ಇತ್ತೀಚೆಗೆ ಕೊರೊನಾ ವೈರಸ್ ಎಂದರೆ ಮನದಲ್ಲಿ ಒಂಥರಾ ಭಯ ಆವರಿಸುತ್ತದೆ. ಕೊರೊನಾ ವೈರಸ್ ನಿಂದ ಚೀನಾ ದಲ್ಲಿ ಸಾವಿನ ಸರಣಿ ನಿರಂತರ ಸಾಗಿದೆ. ಇದರಿಂದ ಇಡೀ ದೇಶವೇ ತಲ್ಲಣಗೊಂಡಿದೆ. ವ್ಯಾಪಾರ ವಹಿವಾಟುಗಳು ಸಂಪೂರ್ಣ ಬಿದ್ದುಹೋಗಿವೆ. ಆದರೆ ಇದರ ಪರಿಣಾಮ ಕರ್ನಾಟಕದ ಮುದಗಲ್ ಗೂ ಆಗಿದೆ. ಹೌದು ಆದರೆ ಈ ಪರಿಣಾಮ ಯಾರ ಮೇಲೂ ಅಲ್ಲ ಆದರೆ ಮುದಗಲ್ ನ ಗ್ರಾನೈಟ್ ವ್ಯವಹಾರದ ಮೇಲೆ…
ಎಲ್ಲಿದೆ ಇದು?
ಮುದಗಲ್ ಕೋಟೆ ಎಂದೇ ಪ್ರಸಿದ್ಧ ಇರುವ ಈ ಊರಿನಲ್ಲಿ ಎಲ್ಲಿ ನೋಡಿದರೂ ಕಲ್ಲು. ಇದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿಗೆ ಒಳಪಡುತ್ತದೆ. ಹುಬ್ಬಳ್ಳಿಯಿಂದ ರಾಯಚೂರಿನ ಕಡೆಗೆ 190 ಕಿಮಿ ದೂರದಲ್ಲಿರುವ ಈ ಮುದಗಲ್ ಕಲ್ಲಿಗೂ ಕೊರೊನಾ ಗೆರೆ ಕೊರೆದಿದೆ.
ಇಲ್ಲಿ ಸುಮಾರು ಏಳೆಂಟು ಗಣಿ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದವು. ಪ್ರತಿ ತಿಂಗಳು ಆರು ಕೋಟಿ ಯಷ್ಟು ವ್ಯವಹಾರ. ಆದರೆ ಕೊರೊನಾದಿಂದ ಭಯ ಭೀತರಾದ ಚೀನಿಯರು ಈಗ ಖರೀದಿ ಮಾಡುತ್ತಿಲ್ಲ.
ಮುದಗಲ್ ನ ಗ್ರೇ ಅಥವಾ ಎಂಡಿ 5, ಹಾಗೂ ಆದಾಪುರ ಭಾಗದ ಕ್ಯಾಟ್ ಐ ಎಂಬ ಉತ್ಕೃಷ್ಟ ಗ್ರಾನೈಟ್ ಚೀನಾ, ಥೈವಾನ್ ಹಾಗೂ ಜಪಾನಿಗೆ ಹೆಚ್ಚು ರಫ್ತಾಗುತ್ತಿತ್ತು. ಶೇಕಡಾ 90 ರಷ್ಟು ಖರೀದಿಸುತ್ತಿದ್ದ ಚೀನಿಯರು ಈಗ ಖರೀದಿ ಮಾಡುತ್ತಿಲ್ಲ. ಈಗ ಏಕಾಎಕಿ ಈ ಬೆಳವಣಿಗೆ ಮುದಗಲ್ ನ ಕಲ್ಲು ವ್ಯಾಪಾರಕ್ಕೆ ಕುಂದು ತಂದಿದ್ದು, ಈಗ ಎಲ್ಲ ಕಂಪೆನಿಗಳು ಬಂದ್ ಮಾಡುವ ವಿಚಾರದಲ್ಲಿವೆ. ಕಳೆದ ಎರಡು ತಿಂಗಳಿನಿಂದ ಗ್ರಾನೈಟ್ ಹಾಗೇ ಉಳಿದಿದ್ದು ಉದ್ಯಮ ಸ್ಥಗಿತಗೊಂಡಿದೆ. ಇಲ್ಲಿನ ಗ್ರಾನೈಟ್ ಗೆ ಸ್ಥಳೀಯವಾಗಿ ಮಾರುಕಟ್ಟೆಯಿಲ್ಲ. ಇವರು ವಿದೇಶಿಯರನ್ನೇ ಅವಲಬಿಸಿದ್ದಾರೆ.
ಶಫಿ ಉಲ್ಲಾ, ಗಣಿ ಕಂಪೆನಿ ವ್ಯವಸ್ಥಾಪಕರೊಬ್ಬರನ್ನು ಕೇಳಿದಾಗ, “ಈ ಗ್ರಾನೈಟ್, ಪ್ರತಿ ಸ್ಕೇರ್ ಮೀಟರ್ ಗೆ ಸುಮಾರು 11,231 ರೂ.ಯಂತೆ ಚೀನಾಗೆ ರಫ್ತಾಗುತ್ತಿದ್ದ ಕಚ್ಚಾ ಗ್ರಾನೈಟ್ ಪ್ರತಿ ಕ್ವಾರೆಯಲ್ಲೂ 400 ಚ.ಮೀಗೂ ಅಧಿಕ ಪ್ರಮಾಣದಲ್ಲಿ ಹಾಗೇ ಉಳಿದಿದೆ. ಸ್ಥಳೀಯವಾಗಿ ಪಾಲಿಶ್ ಆಗದ ಹಿನ್ನೆಲೆ ದೊಡ್ಡ ನಷ್ಟ ಉಂಟಾಗುತ್ತಿದೆ. ಚೀನಾದ ದಿಢೀರ್ ಬೆಳವಣಿಗೆ ನಮಗೆ ಹೀಗೆ ಹಾನಿಯುಂಟು ಮಾಡುತ್ತದೆ ಎಂದೂ ಊಹಿಸಿಯೂ ಇರಲಿಲ್ಲ”.
ಎಷ್ಟು ಜನರ ದುಡಿಮೆ ಹೊಡೆತ!
ಇಲ್ಲಿರುವ ಪ್ರತಿಯೊಂದು ಗಣಿ ಸಂಸ್ಥೆಯಲ್ಲಿ 400-450 ಜನ ಕಾರ್ಮಿಕರು ದುಡಿಯುತ್ತಿದ್ದರು. ಆದರೆ ಈಗ ಎರಡು ತಿಂಗಳಿನಿಂದ ಗಣಿ ಬಂದ್ ಆಗಿದ್ದರಿಂದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನಷ್ಟು ಕಾರ್ಮಿಕರು ಕೆಲಸ ಕಳೆದುಕೊಂಡು ಗುಳೆ ಹೋಗುವಂಥ ಸ್ಥಿತಿ ಇದೆ. ಒಂದು ಗಣಿ ನಿರ್ವಹಣೆಗೆ ಮಾಲೀಕರಿಗೆ ತಿಂಗಳಿಗೆ ಕನಿಷ್ಠ 30 ಲಕ್ಷ ರೂ. ಬೇಕಾಗುತ್ತದೆ. ಆದರೆ ವ್ಯಾಪಾರವೇ ಇಲ್ಲದಿರುವುದರಿಂದ ಸುಮಾರು 2,500 ಜನ ಕೆಲಸಗಾರರು ನಿರುದ್ಯೋಗಿಗಳಾಗುತ್ತಿದ್ದಾರೆ. ಈ 2,500 ಜನರು ಗಣಿ ಕೆಲಸ ಮೇಲೆ ಅವಲಂಬಿತರು. ಇವರೆಲ್ಲ ಈಗ ಎಲ್ಲಿ ಹೋಗಬೇಕು. ಇವರ ಮಡದಿ ಮಕ್ಕಳ ಗತಿ!
ಕಾರ್ಮಿಕರು ಏನನ್ನುತ್ತಾರೆ!
ಇಬ್ರಾಯಿಂ ರೋಣದ, “ನಾನು ಹಲವಾರು ವರ್ಷಗಳಿಂದ ಇಲ್ಲೆ ಕೆಲಸ ಮಾಡುತ್ತಿದ್ದೇನೆ. ಕಲ್ಲು ಗಣಿಗಾರಿಕೆ ಬಿಟ್ಟು ಬೇರೆ ಕೆಲಸ ಮಾಡಲು ಬರೋಲ್ಲ. ನಾನು ಇಲ್ಲಿ ಪಾಲಿಶ್ ಮಾಡುತ್ತೇನೆ. ಈಗ ಕೆಲಸವೇ ಇಲ್ಲ, ಬೇರೆಡೆ ಹುಡುಕಿಕೊಳ್ಳಿ ಎಂದು ಮಾಲೀಕರು ಹೇಳುತ್ತಿದ್ದಾರೆ. ಆದರೂ ಇವತ್ತೂ ನಾಳೆನೋ ಮತ್ತೇ ಶುರುವಾಗಬಹುದು ಎಂದು ದಿನವೂ ಸಂಸ್ಥೆಯ ಮುಂದೆ ಓಡಾಡುತ್ತಿರುತ್ತೇನೆ”.
ಚಿನ್ನಮ್ಮ ಎಂಬ ದೇವದುರ್ಗದ ಮಹಿಳೆ, “ನನ್ನ ಗಂಡ ಮತ್ತು ದೊಡ್ಡ ಮಗ ಇಲ್ಲಿ ಕಲ್ಲಿನ ಗಣಿಯಲ್ಲಿ ದುಡಿಯುತ್ತಾರೆ. ನಾನು ಇಲ್ಲಿ ಸಣ್ಣ ಮಿಲ್ಲಿನಲ್ಲಿ ದುಡಿಯುತ್ತೇನೆ. ಈಗ ಕಳೆದ ಹದಿನೈದು ದಿನದಿಂದ ಇಬ್ಬರೂ ಮನೆಯಲ್ಲಿದ್ದಾರೆ. ಕಂಪೆನಿ ಬಂದ್ ಆಯಿತಂತೆ. ಅದೇನೋ ರೋಗ ಇದೆ. ಜನ ಸಾಯ್ತಾಯಿದಾರೆ ಅಂದ್ರು, ನನಗೆ ತಿಳಿಯೋಲ್ಲ, ಓದಿಲ್ಲ, ಬರೆದಿಲ್ಲ..ಆದರೂ ಪರಿಸ್ಥಿತಿ ಸುಧಾರಿಸಿ ನನ್ನ ಗಂಡ ಮತ್ತು ಮಗ ಮತ್ತೇ ಕೆಲಸ ಹೋಗುವ ದಿನ ಯಾವಾಗ ಬರುತ್ತೋ ಎಂದು ಕಾದು ಕುಳಿತಿದ್ದೇನೆ”.