ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಮೊದಲ ಹಂತದ ಮತದಾನಕ್ಕೆ ಸಂಬಂಧಪಟ್ಟಂತೆ 14 ಕ್ಷೇತ್ರಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಮುಕ್ತಾಯಗೊಂಡಿದೆ. ಇದೇ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರ ಆಸ್ತಿಯನ್ನು ಘೋಷಿಸಿಕೊಂಡಿದ್ದು, 54.65 ಕೋಟಿ ರೂ. ಒಡೆಯರಾಗಿದ್ದಾರೆ. ಆದರೆ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಪಾಲೂ ಸೇರಿದರೆ 217.21 ಕೋಟಿ ರೂಪಾಯಿ ಆಸ್ತಿ ಮೌಲ್ಯವನ್ನು ಎಚ್‌ಡಿಕೆ ಹೊಂದಿದ್ದಾರೆ.
65 ವರ್ಷ ವಯಸ್ಸಿನ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಎಸ್ಸಿ ಪದವೀಧರರು, ಸಮಾಜ ಸೇವಕ, ರಾಜಕಾರಣಿ ಮತ್ತು ಕೃಷಿಕ ಎಂದು ಘೋಷಿಸಿಕೊಂಡಿದ್ದಾರೆ. ಅನಿತಾ ಅವರು ವ್ಯಾಪಾರ ಮತ್ತು ಬಾಡಿಗೆ ಆದಾಯವನ್ನು ಹೊಂದಿದ್ದಾರೆ. ನಿಖಿಲ್ ಮತ್ತು ಕೋ ಪೆಟ್ರೋಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವ್ಯಾಪಾರದಲ್ಲಿ ತೊಡಗಿರುವುದಾಗಿ ಘೋಷಣೆ ಮಾಡಲಾಗಿದೆ. ಅಲ್ಲದೆ, ಉದ್ಯಮಿಯಾಗಿದ್ದು, ಕಸ್ತೂರಿ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿರುವ ಮಾಹಿತಿ ಪ್ರಕಾರ, HUF ನಿಂದ ಅವರ ಹೆಸರಿನಲ್ಲಿ ಸುಮಾರು 8.17 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿರುವ ಎಚ್.ಡಿ. ಕುಮಾರಸ್ವಾಮಿ ಅವರ ಒಟ್ಟು ಆಸ್ತಿ ಮೌಲ್ಯ 54.65 ಕೋಟಿ ರೂ. ಆಗಿದೆ. ಆದರೆ, ಅವರ ಪತ್ನಿ ಅನಿತಾ ಹೆಸರಿನಲ್ಲಿ ಒಟ್ಟು 154.39 ಕೋಟಿ ರೂಪಾಯಿಯಷ್ಟು ಆಸ್ತಿ ಮೌಲ್ಯವಿದ್ದು, ಇಬ್ಬರದ್ದೂ ಸೇರಿದರೆ ಒಟ್ಟು 217.21 ಕೋಟಿ ರೂಪಾಯಿ ಆಗುತ್ತದೆ.ಕುಮಾರಸ್ವಾಮಿ ಬಳಿ 47.06 ಲಕ್ಷ ಮೌಲ್ಯದ ಚಿನ್ನ ಮತ್ತು 2.60 ಲಕ್ಷ ಮೌಲ್ಯದ ವಜ್ರ ಹಾಗೂ ಅನಿತಾ ಬಳಿ 2.41 ಕೋಟಿ ಮೌಲ್ಯದ ಚಿನ್ನ ಮತ್ತು 33.09 ಲಕ್ಷ ರೂ.ಮೌಲ್ಯದ ವಜ್ರವಿದೆ. 37.48 ಕೋಟಿ ರೂ. ಮೌಲ್ಯದ ಕೃಷಿ ಭೂಮಿ ಮತ್ತು ಜೆಪಿ ನಗರ ಮೂರನೇ ಹಂತದಲ್ಲಿ 6.46 ಕೋಟಿ ರೂ.ಮೌಲ್ಯದ ನಿವಾಸವನ್ನು ಹೊಂದಲಾಗಿದೆ.