
ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ಮಾತುಗಳನ್ನು ಕೇಳುವುದಕ್ಕೆ ಅಣಿಮುತ್ತುಗಳಂತೆ ಇರುತ್ತವೆ. ಅದರಲ್ಲೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂತಾ ಅಂದುಕೊಂಡಿರುವ ನಿರುದ್ಯೋಗಿ ಯುವಕರು ಅಥವಾ ಐಎಎಸ್, ಐಪಿಎಸ್, ಡಾಕ್ಟರ್ ಆಗುವ ಕನಸು ಕಟ್ಟಿಕೊಂಡವರಿಗೆ ಪ್ರದೀಪ್ ಈಶ್ವರ್ ಅಂದ್ರೆ ಇಷ್ಟ ಆಗುವ ವ್ಯಕ್ತಿತ್ವ. ಪರಿಶ್ರಮ ಅನ್ನೋ ನೀಟ್ ಅಕಾಡೆಮಿ ಸ್ಥಾಪನೆ ಮೂಲಕ ಪ್ರಚಲಿತಕ್ಕೆ ಬಂದ ಪ್ರದೀಪ್ ಈಶ್ವರ್, ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದುಕೊಂಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಹಾಲಿ ಸಚಿವರಾಗಿದ್ದ ಡಾ ಕೆ ಸುಧಾಕರ್ ಅವರಿಗೆ ಸೋಲುಣಿಸಿದ ಮಾತುಗಾರ. ಆದರೆ ಪ್ರದೀಪ್ ಈಶ್ವರ್ ಬೇರೆಯವರಿಗೆ ಮಾದರಿ ಆಗಬೇಕಿದ್ದವರು ಹೀಗೆ ಮಾಡಿದ್ಯಾಕೆ ಅನ್ನೋ ಪ್ರಶ್ನೆ ಪ್ರತಿಧ್ವನಿಯನ್ನು ಕಾಡುತ್ತಿದೆ.
‘ಪರಿಶ್ರಮ ಪಿಯು ಕಾಲೇಜು’ ನೋಂದಣಿಯೇ ಆಗಿಲ್ವಾ..?

ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ಉತ್ತಮ ಫಲಿತಾಂಶ ಪಡೆಯುವುದಕ್ಕೆ ಬೇಕಾದ ಶಿಕ್ಷಣ ವ್ಯವಸ್ಥೆ ಕಲ್ಪಿಸಿ, ಪಿಯುಸಿ ಮಕ್ಕಳನ್ನು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯುವುದಕ್ಕೆ ಪ್ರೇರೇಪಿಸುವ ಪ್ರದೀಪ್ ಈಶ್ವರ್, ಪರಿಶ್ರಮ ಪಿಯು ಕಾಲೇಜು ಆರಂಭ ಆಗುತ್ತಿದೆ ಎನ್ನುವ ಜಾಹೀರಾತು ನೀಡುತ್ತಿದ್ದಾರೆ. ಪರಿಶ್ರಮ ನೀಟ್ ಅಕಾಡೆಮಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವುದರಿಂದ ಎಸ್ಎಸ್ಎಲ್ಸಿ ಮುಗಿಸುತ್ತಿರುವ ಮಕ್ಕಳ ಪೋಷಕರನ್ನು ಈ ಜಾಹೀರಾತು ಆಕರ್ಷಿಸಿದೆ ಎಂದು ಹೇಳಿದರೆ ಸುಳ್ಳಲ್ಲ. ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆ ಎಂದು ಜಾಹೀರಾತಿನಲ್ಲಿ ಹೇಳಲಾಗ್ತಿದೆ. ಆದರೆ ಈ ರೀತಿಯ ಯಾವುದೇ ಶಿಕ್ಷಣ ಸಂಸ್ಥೆ ಇಲ್ಲ ಎನ್ನುವುದು ಆರ್ಟಿಐ ಮೂಲಕ ಅರ್ಜಿ ಸಲ್ಲಿಸಿದವರಿಗೆ ಸಿಕ್ಕಿರುವ ಮಾಹಿತಿ.

RTI ಅಡಿಯಲ್ಲಿ ಕೊಟ್ಟಿರುವ ಮಾಹಿತಿಯಲ್ಲಿ ಏನಿದೆ..?
ಸಂಜಯ್ ಕುಮಾರ್ ಎಸ್.ಜಿ ಎಂಬುವರು ಪರಿಶ್ರಮ ಪಿಯು ಕಾಲೇಜು ಜಾಹೀರಾತು ನೋಡಿದ ಬಳಿಕ ಫೆಬ್ರವರಿ 1 ರಂದು ಮಾಹಿತಿ ಹಕ್ಕು ಕಾಯ್ದೆ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪರಿಶ್ರಮ ಪಿಯು ಕಾಲೇಜು ಎನ್ನುವ ಸಂಸ್ಥೆ ನೋಂದಣಿ ಆಗಿದ್ಯಾ..? ಆಗಿದ್ದರೆ ರಾಜ್ಯದ ಯಾವ ವಿಳಾಶಕ್ಕೆ ನೋಂದಣಿ ಮಾಡಲಾಗಿದೆ. ರಾಜ್ಯಾದ್ಯಂತ ಇರುವ ಶಾಖೆಗಳು ಎಷ್ಟು ಎಂದು ಅರ್ಜಿ ಸಲ್ಲಿಸಿದ್ದು, ರಾಜ್ಯದಲ್ಲಿ ಪರಿಶ್ರಮ ಪಿಯು ಕಾಲೇಜು ನೋಂದಣಿ ಆಗಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮಾಹಿತಿ ಹಕ್ಕು ಸಹಾಯಕ ನಿರ್ದೇಶಕರು ಫೆಬ್ರವರಿ 15, 2024ರಂದು ಮಾಹಿತಿ ನೀಡಿದ್ದಾರೆ. ಮರುಪರಿಶೀಲನೆಗೆ ಮೇಲ್ಮನವಿ ಮಾಡಿದಾಗ ಮಾರ್ಚ್ 12, 2024ರಂದು ಮೇಲ್ಮನವಿ ವಿಚಾರಣೆ ನಡೆಸಿ ಫೆಬ್ರವರಿ 15 ರಂದು ನೀಡಿದ್ದ ಮಾಹಿತಿ ಸ್ವೀಕರಿಸಲಾಗಿದೆ. ಪ್ರಕರಣ ಇತ್ಯರ್ಥ ಎಂದು ತಿಳಿಸಲಾಗಿದೆ.

ಪಿಯು ಬೋರ್ಡ್ ವೆಬ್ಸೈಟ್ ಮಾಹಿತಿ ಸತ್ಯಾನಾ..?
ಈ ಬಗ್ಗೆ ಪ್ರತಿಧ್ವನಿ ಪರಿಶೀಲನೆ ಮಾಡಿದಾಗ ಪಿಯು ಬೋರ್ಡ್ ವೆಬ್ಸೈಟ್ನಲ್ಲಿ ಪರಿಶೀಲಿಸಿದಾಗ ಪರಿಶ್ರಮ ಪಿಯು ಕಾಲೇಜ್ ಅನುದಾನ ರಹಿತ ಶಿಕ್ಷಣ ಸಂಸ್ಥೆ ನೋಂದಣಿ ಆಗಿರುವುದು ಕಂಡು ಬರುತ್ತಿದೆ. ನಂ. 42, ಮಲ್ಲತಹಳ್ಳಿ, BDA 9th ಬ್ಲಾಕ್, ಸರ್ ಎಂ ವಿ ನಗರ, ಮರಿಯಪ್ಪನ ಪಾಳ್ಯ, ಬೆಂಗಳೂರು – 560056, ಬೆಂಗಳೂರು ದಕ್ಷಿಣ ವಿಭಾಗದಲ್ಲಿ ನೋಂದಣಿ ಆಗಿರುವ ಬಗ್ಗೆ ಮಾಹಿತಿ ಇದೆ. ಆದರೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ನೀಡಿರುವ ಮಾಹಿತಿ ಹಾಗು ಶಿಕ್ಷಣ ಇಲಾಖೆ ವೆಬ್ಸೈಟ್ನಲ್ಲಿ ಇರುವ ಮಾಹಿತಿ, ಈ ಎರಡರಲ್ಲಿ ಯಾವುದು ಸರಿ ಎನ್ನುವುದನ್ನು ಸ್ವತಃ ಸಂಸ್ಥಾಪಕರಾದ ಶಾಸಕ ಪ್ರದೀಪ್ ಈಶ್ವರ್ ಅವರೇ ಮಾಹಿತಿ ನೀಡಬವೇಕಿದೆ. ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಯುತ್ತಿದ್ದು, ಪೋಷಕರಲ್ಲಿ ಎದುರಾಗಿರುವ ಆತಂಕ ದೂರ ಮಾಡಬೇಕಿದೆ. ಒಂದು ವೇಳೆ RTI ಅಡಿಯಲ್ಲಿ ಕೊಟ್ಟಿರುವ ಮಾಹಿತಿ ಸುಳ್ಳಾಗಿದ್ಯಾ..? ಅಥವಾ ಆರ್ಟಿಐ ಮಾಹಿತಿ ಪಡೆದುಕೊಂಡ ಮೇಲೆ ನೋಂದಣಿ ಆಗಿದ್ಯಾ..? ಇನ್ನೂ ನೋಂದಣಿ ಪ್ರಕ್ರಿಯೆ ನಡೆಯುವಾಗಲೇ ನೋಂದಣಿ ಆಗಿದೆ ಎಂದು ಜಾಹೀರಾತು ಕೊಟ್ಟಿದ್ದೇ ಇಷ್ಟಕ್ಕೆಲ್ಲಾ ಕಾರಣವಾ..? ಶಾಸಕ ಪ್ರದೀಪ್ ಈಶ್ವರ್ ಸ್ಪಷ್ಟಪಡಿಸಬೇಕಿದೆ.