ಪುಟ್ಟ ಜಿಲ್ಲೆ ಕೊಡಗು ಇತರ ಜಿಲ್ಲೆಗಳಿಗಿಂತ ವಿಭಿನ್ನವಾದ ಜನ ಜೀವನ ಹೊಂದಿರುವ ಪ್ರದೇಶವಾಗಿದೆ. ಇಲ್ಲಿ ಇತರ ಜಿಲ್ಲೆಗಳಂತೆ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳು ಗುಂಪು ಗುಂಪಾಗಿ ಇರುವುದಿಲ್ಲ. ದೂರ ದೂರಕ್ಕೆ ಒಂದರಂತೆ ಇರುತ್ತವೆ. ಕೋವಿಡ್ 19 ಸೋಂಕು ಪ್ರಸರಣವನ್ನು ತಡೆಯಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ ಡೌನ್ ಘೋಷಿಸುತಿದ್ದಂತೆಯೇ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದರು. ಏಕೆಂದರೆ ಕಳೆದ ಎರಡು ವರ್ಷಗಳಿಂದ ಈ ಪುಟ್ಟ ಜಿಲ್ಲೆ ಭೀಕರ ಮಳೆ ಮತ್ತು ಭೂ ಕುಸಿತಕ್ಕೆ ಸಿಲುಕಿ ನಲುಗಿ ಹೋಗಿತ್ತು. ನೂರಾರು ಜನರು ಮನೆ ಮಠ ಕಳೆದುಕೊಂಡಿದ್ದರು, ಅಪಾರ ಆಸ್ತಿ ಪಾಸ್ತಿಯ ನಷ್ಟವನ್ನೂ ಅನುಭವಿಸಿದ್ದರು. ಈಗಷ್ಟೆಜಿಲ್ಲೆಯ ವ್ಯಾಪಾರ ವಹಿವಾಟು ಒಂದಷ್ಟು ಚೇತರಿಕೆ ಕಾಣುತಿತ್ತು. ಈ ಸಮಯದಲ್ಲೇ ಲಾಕ್ಡೌನ್ ಆದರೆ ಜನತೆ ಏನು ಮಾಡಬೇಕು ಎಂಬ ಪ್ರಶ್ನೆ ಜನತೆಯದಾಗಿತ್ತು.
ಜಿಲ್ಲೆಯ ಜನಸಂಖ್ಯೆ ಸುಮಾರು 6 ಲಕ್ಷ ಇದೆ . ಇದರಲ್ಲಿ ಶೇಕಡಾ 80ರಷ್ಟು ಜನರು ಕೊಡಗಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತಿದ್ದಾರೆ. ಇಡೀ ಜಿಲ್ಲೆಯ ಎಲ್ಲ ಪಟ್ಟಣಗಳಲ್ಲೂ ವಾರಕ್ಕೊಂದು ಬಾರಿ ಸಂತೆ ನಡೆಯುತ್ತದೆ. ಈ ಸಂತೆಯೇ ಜನತೆಗೆ ಬೇಕಾದ ತರಕಾರಿ, ಕೃಷಿ ಉತ್ಪನ್ನಗಳನ್ನು ಕೊಳ್ಳುವ ಮೂಲವಾಗಿದೆ. ವಾರದ ಸಂತೆ ಇಲ್ಲದ ವಾರವನ್ನು ನೆನೆಸಿಕೊಳ್ಳುವುದೂ ಕೂಡ ಕಷ್ಟಕರ. ಏಕೆಂದರೆ ಈ ಗುಡ್ಡಗಾಡು ಪ್ರದೇಶದಲ್ಲಿ ಸಂತೆಗೆ ಬರಲೂ15-20 ಕಿಲೋಮೀಟರ್ ದೂರ ಕ್ರಮಿಸಿ ಮನೆ ತಲುಪಬೇಕಿದೆ.
ಸರ್ಕಾರದ ಸೂಚನೆಯಂತೆ ಮನೆಯಲ್ಲೇ ಇರಬೇಕಾದರೂ ಕೆಲವು ಮೂಲಭೂತ ವಸ್ತುಗಳು ಬೇಕೆ ಬೇಕಲ್ಲವೆ ?ಅದರೆ ಸರ್ಕಾರದ ಆದೇಶವನ್ನು ಪಾಲಿಸಲು ಜಿಲ್ಲಾಡಳಿತ ಎಲ್ಲಾ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಂಡಿತ್ತು. ಕೂಡಲೇ ಜಿಲ್ಲೆಯ ಎಲ್ಲ ಗಡಿಗಳನ್ನೂ ಮುಖ್ಯವಾಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಗಡಿಗಳನ್ನೂ ಸಂಪೂರ್ಣ ಬಂದ್ ಮಾಡಲಾಯಿತು. ಜಿಲ್ಲಾಡಳಿತದ ಕಟ್ಟು ನಿಟ್ಟಿನ ಕ್ರಮಗಳ ನಡುವೆ ಮಾರ್ಚ್ 19 ರಂದು ಜಿಲ್ಲೆಗೆ ಮೊದಲನೆಯದು ಎನ್ನಲಾದ ಕೋವಿಡ್ 19 ಪ್ರಕರಣವೊಂದು ವರದಿ ಅಯಿತು. ಇದರಲ್ಲಿ ರೋಗಿಯು ಕೊಡಗಿನ ಕೊಂಡಂಗೇರಿ ಎಂಬಲ್ಲಿನ ನಿವಾಸಿಯಾಗಿದ್ದು ಕೊಲ್ಲಿ ರಾಷ್ಟ್ರದಲ್ಲಿ ಕೆಲಸ ಮಾಡುತಿದ್ದ. ರಜೆಯಲ್ಲಿ ಬಂದಿದ್ದಾಗ ಜ್ವರ ಮತ್ತು ಗಂಟಲು ನೋವು ಬಂದಿತ್ತು. ಕೂಡಲೇ ಜಿಲ್ಲಾಡಳಿತ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಗಂಟಲು ದ್ರವ ಪರೀಕ್ಷೆಗಾಗಿ ಪುಣೆಗೆ ಕಳಿಸಿಕೊಡಲಾಯಿತು.ನಂತರವೇ ಆರಂಭಗೊಂಡಿದ್ದು ಜಿಲ್ಲಾಡಳಿತದ ಸವಾಲಿನ ಕೆಲಸ.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೂಡಲೇ ಸೋಂಕಿತ ವ್ಯಕ್ತಿಯ ಗ್ರಾಮವಾದ ಕೊಂಡಂಗೇರಿಯ 75 ಮನೆಗಳನ್ನೂ ಸಂಪೂರ್ಣ ಸೀಲ್ ಡೌನ್ ಮಾಡಿಸಿದರು. ಈ ಗ್ರಾಮದ ಜನಸಂಖ್ಯೆ ಸುಮಾರು 300 ಆಗಿದ್ದು ಯಾರೂ ಒಳಗೆ ಹೋಗದಂತೆ ಮತ್ತು ಯಾರೂ ಹೊರಗೆ ಬರದಂತೆ ಸಂಪೂರ್ಣ ಪೋಲೀಸ್ ಭದ್ರತೆ ಏರ್ಪಾಡು ಮಾಡಲಾಯಿತು. ಜತೆಗೇ ಸೋಂಕಿತನ ಕುಟುಂಬವನ್ನೂ ಸಂಪೂರ್ಣ ಪರೀಕ್ಷೆ ಮಾಡಿಸಲಾಯಿತು. ಅದೃಷ್ಟವತಾಶ್ ಯಾರಿಗೂ ಸೋಂಕು ಹರಡಿರಲಿಲ್ಲ, ಅಧಿಕಾರಿಗಳು ಜತೆಗೇ ಜಿಲ್ಲೆಯ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು.ಈ ನಡುವೆ ಕೇರಳದಿಂದ ಜಿಲ್ಲೆಯನ್ನು ಹಾದು ಮೈಸೂರಿಗೆ ತಲುಪುವ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿರುವುದನ್ನು ತೆರೆಸಬೇಕೆಂದು ಕೇರಳದ ರಾಜಕಾರಣಿಗಳಿಂದ ಪ್ರಬಲವಾದ ಲಾಬಿಯೇ ಆರಂಬವಾಯಿತು. ಅಷ್ಟೇ ಅಲ್ಲ ಈ ಬಗ್ಗೆ ಕೇರಳದ ಮುಖ್ಯ ಮಂತ್ರಿ ಪಿನರಾಯಿ ವಿಜಯನ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದರು.
ವೀರಾಜಪೇಟೆ ಶಾಸಕ ಕೆ ಜಿ ಬೋಪಯ್ಯ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಇದನ್ನು ಪ್ರಬಲವಾಗಿ ವಿರೋಧಿಸಿದ್ದರಿಂದ ಜಿಲ್ಲೆಗೆ ಕೇರಳದ ಜನರು ಬರುವುದು ತಪ್ಪಿತು. ಬದಲಿಗೆ ಬಂಡೀಪುರ ಮಾರ್ಗವನ್ನು ತೆರವುಗೊಳಿಸಿ ಸಂಪರ್ಕಕ್ಕೆ ಅನುವು ಮಾಡಿಕೊಡಲಾಯಿತು. ಆ ಸಮಯದಲ್ಲಿ ಕಾಸರಗೋಡಿನಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಏರಿಕೆ ದಾಖಲಿಸುತಿದ್ದವು. ಒಂದು ವೇಳೆ ಜಿಲ್ಲೆಯ ಮಾರ್ಗವಾಗಿ ಮೈಸೂರಿಗೆ ಸಂಪರ್ಕ ಕಲ್ಪಿಸಿಕೊಡಲು ಗಡಿ ತೆರವು ಗೊಳಿಸಿದ್ದಿದ್ದರೆ ಇಂದು ಜಿಲ್ಲೆಯಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿಯೇ ಇರುತಿತ್ತು.15 ದಿನಗಳ ಕ್ವಾರಂಟೈನ್ ನಂತರ ಜಿಲ್ಲೆಯ ಏಕೈಕ ಕೋವಿಡ್ ಸೋಂಕಿತ ವ್ಯಕ್ತಿಯು ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ. ಅದರೆ ಕಳೆದ ವಾರ ಪುನಃ ತನಗೆ ಜ್ವರ ಎಂದು ಹೇಳಿ ಸ್ವಯಂ ಪ್ರೇರಣೆಯಿಂದಲೇ ಅಸ್ಪತ್ರೆಗೆ ದಾಖಲಾದ. ಪುನಃ ಗಂಟಲು ದ್ರವವನ್ನು ತೆಗೆದು ಪರೀಕ್ಷೆಗೆ ಕಳಿಸಿದಾಗ ನೆಗೆಟಿವ್ ವರದಿ ಬಂದಿದ್ದು ಜಿಲ್ಲಾಡಳಿತಕ್ಕೆ ನೆಮ್ಮದಿ ತಂದಿದೆ.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಜನತೆಗೆ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಸೂಚಿಸಿದ ಎಲ್ಲ ಸೂಚನೆಗಳನ್ನೂ ಕಟ್ಟು ನಿಟ್ಟಾಗಿ ಪಾಲಿಸಿದ ಕಾರಣದಿಂದಲೇ ಇಂದು ಕೊಡಗು ಸೋಂಕು ರಹಿತರ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ಈ ಯಶಸ್ಸಿಗೆ ಜಿಲ್ಲೆಯ ಜನತೆ ಮತ್ತು ಚುನಾಯಿತ ಪ್ರತಿನಿಧಿಗಳ ಸಹಕಾರವೂ ಮುಖ್ಯ ಕಾರಣ ಎಂದ ಅವರು ಮುಂದೆಯೂ ಇದೇ ರೀತಿ ಕರೋನಾ ವಿರುದ್ದ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಈ ನಡುವೆ ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಪ್ಯಾಡಿಂಗ್ ಟನ್ ರೆಸಾರ್ಟ್ ನಲ್ಲಿ ಮೈಸೂರಿನ ಮಾಜಿ ಸಚಿವರ ಸಂಬಂದಿಗಳೆನ್ನಲಾದ 6 ಜನರ ತಂಡ ನಿಯಮ ಉಲ್ಲಂಘಿಸಿ ತಂಗಿತ್ತು. ಕೂಡಲೇ ಅವರ ಮೇಲೆ ಮೊಕದ್ದಮೆ ದಾಖಲು ಮಾಡಿಕೊಂಡು ರೆಸಾರ್ಟ್ ನ ಪರವಾನಗಿಯನ್ನು ಅಮಾನತ್ತು ಪಡಿಸಿ ಬೀಗ ಮುದ್ರೆ ಹಾಕಲಾಗಿದೆ. ಕಟ್ಟು ನಿಟ್ಟಿನ ಕ್ರಮಗಳಿಂದಲೇ ಇಂದು ಜಿಲ್ಲೆಯು ಕರೋನಾ ಮುಕ್ತವಾಗಿದೆ. ಇದರ ಹಿಂದೆ ಶ್ರಮಿಸಿದ ಅಧಿಕಾರಿ ವರ್ಗ ನಿಜಕ್ಕೂ ಅಭಿನಂದನಾರ್ಹರು.ಇಂದು ದೇಶದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಕರೋನಾ ಪೀಡಿತರು ಇದ್ದಾರೆ. ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಇಂದು ಎರಡನೇ ಬಾರಿ ಕೊಡಗು ಜಿಲ್ಲೆಯನ್ನು ಉಲ್ಲೇಖಿಸಿದ್ದಾರೆ. ಕರ್ನಾಟಕದ ಕೊಡಗು ಜಿಲ್ಲೆ, ಪಾಂಡಿಚೇರಿಯ ಮಾಹೆ, ಜಿಲ್ಲೆಗಳಲ್ಲಿ ಕಳೆದ 28 ದಿನಗಳಲ್ಲಿ ಯಾವುದೇ ಹೊಸ ಸೋಂಕಿನ ಪ್ರಕರಣ ವರದಿಯಾಗಿಲ್ಲ ಎಂದು ಅವರು ಮಾಹಿತಿ ನೀಡಿರುವುದು ಜಿಲ್ಲೆಯ ಹೆಸರು ದೇಶಾದ್ಯಂತ ಪಸರಿಸಿದೆ. ಇದು ಹೀಗೆ ಮುಂದುವರಿಯಲಿ ಎಂದು ಆಶಿಸೋಣ.