಂಕಷ್ಟ ತಂದೊಡ್ಡಿದೆ. ಸೋಂಕಿತರ ಸಂಪರ್ಕದಲ್ಲಿದ್ದ ಐವರು ಆಶಾ ಕಾರ್ಯಕರ್ತೆಯರ ವರದಿ ಜುಲೈ 19ರಂದು ನೆಗೆಟಿವ್ ಎಂದು ಬಂದಿತ್ತು. ಆ ಬಳಿಕ ಜುಲೈ 22ರಂದು ಮತ್ತೆ ಪಾಸಿಟಿವ್ ಎಂದು ಬಂತು. ಅದರಿಂದ ಕೋವಿಡ್ ಸೆಂಟರ್ಗೆ ಐವರನ್ನು ದಾಖಲಿಸಿಕೊಳ್ಳಲಾಗಿತ್ತು. ಆದರೆ ಜುಲೈ 25ರಂದು ಮತ್ತೆ ಫಲಿತಾಂಶ ನೆಗೆಟಿವ್ ಎಂದು ಬಂದಿದ್ದರಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿತ್ತು. ಆದರೆ ಆಶಾ ಕಾರ್ಯಕರ್ತೆಯರು ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ದಿಗ್ಬಂಧನ ಹಾಕಿದ್ದರು. ಮೂರೇ ದಿನಕ್ಕೆ ಕರೋನಾ ಸೋಂಕು ಗುಣವಾಗುವುದು ಹೇಗೆ ಎಂದು ಪ್ರಶ್ನೆ ಮಾಡಿದರು. ಅಂತಿಮವಾಗಿ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ಗ್ರಾಮಕ್ಕೆ ಪ್ರವೇಶ ಕೊಡಿಸಿದರು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೈಸೂರು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಸಂಕಷ್ಟ ಎದುರಾಗಿದೆ. ಕರೋನಾ ಪಾಸಿಟಿವ್ ಬಂದಿರುವ ಸುಮಾರು 30ಕ್ಕೂ ಹೆಚ್ಚು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ. ಕೋವಿಡ್ ಟೆಸ್ಟ್ ಮಾಡಿಸುವಾಗ ಕೊಟ್ಟಿದ್ದ ವಿಳಾಸ ಹಾಗೂ ಫೋನ್ ನಂಬರ್ ತಪ್ಪಾಗಿ ನೀಡುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತಕ್ಕೆ ಹೊಸ ತಲೆನೋವು ಶುರುವಾಗಿದೆ. ಆರೋಗ್ಯ ಇಲಾಖೆ ಎಚ್ಚರ ತಪ್ಪಿದೆ ಎಂದು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಇನ್ನೂ ಮಂಡ್ಯದಲ್ಲಿ ಕರೋನಾ ವೈರಸ್‌ನಿಂದ ಕುಟುಂಬವೊಂದು ತತ್ತರಿಸಿದೆ. ಕರೋನಾ ಸೋಂಕಿನಿಂದಾಗಿ ತಂದೆ, ಮಗ ಮಂಡ್ಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬಹು ರೋಗಗಳಿಂದ ಬಳಲುತ್ತಿದ್ದ ತಂದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತನ ತಮ್ಮನಿಗೂ ವಿಪರೀತ ಜ್ವರ ಕಾಣಿಸಿಕೊಂಡಿದೆ. ಆತನಿಗೂ ಕರೋನಾ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಮನೆಯಲ್ಲಿ ಉಳಿದಿರೋದು ಮೃತನ ಹೆಂಡತಿ ಹಾಗೂ ಆತನ 6 ತಿಂಗಳ ಮಗು. ಆದರೆ, ಜಿಲ್ಲಾಡಳಿತ ಇಲ್ಲೀವರೆಗೂ ಯಾರೊಬ್ಬರಿಗೂ ಕೋವಿಡ್ 19 ಟೆಸ್ಟ್ ಮಾಡಿಲ್ಲ. ಮನೆಯನ್ನೂ ಸೀಲ್ಡೌನ್ ಮಾಡದೇ ನಿರ್ಲಕ್ಷ್ಯ ತೋರಿದೆ.

ದಾವಣಗೆರೆಯಲ್ಲಿ ಮಾಜಿ ಪೌರ ಕಾರ್ಮಿಕನ ಪುತ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ವಿವಿಧ ಖಾಸಗಿ ಆಸ್ಪತ್ರೆಗಳಿಗೆ ತೆರಳಿದರೂ ಚಿಕಿತ್ಸೆ ಸಿಗದೆ ಪರದಾಡುವಂತಾಗಿತ್ತು. ಅಂತಿಮವಾಗಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 34 ವರ್ಷದ ವ್ಯಕ್ತಿ ಸಾವನ್ನಪ್ಪುವಂತಾಯ್ತು. ಜಿಲ್ಲಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೃತ ವ್ಯಕ್ತಿಯ ಸಂಬಂಧಿ ಡಿಸಿ ಕಾಲಿಗೆ ಬಿದ್ದು ಚಿಕಿತ್ಸೆ ನೀಡಲು ನಿರಾಕರಿಸಿ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮಕ್ಕೆ ಮನವಿ ಮಾಡಿದರು.
ಈ ವೇಳೆ ದಾವಣಗೆರೆ ಡಿಸಿ ಮಹಾಂತೇಶ್ ಬೀಳಗಿ ಕೂಡ ರೋಗಿಗಳ ಕಾಲು ಮುಗಿಯಲು ಹೋದಂತಹ ಘಟನೆ ನಡೆದಿದೆ. ದಾವಣಗೆರೆ ಜಿಲ್ಲಾಸ್ಪತ್ರೆಗೆ ಡಿಸಿ ಭೇಟಿ ನೀಡಿದಾಗ, ರೋಗಿಯೊಬ್ಬರು ತಮ್ಮ ಗೋಳನ್ನ ಹೇಳಿಕೊಳ್ಳಲು ಮುಂದಾದಾಗ ಈ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಯಲ್ಲಿ ಸಂಬಂಧಿಯನ್ನ ಅಡ್ಮಿಟ್ ಮಾಡಿಕೊಳ್ಳಲು ಹಿಂದೇಟು ಹಿನ್ನಲೆ ಬೇಜಾರಾಗಿದ್ದ ಉಚ್ಚೆಂಗೆಪ್ಪ, ಆಸ್ಪತ್ರೆಗೆ ಡಿಸಿ ಭೇಟಿ ನೀಡಿದಾಗ ಕೈ ಮುಗಿದು ಮನವಿ ಮಾಡಿದ್ದಾರೆ. ಈ ವೇಳೆ ಉಚ್ಚೆಂಗಪ್ಪ ಎಂಬುವರಿಗೆ ಕಾಲಿಗೆ ನಮಸ್ಕಾರ ಮಾಡಲು ಮುಂದಾಗಿದ್ದಾರೆ.
ಕೋವಿಡ್ ವಿರುದ್ಧ ಸೋತಿದೆಯಾ ಆರೋಗ್ಯ ಇಲಾಖೆ..?
ಕೋವಿಡ್ 19 ವಿರುದ್ಧ ಆರೋಗ್ಯ ಇಲಾಖೆ ಸೋತು ಬಿಟ್ಟಿದ್ಯಾ ಎನ್ನುವ ಅನುಮಾನ ಮೂಡುತ್ತಿದೆ. ಯಾಕೆಂದರೆ ಸಮಸ್ಯೆಯಾದ ಬಳಿಕ ಅಧಿಕಾರಿಗಳು ಕೈ ಮುಗಿದು ತಪ್ಪಾಯ್ತು ಎನ್ನುವುದು, ಡಿಸಿಯೊಬ್ಬರು ಕಾಲಿಗೆ ಬಿದ್ದು ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ ಎನ್ನುವುದು ಎಲ್ಲವೂ ಕಣ್ಣೊರೆಸುವ ತಂತ್ರಗಳು ಅಷ್ಟೆ. ಆದರೆ ಚಿಕಿತ್ಸೆ ನೀಡದೆ ಸಮಸ್ಯೆ ಆದ ಬಳಿಕ ಕ್ಷಮೆ ಕೇಳುವ ಬದಲು ಚಿಕಿತ್ಸೆ ಕೊಡುವಂತೆ ನೋಡಿಕೊಂಡರೆ ಉತ್ತಮ. ಆರೋಗ್ಯ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿದರೆ ಮಾತ್ರ ಇದು ಸಾಧ್ಯ.