ಪುಟ್ಟ ಜಿಲ್ಲೆ ಕೊಡಗು ಕಳೆದ ಮೂರು ವರ್ಷಗಳಿಂದ ಆಗಸ್ಟ್ ತಿಂಗಳ ಭೀಕರ ಮಳೆ , ಬಿರುಗಾಳಿ ಮತ್ತು ಭೂ ಕುಸಿತಕ್ಕೆ ನಲುಗಿ ಹೋಗಿದೆ. ಈ ವರ್ಷದ ಮಳೆ ಗಾಳಿಗಿಂತಲೂ 2019 ಮತ್ತು 2018 ರ ಮಳೆ ಗಾಳಿ ಭೀಕರವಾಗಿದ್ದು ಹೆಚ್ಚಿನ ಸಾವು ನೋವು ಸಂಬವಿಸಿತ್ತು. ಅದರಲ್ಲೂ 2018 ರ ಭೂ ಕುಸಿತದಿಂದಾಗಿ ಜಿಲ್ಲೆಯಲ್ಲಿ 900 ಕ್ಕೂ ಹೆಚ್ಚು ಜನ ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಸಂತ್ರಸ್ಥರಿಗಾಗಿ ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡುತಿದ್ದು ಎಲ್ಲರಿಗೂ ಇನ್ನೂ ಮನೆ ಸಿಕ್ಕಿಲ್ಲ. ಕೊಡಗಿನಲ್ಲಿ ಈಗ ಭೂ ಕುಸಿತ ಸಂಭವಿಸಿರುವುದು ಗ್ರಾಮೀಣ ಊರುಗಳ ಗುಡ್ಡಗಾಡು ಪ್ರದೇಶದಲ್ಲಿ ಮಾತ್ರ, ನಗರ ಪ್ರದೇಶಗಳಲ್ಲಿ ಅಲ್ಲಲ್ಲಿ ಬರೆ ಕುಸಿತ ಆಗಿದ್ದರೂ ಹೆಚ್ಚಿನ ಅನಾಹುತವೇನೂ ಸಂಬವಿಸಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ ಕೊಡಗಿನ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಕುಶಾಲನಗರದಲ್ಲಿ ಕಳೆದ ಮೂರು ವರ್ಷಗಳಿಂದಲೂ ಮಳೆಯಿಂದಾಗಿ ಕಾವೇರಿ ನದಿಯ ಅಕ್ಕ ಪಕ್ಕದಲ್ಲಿರುವ ಬಡಾವಣೆಗಳ ಮನೆಗಳಿಗೆ ಪ್ರವಾಹದ ನೀರು ತುಂಬಿಕೊಂಡಿರುವುದು ಅಚ್ಚರಿಯ ಸಂಗತಿ ಆಗಿದೆ. ಏಕೆಂದರೆ ಕುಶಾಲನಗರ ಕೊಡಗಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಆಗಿದ್ದು ಜಿಲ್ಲೆಯ ಸರಾಸರಿ ಮಳೆಯ ಅರ್ದದಷ್ಟು ಮಾತ್ರ ಇಲ್ಲಿ ಮಳೆ ಆಗುತ್ತದೆ. ಕೊಡಗು ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೮೦ ರಿಂದ ನೂರು ಇಂಚುಗಳಷ್ಟು ಎಂದಿಟ್ಟುಕೊಂಡರೆ ಕುಶಾಲನಗರದ ಸುತ್ತ ಮುತ್ತ ಬೀಳುವ ಮಳೆ ೪೦ ಇಂಚುಗಳನ್ನೂ ದಾಟದು. ಇದು ಕೊಡಗಿನ ಏಕೈಕ ಸಮತಟ್ಟಾಗಿರುವ ಪ್ರದೇಶವಾಗಿದ್ದು ಇಲ್ಲಿ ಯಾವುದೇ ಬೆಟ್ಟ ಗುಡ್ಡ ಕಾಡೂ ಕೂಡ ಇಲ್ಲ. ಇದು ಕೊಡಗಿನ ಗಡಿಯಲ್ಲಿದ್ದು ಪಕ್ಕದಲ್ಲೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮತ್ತು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಈ ಊರು ಜಿಲ್ಲೆಯಲ್ಲೇ ಇದ್ದರೂ ಇಲ್ಲಿನ ಹವಾಗುಣ ಬಹುತೇಕ ಬಯಲು ಸೀಮೆಯಂತೆಯೇ ಇದೆ.
ಮಂಗಳೂರಿನಿಂದ ಮೈಸೂರು-ಬೆಂಗಳೂರಿಗೆ ಮತ್ತು ಮಡಿಕೇರಿಯಿಂದ ಹಾಸನಕ್ಕೆ ತೆರಳಲು ಕುಶಾಲನಗರದ ಮೂಲಕವೇ ಹೋಗಬೇಕಾಗಿರುವುದರಿಂದ ಇದು ಒಂದು ಜಂಕ್ಷನ್ ಅಗಿದೆ. ಎರಡು ರಾಷ್ಟ್ರೀಯ ಹೆದ್ದಾರಿಗಳೂ ಹಾದು ಹೋಗಿರುವುದರಿಂದ ಇದು ಕೊಡಗಿನಲ್ಲೇ ಬಿಝಿ ಆಗಿರುವ ನಗರವಾಗಿದೆ. ಜತೆಗೆ ಕೊಡಗಿಗೆ ಆಗಮಿಸುವ ಶೇಕಡಾ 90 ರಷ್ಟು ಪ್ರವಾಸಿಗರು ಇಲ್ಲಿಗೆ ಬಂದೇ ಮುಂದೆ ಹೋಗುತ್ತಾರೆ. ಜಿಲ್ಲೆಯ ಏಕೈಕ ಜಲಾಶಯವಾದ ಹಾರಂಗಿ, ಅರಣ್ಯ ಇಲಾಖೆಯ ಕಾವೇರಿ ನಿಸರ್ಗ ಧಾಮ , ಬೈಲುಕೊಪ್ಪೆ ಯಲ್ಲಿರುವ ಗೋಲ್ಡನ್ ಟೆಂಪಲ್ ಇದಕ್ಕೆ ಸಮೀಪದಲ್ಲೆ ಇದೆ. ಎಲ್ಲಕ್ಕಿಂತ ಹೆಚ್ಚು ಜನಾಕರ್ಷಣೆಯ ದುಬಾರೆ ಸಾಕಾನೆ ಶಿಬಿರ ಕೂಡ ಇಲ್ಲಿಗೆ 20 ಕಿಮೀ ದೂರದಲ್ಲಿದೆ. ಹಾಗಾಗಿ ಇದೊಂದು ಪ್ರವಾಸೀ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ.
ಹೀಗಿರುವದರಿಂದ ಕೊಡಗಿನ ಇತರ ಪ್ರದೇಶಗಳಲ್ಲಿ ಇರುವವರೂ ಮುಖ್ಯವಾಗಿ ಸರ್ಕಾರಿ ನೌಕರಿಯಲ್ಲಿ ಇರುವ ಹೊರಗಿನವರೂ ಇಲ್ಲೇ ನೆಲೆಸಲು ಬಯಸುತ್ತಾರೆ. ಏಕೆಂದರೆ ಇಲ್ಲಿಗೆ ರಾತ್ರಿಯೂ ಕೂಡ ಬಸ್ ಸಂಪರ್ಕ ಇದೆ, ಇತರೆಡೆಗಳಂತೆ ಮೂರು ತಿಂಗಳ ಮಳೆಗಾಲ ಇರುವುದಿಲ್ಲ ಜತೆಗೇ ಚಳಿಗಾಲದ ಚಳಿಯೂ ಇರುವುದಿಲ್ಲ. ಕುಶಾಲನಗರವನ್ನು ಒಂದು ರೀತಿಯಲ್ಲಿ ನಿವೃತ್ತರ ಸ್ವರ್ಗ ಎಂದೇ ಕರೆಯಬಹುದು. ಅಲ್ಲದೆ ಕೈಗಾರಿಕ ಪ್ರದೇಶ ಅಭಿವೃದ್ದಿ ಮಂಡಳಿಯು ಇಲ್ಲಿನ ಕೂಡ್ಲೂರು ಎಂಬಲ್ಲಿ ವಿಶಾಲವಾದ ಕೈಗಾರಿಕಾ ಬಡಾವಣೆಯನ್ನೂ ನಿರ್ಮಿಸಿದ್ದು ವಿವಿಧ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ಇದೇ ಪ್ರದೇಶದಲ್ಲಿ ಹತ್ತಾರು ಕಾಫಿ ಸಂಸ್ಕರಣ ಘಟಕಗಳೂ ತಲೆ ಎತ್ತಿರುವುದರಿಂದ ಸುತ್ತಮುತ್ತಲಿನ ಜನತೆಗೆ ಉತ್ತಮ ಉದ್ಯೋಗಾವಕಾಶವೂ ದೊರೆತಿದೆ. ಈ ಎಲ್ಲ ಕಾರಣಗಳಿಂದ ನಗರದಲ್ಲಿ ಭೂಮಿಯ ಬೆಲೆಯು ಕೂಡ ಗಗನಕ್ಕೇರಿದೆ. ನಗರದ ಬಸ್ ನಿಲ್ದಾಣದಿಂದ ಸುತ್ತ ಮೂರು ಕಿಲೋಮೀಟರ್ ವ್ಯಾಪ್ತಿಯೊಳಗೆ ಎಲ್ಲೇ ಹೋದರೂ ಭುಮಿಯ ಬೆಲೆ ಎಕರೆಗೆ ಕೋಟಿಗಳ ಲೆಕ್ಕದಲ್ಲಿ ಇದೆ.


ಇದರ ಬೆನ್ನಲ್ಲೇ ತಲೆ ಎತ್ತಿರುವುದು ಭೂ ಮಾಫಿಯಾ. ಇಂದು ಕುಶಾಲನಗರದ ಒಳಗೆ ಇರುವ ಪಾರ್ಕ್ , ಕೆರೆಗಳು , ಸುತ್ತಮುತ್ತಲಿನ ಎಲ್ಲ ಸರ್ಕಾರಿ ಪ್ರದೇಶಗಳೂ ಭೂಗಳ್ಳರಿಂದ ಒತ್ತುವರಿ ಆಗಿವೆ. ಇಂದು ಕುಶಾಲನಗರದ ಬಹುತೇಕ ಎಲ್ಲ ಕಡೆ ಮನೆ ನಿವೇಶನಗಳು ಲಭ್ಯವಿವೆ. ಒಂದು ಸೆಂಟ್ (435 ಚದರ ಅಡಿ) ಜಾಗಕ್ಕೆ ನಗರದ ಹೊರವಲಯದಲ್ಲೇ 4 ರಿಂದ 5 ಲಕ್ಷ ರೂಪಾಯಿ ಬೆಲೆ ಇದೆ. ಅಂದರೆ 30*40 ವಿಸ್ತೀರ್ಣದ ನಿವೇಶನದ ಬೆಲೆ ಸುಮಾರು 15 ಲಕ್ಷ ಗಳ ತನಕ ಇದೆ. ಇನ್ನು ನಗರದೊಳಗೆ ಈ ದರ ದುಪ್ಪಟ್ಟು ಇದೆ. ಕುಶಾಲನಗರವನ್ನು ಸುತ್ತುವರಿದು ಹರಿಯುವ ಕಾವೇರಿ ನದಿಯಿಂದಾಗಿ ಜನತೆಗೆ ಕುಡಿಯುವ ನೀರಿಗೆ ತೊಂದರೆ ಇಲ್ಲ. ಆದರೆ ನಗರದಿಂದ ಹರಿವ ಕೊಳಚೆ ನೀರು, ಹೋಟೆಲ್ ಲಾಡ್ಜ್ ಗಳಿಂದ ಬೊರ ಬರುವ ಕಲ್ಮಶ ನೀರು ನದಿ ಸೇರಿ ಅದು ಕಲುಷಿತಗೊಂಡಿದೆ. ಅಷ್ಟೇ ಅಲ್ಲ ಕಾವೇರಿಯ ಒಡಲನ್ನು ಬಗೆದು ಬಗೆದು ಮರಳು ತೆಗೆದು, ಅದರ ಪಕ್ಕದಲ್ಲೇ ನಿಯಮ ಉಲ್ಲಂಘಿಸಿ ರೆಸಾರ್ಟು, ಹೋಂ ಸ್ಟೇಗಳನ್ನು ನಿರ್ಮಿಸಿರುವುದರಿಂದ ಅದು ಹರಿವ ದಿಕ್ಕೂ ಬದಲಾಗಿದೆ.
ಕುಶಾಲನಗರದ ಕಾಂಗ್ರೆಸ್ ಮುಖಂಡ ಹಾಗು ಹೋರಾಟಗಾರ ವಿ ಪಿ ಶಶಿಧರ್ ಅವರನ್ನು ಮಾತಾಡಿಸಿದಾಗ ಇಲ್ಲಿನ ಪಟ್ಟಣ ಪಂಚಾಯ್ತಿಯ ಭ್ರಷ್ಟ ಅಧಿಕಾರಿಗಳು ಭೂ ಮಾಫಿಯಾದೊಂದಿಗೆ ಶಾಮೀಲಾಗಿ ಸರ್ಕಾರೀ ಭೂಮಿಗಳನ್ನೂ ಅವರ ಹೆಸರಿಗೆ ವರ್ಗಾಯಿಸಿದ್ದಾರೆ. ಅವರು ಕೆರೆ ಪಾರ್ಕ್ ಗಳ ಜಾಗದಲ್ಲೂ ಲೇ ಔಟ್ ಗಳನ್ನು ನಿರ್ಮಿಸಿದ್ದಾರೆ. ಒಂದೆಡೆ ಕಾವೇರಿ ನದಿಯಲ್ಲಿ ಹೂಳು ತುಂಬಿಕೊಂಡಿದ್ದು ನಗರದಲ್ಲಿದ್ದ ಕೆರೆಗಳೂ ಒತ್ತುವರಿ ಆಗಿರುವುದರಿಂದ ನೀರು ಹರಿಯಲು ಸ್ಥಳವಿಲ್ಲದೆ ಕುಶಾಲನಗರದ ಪ್ರಮುಖ ಬಡಾವಣೆಗಳಲ್ಲಿ 6-8 ಅಡಿ ನೀರು ನಿಂತಿದೆ ಎಂದರು. ಇಲ್ಲಿ ಒತ್ತುವರಿ ಆಗಿರುವ ಸರ್ಕಾರೀ ಭೂಮಿಯಿಂದ ಒತ್ತುವರಿದಾರರನ್ನು ತೆರವುಗೊಳಿಸಲು ಶಶಿಧರ್ ದೊಡ್ಡ ಹೋರಾಟವನ್ನೇ ಮಾಡಿದರು. ಆದರೆ ಭ್ರಷ್ಟ ಅಧಿಕಾರಿಗಳ ಮತ್ತು ರಾಜಕಾರಣಿಗಳ ಬೆಂಬಲ ಪಡೆದಿರುವ ಭೂ ಗಳ್ಳರು ಕ್ಯಾರೇ ಅನ್ನುತ್ತಿಲ್ಲ. ಅನೇಕರಿಗೆ ಖಾತೆ ಕೂಡ ಮಾಡಿಕೊಡಲಾಗಿದೆ ಹೀಗಿರುವಾಗ ಒತ್ತುವರಿ ತೆರವು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸುತ್ತಾರೆ. ಈ ಹಿಂದೆ ಬಸಪ್ಪ ಕೆರೆ ಎಂದು ಕರೆಯಲಾಗುತಿದ್ದ ಕೆರೆಯಲ್ಲಿ ಬಸಪ್ಪ ಬಡಾವಣೆ ನಿರ್ಮಾಣವಾಗಿದೆ. ಇದೀಗ ಭಾರೀ ಮಳೆಗೆ ನೀರಿನಲ್ಲಿ ಮುಳುಗಿದೆ.
ಹೀಗಾಗಿ ಇಂದು ಕುಶಾಲನಗರದ ಅರ್ಧ ಭಾಗದಲ್ಲಿ ವಾಸಿಸುತ್ತಿರುವ ಜನತೆ ಮಳೆಗಾಲ ಬಂತೆಂದರೆ ಗಂಟು ಮೂಟೆ ಕಟ್ಟಿಕೊಂಡು ನೆಂಟರ ಮನೆಗೆ ತೆರಳಬೇಕಾದ ಅನಿವಾರ್ಯ ಸ್ಥಿತಿಗೆ ತಲುಪಿದ್ದಾರೆ. ಅಷ್ಟೇ ಅಲ್ಲ ಈ ಬಡಾವಣೆಗಳಲ್ಲಿ ನಿವೇಶನ, ಮನೆಗಳ ಬೆಲೆ ಅರ್ಧಕ್ಕರ್ಧ ಕುಸಿದಿದೆ. ಒಂದು ಕಾಲದಲ್ಲಿ ಕುಶಾಲನಗರ ಎಂದರೆ ಎಲ್ಲದಕ್ಕೂ ಸೇಫ್ ಪ್ಲೇಸ್ ಅನ್ನುತಿದ್ದು ಇದೀಗ ಕುಶಾಲನಗರದಲ್ಲಿ ನೆಲೆಸಲು ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಬಂದಿದೆ. ಇದಕ್ಕೆ ಮುಖ್ಯ ಕಾರಣ ಮನುಷ್ಯನ ಸ್ವಾರ್ಥವೇ ಹೊರತು ಬೇರೇನಲ್ಲ.
