ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಬಹುಚರ್ಚಿತ ವಿಷಯವಾಗಿರುವ ಸ್ಯಾಂಡಲ್ವುಡ್ ಡ್ರಗ್ ಪ್ರಕರಣದಲ್ಲಿ ರಾಜಕಾರಣಿಗಳ ಕೊಲಂಬೊ ಪ್ರವಾಸದ ಕುರಿತಂತೆ ಹಲವು ಬಾರಿ ಉಲ್ಲೇಖವಾಗಿತ್ತು. ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಝಮೀರ್ ಅಹಮದ್ ಕೊಲಂಬೊ ಪ್ರವಾಸ ಕುರಿತಂತೆ ಆರೋಪಗಳನ್ನು ಎದುರಿಸಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಂಜನಾ ಗಲ್ರಾನಿ ಜೊತೆಗೆ ಝಮೀರ್ ಕೊಲಂಬೊ ಪ್ರವಾಸ ಮಾಡಿದ್ದಾರೆಂದು ಪ್ರಶಾಂತ್ ಸಂಬರಗಿ ಆರೋಪ ಮಾಡಿದ್ದರು. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಝಮೀರ್ ಅಹಮದ್ ಕೊಲಂಬೊಗೆ ಪ್ರವಾಸ ಮಾಡಿರುವುದು ದಿಟ, ಆದರೆ ಸಂಬರಗಿ ಆರೋಪಿಸಿರುವಂತೆ ಕದ್ದುಮುಚ್ಚಿ ಅಲ್ಲ, ಬದಲಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ನಾವು 26 ಶಾಸಕರು ಪಯಣಿಸಿದ್ದೆವು ಎಂದಿದ್ದರು.
ಇನ್ನು ತನ್ನ ಹೆಸರನ್ನು ಉಲ್ಲೇಖಿಸಿರುವುದರಿಂದ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಪರೋಕ್ಷವಾಗಿ ಝಮೀರ್ ಅವರನ್ನೇ ಗುರಿಯಾಗಿಸಿ ಉತ್ತರಿಸಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, 2014 ರ ಜೂನ್ ತಿಂಗಳಲ್ಲಿ ಪಕ್ಷ ಸಂಘಟನೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಕೊಲಂಬೋಗೆ ಪ್ರವಾಸ ಹೋಗುವುದಾಗಿ ಬಹಿರಂಗವಾಗಿಯೇ ಮಾಧ್ಯಮಗಳಿಗೆ ಹೇಳಿ ಹೋಗಿದ್ದಲ್ಲದೇ, ಅಲ್ಲಿ ನಡೆದ ಶಾಸಕರ ಜೊತೆಗಿನ ಚರ್ಚೆಯ ದೃಶ್ಯಾವಳಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೆವು. ಇದರಲ್ಲಿ ಯಾವುದೇ ಗುಟ್ಟು ಇರಲಿಲ್ಲ ಎಂದಿದ್ದಾರೆ.
ನೆರೆಯ ರಾಜ್ಯ ಗೋವಾ ಇಲ್ಲವೇ ರಾಜ್ಯದ ರೆಸಾರ್ಟ್ನಲ್ಲಿ ಸಭೆ ನಡೆಸುವುದಕ್ಕಿಂತ ಯಾವುದೇ ಅಡಚಣೆ ಇಲ್ಲದೆ ಶಾಸಕರೊಂದಿಗೆ ಮುಕ್ತವಾಗಿ ಚರ್ಚಿಸಲು ಕೊಲಂಬೋ ಪ್ರವಾಸ ದುಬಾರಿಯಲ್ಲ ಎಂಬ ಕಾರಣಕ್ಕೆ ಇಂತಹ ಸಭೆ ನಡೆಸಿದ್ದು ನಿಜ. ವಿಮಾನ ಹತ್ತುವಾಗಲೂ ಮತ್ತು ವಾಪಸು ಬಂದಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದೇನೆ. ಕೊಲಂಬೋ ಪ್ರಯಾಣ ಅದೇ ಮೊದಲು ಮತ್ತು ಕೊನೆ. ಇದರಲ್ಲಿ ಬಚ್ಚಿಡುವುದು ಏನೇನೂ ಇಲ್ಲ. ಅವರು ನಮ್ಮೊಂದಿಗೆ ಬಂದಿದ್ದರೆ ಹೊರತು ನಾವು ಅವರೊಂದಿಗೆ ಹೋಗಿರಲಿಲ್ಲ ಎಂದು ಹೇಳಿದ್ದಾರೆ.
ಜೆಡಿಎಸ್ ಪಕ್ಷದ ಗೌಪ್ಯ ಕಾರ್ಯಸೂಚಿ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಪ್ರಮುಖ ನಾಯಕರೊಂದಿಗೆ ಶ್ರೀಲಂಕಾದ ಕೊಲಂಬೋಗೆ ಒಮ್ಮೆ ಪ್ರವಾಸ ಹೋಗಿದ್ದು ನಿಜ. ಆದರೆ, ಕದ್ದು ಮುಚ್ಚಿ ‘ಕೊಲಂಬೋ ಯಾತ್ರೆ’ ಮಾಡಿರಲಿಲ್ಲ. ಒಂದಾನೊಂದು ಕಾಲದಲ್ಲಿ ನಮ್ಮ ಪಕ್ಷದಲ್ಲಿದ್ದ ರಾಜಕಾರಣಿಯೊಬ್ಬರು ಜೆಡಿಎಸ್ ಶಾಸಕರು ಮತ್ತು ನಾನು ಕೊಲಂಬೋ ಪ್ರವಾಸ ಕೈಗೊಂಡಿದ್ದಾಗಿ ನೀಡಿರುವ ಹೇಳಿಕೆ ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತಿದೆ ಎಂದು ಪರೋಕ್ಷವಾಗಿ ಝಮೀರ್ ಅವರಿಗೆ ಪ್ರತಿಕ್ರಿಯಿಸಿದ್ದಾರೆ.