ಉತ್ತರ ಕೊರಿಯಾದಲ್ಲಿ ಏಕಸರ್ವಾಧಿಕಾರಿ ಆಡಳಿತ ಅಸ್ತಿತ್ವದಲ್ಲಿದ್ದು, ಕಳೆದ 21 ದಿನಗಳ ಕಾಲ ನಾಪತ್ತೆಯಾಗಿದ್ದ ಕಿಮ್ ಜಾಂಗ್ ಉನ್ ದಿಢೀರ್ ಎಂದು ಪತ್ತೆಯಾಗಿದ್ದಾರೆ. ಏಪ್ರಿಲ್ 11 ರಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಕಿಮ್ ಜಾಂಗ್ ಉನ್, ಸನ್ಚಾನ್ ಫಾಸ್ಪಾಟಿಕ್ ಫರ್ಟಿಲೈಸರ್ ಕಂಪನಿ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಫೋಟೋ ಬಿಡಗಡೆಯಾಗಿದೆ. ಏಪ್ರಿಲ್ 15ರಂದು ಕೊರಿಯಾದ ಸಂಸ್ಥಾಪಕ ಅಧ್ಯಕ್ಷನ 108ನೇ ಹುಟ್ಟುಹಬ್ಬ ಆಚರಣಾ ಕಾರ್ಯಕ್ರಮಕ್ಕೆ ಗೈರಾಗಿದ್ದರಿಂದ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಿಮ್ ಜಾಂಗ್ ಉನ್ ಸಾವನ್ನಪ್ಪಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದರೆ, ಇನ್ನೂ ಕೆಲವು ಮಾಧ್ಯಮಗಳು ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಚೀನಾ ವೈದ್ಯರ ತಂಡ ಚಿಕಿತ್ಸೆ ನೀಡಲು ಉತ್ತರ ಕೊರಿಯಾಗೆ ಭೇಟಿ ನೀಡಿದೆ ಎಂದೆಲ್ಲಾ ವರದಿಯಾಗಿತ್ತು. ಉತ್ತರ ಕೊರಿಯಾ ದೊರೆ ಬಗ್ಗೆ ಅದೆಷ್ಟೋ ಸುದ್ದಿಗಳು ಪ್ರಸಾರವಾದರೂ ಅಧಿಕೃತವಾಗಿ ಉತ್ತರ ಕೊರಿಯಾ ಉತ್ತರ ಕೊಡುವ ಗೋಜಿಗೆ ಹೋಗಿರಲಿಲ್ಲ. ಇದೀಗ ಉತ್ತರ ಕೊರಿಯಾ ಬಿಡುಗಡೆ ಮಾಡಿರುವ ಫೋಟೋ ಒಂದೇ ಎಲ್ಲಾ ಸುಳ್ಳುಗಳಿಗೂ ಉತ್ತರವಾಗಿದೆ.
ಉತ್ತರ ಕೊರಿಯಾದ ರಾಜಧಾನಿ ಪೊಂಗ್ಯಾಂಗ್ನ ಉತ್ತರ ಭಾಗದಲ್ಲಿ ಫರ್ಟಿಲೈಸರ್ ಪ್ಲಾಂಟ್ ನಿರ್ಮಾಣ ಮಾಡಿದ್ದು, ಅದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ತನ್ನ ಸಹೋದರಿ ಕಿಮ್ ಯೋ ಜಾಂಗ್ ಜೊತೆ ಭಾಗಿಯಾಗಿದ್ದರು. ಈ ಫೋಟೋವನ್ನು ಉತ್ತರ ಕೊರಿಯಾದ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ಬಿಡುಗಡೆ ಮಾಡಿದೆ. 36 ವರ್ಷದ ಕಿಮ್ ಜಾಂಗ್ ಉನ್ ಜೊತೆ ಕೊರಿಯಾದ ಪ್ರಮುಖ ನಾಯಕರು ಹಿರಿಯ ಅಧಿಕಾರಿಗಲೂ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಯೋಜನೆ ಉತ್ತರ ಕೊರಿಯಾದ ಶಕ್ತಿಯನ್ನು ತೋರಿಸುತ್ತದೆ. ಉತ್ತರ ಕೊರಿಯಾ ದೇಶ ಸ್ವಾವಲಂಬನೆ ಬದ್ಧ ಎಂದು ಹೇಳಿದ್ದಾರೆ.
ಆದರೆ, ಸೈನ್ಯದ ಅಧಿಕಾರಿಗಳು, ಆಡಳಿತ ಪಕ್ಷ ನಾಯಕರು, ಫರ್ಟಿಲೈಸರ್ ಕೈಗಾರಿಕಾ ಯೋಜನೆಯಲ್ಲಿ ಕೆಲಸ ಮಾಡಿದವರು, ಸಾರ್ವಜನಿಕರೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎಲ್ಲರೂ ಮುಖಕ್ಕೆ ಮುಖಗವಸು ತೊಟ್ಟು ವೇದಿಕೆಯಿಂದ ಸಾಕಷ್ಟು ದೂರದಲ್ಲಿ ನಿಂತಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಇದೀಗ ಕಿಮ್ ಜಾಂಗ್ ಉನ್ ಕರೋನಾ ವಿರುದ್ಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಮಯ ಮೀಸಲಿಟ್ಟಿರಬೇಕು. ಅದೇ ಕಾರಣದಿಂದ ಉತ್ತರ ಕೊರಿಯಾದಲ್ಲಿ ಇಲ್ಲೀವರೆಗೂ ಕರೋನಾ ಸೋಂಕಿನ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ಊಹಾತ್ಮ ವರದಿ ಪ್ರಕಟಿಸಿವೆ. ಈ ವಿಚಾರವಾಗಿ ನಾವು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದಿದೆ ಅಮೆರಿಕ ವೈಟ್ಹೌಸ್.
ಉತ್ತರ ಕೊರಿಯಾದ ಸಾಂಪ್ರಾದಾಯಿಕ ಎದುರಾಳಿ ದಕ್ಷಿಣ ಕೊರಿಯಾ ಮಾತ್ರ ಕಿಮ್ ಜಾಂಗ್ ಉನ್ ಕಳೆದ ವಾರಾಂತ್ಯದಲ್ಲೇ ಸಾವನ್ನಪ್ಪಿದ್ದಾನೆ ಎಂದಿದೆ. ಕಳೆದ ವಾರ ಆಪರೇಷನ್ಗೆ ಒಳಗಾಗಿದ್ದು, ಆ ಬಳಿಕ ಸಾವನ್ನಪ್ಪಿದ್ದಾರೆ ಎಂಬುದು ಶೇಕಡ 99ರಷ್ಟು ಸತ್ಯ ಎಂದು ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ. ಇದೇ ರೀತಿ ವರದಿಗಳು ಕಳೆದ 21 ದಿನಗಳಿಂದಲೂ ಅಂತಾರಾಷ್ಟ್ರೀಯ ಮಾರ್ಧಯಮಗಳು, ರಾಷ್ಟ್ರೀಯ ಮಾಧ್ಯಮಗಳು, ನಮ್ಮ ಕರ್ನಾಟದ ದೃಶ್ಯ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ಇದೀಗ ನಾರ್ತ್ ಕೊರಿಯಾ ಬಿಡುಗಡೆ ಮಾಡಿರುವ ಫೋಟೋಗಳು, ಸಾವಿನ ವರದಿಗೆ ಮುಖಭಂಗ ಮಾಡುವಂತಿದೆ. ಕರೋನಾ ವೈರಸ್ ವಿಶ್ವದಲ್ಲಿ ಆರ್ಭಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಮಾಧ್ಯಮಗಳು ಸಾವನ್ನಪ್ಪಿದ್ದಾನೆ ಎಂದು ವರದಿ ಮಾಡಿದ್ದ ಬಳಿಕ ಈಗ ಬಿಡುಗಡೆ ಆಗಿರುವ ಫೋಟೋಗಳು ಮಾಧ್ಯಮಗಳ ಸುಳ್ಳು ವರದಿ ಎನ್ನುವಂತೆ ಅಣಕಿಸುತ್ತಿವೆ.